Asianet Suvarna News Asianet Suvarna News

ಗಂಡಂಗೆ ಪಾರ್ಟಿ ಮಾಡ್ಬೇಕು, ಹೆಂಡ್ತಿಗೆ ಮನೇಲಿರಬೇಕು, ಇವರಿಬ್ಬರಿಗೆ ಡಿವೋರ್ಸ್ ಬಿಟ್ರೆ ಬೇರೆ ದಾರಿ ಉಂಟಾ?

ಅಂತರ್ಮುಖಿಗಳು ಬಹಿರ್ಮುಖಿಗಳ ಕಡೆಗೆ, ಬಹಿರ್ಮುಖಿಗಳು ಅಂತರ್ಮುಖಿಗಳ ಕಡೆಗೆ ಆಕರ್ಷಿತರಾಗುವುದು ಹೆಚ್ಚು. ಮೇಲ್ನೋಟಕ್ಕೆ ಆಕರ್ಷಕವೆಂಬಂತೆ ಕಂಡುಬಂದರೂ ಒಟ್ಟಾಗಿ ಬದುಕುವಾಗ ಹಲವು ಸಮಸ್ಯೆಗಳು ಎದುರಾಗುತ್ತವೆ. ಭಾವನಾತ್ಮಕ ಪ್ರಬುದ್ಧತೆಯಿಂದ ಪರಸ್ಪರ ಆಸಕ್ತಿಗಳ ಬಗ್ಗೆ ಗೌರವ ಬೆಳೆಸಿಕೊಂಡರೆ ಈ ಅಂತರ ಕಡಿಮೆಯಾಗುತ್ತದೆ.
 

Husband likes party wife loves stay at home will their relationship ends sum
Author
First Published Nov 23, 2023, 4:45 PM IST

ವಿರುದ್ಧ ಮನೋಭಾವದ ವ್ಯಕ್ತಿಗಳ ಕಡೆಗೆ ತಣಿಯದ ಕುತೂಹಲವಿರುತ್ತದೆ, ಆಕರ್ಷಣೆ ಮೂಡುತ್ತದೆ. ಕ್ರಮೇಣ ಪ್ರೀತಿಯಂತೆ ಗೋಚರಿಸಬಹುದು. ವಿರೋಧಾಭಾಸಗಳು ಆಕರ್ಷಿಸುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಹೀಗಾಗಿಯೇ, ಹೆಚ್ಚು ಮಾತನಾಡುವವರು ಅತಿ ಕಡಿಮೆ ಮಾತನಾಡುವವರ ಕಡೆಗೆ, ಕಡಿಮೆ ಮಾತನಾಡುವವರು ಹೆಚ್ಚು ಮಾತನಾಡುವವರ ಕಡೆಗೆ ಆಕರ್ಷಿತರಾಗುವುದು ಕಂಡುಬರುತ್ತದೆ. ಅಷ್ಟೇ ಅಲ್ಲ, ನೆಗೆಟಿವ್ ಧೋರಣೆ ಹೊಂದಿರುವವರು ಪಾಸಿಟಿವ್ ಆಗಿರುವವರನ್ನು ಕಂಡರೆ ಇಷ್ಟಪಡುತ್ತಾರೆ. ಹಾಗೆಯೇ, ಪಾಸಿಟಿವ್ ಇರುವವರು ನೆಗೆಟಿವ್ ಧೋರಣೆಯ ಜನ ಆಕರ್ಷಕವೆಂದು ಭಾವಿಸಬಹುದು. ಆರಂಭದ ಆಕರ್ಷಣೆ, ಪ್ರೀತಿಯ ಮೋಹ ಹೆಚ್ಚುವ ಸಮಯದಲ್ಲಿ ಈ ಸಂಬಂಧ ಭಾರೀ ರೋಮಾಂಚಕ ಎನ್ನಿಸಬಹುದು. ಆದರೆ, ಅಸಲೀ ಸಮಸ್ಯೆ ಶುರುವಾಗುವುದು ಒಟ್ಟಿಗೆ ಬಾಳಲು ಆರಂಭಿಸಿದಾಗ. ಈಗಂತೂ, ಯುವ ದಂಪತಿ ಚಿಕ್ಕಪುಟ್ಟ ಹೊಂದಾಣಿಕೆಯನ್ನೂ ಮಾಡಿಕೊಳ್ಳಲು ಸಿದ್ಧವಿಲ್ಲದ ಮನಸ್ಥಿತಿ ಹೊಂದಿರುತ್ತಾರೆ. ಇತ್ತೀಚೆಗೆ, ಪತಿಯಿಂದ ಡಿವೋರ್ಸ್ ಪಡೆದುಕೊಂಡ ಯುವತಿಯನ್ನು ಕೇಳಿದಾಗ ಆಕೆ ಹೇಳಿದ್ದು, “ಆತ ನನ್ನನ್ನು ಎಲ್ಲೂ ಪಾರ್ಟಿಗೆ ಕರೆದುಕೊಂಡು ಹೋಗುತ್ತಿರಲಿಲ್ಲ, ನನಗಾಗಿ ಖರ್ಚು ಮಾಡುತ್ತಿರಲಿಲ್ಲ’ ಎನ್ನುವ ಅಚ್ಚರಿಯ ಉತ್ತರ. ಇದು ನಿಜವಾಗಿ ನಡೆದ ಘಟನೆ. ಹೀಗೆಯೇ, ಮತ್ತೊಬ್ಬರಿಗೆ ಹೆಚ್ಚು ವೆಚ್ಚ ಮಾಡುವವರು ಇಷ್ಟವಾಗದಿರಬಹುದು. ಒಟ್ಟಿನಲ್ಲಿ ಸಂಬಂಧಗಳು ದೀರ್ಘಕಾಲ ಉಳಿಯುವುದಿಲ್ಲ. ಜತೆಯಾಗಿ ಬಾಳದಿರಲು ಇಂತಹ ಅದೆಷ್ಟೋ ಸನ್ನಿವೇಶಗಳು ನಿರ್ಮಾಣವಾಗಬಲ್ಲವು.

ಹಾಲಿವುಡ್ ವಿಚ್ಛೇದನ (Hollywood Divorce)
ಹಾಲಿವುಡ್ ವಲಯದಲ್ಲಿ ಈಗ ನಟಿ ಸೋಫಿ ಟರ್ನರ್ ಹಾಗೂ ಜೋಯ್ ಜೋನಾಸ್ ವಿಚ್ಛೇದನದ್ದೇ (Divorce) ಸುದ್ದಿ. ಸೆಲೆಬ್ರಿಟಿ ದಂಪತಿ (Celebrity Couple) ದೂರವಾಗಿದ್ದಕ್ಕೆ ಅವರ ವ್ಯಕ್ತಿತ್ವ (Personality) ಹಾಗೂ ಜೀವನಶೈಲಿಯ (Lifestyle) ಆಯ್ಕೆಗಳಿಗೆ ಸಂಬಂಧಿಸಿದ ಕಾರಣಗಳೇ ಇವೆ ಎನ್ನುವುದು ಸದ್ಯದ ಸುದ್ದಿ. ಕೆಲವು ಮಾಧ್ಯಮಗಳ ಪ್ರಕಾರ, ಆರಂಭದ 6 ತಿಂಗಳಲ್ಲಿ ಈ ದಂಪತಿ ತಮ್ಮ ಜೀವನಶೈಲಿಯ ಭಿನ್ನತೆಯಿಂದಾಗಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ಪತಿ ಜೋನಾಸ್ ತನ್ನ ಪತ್ನಿ ಸೋಫಿಯ ರಾತ್ರಿಯ ಜೀವನದ ಬಗ್ಗೆ ಈ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರೂ ವಿಚ್ಛೇದನದ ಜಂಟಿ ಹೇಳಿಕೆಯಲ್ಲಿ ಅಂಥದ್ದೇನೂ ವಿಚಾರ ಪ್ರಸ್ತಾಪ ಮಾಡಿಲ್ಲ. 

ಲಿಂಗ ಮರೆತು ಪ್ರೀತಿ ಮಾಡೋ ಸಲಿಂಗಿಗಳಿಗೆ ಸುಖಕ್ಕಿಂತ ಸಂಕಟಗಳೇ ಹೆಚ್ಚು!

ಹಾಗಿದ್ದರೆ, ಜನರೊಂದಿಗೆ ಒಡನಾಡುವ, ಪಾರ್ಟಿಯನ್ನು (Party) ಇಷ್ಟಪಡುವ ಹುಡುಗ ಅಥವಾ ಹುಡುಗಿ, ಕ್ವಾಲಿಟಿ (Quality) ಸಮಯವನ್ನು ಮನೆಯಲ್ಲೇ ಕಳೆಯಲು ಇಷ್ಟಪಡುವ ಮತ್ತೊಬ್ಬರೊಂದಿಗೆ ಜತೆಯಾಗಿ ಬಾಳಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ. ದೂರವಾಗುವುದೊಂದೇ ಪರಿಹಾರವೇ ಎಂದೂ ಅನ್ನಿಸಬಹುದು. ಅಸಲಿಗೆ, ಇದು ಅವರೊಬ್ಬರದ್ದೇ ಸಮಸ್ಯೆಯಲ್ಲ. ಸಾಕಷ್ಟು ಜನ ಇದನ್ನು ಎದುರಿಸುತ್ತಾರೆ. ಮತ್ತೊಬ್ಬರ ಜೀವನಶೈಲಿಯೊಂದಿಗೆ ಹೊಂದಾಣಿಕೆ (Adjustment) ಸಾಧ್ಯವಿಲ್ಲವೆಂದೆನಿಸಿ ದೂರವಾಗುತ್ತಾರೆ. 

ತಜ್ಞರು ಹೇಳೋದೇನು?
ಆಪ್ತಸಮಾಲೋಚಕರ ಪ್ರಕಾರ, ಇಬ್ಬರ ನಡುವೆ ಪ್ರೀತಿ (Love) ಇರುವುದು ಅತಿ ಮುಖ್ಯ. ಜೀವನ ಸಾಮರಸ್ಯದಿಂದ ಸಾಗಲು ಇಬ್ಬರೂ ಒಂದೇ ರೀತಿಯ ಆಯ್ಕೆಗಳು, ಜೀವನಶೈಲಿಯನ್ನು ಅನುಸರಿಸುವ ಅಗತ್ಯವಿಲ್ಲ. ಒಂದೇ ಜೀವನಶೈಲಿಯನ್ನು ಪ್ರೀತಿ ಬೇಡುವುದಿಲ್ಲ. ಅದು ಬೇಡುವುದು ಭಿನ್ನತೆಗಳ (Difference) ನಡುವೆಯೂ ಇಬ್ಬರೂ ಯಾವುದೋ ಒಂದು ಸಾಮಾನ್ಯವಾದ ತಳಹದಿಯೊಂದಲ್ಲಿ ಜತೆಯಾಗುವ ಸನ್ನಿವೇಶವನ್ನು. ಆಗ, ನಿಮ್ಮ ಹೃದಯ ತಾಳಕ್ಕೆ ನೀವು ಕುಣಿಯಬಹುದು, ಅವರ ಬಯಕೆಯಂತೆ ಅವರು ನಡೆಯುತ್ತಾರೆ. ಆದರೂ ಪ್ರೀತಿ ಮಾತ್ರ ಇದ್ದೇ ಇರುತ್ತದೆ. 
ಭಿನ್ನ ಜೀವನಶೈಲಿಗಳು ಸವಾಲನ್ನು ಒಡ್ಡುವುದು ಸಹಜ. ಆದರೆ, ಇದನ್ನು ಮುಕ್ತ ಮಾತುಕತೆಯ (Open Discussion) ಮೂಲಕ ಪರಿಹರಿಸಿಕೊಳ್ಳಬಹುದು. ಇಷ್ಟವಿಲ್ಲದ ಹೊಂದಾಣಿಕೆ ಮಾಡಿಕೊಳ್ಳುವ ಬದಲು ಅವರ ಇಷ್ಟಾನಿಷ್ಟಗಳಿಗೆ ಗೌರವ (Respect) ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿಮಗೆ ಇಷ್ಟವಿಲ್ಲದ್ದು ಅವರಿಗೆ ಇಷ್ಟವಾಗಬಾರದು ಎಂದೇನಿಲ್ಲ. ಪರಸ್ಪರರ ದೃಷ್ಟಿಕೋನ, ಮೌಲ್ಯಗಳು, ಆಸಕ್ತಿಗಳಿಗೆ ಬೆಲೆ ನೀಡಬೇಕು. 

ಅಯ್ಯೋ ಗಂಡಸಾಗಿ ಅಳ್ತೀಯಾ? ಈ ಡೈಲಾಗ್‌ಗಿನ್ನು ಇಲ್ಲ ಬೆಲೆ, ಅತ್ತು ಹಗುರಾಗಿಬಿಡಿಯೊಮ್ಮೆ!

ಅಂತರ (Gap) ಮುಚ್ಚೋದೇಗೆ?
ನೀವೂ ಸಹ ಇಂಥದ್ದೊಂದು ಗೊಂದಲದಲ್ಲಿದ್ದರೆ ಸ್ವಲ್ಪ ತಡೆಯಿರಿ. ಏಕಾಏಕಿ ಗಡಿಬಿಡಿಗೆ ಬೀಳಬೇಡಿ. ಇಂತಹ ಸಂಬಂಧ (Relation) ಮುಂದುವರಿಯಲು ಇಬ್ಬರಲ್ಲೂ ಭಾವನಾತ್ಮಕ ಪ್ರಬುದ್ಧತೆ ಬೇಕಾಗುತ್ತದೆ. ಒಬ್ಬರು ಮತ್ತೊಬ್ಬರ ಅಗತ್ಯಗಳನ್ನು ಗೌರವಿಸಿದರೆ, ಸದೃಢ ನಂಬಿಕೆ, ಮೌಲ್ಯಗಳನ್ನು ಹಂಚಿಕೊಂಡರೆ ಭಿನ್ನ ಜೀವನಶೈಲಿಯ ನಡುವೆ ಇರುವ ಅಂತರ ಮುಚ್ಚಿಹೋಗುತ್ತದೆ. ಆಗ ಸಂಬಂಧದಲ್ಲಿ ತೃಪ್ತಿಯಿರುತ್ತದೆ. 

Latest Videos
Follow Us:
Download App:
  • android
  • ios