Asianet Suvarna News Asianet Suvarna News

5 ನಿಮಿಷದ ವಿಚಾರಣೆ: ಪೋಷಕರು ಬೇರ್ಪಡಿಸಿದ ಸಲಿಂಗಿ ಜೋಡಿಯ ಒಂದು ಮಾಡಿದ ಕೇರಳ ಹೈಕೋರ್ಟ್‌

ಪೋಷಕರು ದೂರ ಮಾಡಿದ್ದ ಸಲಿಂಗಿ ಜೋಡಿಯನ್ನು ಕೇರಳ ಹೈಕೋರ್ಟ್‌ ಐದು ನಿಮಿಷಗಳ ವಿಚಾರಣೆ ನಡೆಸಿ ಮತ್ತೆ ಒಂದಾಗಿಸಿದ ಘಟನೆ ನಡೆದಿದೆ.
 

Kerala High Court reunites lesbian couple forcibly separated by parents akb
Author
Bangalore, First Published Jun 1, 2022, 2:38 PM IST

ತಿರುವನಂತಪುರ: ಕೇರಳದ ಯುವತಿಯೊಬ್ಬಳು ತನ್ನ ಸಹಪಾಠಿಯೊಂದಿಗೆ ಸಲಿಂಗಿ ಸಂಬಂಧ ಹೊಂದಿರುವ ಬಗ್ಗೆ ಪೋಷಕರಿಗೆ ತಿಳಿದು ಅವರು ಆಕೆಯನ್ನು ಸಹಪಾಠಿಯಿಂದ ಬೇರ್ಪಡಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಕೇರಳ ಹೈಕೋರ್ಟ್ ಅವರಿಗೆ ಮತ್ತೆ ತನ್ನ ಗೆಳತಿಯೊಂದಿಗೆ ಬದುಕಲು ಅವಕಾಶ ನೀಡಿದೆ. 

ಕೇರಳದ ಎರ್ನಾಕುಲಂ (Ernakulam) ಜಿಲ್ಲೆಯ ಯುವ ಸಲಿಂಗಿ ಮಹಿಳೆ ತನ್ನ ಶಾಲಾ ಸಹಪಾಠಿಯೊಂದಿಗಿನ ತನ್ನ ಸಂಬಂಧ, ಅದಕ್ಕೆ ಪೋಷಕರ ವಿರೋಧ ಹಾಗೂ ನಂತರದಲ್ಲಿ ಆಕೆಯ ಸ್ನೇಹಿತೆಯನ್ನು ಆಕೆಯ ಪೋಷಕರು ಬಲವಂತವಾಗಿ ಕರೆದೊಯ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಅಲ್ಲದೇ ಪೊಲೀಸರು ಆಕೆಯನ್ನು ಕರೆ ತರಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆಕೆ ಆರೋಪಿಸಿದ್ದಾರೆ. 

 

ಆದರೆ ಪೊಲೀಸರು ಈ ವಿಚಾರದಲ್ಲಿ ಆರಂಭದಿಂದಲೂ ಮಧ್ಯ ಪ್ರವೇಶಿಸಿದ್ದರು. ಈಕೆಯ ಸಂಗಾತಿ ಎನಿಸಿರುವ ಕೋಜಿಕೋಡ್‌ (Kozhikode) ಮೂಲದ ಯುವತಿ ತಾನು ತನ್ನ ಹೆತ್ತವರೊಂದಿಗೆ ಸ್ವಇಚ್ಛೆಯಿಂದ ಹೋಗುತ್ತಿದ್ದೇನೆ ಎಂದು ಲಿಖಿತ ಉತ್ತರ ನೀಡಿ ಹೋಗಿದ್ದಾರೆ ಎಂದು ಅಲುವಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ಪ್ರಸ್ತುತ ತನ್ನ ಪೋಷಕರಿಂದ ದೂರವಿರುವ ಎರ್ನಾಕುಲಂ ನಿವಾಸಿಯ ಹಕ್ಕುಗಳನ್ನು ರಕ್ಷಿಸಲು ಅಗತ್ಯವಿರುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸರು ಸಿದ್ಧರಾಗಿದ್ದಾರೆ ಎಂದು ಅಧಿಕಾರಿ ಹೇಳಿದರು. ತನ್ನ ಸ್ನೇಹಿತೆಯನ್ನು ಆಕೆಯ ಪೋಷಕರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಸೋಮವಾರ ಅಲುವಾ ಪೊಲೀಸರಿಗೆ ಎರ್ನಾಕುಲಂ ಯುವತಿ ದೂರು ನೀಡಿದ್ದಳು ಎಂದು ಕೂಡ ಅಧಿಕಾರಿ ಹೇಳಿದ್ದಾರೆ. 

ಮೊದಲ ಸಲಿಂಗಿ ಜೋಡಿ ವಿವಾಹಕ್ಕೆ ಸಾಕ್ಷಿಯಾದ ಹೈದರಾಬಾದ್‌
 

ಆದರೆ ಯುವತಿ ತಾನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ತಾನು ತಾಮರಸ್ಸೆರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ತನ್ನ ಸ್ನೇಹಿತೆ ಹಲವು ದಿನಗಳಿಂದ ಕಾಣೆಯಾಗಿದ್ದಾಳೆ. ಅಲ್ಲದೇ ಆಕೆ ಎಲ್ಲಿದ್ದಾಳೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಆಕೆ ಹೇಳಿದ್ದಾಳೆ.

ಈ ಇಬ್ಬರು ಯುವತಿಯರು  ಸೌದಿ ಅರೇಬಿಯಾದಲ್ಲಿ ಶಾಲೆಯೊಂದರಲ್ಲಿ 11 ನೇ ತರಗತಿಯಲ್ಲಿ ಓದುತ್ತಿದ್ದಾಗ ಪರಸ್ಪರ ಭೇಟಿಯಾಗಿದ್ದರು. ಆದರೆ ದ್ವಿತೀಯ ಪಿಯುಸಿ ತಲುಪಿದಾಗ ಅವರಿಬ್ಬರು ಸಲಿಂಗಿಗಳು ಹಾಗೂ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂಬುದನ್ನು ಅರಿತುಕೊಂಡರು. ಇವರ ಸಂಬಂಧದ ಬಗ್ಗೆ ಇವರ ಪೋಷಕರಿಗೆ ತಿಳಿದಾಗ, ಅವರು ಅದನ್ನು ನಿಲ್ಲಿಸುವುದಾಗಿ  ಹೇಳಿದರು. ಆದರೆ ಭಾರತಕ್ಕೆ ಹಿಂತಿರುಗಿ ಕಾಲೇಜಿಗೆ ಸೇರಿದ ನಂತರ ಈ ಇಬ್ಬರೂ  ತಮ್ಮ ಸಂಬಂಧವನ್ನು ಮುಂದುವರೆಸಿದರು ಎಂದು ತಿಳಿದು ಬಂದಿದೆ. 

ಸಲಿಂಗಿ ದಾಂಪತ್ಯಕ್ಕೆ ಕಾಲಿಟ್ಟ ಇಂಗ್ಲೆಂಡ್‌ ಕ್ರಿಕೆಟ್ ಆಟಗಾರ್ತಿ ನಥಾಲಿ ಶೀವರ್‌-ಕ್ಯಾಥರೀನ್ ಬ್ರಂಟ್‌
 

ಅಲ್ಲದೇ ಈ ಜೋಡಿ ಸಲಿಂಗಿ ಅಥವಾ LGBTIQ ಸಮುದಾಯದ ಬಗ್ಗೆ ಸಂಶೋಧನೆ ನಡೆಸಿದ್ದಲ್ಲದೇ ಅವರಿಗೆ ಸಂಬಂಧಿಸಿದ ವಿವಿಧ ಗುಂಪುಗಳು, ಸಂಸ್ಥೆಗಳು ಮತ್ತು ಅವರನ್ನು ಬೆಂಬಲಿಸುವ ಜನರ ಸಂಪರ್ಕ ವಿವರಗಳನ್ನು ಸಂಗ್ರಹಿಸಿದ್ದಾಗಿ ಯುವತಿ  ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾಳೆ.  ಎರ್ನಾಕುಲಂ ನಿವಾಸಿಯು ತನ್ನ ಗೆಳತಿಯನ್ನು ಭೇಟಿಯಾಗಲು ಕೋಝಿಕೋಡ್‌ಗೆ ಹೋಗಿದ್ದರು ಮತ್ತು ಅವರಿಬ್ಬರೂ ಸಲಿಂಗಕಾಮಿ, ಸಲಿಂಗಕಾಮಿ, ದ್ವಿಲಿಂಗಿ, ಟ್ರಾನ್ಸ್‌ಜೆಂಡರ್, ಇಂಟರ್‌ಸೆಕ್ಸ್ ಮತ್ತು ಕ್ವೀರ್ (LGBTIQ) ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡುವ ವನಜಾ ಕಲೆಕ್ಟಿವ್ ನಡೆಸುತ್ತಿರುವ ಮನೆಯಲ್ಲಿ ಆಶ್ರಯ ಪಡೆದರು ಎಂದು ತಿಳಿದು ಬಂದಿದೆ. 

ನಂತರ ಇವರ ಪೋಷಕರು ಕೂಡ ಅದೇ ನಿವಾಸದಲ್ಲಿ ಇವರಿಬ್ಬರನ್ನು ಭೇಟಿಯಾಗಿದ್ದು, ಎರ್ನಾಕುಲಂ ಯುವತಿಯ ಕುಟುಂಬ ನೀಡಿದ ರಕ್ಷಣೆಯ ಭರವಸೆಯ ಮೇರೆಗೆ ಇಬ್ಬರೂ ಯುವತಿಯರು ಅವರೊಂದಿಗೆ ತೆರಳಿದ್ದರು. ಆಕೆಯ ಮನೆಯಲ್ಲಿ, ಆಕೆಯ ಕುಟುಂಬದವರು ಈಯುವತಿಯರಿಬ್ಬರಿಗೂ ಬ್ಲಾಕ್‌ಮೇಲ್ ಮಾಡಿ ಭಾವನಾತ್ಮಕವಾಗಿ ಚಿತ್ರಹಿಂಸೆ ನೀಡಲು ಶುರು ಮಾಡಿತು. ಇದಾದ ಬಳಿಕ ಒಂದು ದಿನ ಕೋಜಿಕೋಡ್‌ ನಿವಾಸಿ ಮಹಿಳೆಯ ತಾಯಿ, ಸಹೋದರಿ ಬಂದು ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಎರ್ನಾಕುಲಂ  ಮಹಿಳೆ ವಿರುದ್ಧ ದೂರಿದರು ಅಲ್ಲದೇ ಎರ್ನಾಕುಲಂ ಯುವತಿಯ ತಂದೆಗೆ ತಮ್ಮ ಪುತ್ರಿಯನ್ನು ತಡೆಯುವಂತೆ ಹೇಳಿ ಆಕೆಯ ಸಂಗಾತಿಯನ್ನು ಬಲವಂತವಾಗಿ ಎಳೆದೊಯ್ದರು ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. 

ಈ ಪ್ರಕರಣದ ಇತ್ತೀಚಿನ ಬೆಳವಣಿಗೆಯಲ್ಲಿ ಈ ಸಲಿಂಗಿ ಜೋಡಿ ಒಟ್ಟಿಗೆ ವಾಸಿಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ. ಈ ಜೋಡಿಯಲ್ಲಿ ಒಬ್ಬರು ಕೇರಳ ಹೈಕೋರ್ಟ್‌ನಲ್ಲಿ ಪೊಲೀಸ್ ದೂರು ಮತ್ತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ತಮ್ಮ ಸಂಗಾತಿಯ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ 5-6 ನಿಮಿಷ ವಿಚಾರಣೆ ನಡೆಸಿದ ನ್ಯಾಯಾಲಯ ಇವರಿಬ್ಬರಿಗೆ ಒಟ್ಟಿಗೆ ವಾಸಿಸಲು ಅನುಮತಿ ನೀಡಿದರು. ನ್ಯಾಯಾಧೀಶರು ಈ ಜೋಡಿಯನ್ನು ಒಟ್ಟಿಗೆ ವಾಸಿಸಲು ಬಯಸುತ್ತೀರಾ ಎಂದು ಕೇಳಿದಾಗ ಅವರು ಹೌದು ಎಂದಿದ್ದು, ನ್ಯಾಯಾಧೀಶರು ಅವರ ಪರವಾಗಿ ತೀರ್ಪು ನೀಡಿದರು ಮತ್ತು ಅವರು ಮತ್ತೆ ಒಂದಾಗಿದ್ದಾರೆ.
 

Follow Us:
Download App:
  • android
  • ios