ಹಾಸನಾಂಬೆ ದೇವಿ ದರ್ಶನೋತ್ಸವದ 5ನೇ ದಿನದಂದು ಸಕಲೇಶಪುರದ ಮುಸ್ಲಿಂ ಮಹಿಳೆ ಹಸೀನಾ ಲತೀಫ್ ದೇವಿಗೆ ಮಡಿಲಕ್ಕಿ ಅರ್ಪಿಸಿ ಭಾವೈಕ್ಯತೆ ಮೆರೆದಿದ್ದಾರೆ. ಕಳೆದ 5 ವರ್ಷಗಳಿಂದ ಇವರು ನಿರಂತರವಾಗಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇದೇ ವೇಳೆ ನಟಿಯರಾದ ಪ್ರೇಮಾ, ಕಾರುಣ್ಯ ರಾಮ್ ಸೇರಿದಂತೆ ಹಲವು ಗಣ್ಯರು ತಾಯಿಯ ದರ್ಶನ ಪಡೆದರು.

ಹಾಸನ (ನ.03): ರಾಜ್ಯದ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಧಿ ಹೊಂದಿರುವ ಹಾಸನಾಂಬೆ ದೇವಿ ದರ್ಶನೋತ್ಸವದ 5ನೇ ದಿನವಾದ ಇಂದು ಭಕ್ತಸಾಗರವೇ ಹರಿದುಬಂದಿದೆ. ಇದರ ನಡುವೆ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರು ಭಕ್ತಿಪೂರ್ವಕವಾಗಿ ತಾಯಿಯ ಸನ್ನಿಧಿಗೆ ಆಗಮಿಸಿ ಮಡಿಲಕ್ಕಿ ಅರ್ಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಶಕ್ತಿದೇವತೆ ಹಾಸನಾಂಬೆೆಯ ಕೃಪೆಗೆ ಪಾತ್ರರಾಗಲು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ನಡುವೆ, ಮುಸ್ಲಿಂ ಯುವತಿಯೊಬ್ಬರು ದೇವಿಯ ದರ್ಶನ ಪಡೆದು ಧಾರ್ಮಿಕ ಸೌಹಾರ್ದತೆ ಹಾಗೂ ಭಾವೈಕ್ಯತೆಯ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

5 ವರ್ಷಗಳಿಂದ ನಿರಂತರ ಸೇವೆ - ಮಡಿಲಕ್ಕಿ ತುಂಬಿದ ಹಸೀನಾ:

ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ನಿವಾಸಿಯಾಗಿರುವ ಹಸೀನಾ ಲತೀಫ್ ಎಂಬುವವರೇ ಈ ಅಪರೂಪದ ಭಕ್ತಿ ಮೆರೆದ ಮಹಿಳೆ. ಹಸೀನಾ ಅವರು ತಮ್ಮ ಮೈಸೂರಿನ ಹಿಂದೂ ಗೆಳತಿ ದೀಪಾ ಅವರೊಂದಿಗೆ ದೇಗುಲಕ್ಕೆ ಆಗಮಿಸಿದ್ದರು. ಸಾಂಪ್ರದಾಯಿಕವಾಗಿ ಮಡಿಲಕ್ಕಿ ಮತ್ತು ಬಾಗಿನ ಹಿಡಿದು ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆೆಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಳೆದ 5 ವರ್ಷಗಳಿಂದ ನಿರಂತರವಾಗಿ ಹಾಸನಾಂಬೆೆಯ ದರ್ಶನ ಪಡೆಯುತ್ತಿರುವ ಹಸೀನಾ ಲತೀಫ್, 'ದೇವರಲ್ಲಿ ಯಾವುದೇ ಭೇದಭಾವವಿಲ್ಲ, ನಂಬಿಕೆಯೇ ಮುಖ್ಯ. ತಾಯಿಯ ದರ್ಶನ ನನಗೆ ಅಪಾರ ಮನಃಶಾಂತಿ ನೀಡುತ್ತದೆ' ಎಂದು ಹೇಳುವ ಮೂಲಕ ಕೋಮು ಸೌಹಾರ್ದತೆಯ ಸಂದೇಶ ಸಾರಿದ್ದಾರೆ.

ದೇಗುಲಕ್ಕೆ ಗಣ್ಯರ ದಂಡು – ತಾರಾ ಮೆರುಗು:

ದರ್ಶನೋತ್ಸವದ 5ನೇ ದಿನವಾದ ಇಂದು ದೇವಾಲಯಕ್ಕೆ ರಾಜಕೀಯ, ಧಾರ್ಮಿಕ ಹಾಗೂ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಹಿರಿಯ ನಟಿ ಪ್ರೇಮಾ ಹಾಗೂ ನಟಿ ಕಾರುಣ್ಯ ರಾಮ್ ತಾಯಿಯ ದರ್ಶನ ಪಡೆದು ಪುನೀತರಾದರು. ಗೌರಿಗದ್ದೆಯ ಆಶ್ರಮದ ಅವಧೂತ ವಿನಯ್ ಗುರೂಜಿ ಹಾಗೂ ವಿವಿಧ ಮಠಾಧೀಶರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಹಲವು ಮುಖಂಡರು ತಾಯಿಯ ದರ್ಶನ ಪಡೆದರು.

ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಯಾವುದೇ ನೂಕುನುಗ್ಗಲು ಉಂಟಾಗದಂತೆ ಬಿಗಿ ಭದ್ರತೆ ಹಾಗೂ ಸಕಲ ವ್ಯವಸ್ಥೆಗಳನ್ನು ಕಲ್ಪಿಸಿದೆ.