11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಪ್ರಸಿದ್ಧ ಸಾಮಾಜಿಕ ಜಾಲತಾಣ ಪ್ರಭಾವಿ ನಿಶಾ ರಾಫೆಲ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕನ ವೈದ್ಯಕೀಯ ಹಾಗೂ ಕಾನೂನು ಪರೀಕ್ಷೆ ಮಾಡಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಏನಿದು ಕೇಸ್​

ತ್ರಿಶೂರ್: 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಪ್ರಸಿದ್ಧ ಸಾಮಾಜಿಕ ಜಾಲತಾಣ ಪ್ರಭಾವಿ (Social Media Influencer) ನಿಶಾ ರಾಫೆಲ್ ವಿರುದ್ಧ ಕೇರಳದ ತ್ರಿಶೂರ್ ಪಶ್ಚಿಮ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸಂತ್ರಸ್ತ ಬಾಲಕನನ್ನು ವೈದ್ಯಕೀಯ ಹಾಗೂ ಕಾನೂನು ಪರೀಕ್ಷೆಗಾಗಿ ತ್ರಿಶೂರ್ ಜನರಲ್ ಆಸ್ಪತ್ರೆಗೆ ಕರೆದೊಯ್ದಾಗ ಪ್ರಾಥಮಿಕ ತಪಾಸಣೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯಿಂದ ಬಹಿರಂಗ!

ನಿಶಾ ರಾಫೆಲ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಈ ವಿಷಯ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಕೂಡಲೇ ಬಾಲಕನನ್ನು Medico-Legal Examination ಅರ್ಥಾತ್​ ವೈದ್ಯಕೀಯ-ಕಾನೂನು ಪರೀಕ್ಷೆಗೆ ಒಳಪಡಿಸಲಾಯಿತು. ವರದಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ನಿಶಾ ರಾಫೆಲ್ ವಿರುದ್ಧ ದೂರು ದಾಖಲಿಸಲಾಗಿದೆ.

ಎಲ್ಲಾ ಸುಳ್ಳು ಸುದ್ದಿ

ಆದರೆ, ಇದು ಭಾರಿ ಸದ್ದು ಮಾಡುತ್ತಲೇ, ನಿಶಾ ರಾಫೆಲ್ ಅವರ ಆಪ್ತ ಮೂಲಗಳು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಹೀಗೆ ಆಗಿಲ್ಲ. ಎಲ್ಲವೂ ಸುಳ್ಳು ಸುದ್ದಿ ಎನ್ನುತ್ತಿದ್ದಾರೆ. ಇದನ್ನು ಕಟ್ಟುಕಥೆಯ ಪ್ರಕರಣ ಎಂದು ಹೇಳುತ್ತಿದ್ದಾರೆ.

ಎರಡು ಫ್ಲಾಟ್‌ಗಳ ಆಸ್ತಿಗೆ ಸಂಬಂಧಿಸಿದಂತೆ ನಿಶಾ ಹಾಗೂ ದೂರುದಾರರ ಕುಟುಂಬದ ನಡುವೆ ದೀರ್ಘಕಾಲದಿಂದ ಕಾನೂನು ಸಂಘರ್ಷ ಮತ್ತು ವೈಯಕ್ತಿಕ ದ್ವೇಷವಿತ್ತು. ಅದೇ ಹಳೆಯ ಹತಾಶೆಯಿಂದ ಈ ರೀತಿಯ ಸುಳ್ಳು ದೂರು ನೀಡಲಾಗಿದೆ ಎಂದು ನಿಶಾ ಪರವಾಗಿದ್ದವರು ವಾದಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತ್ರಿಶೂರ್ ಪಶ್ಚಿಮ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸತ್ಯಾಸತ್ಯತೆ ಪತ್ತೆಹಚ್ಚಲು ಮುಂದಾಗಿದ್ದಾರೆ. ಔಪಚಾರಿಕ ದೂರಿನ ಆಧಾರದ ಮೇರೆಗೆ ನಿಶಾ ರಾಫೆಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ ವಿಷಯದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ.