ಮದುವೆಯಾಗಿ ಹಣ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಮಹಿಳೆಯೊಬ್ಬಳ ವಿರುದ್ಧ ಆಕೆಯ 7ನೇ ಪತಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈಕೆ 8ನೇ ಮದುವೆಯಾದಾಗ ಅನುಮಾನಗೊಂಡು ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಈ ಕುತೂಹಲಕಾರಿ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಬೆಂಗಳೂರು: ಎಷ್ಟೋ ಮಂದಿಗೆ ಮದುವೆಯಾಗಲು ಹೆಣ್ಣು ಸಿಗದಿದ್ರೆ, ಮತ್ತೆ ಕೆಲವರಿಗೆ ಗಂಡುಮಕ್ಕಳು ಸಿಗಲ್ಲ. ಒಂದು ಮದುವೆಯಾಗುವಾಗ ಗಂಡು ಅಥವಾ ಹೆಣ್ಣಿನ ಪೂರ್ವಪರಗಳನ್ನು ಅಳೆದು ತೂಗಿ ನೋಡಿ ಮದುವೆಯಾಗುವುದು ಇದೆ. ಹೀಗೆ ಆದರೂ ಎಷ್ಟೋ ಬಾರಿ ಮೋಸ ಹೋಗುವುದು ಇದೆ. ಆದರೆ ಕೆಲವರು ಅತ್ಯಂತ ಸಲೀಸಾಗಿ ಗಂಡಸರನ್ನು ಅಥವಾ ಹೆಂಗಸರನ್ನು ಮರುಳು ಮಾಡಿ ಮದುವೆಯಾಗಿಬಿಡುತ್ತಾರೆ. ಅವರು ಮಾತುಗಳು ಎಷ್ಟು ನಯವಾಗಿ ಇರುತ್ತವೆ ಎಂದರೆ, ಮುಂದೆ ಇರುವವರು ತಮಗೆ ಮೋಸ ಮಾಡುತ್ತಿದ್ದಾರೆ ಎನ್ನೋದು ತಿಳಿಯುವುದೇ ಇಲ್ಲ. ಇದೀಗ ಅಂಥದ್ದೇ ಒಂದು ಕುತೂಹಲದ ವಿಚಾರಣೆ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದೆ. ಇದೀಗ ಹೈಕೋರ್ಟ್​ ವಿಚಾರಣೆಗಳನ್ನು ಲೈವ್​ನಲ್ಲಿ ನೋಡಲು ಸಾಧ್ಯವಾಗಿರುವ ಕಾರಣದಿಂದ ಅದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಈ ಪ್ರಕರಣದ ವಿಚಾರಣೆ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಮುಂದೆ ಬಂದಿದೆ. ಇದರ ವಿಚಾರಣೆ ವೇಳೆ ತಮಾಷೆ ಎನ್ನುವ ಪ್ರಸಂಗವನ್ನು ನೋಡಬಹುದಾಗಿದೆ. ಇದು ನೋಡುಗರಿಗೆ ತಮಾಷೆ ಎನ್ನಿಸಿದರೂ, ಈ ಅರ್ಜಿ ಸಲ್ಲಿಸಿದ 7ನೇ ಪತಿ ಸ್ಥಿತಿ ಮಾತ್ರ ಯಾರಿಗೂ ಬೇಡವಾಗಿದೆ. ಕುತೂಹಲ ಎಂದರೆ, ಈ 7ನೇ ಪತಿಗೆ, ತನ್ನ ಪತ್ನಿ 8ನೇ ಮದ್ವೆಯಾದ ಮೇಲೆ ಆಕೆಯ ವಿಷ್ಯ ಬಹಿರಂಗಗೊಂಡಿರುವುದು!

7ನೇ ಪತಿ ಕೋರ್ಟ್​ಗೆ

ಈ ಪ್ರಕರಣದಲ್ಲಿ, ತಮಗೆ ನ್ಯಾಯ ಕೊಡಿಸುವಂತೆ 7ನೇ ಪತಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಖತರ್ನಾಕ್​ ಮಹಿಳೆ, ಮದುವೆ ಮೇಲೆ ಮದುವೆಯಾಗುವುದು, ಕೆಲವು ತಿಂಗಳು ಸಂಸಾರನಡೆಸುವುದು, ಅವರ ಮೇಲೆ ಕಿರುಕುಳದ ಕೇಸ್​ ದಾಖಲು ಮಾಡುವುದು ಕೊನೆಗೆ ಪರಿಹಾರವನ್ನು ಪಡೆದುಕೊಳ್ಳುವುದು... ಇದೇ ಕಾಯಕ ಮಾಡಿದ್ದಾಳೆ. ಪ್ರತಿ ಬಾರಿ ಮದುವೆಯಾದಾಗಲೂ ಈ ಪತಿಯಂದಿರಿಗೆ ಈಕೆ ಇದಾಗಲೇ ಮದ್ವೆಯಾಗಿದ್ದಾಳೆ ಎನ್ನೋದು ಗೊತ್ತೇ ಇರುವುದಿಲ್ಲ. ಕೊನೆಗೆ ಮೋಸ ಹೋದ ಮೇಲೆ ಗೊತ್ತಾಗುವುದಿಲ್ಲ. ಇದಕ್ಕೆ ಕಾರಣ, ನಮ್ಮ ಕಾನೂನು ಹೆಣ್ಣುಮಕ್ಕಳ ಪರವಾಗಿ ಇರುವುದು. ಗಂಡಸರಿಗೆ ಪರಿಹಾರ ಕೊಡದೇ ಬೇರೆ ದಾರಿ ಇರುವುದಿಲ್ಲ. ಇನ್ನು ಕೆಲವರು ಮರ್ಯಾದೆಯ ಕಾರಣದಿಂದ ಪತ್ನಿಯ ಬಗ್ಗೆ ನಂತರದಲ್ಲಿ ತಿಳಿದರೂ ಸುಮ್ಮನಾಗಿ ಬಿಡುತ್ತಾರೆ.

ಕಾಯ್ದಿರಿಸಿದ ತೀರ್ಪು

ಇದೀಗ ಆಕೆಯ 7ನೇ ಪತಿ ವಿರುದ್ಧ ಕೇಸು ದಾಖಲಾದಾಗ ಆತ ಪತ್ನಿಯ ಚರಿತ್ರೆಯನ್ನೆಲ್ಲಾ ಅಧ್ಯಯನ ಮಾಡಿದ. ತನ್ನನ್ನು ಬಿಟ್ಟು 8ನೇ ಮದುವೆಯಾದಾಗ ಅವರಿಗೆ ಡೌಟ್​ ಬಂದು ಎಲ್ಲಾ ವಿಷಯ ಸಂಗ್ರಹಿಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕೋರ್ಟ್​ಗೆ ನೀಡಿದ್ದಾರೆ. ಇದರ ವಿಚಾರಣೆ ವೇಳೆ ಮದುವೆ ಸರ್ಟಿಫಿಕೇಟ್​ ಮಾಡಿಕೊಡುವುದಕ್ಕಾಗಿಯೇ ಆಕೆ ಒಬ್ಬರನ್ನು ನೇಮಕಮಾಡಿಕೊಂಡಿರುವುದೂ ತಿಳಿದಿದೆ. ಸದ್ಯ ಈ ಪ್ರಕರಣದ ತೀರ್ಪನ್ನು ಕೋರ್ಟ್​ನಲ್ಲಿ ಎಲ್ಲರ ಎದುರು ಡಿಕ್ಟೇಟ್​ ಮಾಡಿದರೆ ಚೆನ್ನಾಗಿರಲ್ಲ ಎಂದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ತೀರ್ಪನ್ನು ಕಾಯ್ದಿರಿಸಿದ್ದಾರೆ.