62 ವರ್ಷದ ವೃದ್ಧನೊಬ್ಬ ಅಪ್ರಾಪ್ತೆಯ ಮೇಲೆ ಅ*ತ್ಯಾಚಾರವೆಸಗಿರುವ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಸಿಕ್ಕಿಬಿದ್ದಿದ್ದಾನೆ. ಇದು ಹನಿಟ್ರ್ಯಾಪ್ ಎಂದು ವಾದಿಸಿದ ಆರೋಪಿ ಪರ ವಕೀಲರಿಗೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್​ ಎನ್ನೋದು ಮಾಮೂಲಾಗಿಬಿಟ್ಟಿದೆ. ಕೆಲವು ಪ್ರಕರಣಗಳಲ್ಲಿ ಇದು ನಿಜವೇ ಆಗಿದ್ದರೆ, ಮತ್ತೆ ಕೆಲವು ಪ್ರಕರಣಗಳಲ್ಲಿ ಮಾಡಬಾರದ್ದನ್ನು ಮಾಡಿದ ಆರೋಪಿ ಸಿಕ್ಕಿಬಿದ್ದರೆ ಅದಕ್ಕೆ ಹನಿಟ್ರ್ಯಾಪ್​ ಹೆಸರು ಕೊಟ್ಟು ತಪ್ಪಿಸಿಕೊಳ್ಳಲು ನೋಡುವುದು ಇದೆ. ಇದಾಗಲೇ ಸಾಕಷ್ಟು ಧುರೀಣರು ಈ ಹನಿಟ್ರ್ಯಾಪ್​, ಸ್ಟಿಂಗ್​ ಆಪರೇಷನ್​ ಕೇಸ್​ನಲ್ಲಿ ಸಿಲುಕಿರುವುದು ಇದೆ. ಮನೆಯಲ್ಲಿ ಪತ್ನಿ ಇದ್ದರೂ, ಬೇರೆಯವರ ಸಹವಾಸ ಬಯಸುವ ಗಂಡಸರ ಬುದ್ಧಿಯನ್ನು ಉಪಯೋಗಪಡಿಸಿಕೊಂಡು ಹನಿಟ್ರ್ಯಾಪ್​ ಮಾಡುವ ದೊಡ್ಡ ಜಾಲವೇ ಹುಟ್ಟಿಕೊಂಡಿದೆ. "ಕಾಮಾತುರಾಣಾಂ ನ ಭಯಂ ನ ಲಜ್ಜಾ" ಎಂದರೆ ಕಾಮಕ್ಕೆ ಆತುರನಾಗಿದ್ದವನಿಗೆ ಭಯವೂ ಇರುವುದಿಲ್ಲ, ನಾಚಿಕೆಯೂ ಇರುವುದಿಲ್ಲ ಎನ್ನುವಂತೆ ದೊಡ್ಡ ದೊಡ್ಡ ಮುಖಂಡರೂ ತಮ್ಮ ಸ್ಥಾನದ ಘನತೆಯನ್ನೂ ಲೆಕ್ಕಿಸದೇ ಇದಕ್ಕೆ ಬಿದ್ದು ಕೊನೆಗೆ ಒದ್ದಾಡುವುದು ಇದಾಗಲೇ ಸಾಕಷ್ಟು ಪ್ರಕರಣಗಳಲ್ಲಿ ನೋಡಲಾಗುತ್ತಿದೆ.

62 ವರ್ಷದವನಿಂದ ಬಾಲಕಿಯ ಮೇಲೆ ರೇ*ಪ್?​

ಈಗ ಅಂಥದ್ದೇ ಒಂದು ಪ್ರಕರಣ ಹೈಕೋರ್ಟ್​ಗೆ ಬಂದಿದೆ. ಇಲ್ಲಿ 62 ವರ್ಷದ ಮುಖಂಡರೊಬ್ಬರ ಮೇಲೆ ಅ*ತ್ಯಾಚಾರ ಕೇಸ್​ ದಾಖಲಾಗಿದೆ. ಅದು ಕೂಡ ಅಪ್ರಾಪ್ತೆಯ ಮೇಲೆ ಆಗಿರುವ ಕಾರಣದಿಂದ ಪೋಕ್ಸೋ ಕಾಯ್ದೆ ಮೇಲೆ ದೂರು ದಾಖಲಾಗಿದೆ. ಇದರ ರದ್ದತಿಗೆ ಆತ ಹೈಕೋರ್ಟ್​ ಮೊರೆಹೋಗಿದ್ದ. ಇದು ಹೈಕೋರ್ಟ್​ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಆರೋಪಿ ಪರ ವಕೀಲರು ತಮ್ಮ ಕಕ್ಷಿದಾರರನ್ನು ಸಮರ್ಥಿಸಿಕೊಳ್ಳುತ್ತಾ, ಇದು ಅ*ತ್ಯಾಚಾರ ಅಲ್ಲ, ಹನಿಟ್ರ್ಯಾಪ್​. ಅವರಿಗೆ ವಯಸ್ಸಾಗಿದೆ, ಏನು ಮಾಡುವುದಕ್ಕೂ ಕೆಪ್ಯಾಸಿಟಿ ಇಲ್ಲ. ಅವರು ಹೇಗೆ ಅ*ತ್ಯಾಚಾರ ಮಾಡಲು ಸಾಧ್ಯ. 17 ವರ್ಷದ ಬಾಲಕಿ ಹನಿಟ್ರ್ಯಾಪ್​ ಮಾಡಿ ಸಿಕ್ಕಿಸಿಹಾಕಿದ್ದಾಳೆ. ಆದ್ದರಿಂದ ಪೊಕ್ಸೋ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿದರು.

ಜಡ್ಜ್​ ಕಿಡಿ

ಇದರಿಂದ ನ್ಯಾಯಮೂರ್ತಿ ನಾಗಪ್ರಸನ್ನ ಗರಂ ಆದರು. ನಂಬರ್​ ಎನ್ನೋದು ಲೆಕ್ಕಕ್ಕೇ ಇಲ್ಲ ಎನ್ನುವ ಹಾಗೆ ಮಾಡುವುದನ್ನು ಮಾಡಿ ಈಗ ಹನಿಟ್ರ್ಯಾಪ್​ ಅನ್ನುತ್ತೀದ್ದೀರಾ ಎಂದು ಪ್ರಶ್ನಿಸಿದರು. ಅವರಿಗೆ 62 ವರ್ಷ. ಆಕೆ ಇನ್ನೂ ಅಪ್ರಾಪ್ತಳು. ಅವಳು ಹೋದಲೆಲ್ಲಾ, ಕೊನೆಗೆ ಬಾತ್​ರೂಮ್​ಗೆ ಹೋದಾಗಲೂ ಹಿಂಬಾಲಿಸಿರುವ ಸಾಕ್ಷಿ ಇದೆ. ಏನಂತ ಮಾತನಾಡುತ್ತೀರಿ, ಮಾಡುವುದನ್ನು ಮಾಡಿ ಈಗ ಹನಿಟ್ರ್ಯಾಪ್​ ಎನ್ನುತ್ತೀರಾ ಎಂದು ಆರೋಪಿಯನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು. ಹೈಕೋರ್ಟ್​ ಕಲಾಪ ಲೈವ್​ಸ್ಟ್ರೀಮ್​ ಆಗುವ ಹಿನ್ನೆಲೆಯಲ್ಲಿ ಇದು ಕೂಡ ಸೋಷಿಯಲ್​ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಕೊನೆಗೆ ಕೋರ್ಟ್​ ಏನು ತೀರ್ಪು ಕೊಟ್ಟಿದೆ ಎನ್ನುವುದು ಇದರಲ್ಲಿ ದಾಖಲಾಗಿಲ್ಲ.