ಮುಂಬೈನಲ್ಲಿ ಕಳ್ಳನೊಬ್ಬ ತಾನು ಕದ್ದ ಚಿನ್ನದ ಸರವನ್ನು ಸಿಕ್ಕಿಬೀಳುವ ಭಯದಿಂದ ನುಂಗಿದ್ದನು. ಶಸ್ತ್ರಚಿಕಿತ್ಸೆ ದುಬಾರಿಯಾದ ಕಾರಣ ಪೊಲೀಸರು ಆತನಿಗೆ 50ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ಬಲವಂತವಾಗಿ ತಿನ್ನಿಸಿದರು. ಅಂತಿಮವಾಗಿ ಮಲದ ಮೂಲಕ ಸರವನ್ನು ಹೊರತೆಗೆದು, ತೊಳೆದು ಮಾಲೀಕರಿಗೆ ಹಿಂದಿರುಗಿಸಿದ ವಿಚಿತ್ರ ಘಟನೆ ನಡೆದಿದೆ.

ಮುಂಬೈ: ಕಳ್ಳನೊಬ್ಬ ನುಂಗಿದ ಚಿನ್ನದ ಸರವನ್ನು ಮರಳಿ ಪಡೆಯಲು ಪೊಲೀಸರು ಅಸಾಮಾನ್ಯ ತಂತ್ರವನ್ನು ಯಶಸ್ವಿಯಾಗಿ ಬಳಸಿ ಯಶಸ್ವಿಯಾಗಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದ್ದು, ಇದರ ಬಗ್ಗೆ ಮತ್ತೆ ಸುದ್ದಿ ಸದ್ದು ಮಾಡುತ್ತಿದೆ. ಆ ಕಳ್ಳನಿಗೆ 50 ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ಬಲವಂತವಾಗಿ ತಿನ್ನಿಸಿದ ಬಳಿಕ ತಿಂದ ಚೈನನ್ನು ಹಿಂಬದಿಯಿಂದ ಕಕ್ಕಿದ್ದು, ಅದನ್ನು ಚೆನ್ನಾಗಿ ತೊಳೆದು, ನಂತರ ಮಹಿಳೆಗೆ ವಾಪಸ್​ ನೀಡಿರುವ ಘಟನೆ ಇದಾಗಿದೆ. ಮುಂಬೈ ಪೊಲೀಸರ ಈ ತಂತ್ರ ವರ್ಷ ಕಳೆದರೂ ಇಂದಿಗೂ ಸಿಕ್ಕಾಪಟ್ಟೆ ಫೇಮಸ್​ ಆಗುತ್ತಿದ್ದು, ಪೊಲೀಸ್​ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕುತ್ತಲೇ ಇರುತ್ತದೆ.

ಆಗಿದ್ದೇನು?

ಮುಂಬೈನ ಬೀದಿಯಲ್ಲಿ ಮಹಿಳೆಯೊಬ್ಬರಿಂದ ಸರವನ್ನು ಕಸಿದುಕೊಂಡಿದ್ದ ಈ ಕಳ್ಳ. ಆತನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಆತ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಪೊಲೀಸರು ಹಿಡಿಯಲು ಬಂದಾಗ ಸಿಕ್ಕಿಬೀಳುವ ಭಯದಿಂದ ಸರವನ್ನು ನುಂಗಿಯೇ ಬಿಟ್ಟನು! ಆಸ್ಪತ್ರೆಯ ಎಕ್ಸ್-ರೇಗಳಲ್ಲಿ ಚೈನು ಆತನ ಹೊಟ್ಟೆಯಲ್ಲಿ ಇರುವುದು ತಿಳಿಯಿತು. ಅದನ್ನು ತೆಗೆಯಲು ಆಪರೇಷನ್​ ಮಾಡಬೇಕಾಗಿತ್ತು. ಆದರೆ ಅದು ಬಹಳ ಅಪಾಯಕಾರಿಯಾಗಿತ್ತು, ಜೊತೆಗೆ ಪೊಲೀಸ್​ ಇಲಾಖೆ ಅದರ ಖರ್ಚುವೆಚ್ಚ ನೋಡಿಕೊಳ್ಳಬೇಕಿತ್ತು. ಆ ಚೈನನ್ನು ಎನಿಮಾವನ್ನು ನೀಡಿ ಹಿಂಬದಿಯಿಂದ ತೆಗೆಯಲು ಪ್ರಯತ್ನಿಸಿದರೂ ಅದು ಫಲ ನೀಡಲಿಲ್ಲ. ಶಸ್ತ್ರಚಿಕಿತ್ಸೆ ಮಾಡುವುದು ಉತ್ತಮ ಮಾರ್ಗ ಎಂದು ವೈದ್ಯರು ಹೇಳಿದರು, ಆದರೆ ಪೊಲೀಸ್ ಅಧಿಕಾರಿಗಳು ಅದು ತುಂಬಾ ದುಬಾರಿ ಎಂದು ನಿರ್ಧರಿಸಿದರು.

ಕೊನೆಗೆ ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಜ್ಜಿಯ ತಂತ್ರ ಬಳಸಿದರು. ಚೈನು ಅವನ ಮಲದಿಂದ ಹೊರಕ್ಕೆ ಬರುವವರೆಗೂ ಬಾಳೆಹಣ್ಣುಗಳನ್ನು ತಿನ್ನಿಸುವ ನಿರ್ಧಾರ ಮಾಡಿದರು. ಅದಕ್ಕೆ ಆತ ಒಪ್ಪಿರಲಿಲ್ಲ. ಆದರೆ ಪೊಲೀಸರು ಬಿಡಬೇಕಲ್ಲ. ಅವನಿಗೆ ದಿನವಿಡೀ 40 ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಲಾಯಿತು. ಕಳ್ಳ ಸುಸ್ತಾದರೂ ಬಿಡಲಿಲ್ಲ ಪೊಲೀಸರು. ಅವನು ಚೈನನ್ನು ಕಕ್ಕುವವರೆಗೂ ತಿನ್ನಿಸುತ್ತಲೇ ಹೋದರು. ಅಂತಿಮವಾಗಿ ಅವನ ಮಲದಲ್ಲಿ ಚೈನು ಪತ್ತೆಯಾಯಿತು. ಬಳಿಕ ಅದನ್ನು ತೊಳೆದು ಸೋಂಕುರಹಿತಗೊಳಿಸಿ ಮಹಿಳೆಗೆ ವಾಪಸ್​ ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮುಟ್ಟಲು ಹೇಸಿದ ಮಾಲೀಕ

25 ವರ್ಷದ ಕಳ್ಳನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ವರದಿಗಳ ಪ್ರಕಾರ, ಕದ್ದ ವಸ್ತುವನ್ನು ಮರಳಿ ಪಡೆಯಲು ಮುಂಬೈ ಪೊಲೀಸರು ಹಣ್ಣಿನ ಕಡೆಗೆ ತಿರುಗಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಜುಲೈನಲ್ಲಿ ಒಬ್ಬ ಕಳ್ಳನಿಗೆ ಎರಡು ಡಜನ್ ಬಾಳೆಹಣ್ಣುಗಳನ್ನು ತಿಂದು, ವಿರೇಚಕಗಳನ್ನು ಬೆರೆಸಿದ ಹಲವಾರು ಲೀಟರ್ ಹಾಲು ಕುಡಿಸಿದಾಗ, ಒಂದು ಚೈನನ್ನು ವಶಪಡಿಸಿಕೊಳ್ಳಲಾಗಿತ್ತು. ಅದಕ್ಕೂ ಮುನ್ನ ದೊಡ್ಡ ಪೆಂಡೆಂಟ್ ಇರುವ ಚಿನ್ನದ ಸರವನ್ನು ನುಂಗಿದ ನಂತರ ಕಳ್ಳನಿಗೆ ಐದು ಡಜನ್ ಬಾಳೆಹಣ್ಣುಗಳನ್ನು ತಿನ್ನಿಸಲಾಗಿತ್ತು. ಕಳ್ಳನು ಲೂಟಿ ಮಾಡಿದ ವಸ್ತುವನ್ನು ಯಶಸ್ವಿಯಾಗಿ ಹೊರಹಾಕಿದನು. ಆದರೆ ಅಸಹ್ಯಗೊಂಡ ಸಂತ್ರಸ್ತ ಅದನ್ನು ಮುಟ್ಟಲು ನಿರಾಕರಿಸಿದನು ಮತ್ತು ಬದಲಿಗೆ ಪ್ಲಾಸ್ಟಿಕ್ ಚೀಲದಲ್ಲಿ ಆಭರಣ ವ್ಯಾಪಾರಿಯ ಬಳಿಗೆ ಕೊಂಡೊಯ್ದನು ಎನ್ನಲಾಗಿದೆ.