ಸಲಿಂಗಿ ದಾಂಪತ್ಯಕ್ಕೆ ಕಾಲಿಟ್ಟ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ನಥಾಲಿ ಶೀವರ್-ಕ್ಯಾಥರೀನ್ ಬ್ರಂಟ್
* ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಥಾಲಿ ಶೀವರ್ ಹಾಗೂ ಕ್ಯಾಥರೀನ್ ಬ್ರಂಟ್
* ನಥಾಲಿ ಶೀವರ್ ಹಾಗೂ ಕ್ಯಾಥರೀನ್ ಬ್ರಂಟ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ್ತಿಯರು
* ಸಲಿಂಗಿ ವಿವಾಹವಾಗುತ್ತಿರುವ ಮಹಿಳಾ ಆಟಗಾರ್ತಿಯರಲ್ಲಿ ಇವರೇ ಮೊದಲೇನಲ್ಲ
ಲಂಡನ್(ಮೇ.30): 2017ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women's ODI World Cup) ವಿಜೇತ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ್ತಿಯರಾದ ನಥಾಲಿ ಶೀವರ್ ಹಾಗೂ ಕ್ಯಾಥರೀನ್ ಬ್ರಂಟ್ (Katherine Brunt And Nat Sciver) ವಾರಾಂತ್ಯದಲ್ಲಿ ಸಲಿಂಗಿ ದಾಪಂತ್ಯಕ್ಕೆ ಕಾಲಿರಿಸಿದ್ದಾರೆ. ಭಾರತ ಮೂಲದ ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ್ತಿ ಇಶಾ ಗುಹಾ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಸಲಿಂಗಿ ಜೋಡಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಇಶಾ ಗುಹಾ, ಹೆಮ್ಮೆ ಎನಿಸುತ್ತಿದೆ, ನಿಮ್ಮಿಬ್ಬರನ್ನು ಇಷ್ಟಪಡುತ್ತೇನೆ (Proud. Love you both) ಎಂದು ಬರೆದುಕೊಂಡಿದ್ದರು. ಇನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲೂ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದು, ವಾರಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಥಾಲಿ ಶೀವರ್ ಹಾಗೂ ಕ್ಯಾಥರೀನ್ ಬ್ರಂಟ್ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಮಹಿಳಾ ಕ್ರಿಕೆಟ್‌ನಲ್ಲಿ ಸಲಿಂಗಿ ವಿವಾಹವಾಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ್ತಿಯಾದ ಡೇನ್ ವಾನ್ ನೈಕರ್ಕ್, ಸಹ ಆಟಗಾರ್ತಿ ಹಾಗೂ ಆಲ್ರೌಂಡರ್ ಮಾರಿಜಾನ್ನೆ ಕಾಪ್‌ರನ್ನು ವಿವಾಹವಾಗಿದ್ದರು. ಅದೇ ರೀತಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಆಮಿ ಸಟ್ಟರ್‌ವೇಟ್ ಹಾಗೂ ಲಿಯಾ ತಹುಹು ಅವರು ಸಹಾ ಸಲಿಂಗಿ ವಿವಾಹವಾಗಿದ್ದರು.
ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವು ಫೈನಲ್‌ಗೇರಿತ್ತು. ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದಲ್ಲಿ ನಥಾಲಿ ಶೀವರ್ ಹಾಗೂ ಕ್ಯಾಥರೀನ್ ಬ್ರಂಟ್ ಈ ಇಬ್ಬರು ಆಟಗಾರ್ತಿಯರು ಸ್ಥಾನ ಪಡೆದಿದ್ದರು. ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಶರಣಾಗಿತ್ತು. 2017ರಲ್ಲಿ ಕ್ರಿಕೆಟ್ ಕಾಶಿ ಲಂಡನ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ರೋಚಕವಾಗಿ ಮಣಿಸಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ, 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಶಾಕ್ ನೀಡುವಲ್ಲಿ ಯಶಸ್ವಿಯಾಗಿತ್ತು.
ಸಲಿಂಗಿ ವಿವಾಹವಾದ ದ.ಆಫ್ರಿಕಾ ಕ್ರಿಕೆಟಿಗರು!
ಕ್ಯಾಥರೀನ್ ಬ್ರಂಟ್, ಇಂಗ್ಲೆಂಡ್ ತಂಡದ ಪರ 14 ಟೆಸ್ಟ್, 140 ಏಕದಿನ ಹಾಗೂ 96 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ ಮೂರು ಮಾದರಿಯ ಕ್ರಿಕೆಟ್‌ನಿಂದ 316 ವಿಕೆಟ್ ಕಬಳಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬ್ರಂಟ್ 4 ಪಂದ್ಯಗಳನ್ನಾಡಿ 4 ವಿಕೆಟ್ ಕಬಳಿಸಿದ್ದರು. ಇನ್ನು ನಥಾಲಿ ಶೀವರ್, ಇಂಗ್ಲೆಂಡ್ ತಂಡದ ಪರ 7 ಟೆಸ್ಟ್, 89 ಏಕದಿನ ಹಾಗೂ 91 ಟಿ20 ಪಂದ್ಯಗಳನ್ನಾಡಿದ್ದಾರೆ. ಆಸ್ಟ್ರೇಲಿಯಾ ಎದುರು ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಥಾಲಿ ಶೀವರ್ ಅಜೇಯ 148 ರನ್ ಬಾರಿಸಿ ಗಮನ ಸೆಳೆದಿದ್ದರು.