ಮಾಜಿ ಮುಖ್ಯಮಂತ್ರಿ ತಾಯಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಪಕ್ಕದಲ್ಲಿ ಕುಳಿದ ಮಾಜಿ ಸಿಎಂ ಕೊಳಲು ನುಡಿಸಿ ತಾಯಿ ಮುಖದಲ್ಲಿ ನಗು ತರಿಸಿದ್ದಾರೆ. ಇಷ್ಟೇ ಅಲ್ಲ ಕೊಳಲು ನುಡಿಸಿದ ಮಗನಿಗೆ ತಾಯಿ ಆಶೀರ್ವಾದ ಮಾಡಿದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಜೆಮ್‌ಶೆಡ್‌ಪುರ (ನ.01) ತಾಯಿ ಆಸ್ಪತ್ರೆ ಬೆಡ್ ಮಲಗಿದ್ದಾರೆ, ಚಿಕಿತ್ಸೆ ಮುಂದುವರಿದಿದೆ. ಇತ್ತ ಮಗ ತಾಯಿ ಚಿಕಿತ್ಸಾ ನೋವು ಮರೆಸೆ ಮುಖದಲ್ಲಿ ನಗು ತರಿಸಲು ಕೊಳಲು ನುಡಿಸಿದ್ದಾರೆ. ವಿಶೇಷ ಅಂದರೆ ಹೀಗೆ ಕೊಳಲು ನುಡಿಸುತ್ತಿರುವುದು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ತಾಯಿ ಸೈರಾ ಮುಂಡಾ ಜೆಮ್‌ಶೆಡ್‌ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ತೆರಳಿದ ಅರ್ಜುನ್ ಮುಂಡಾ ತಾಯಿ ಪಕ್ಕದಲ್ಲಿ ಕುಳಿತು ಕೊಳಲು ನುಡಿಸಿದ್ದಾರೆ.

ಮಗನ ಕೊಳಲು ವಾದಕ್ಕೆ ತಾಯಿಯ ಆಶೀರ್ವಾದ

ಕಳೆದ ಹಲವು ದಿನಗಳಿಂದ ಸೈರಾ ಮುಂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಕೀಯ ಕೆಲಸಗಳ ನಡುವೆ ಅರ್ಜುನ್ ಮುಂಡಾ ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಹೊತ್ತು ಕೆಲ ಹೊತ್ತು ಕಳೆದಿದ್ದಾರೆ.ಇಷ್ಟೇ ಅಲ್ಲ ತಾಯಿ ಮಾನಸಿಕವಾಗಿ ಸದೃಢವಾಗಿರುವಂತೆ ನೋಡಿಕೊಳ್ಳುತ್ತಾರೆ. ಈ ಬಾರಿ ಆಸ್ಪತ್ರೆಗೆ ತೆರಳಿದ ಅರ್ಜುನ್ ಮುಂಡಾ ಕೊಳಲು ನುಡಿಸಿದ್ದಾರೆ. ಮಗ ಕೊಳಲು ನುಡಿಸುತ್ತಿದ್ದರೆ, ಚಿಕಿತ್ಸಾ ನೋವಿನ ನಡುವೆಯೂ ತಾಯಿ ಮುಖದಲ್ಲಿ ನಗು ಮೂಡಿದೆ. ಕ್ಷೀಣಿಸಿದ ಆರೋಗ್ಯದ ನಡುವೆಯೂ ಆತ್ಮವಿಶ್ವಾಸ ಮೂಡಿದೆ. ಕೊಳಲು ನುಡಿಸುತ್ತಿದ್ದಂತೆ ಸೈರಾ ಮುಂಡಾ ಬೆಡ್‌ನಿಂದಲೇ ಕೈ ಎತ್ತಿ ಅರ್ಜುನ್ ಮುಂಡಾಗೆ ಆಶೀರ್ವಾದ ಮಾಡಿದ್ದಾರೆ.

ನನ್ನ ಜೀವನದಲ್ಲಿ ತಾಯಿಯೇ ಎಲ್ಲಾ

ತಾಯಿಗಾಗಿ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಸುಶ್ರಾವ್ಯವಾಗಿ ಕೊಳಲು ನುಡಿಸಿದ್ದಾರೆ. ನನ್ನ ಜೀವನದಲ್ಲಿ ತಾಯಿ ಆಶೀರ್ವಾದವೇ ನನಗೆ ಮುಖ್ಯ. ಆಕೆಯ ಪ್ರೀತಿ, ಬೆಂಬಲ ನನ್ನ ಶಕ್ತಿ. ತಾಯಿ ಜೊತೆ ಕೆಲ ಹೊತ್ತು ಕಳೆದಿದ್ದೇನೆ. ನನ್ನೊಳಗೆ ವಿಶೇಷ ಶಕ್ತಿ ಸಿಕ್ಕಿದ ಅನುಭವ. ತಾಯಿ ಆರೋಗ್ಯಕ್ಕಾಗಿ ಪ್ರಾರ್ಥಿಸಿದೆ. ಇದು ಭಾವುಕ ಕ್ಷಣವಾಗಿತ್ತು. ತಾಯಿ ನನಗೆ ಆಶೀರ್ವಾದ ಮಾಡಿದ್ದಾರೆ. ಆಕೆ ಆಸ್ಪತ್ರೆ ಬೆಡ್ ಮೇಲಿನಿಂದಲೇ ನನಗೆ ಅಶೀರ್ವಾದ ಮಾಡಿದ್ದಾರೆ ಎಂದು ಅರ್ಜುನ್ ಮುಂಡಾ ಹೇಳಿದ್ದಾರೆ.

ಅರ್ಜುನ್ ಮುಂಡಾ ಜಾರ್ಖಂಡ್‌ನ ಪ್ರಬಲ ಬಿಜೆಪಿ ನಾಯಕ. ಜಾರ್ಖಂಡ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವನಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಅರ್ಜುನ್ ಮುಂಡಾ ಬಿಜೆಪಿ ಜನರಲ್ ಸೆಕ್ರಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾರ್ಖಂಡ್‌ನಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿ ಅರ್ಜುನ್ ಮುಂಡಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ ಪಾರ್ಟಿಯಿಂದ ಬಿಜೆಪಿ ಸೇರಿಕೊಂಡ ಅರ್ಜುನ್ ಮುಂಡಾ , ಪ್ರಬಲ ನಾಯಕನಾಗಿ ಬೆಳೆದಿದ್ದಾರೆ.