ಭಾವನೆಗಳೇ ಇಲ್ಲದ ಬದುಕಿದೆಯೇ? ನಮ್ಮನಿನ್ನೆ,ಇಂದು,ನಾಳೆ ಎಲ್ಲವೂ ಭಾವನೆಗಳಿಗೆ ತಕ್ಕಂತೆ ರೂಪುಗೊಂಡಿರುತ್ತವೆ.ಯಾವುದೇ ವ್ಯಕ್ತಿ ನನ್ನೊಳಗೆ ಭಾವನೆಗಳೇ ಇಲ್ಲವೆಂದು ಹೇಳಿದ್ರೆ ಆತ ಬದುಕಿದ್ದೂ ಸತ್ತಂತೆಯೇ.ಏಕೆಂದ್ರೆ ಬದುಕಿನ ಸ್ವಾದ ಅಡಗಿರೋದೇ ಭಾವನೆಗಳಲ್ಲಿ.ಸರಳವಾಗಿ ಹೇಳೋದಾದ್ರೆ ಭಾವನೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು.ವಾಟ್ಸ್‌ಅಪ್‌ನಲ್ಲಿಬಂದ ಜೋಕ್‌ ಓದಿದ ತಕ್ಷಣ ಜೋರಾಗಿ ನಕ್ಕು ಬಿಡುತ್ತೇವೆ.ಯಾರಾದ್ರೂ ನಮ್ಮಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ರೆ ತಕ್ಷಣ ಕೋಪ ನರನಾಡಿಗಳನ್ನು ಆವರಿಸಿಕೊಂಡು ಬಿಡುತ್ತೇ, ತಕ್ಷಣ ಅವರ ಜನ್ಮ ಜಾಲಾಡುತ್ತೇವೆ. ಅದೇ ಪ್ರೀತಿಪಾತ್ರರು ದೂರವಾದಾಗ ಕುಸಿದು ಬಿಡುತ್ತೇವೆ. ದುಃಖ ಉಮ್ಮಳಿಸಿ ಬರುತ್ತೆ.ಈ ನಗು,ಕೋಪ,ದುಃಖ,ಖುಷಿ,ವಿಷಾದ ಎಲ್ಲವೂ ಭಾವನೆಗಳೇ. ಮನುಷ್ಯನೆಂದ ಮೇಲೆ ಇವೆಲ್ಲ ಕಾಮನ್‌. ಆದ್ರೆ ಈ ಭಾವನೆಗಳು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲವು.ಅಷ್ಟೇ ಅಲ್ಲನಮ್ಮ ವ್ಯಕ್ತಿತ್ವವನ್ನುಇನ್ನೊಬ್ಬರ ಮುಂದೆ ಬಿಚ್ಚಿಡೋದು ಇದೇ ಭಾವನೆಗಳು.ಹೀಗಾಗಿ ಇವುಗಳಿಗೆ ಮೂಗುದಾರ ಹಾಕೋ ಸಾಮರ್ಥ್ಯ ಬೆಳೆಸಿಕೊಳ್ಳೋದು ಅಗತ್ಯ. ಭಾವನೆಗಳ ಮೇಲೆ ನಿಯಂತ್ರಣ ಹೊಂದಿರೋ ವ್ಯಕ್ತಿ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಬಲ್ಲ.

ಸಮಸ್ಯೆಯೇ ಇಲ್ಲದ ಜೀವನ ಪಾಠ ಕಲಿಸಿದ ಆಚಾರ್ಯ ಚಾಣಕ್ಯ

ವ್ಯಕ್ತಿತ್ವಕ್ಕೆ ಲೇಬಲ್‌
ನೀವೆಂತಹ ವ್ಯಕ್ತಿ ಅನ್ನೋದನ್ನು ನಿರ್ಧರಿಸೋದು ನಿಮ್ಮ ಭಾವನೆಗಳೇ.ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿರೋವಾಗ ಆ ಕಡೆ ಈ ಕಡೆ ವಾಹನಗಳಲ್ಲಿ ನಿಂತಿರೋರ ಮೇಲೆ ಸಿಕ್ಕಾಪಟ್ಟೆ ರೇಗಿದ್ರೆ ನಿಮ್ಮನ್ನು ಜನ ವಿಲಕ್ಷಣವಾಗಿ ನೋಡ್ತಾರೆ. ಈತನಿಗೆ ಸ್ವಲ್ಪತಲೆಕೆಟ್ಟಿದೆ ಅಂತಾನೇ ಮಾತಾಡಿಕೊಳ್ಳುತ್ತಾರೆ. ಇನ್ನುಆಫೀಸ್‌ನಲ್ಲಿ ಮುಖ್ಯವಾದ ಮೀಟಿಂಗ್‌  ನಡೆಯುತ್ತಿರೋವಾಗ ವಾಟ್ಸ್‌ಅಪ್‌ ಮೆಸೇಜ್‌ ನೋಡಿಕೊಂಡು ನಕ್ಕರೆ ಅಲ್ಲಿರೋ ಅಷ್ಟೂ ಜನ ನಿಮ್ಮನ್ನು ವಿಚಿತ್ರವಾಗಿ ನೋಡೋದು ಪಕ್ಕಾ.ಇನ್ನುನಿಮ್ಮ ಬಾಸ್‌ ಏನಾದ್ರೂ ಶಿಸ್ತಿನ ಸಿಪಾಯಿಯಾಗಿದ್ರೆ ನಿಮ್ಮ ಗ್ರಹಚಾರ ಬಿಡಿಸೋದು ಗ್ಯಾರಂಟಿ. ಕೋಪ ಬರೋ ಪರಿಸ್ಥಿತಿಯಲ್ಲೂ ತಾಳ್ಮೆಯಿಂದ ಇರೋದು,ಏನೇ ಬಂದ್ರೂ ಕೂಲ್‌ ಆಗಿ ಹ್ಯಾಂಡಲ್‌ ಮಾಡೋ ವ್ಯಕ್ತಿ ಎಲ್ಲರ ಗಮನ ಸೆಳೆಯೋ ಜೊತೆ ಉತ್ತಮ ವ್ಯಕ್ತಿತ್ವದವನು ಎಂದು ಗುರುತಿಸಲ್ಪಡುತ್ತಾನೆ. ಹೀಗೆ ನೀವು ಪರಿಸ್ಥಿತಿಗೆ ಹೇಗೆ ರಿಯಾಕ್ಟ್‌ ಮಾಡ್ತೀರಿ ಅಥವಾ ಭಾವನೆಗಳನ್ನು ತೋರ್ಪಡಿಸುತ್ತೀರಿ ಅನ್ನೋದ್ರ ಮೇಲೆ ನಿಮ್ಮ ವ್ಯಕ್ತಿತ್ವಕ್ಕೆ ಕೂಲ್‌, ಮುಂಗೋಪಿ, ಸೈಕೋ, ಮೂಡಿ, ಜಾಲಿ ಹೀಗೆ ಇನ್ನೂ ಏನೇನೋ ಲೇಬಲ್‌ ಬೀಳುತ್ತೆ.

ಭಾವನೆಗಳಿಗೆ ಮೂಗುದಾರ ತೊಡಿಸೋದು ಹೇಗೆ?
ಕೆಲವೊಮ್ಮೆ ಸಿಟ್ಟು ಮಾಡಿಕೊಳ್ಳೋದ್ರಿಂದ ಏನೂ ಪ್ರಯೋಜನವಿಲ್ಲ ಎಂಬುದು ನಮಗೆ ಗೊತ್ತಿರುತ್ತೆ. ಆದ್ರೆ ಕೆಲವು ಮಾತುಗಳು ಅಥವಾ ಸಂದರ್ಭ ಸಿಟ್ಟು ಮಾಡಿಕೊಳ್ಳುವಂತೆ,ಮಾತಿಗೆ ಮಾತು ಬೆಳೆಸುವಂತೆ ಮಾಡಿ ಬಿಡುತ್ತವೆ. ಆಮೇಲೆ ನಾವಾಡಿದ ಮಾತಿಗೆ, ನಾವು ವರ್ತಿಸಿದ ರೀತಿಗೆ ಪಶ್ಚತ್ತಾಪ ಪಟ್ಟುಕೊಳ್ಳುತ್ತೇವೆ. ಹಾಗೆಯೇ ಗಂಭೀರ ಸನ್ನಿವೇಶವೊಂದ್ರಲ್ಲಿ ಯಾವುದೋ ಒಂದು ಮಾತು ಅಥವಾ ವರ್ತನೆ ನಮ್ಮನ್ನು ನಗುವಂತೆ ಪ್ರೇರೇಪಿಸಿ ಬಿಡುತ್ತವೆ. ಇವೆಲ್ಲ ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುವಂತವೇ. ಆದ್ರೆ ಪ್ರಯತ್ಬಪಟ್ರೆ ನಮ್ಮ ಭಾವನೆಗಳಿಗೆ ನಾವೇ ಕಡಿವಾಣ ಹಾಕಿಕೊಳ್ಳೋದು ಕಷ್ಟದ ಕೆಲಸವಲ್ಲ. ಹಾಗಾದ್ರೆ ಭಾವನೆಗಳಿಗೆ ಲಗಾಮು ಹಾಕೋದು ಹೇಗೆ?

ಜನರನ್ನು ಅರ್ಥ ಮಾಡಿಕೊಳ್ಳೋಕೆ ಈ ಸಿಂಪಲ್ ಸೈಕಾಲಜಿ ಟ್ರಿಕ್!

ಭಾವನೆಗಳನ್ನು ಅರಿಯಿರಿ
ನಿಮ್ಮ ಭಾವನೆಗಳ ಬಗ್ಗೆ ನಿಮಗಿಂತ ಚೆನ್ನಾಗಿ ಅರಿತಿರೋರು ಬೇರೆ ಯಾರೂ ಇಲ್ಲ. ಯಾವ ಮಾತು ಅಥವಾ ಸಂದರ್ಭ ನಿಮ್ಮ ಭಾವನೆಗಳನ್ನು ಕೆರಳಿಸುತ್ತದೆ ಎಂಬುದು ಚೆನ್ನಾಗಿಯೇ ಗೊತ್ತಿರುತ್ತೆ. ಹೀಗಾಗಿ ಅಂಥ ಪರಿಸ್ಥಿತಿ ಅಥವಾ ಸಂದರ್ಭಗಳನ್ನು ಆದಷ್ಟು ನಿರ್ಲಕ್ಷಿಸಿ. ಉದಾಹರಣೆಗೆ ಗಡಿಬಿಡಿಯಾದಾಗ ಅಥವಾ ಒತ್ತಡ ಹೆಚ್ಚಿದಾಗ ನೀವು ಸುತ್ತಮುತ್ತಲಿರೋರ ಮೇಲೆ ವಿನಾಕಾರಣ ರೇಗುತ್ತೀರಿ ಅಂದಾದ್ರೆ ಅಂಥ ಪರಿಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ವಹಿಸಿ. ಊಟಕ್ಕೆ ಅತಿಥಿಗಳು ಬರುತ್ತಾರೆ ಎಂದಾದ್ರೆ ಹಿಂದಿನ ದಿನವೇ ಅಡುಗೆಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಿ. ಮೆನು ಬಗ್ಗೆ ಮೊದಲೇ ನಿರ್ಧರಿಸಿ. ಇದ್ರಿಂದ ಕೊನೆಯ ಕ್ಷಣದ ಒತ್ತಡ ತಗ್ಗುತ್ತದೆ. ನೀವು ಯಾರ ಮೇಲೂ ರೇಗುವ ಪ್ರಸಂಗ ಎದುರಾಗೋದಿಲ್ಲ.

ಮಾನಸಿಕ ಸಿದ್ಧತೆ
ಯಾವ ಪರಿಸ್ಥಿತಿಗೆ ನೀವು ಹೇಗೆ ರಿಯಾಕ್ಟ್‌ ಮಾಡುತ್ತೀರಿ ಎಂಬುದು ಚೆನ್ನಾಗಿಯೇ ಗೊತ್ತಿರುತ್ತೆ. ಹೀಗಾಗಿ ಅಂಥ ಸಂದರ್ಭ ಎದುರಾದಾಗ ನಿಮ್ಮ ಭಾವನೆಗಳನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಮೊದಲೇ ನಿರ್ಧರಿಸಿ. ಅಂದ್ರೆ ಆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಮಾನಸಿಕವಾಗಿ ಸಿದ್ಧರಾಗಿರಿ. ಉದಾಹರಣೆಗೆ ಅತ್ತೆ ಹಂಗಿಸಿ ಅಥವಾ ನೋವಾಗೋ ರೀತಿಯಲ್ಲಿ ಮಾತನಾಡಿದಾಗ ಸೊಸೆಗೆ ಸಿಟ್ಟು ಬಂದೇಬರುತ್ತೆ. ನೀವು ಸೊಸೆಯಾಗಿದ್ರೆ ಅತ್ತೆ ಈ ರೀತಿ ಮಾತನಾಡಿದಾಗ ನಾನು ಕೋಪ ಮಾಡಿಕೊಳ್ಳಬಾರದು, ರಿಯಾಕ್ಟ್‌ ಮಾಡಲು ಹೋಗಲೇಬಾರದು ಎಂದು ಮೊದಲೇ ನಿರ್ಧರಿಸಿಕೊಳ್ಳಿ. ಇದ್ರಿಂದ ನಿಮ್ಮ ಮಾನಸಿಕ ನೆಮ್ಮದಿಗೆ ಹಾನಿಯಾಗೋದಿಲ್ಲ.ಇಲ್ಲವಾದ್ರೆ ಮಾತಿಗೆ ಮಾತು ಬೆಳೆದು ಎಲ್ಲಿಗೋ ಹೋಗಿ ಮುಟ್ಟಬಹುದು. 

ಸ್ಫೂರ್ತಿಯ ಸೆಲೆ ಡಾಕ್ಟರ್ ಕಲೆಕ್ಟರ್ ಡಾ.ರಾಜೇಂದ್ರ ಭಾರೂಡ್

ಪರಿಸ್ಥಿತಿ ಮಾರ್ಪಡಿಸಿ
ಭಾವನೆಗಳು ಹದತಪ್ಪದಂತೆ ಮಾಡಲು ಪರಿಸ್ಥಿತಿಯನ್ನು ನಮಗೆ ಬೇಕದಂತೆ ಬದಲಾಯಿಸಿಕೊಳ್ಳುವ ಕಲೆ ತಿಳಿದಿರಬೇಕು. ಹೀಗೆ ಮಾಡೋದ್ರಿಂದ ಮನಸ್ಸು ಕೆಡೋದಿಲ್ಲ,ನೆಮ್ಮದಿ ಹಾಳಾಗೋದಿಲ್ಲ. ಕೆಲವರ ನಡುವೆ ಇರೋವಾಗ ನಿಮಗೆ ಕೀಳರಿಮೆ ಉಂಟಾಗಬಹುದು. ಅಂಥ ಸಂದರ್ಭದಲ್ಲಿ ನಿಮಗಿಂತ ಕಡಿಮೆ ತಿಳಿದಿರೋರ ಕಡೆಗೆ ಗಮನ ಕೇಂದ್ರೀಕರಿಸಿ, ಆಗ ಸಹಜವಾಗಿಯೇ ನಿಮ್ಮ ಬಗ್ಗ, ನಿಮ್ಮ ಸಾಮರ್ಥ್ಯದ ಬಗ್ಗೆ ಹೆಮ್ಮೆ ಮೂಡುತ್ತದೆ. ನಿಮಗಿಂತ ಶ್ರೀಮಂತನಾಗಿರೋ ಸ್ನೇಹಿತನನ್ನು ನೋಡಿ ಹೊಟ್ಟೆಕಿಚ್ಚು ಪಡೋದು ಅಥವಾ ಕೀಳರಿಮೆ ಬೆಳೆಸಿಕೊಳ್ಳುವ ಬದಲು ನಿಮಗಿಂತ ಕಷ್ಟದಲ್ಲಿರೋ ವ್ಯಕ್ತಿಯನ್ನು ಗಮನಿಸಿ. ಆಗ ಸಹಜವಾಗಿಯೇ ನೀವೆಷ್ಟು ಅದೃಷ್ಟವಂತರು ಎಂಬ ಭಾವನೆ ಮೂಡುತ್ತದೆ. 

ಆಲೋಚನೆ ಬದಲಾಯಿಸಿ
ನಮ್ಮ ಆಲೋಚನೆಗಳ ಮೇಲೆಯೇ ಭಾವನೆಗಳು ನಿಂತಿರುತ್ತವೆ. ಏನೋ ಕೆಟ್ಟದ್ದು ಸಂಭವಿಸುತ್ತದೆ ಎಂಬ ಯೋಚನೆ ಮನಸ್ಸಿನ ನೆಮ್ಮದಿ ಕಸಿಯುತ್ತದೆ. ಅದೇ ಏನೋ ಒಳ್ಳೆಯದು ಸಂಭವಿಸುತ್ತದೆ ಎಂಬ ಯೋಚನೆ ಮನಸ್ಸನ್ನು ಖುಷಿಯಲ್ಲಿ ತೇಲಾಡುವಂತೆ ಮಾಡುತ್ತದೆ. ಹಾಗಂತ ಆಲೋಚನೆ ಬದಲಾಯಿಸಿಕೊಂಡ ತಕ್ಷಣ ಪರಿಸ್ಥಿತಿ ಬದಲಾಗುತ್ತದೆ ಎಂದಲ್ಲ. ಆದ್ರೆ ಕನಿಷ್ಠ ಪಕ್ಷ ನಮ್ಮ ಭಾವನೆಗಳನ್ನು ನಿಯಂತ್ರಿಸಬಹುದು.

ಪ್ರತಿಕ್ರಿಯೆ ಬದಲಾಗಲಿ
ಮೇಲಿನ ಎಲ್ಲ ಪ್ರಯತ್ನಗಳ ಹೊರತಾಗಿಯೂ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದಾದ್ರೆ ನೀವು ಆ ಪರಿಸ್ಥಿತಿಗೆ ಪ್ರತಿಕ್ರಿಯಿಸೋ ವಿಧಾನ ಬದಲಾಯಿಸಿಕೊಳ್ಳಿ. ಕೋಪ ಬಂದಾಗ ದೀರ್ಘ ಉಸಿರೆಳೆದುಕೊಳ್ಳಿ. ಗಮನವನ್ನು ಬೇರೆಡೆ ಕೇಂದ್ರೀಕರಿಸಿ. ಗಂಭೀರ ಸಮಯದಲ್ಲಿ ನಗು ಒತ್ತರಿಸಿ ಬಂದ್ರೆ ನಿಮ್ಮೊಳಗಿನ ಎಲ್ಲ ಶಕ್ತಿಗಳನ್ನು ಕೇಂದ್ರೀಕರಿಸಿ ಹೊರನೋಟಕ್ಕಾದ್ರೂ ಗಂಭೀರವಾಗಿರಲು ಪ್ರಯತ್ನಿಸಿ.