lucky child : ಹೆಣ್ಣು ಮಗು ಹುಟ್ಟುತ್ತಿದ್ದಂತೆ ಅಸಮಾಧಾನ ವ್ಯಕ್ತಪಡಿಸೋರೇ ಹೆಚ್ಚು. ಆದ್ರೆ ಇಲ್ಲೊಂದು ಕುಟುಂಬಕ್ಕೆ ಹೆಣ್ಣು ಮಗು ಅದೃಷ್ಟ ಬದಲಿಸಿದೆ. ಇಷ್ಟು ದಿನ ನೋಡದ ಹಣ ತಂದೆ ಕೈ ಸೇರಿದೆ.

ಹೆಣ್ಣು ಮಕ್ಕಳು ಮನೆಯ ಮಹಾಲಕ್ಷ್ಮಿಅಂತಾರೆ. ಪಂಜಾಬ್ನಲ್ಲಿ ನಡೆದಿರುವ ಘಟನೆ ಮತ್ತೊಮ್ಮೆ ಈ ಮಾತನ್ನು ಸತ್ಯವಾಗಿಸಿದೆ. ಹೆಣ್ಣು ಮಗು ಜನನ ತಂದೆಯ ಬದುಕಿನಲ್ಲಿ ಅದೃಷ್ಟವನ್ನೇ ಹೊತ್ತು ತಂದಿದೆ. ಮಗಳು ಹುಟ್ಟಿದ ಕೇವಲ 24 ಗಂಟೆಗಳಲ್ಲೇ ತಂದೆಗೆ ಬರೋಬ್ಬರಿ 1.5 ಕೋಟಿ ರೂಪಾಯಿ ಲಾಟರಿ ಬಹುಮಾನ ಒಲಿದಿದೆ.

ಅದೃಷ್ಟ ತಂದ ಮಗಳು

ಪಂಜಾಬ್ನ 24 ವರ್ಷದ ಯುದ್ಧವೀರ್ ಸಿಂಗ್ ವೃತ್ತಿಯಲ್ಲಿ ಬಡಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಇವರ ಪತ್ನಿ ಹರಮನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಕುಟುಂಬದ ಕೆಲವು ಸಂಬಂಧಿಕರು ಗಂಡು ಮಗು ಬೇಕಿತ್ತು ಎಂದಿದ್ದರಂತೆ. ಹೆಣ್ಣು ಮಗು ಹುಟ್ಟುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದ್ದರಂತೆ. ಆದ್ರೆ ಈ ಪುಟ್ಟ ಕಂದಮ್ಮ ಜನಿಸಿದ ಕೆಲವೇ ಗಂಟೆಗಳಲ್ಲಿ ಇಡೀ ಕುಟುಂಬದ ಪರಿಸ್ಥಿತಿಯೇ ಬದಲಾಗಿದೆ.

ಮಗಳ ಜನನದ 24 ಗಂಟೆಗಳ ಒಳಗೆ ಯುದ್ಧವೀರ್ ಸಿಂಗ್ ಅವರಿಗೆ 1.5 ಕೋಟಿ ರೂಪಾಯಿ ಲಾಟರಿ ಬಹುಮಾನ ಬಂದಿದೆ. ಹೀಗಾಗಿ, ಮಗಳು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ಹೊತ್ತು ತಂದಿದ್ದಾಳೆ ಎಂದು ಕುಟುಂಬದವರು ನಂಬಿದ್ದಾರೆ. ಇದೇ ಕಾರಣಕ್ಕೆ ತಂದೆ ತನ್ನ ಮಗಳಿಗೆ ಬರಕತ್ ಎಂದು ಹೆಸರಿಟ್ಟಿದ್ದಾರೆ.

ಪಂಜಾಬ್ನ ಮಾನ್ಸಾ ಜಿಲ್ಲೆಯ ಬರೇಟಾ ಪಟ್ಟಣದ ನಿವಾಸಿಯಾಗಿರುವ ಯುದ್ಧವೀರ್ ಸಿಂಗ್, ಪಂಜಾಬ್ ಸ್ಟೇಟ್ ಡಿಯರ್ 200 ಮಾಸಿಕ ಲಾಟರಿಯಲ್ಲಿ ಮೊದಲ ಬಹುಮಾನ ಗೆದ್ದಿದ್ದಾರೆ. ನವೆಂಬರ್ 6ರಂದು ಅವರು ಮಗುವಿಗೆ ತಂದೆಯಾಗಿದ್ದರು. ನವೆಂಬರ್ 7ರಂದು ಲಾಟರಿ ವಿಜೇತರ ಹೆಸರನ್ನು ಘೋಷಿಸಲಾಗಿತ್ತು. ಮಗಳ ಆಗಮನದ ಬೆನ್ನಲ್ಲೇ ಅದೃಷ್ಟ ಒಲಿದಿದ್ದರಿಂದ ಆಕೆಗೆ ಬರಕತ್ ಎಂದು ನಾಮಕರಣ ಮಾಡಿದ್ದಾರೆ.

ಆಸ್ಪತ್ರೆ ಹೋಗುವಾಗ ಖರೀದಿಸಿದ್ದ ಲಾಟರಿ ಟಿಕೆಟ್

ನವೆಂಬರ್ 4ರಂದು ಯುದ್ಧವೀರ್ ಸಿಂಗ್ ಅವರು ಗರ್ಭಿಣಿಯಾಗಿದ್ದ ಪತ್ನಿ ಹರಮನ್ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಮಾನ್ಸಾದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬುದ್ಧಲಾಡಾದಲ್ಲಿರುವ ಲಾಟರಿ ಮಳಿಗೆಯೊಂದರಲ್ಲಿ ಟಿಕೆಟ್ ಖರೀದಿಸಿದ್ದರು. ವಾಸ್ತವವಾಗಿ ಅವರು ಮೊದಲೇ ಲಾಟರಿ ಟಿಕೆಟ್ ಖರೀದಿಸಬೇಕು ಎಂದು ನಿರ್ಧರಿಸಿರಲಿಲ್ಲ. ದಾರಿಯಲ್ಲಿ ಮೊಬೈಲ್ ನಂಬರ್ ಪೋರ್ಟ್ ಮಾಡಿಸುವ ಕೆಲಸವಿದ್ದ ಕಾರಣ ಲಾಟರಿ ಮಳಿಗೆಯ ಬಳಿ ನಿಲ್ಲಬೇಕಾಯಿತು. ಆಗ ಸುಮ್ಮನೆ ಅದೃಷ್ಟ ಪರೀಕ್ಷಿಸಲು ಲಾಟರಿ ಟಿಕೆಟ್ ಖರೀದಿಸಿದ್ದರಂತೆ. ಆದರೆ, ಅದೇ ಟಿಕೆಟ್ ತಮ್ಮ ಬದುಕನ್ನೇ ಬದಲಿಸಲಿದೆ ಎಂಬ ಸಣ್ಣ ಸುಳಿವೂ ಅವರಿಗಿರಲಿಲ್ಲ.

ಯುದ್ಧವೀರ್ ಸಿಂಗ್ ಲಾಟರಿ ಟಿಕೆಟ್ ಖರೀದಿಸಿದ್ದು ಪತ್ನಿ ಹರಮನ್ ಅವರಿಗೆ ಅಷ್ಟಾಗಿ ಇಷ್ಟವಿರಲಿಲ್ಲ. ಏಕೆಂದರೆ, ಕುಟುಂಬ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿತ್ತು. ಆಸ್ಪತ್ರೆ ಮತ್ತು ಔಷಧಿಗಳ ಖರ್ಚಿಗಾಗಿ ಪ್ರತಿ ರೂಪಾಯಿಯನ್ನೂ ಉಳಿಸಿ ಖರ್ಚು ಮಾಡಬೇಕಾದ ಪರಿಸ್ಥಿತಿಯಿತ್ತು. ಆದರೆ, ಮಗಳು ಜನಿಸಿದ ಬೆನ್ನಲ್ಲೇ 1.5 ಕೋಟಿ ರೂಪಾಯಿ ಲಾಟರಿ ಒಲಿದಿರುವುದು ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಿದೆ. ತಮ್ಮ ಅದೃಷ್ಟ ಬದಲಾದುದಕ್ಕೆ ಮಗಳೇ ಕಾರಣ ಎಂದು ಯುದ್ಧವೀರ್ ಭಾವಿಸಿದ್ದಾರೆ.