ಗಂಡ ತನ್ನ ಮಾತು ಕೇಳುತ್ತಿಲ್ಲ ಎಂದು ಪತ್ನಿ ದಾಖಲಿಸಿದ್ದ ಪ್ರಕರಣವೊಂದು ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಪತ್ನಿಯನ್ನು ಬಿಟ್ಟು ಬೇರೆಯವರ ಮಾತು ಕೇಳಿದರೆ ಹೀಗೆಯೇ ಆಗುವುದು ಎಂದು ತಮಾಷೆ ಮಾಡಿದ್ದಾರೆ. ಅಂತಿಮವಾಗಿ ಪತಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.

ಬೆಂಗಳೂರು: ದಾಂಪತ್ಯ ಜೀವನದಲ್ಲಿ ಸ್ವಲ್ಪ ಹೆಚ್ಚೂ ಕಡಿಮೆ ಆದರೂ ಸಂಬಂಧವೇ ಬಿರುಕು ಬಿಡುವುದು ಇದೆ. ಅದರಲ್ಲಿಯೂ ಪತಿನೋ, ಪತ್ನಿಯೋ ತಮ್ಮ ಮಾತಿಗಿಂತ ಹೆಚ್ಚಾಗಿ ಬೇರೆಯವರ ಮಾತು ಕೇಳ್ತಿದ್ದರೆ ಸಂಗಾತಿಗೆ ಕೋಪ ಬರುವುದು ಸಹಜವೇ. ಅಂಥದ್ದೇ ಒಂದು ಕೇಸ್​ ಹೈಕೋರ್ಟ್​ನಲ್ಲಿ ವಿಚಾರಣೆಗೆ ಬಂದು, ಕಲಾಪದ ವೇಳೆ ನಗುವಿನ ಅಲೆ ಸೃಷ್ಟಿಸಿದೆ. ಈ ಪ್ರಕರಣದಲ್ಲಿ, ಅರ್ಜಿದಾರರೊಬ್ಬರ ಪತ್ನಿ ಅವರ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು ಗಂಡತನ್ನ ಮಾತು ಕೇಳುತ್ತಿಲ್ಲ ಎನ್ನುವುದು. ಕೊನೆಗೆ ಅದು ವರದಕ್ಷಿಣೆ ಕೇಸ್​, ಅದೂ ಇದೂ ಎಂದೆಲ್ಲಾ ರೂಪ ಪಡೆದು, ಪತಿಯ ವಿರುದ್ಧ ಕಂಪ್ಲೇಂಟ್​ ದಾಖಲಾಗಿದೆ. ಅದರ ರದ್ದತಿಗೆ ಕೋರಿ ಅರ್ಜಿದಾರ ಹೈಕೋರ್ಟ್​ ಬಾಗಿಲು ತಟ್ಟಿದ್ದಾರೆ.

ಈ ಪ್ರಕರಣದ ವಿಚಾರಣೆ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ಬಂದಿತ್ತು. ಆಗ ಅರ್ಜಿದಾರರ ಪರ ವಕೀಲರು ತಮ್ಮ ಪತ್ನಿ (ಅರ್ಥಾತ್​ ತಮ್ಮ ಕಕ್ಷಿದಾರರ ಪತ್ನಿ) ತನ್ನ ಮಾತು ಕೇಳುತ್ತಿಲ್ಲ ಎಂದು ದೂರು ದಾಖಲು ಮಾಡಿದ್ದಾಳೆ. ಸಂಬಂಧಿಕರ ಮದುವೆಯ ದಿನದವರೆಗೆ ಚೆನ್ನಾಗಿಯೇ ಇದ್ದಳು. ಆಮೇಲೆ ಏಕಾಏಕಿ ದೂರಲು ಶುರುಮಾಡಿದಳು. ಈ ಜಗಳ ವಿಕೋಪಕ್ಕೆ ಹೋಗಿ ನನ್ನ (ಕಕ್ಷಿದಾರರ) ಮೇಲೆ ಕೇಸ್​ ಹಾಕಿದ್ದಾಳೆ. ಅದನ್ನು ರದ್ದು ಮಾಡಿ ಎಂದು ಹೇಳಿದರು.

ನಿಮ್​ ಹೆಂಡ್ತಿ ಮಾತು ಕೇಳ್ರೀ ಮೊದ್ಲು...

ಆಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ನಿಮ್ಮ ಹೆಂಡ್ತಿ ಮಾತು ನೀವು ಕೇಳದೇ ಅಕ್ಕ-ಪಕ್ಕದ ಮನೆಯವರ ಹೆಂಡ್ತಿ ಮಾತು ಕೇಳಿದ್ರೆ ಹೀಗೆಯೇ ಆಗೋದು ಎಂದಾಗಿ ಇಡೀ ಹೈಕೋರ್ಟ್​ನಲ್ಲಿ ನಗುವಿನ ಅಲೆ ಎದ್ದಿತು. ಹೌದು ಸ್ವಾಮಿ, ಮೊದಲು ನಿಮ್ಮ ಪತ್ನಿ ಕಡೆ ಗಮನ ಹರಿಸಿ, ಆಮೇಲೆ ಮಿಕ್ಕವರ ಕಡೆ. ಪತ್ನಿ ಬಿಟ್ಟು ಬೇರೆಯವರ ಕಡೆ ಗಮನ ಹರಿಸಿದಾಗ ಹೀಗೆಲ್ಲಾ ದೂರು ದಾಖಲಾಗುತ್ತದೆ ಎಂದು ತಮಾಷೆ ಮಾಡಿದರು.

ಕೊನೆಗೆ, ಅರ್ಜಿದಾರರ ಪರ ವಕೀಲರು, ಮೈ ಲಾರ್ಡ್​, ಕಕ್ಷಿದಾರರ ಪತ್ನಿ ಕಕ್ಷಿದಾರರ ಮೇಲೆ ಮಾತ್ರವಲ್ಲ, ಅವರ ಎಲ್ಲಾ ಸ್ನೇಹಿತರ ಮೇಲೂ ಕೇಸ್​ ಹಾಕಿದ್ದಾರೆ. ಅವರ ಮಾತು ಕೇಳಿ ಪತ್ನಿಯನ್ನು ಕಡೆಗಣಿಸ್ತಾ ಇದ್ದಾರೆ ಎಂದಾಗ, ಜಡ್ಜ್​, ಇನ್ನು ಮುಂದಾದರೂಪತ್ನಿ ಮಾತು ಕೇಳಲು ಹೇಳಿ ಎನ್ನುತ್ತಲೇ ಪತಿ ವಿರುದ್ಧ ದಾಖಲಾಗಿರುವ ಕೇಸ್​ಗಳಿಗೆ ತಡೆ ನೀಡಿದರು.