ಮೆಕ್ಕಾಗೆ ಭೇಟಿ ನೀಡಿದ್ದ ಬಾಂಗ್ಲಾದೇಶದ ದಂಪತಿ ಭಾವುಕರಾಗಿ ಅಪ್ಪಿಕೊಂಡಿದ್ದನ್ನು ಅಶ್ಲೀಲವೆಂದು ಬಿಂಬಿಸಿ ವಿಡಿಯೋ ವೈರಲ್ ಮಾಡಲಾಗಿತ್ತು. ಈ ಕಾರಣಕ್ಕಾಗಿ ಸೌದಿ ಅರೇಬಿಯಾದಲ್ಲಿ ಅವರಿಗೆ ಶಿರಚ್ಛೇದನ ಶಿಕ್ಷೆ ವಿಧಿಸಲಾಗಿದ್ದು, ಅವರ 8 ವರ್ಷದ ಮಗಳು ಅಂತ್ಯಸಂಸ್ಕಾರ ಮಾಡಿದ್ದಾಳೆ. ಈ ಬಗ್ಗೆ ಬಾಂಗ್ಲಾದೇಶ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅವರು ಲವರ್ಸ್ ಅಲ್ಲ, ಬದಲಿಗೆ ಎಂಟು ವರ್ಷದ ಹೆಣ್ಣು ಮಗುವಿನ ಅಪ್ಪ-ಅಮ್ಮ. ಬಾಂಗ್ಲಾದೇಶದ ಈ ದಂಪತಿಗೆ ಮೆಕ್ಕಾಕ್ಕೆ ಹೋಗುವುದು ಹಲವು ವರ್ಷಗಳ ಕನಸಾಗಿತ್ತು. ಅದರಂತೆಯೇ ಅವರು ಮೆಕ್ಕಾಕ್ಕೆ ಹೋಗಿದ್ದರು. ಕೊನೆಗೂ ತಮ್ಮ ಆಸೆ ನೆರವೇರಿದೆ ಎಂದು ಇಬ್ಬರೂ ಭಾವುಕರಾಗಿದ್ದಾರೆ. ಕಣ್ಣಿನಲ್ಲಿ ನೀರು ತುಂಬಿದೆ. ಇದೇ ಖುಷಿಯಲ್ಲಿ ಪತಿ, ತನ್ನದೇ ಪತ್ನಿಯ ಹಣೆಗೆ ಮುತ್ತಿಕ್ಕಿದ್ದಾನೆ. ಆ ಖುಷಿಯಲ್ಲಿ, ಭಾವುಕರಾದ ಅವರು, ಕೊನೆಗೂ ತಮ್ಮ ಆಸೆ ಈಡೇರಿದ್ದಕ್ಕೆ ಅಪ್ಪಿಕೊಂಡಿದ್ದಾರೆ. ಅಲ್ಲಿ ಅಶ್ಲೀಲತೆ ಇರಲಿಲ್ಲ. ಭಾವುಕರಾದಾಗ, ಅದೆಷ್ಟೋ ವರ್ಷಗಳ ಕನಸು ನನಸಾದಾಗ ಪತಿ-ಪತ್ನಿಯೋ ಅಥವಾ ಇನ್ನಾರೋ ಪ್ರೀತಿಯಿಂದ ಮಾಡುವ ಆಲಂಗನ ಅದಾಗಿತ್ತು... ಅಷ್ಟೇ...
ಅಲ್ಲಿಗೆ ಬಂದಿದ್ದ ಹೀನ ಮನಸ್ಥಿತಿಯ ಪಾಕಿಸ್ತಾನಿಯೊಬ್ಬನಿಗೆ ಇದು ಅಶ್ಲೀಲವಾಗಿ ಕಂಡಿತು! ಪತಿ-ಪತ್ನಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದಂತೆ ಕಂಡಿತೋ ಅಥವಾ ಇನ್ನೇನು ಹೀನಾಯ ಮನಸ್ಥಿತಿ ಅವನಲ್ಲಿ ಇತ್ತೋ ಗೊತ್ತಿಲ್ಲ. ಅಪವಿತ್ರ ಮತ್ತು ಅಸಭ್ಯ ವರ್ತನೆ' ಇದು ಎಂದು ಹೇಳಿ ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ. ಆದರೆ ಅಲ್ಲಿ ನಡೆದದ್ದು ಏನು ಎಂದು ಯಾರೂ ನೋಡಲೇ ಇಲ್ಲ. ಅಲ್ಲಿಯ ಮನಸ್ಥಿತಿಗಳಿಗೆ ಕಂಡಿದ್ದು, ಅವರು ಕಿಸ್ ಮಾಡಿದ್ದಾರೆ ಎನ್ನುವುದು. ಸರಿ, ಹೀಗೆ ಸಾರ್ವಜನಿಕವಾಗಿ ಅಶ್ಲೀಲ ವರ್ತನೆ ಮಾಡಿದರೆ, ಅಲ್ಲಿ ಸಿಗುವುದು ಕಠಿಣ ಶಿಕ್ಷೆ ಮರಣದಂಡನೆ. ಈ ಘಟನೆ ಬೇರೆ ಬೇರೆ ರೂಪ ಪಡೆಯಿತು, ಹನಿಮೂನ್ಗೆ ಹೋದಾಗ ಅಶ್ಲೀಲವಾಗಿ ನಡೆದುಕೊಂಡರು, ಎಲ್ಲರ ಎದುರೇ ಏನೇನೋ ಮಾಡಿದರು ಎಂದೆಲ್ಲಾ ಸುದ್ದಿಯಾಯಿತು. ಆದರೆ ಅಸಲಿ ವಿಡಿಯೋ ಈಗ ವೈರಲ್ ಆಗಿದ್ದು, ಅಲ್ಲಿ ನಡೆದದ್ದು ಮೇಲೆ ತಿಳಿಸಿದ ವಿಷಯವಷ್ಟೇ.
ಶಿರಚ್ಛೇದನ ಶಿಕ್ಷೆ
ಆದರೆ, ಅದು ಭಾರತ ಅಲ್ಲವಲ್ಲ! ಸೌದಿ. ಇಸ್ಲಾಮಿಕ್ ಕಾನೂನಿನಡಿ 'ತಜೀರ್' (ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ಕಠಿಣ ಶಿಕ್ಷೆ) ಅಡಿಯಲ್ಲಿ ಈ ಮರಣದಂಡನೆ ಜಾರಿಗೊಳಿಸಲಾಯಿತು. ಅದು ಶಿರಚ್ಛೇದನದ ಆದೇಶ! ಇಬ್ಬರಿಗೂ ಶಿರಚ್ಛೇದನ ಮಾಡಲಾಯಿತು. ಆದರೆ, ಅಲ್ಲಿ ನಡೆದ ಇನ್ನೊಂದು ಘಟನೆ ಮಾತ್ರ ಎಂಥವರ ಕಣ್ಣಿನಲ್ಲಿಯೂ ನೀರು ತರಿಸುವಂಥದ್ದು. ಅಪ್ಪ-ಅಮ್ಮನ ಶವಕ್ಕೆ 8 ವರ್ಷದ ಮಗಳಿಗೆ ಮಣ್ಣು ಹಾಕಿಸಲಾಯಿತು. ಒಮ್ಮೆ ಊಹಿಸಿಕೊಳ್ಳಿ. ಅಲ್ಲಿ ಅಪ್ಪ ಅಮ್ಮ ಇಬ್ಬರೂ ಶವವಾಗಿ ಬಿದ್ದಿದ್ದಾರೆ. ಆ ಕಂದಮ್ಮನ ಮನಸ್ಥಿತಿ ಅದ್ಹೇಗೆ ಇರಬಹುದು ಎಂದು. ಜೋರಾಗಿ ಅಳುತ್ತಾ ಆ ಕಂದ ಮಣ್ಣು ಹಾಕಿದ್ದಾಳೆ.
ಬಾಂಗ್ಲಾದ ಪ್ರತಿಕ್ರಿಯೆ
ಬಳಿಕ ಶವವನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ. ತಮ್ಮ ದೇಶದ ಪ್ರಜೆಗಳಿಗೆ ಮರಣದಂಡನೆ ಜಾರಿಗೊಳಿಸುವ ಮುನ್ನ ಸೌದಿ ಸರ್ಕಾರವು ತಮಗೆ ಯಾವುದೇ ಮುನ್ಸೂಚನೆ ಅಥವಾ ಮಾಹಿತಿ ನೀಡಿಲ್ಲ ಎಂದು ಬಾಂಗ್ಲಾದೇಶ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಮಸೀದಿಯೊಳಗೆ ದಂಪತಿ ನಡೆಸಿಕೊಂಡ ರೀತಿ ಅಥವಾ ಅಪರಾಧದ ನಿಖರ ಸ್ವರೂಪದ ಬಗ್ಗೆ ಸೌದಿ ಆಡಳಿತವು ಯಾವುದೇ ಅಧಿಕೃತ ಸ್ಪಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ ಎನ್ನಲಾಗಿದ್ದು, ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಅಲ್ಲಿ ನಡೆದಿರುವುದು ಯಾವುದೇ ಅಸಭ್ಯ ವರ್ತನೆ ಅಲ್ಲ ಎನ್ನುವುದು ತಿಳಿದುಬಂದಿದೆ. ಆದರೆ ಎಲ್ಲವೂ ಮುಗಿದು ಹೋಗಿದೆ!


