ತನ್ನ ಪತ್ನಿ ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾಳೆ. ನನಗಿಂತ ಫಿಟ್‌ ಆಗ್ತಿದಾಳೆ. ಆಕೆಗೆ ಯಾರಾದರೂ ಗುಪ್ತ ಪ್ರೇಮಿ ಇರಬಹುದಾ? ಪತಿಗೆ ಹಾಗೊಂದು ಭಯ. ಏನು ಮಾಡಬೇಕು? ತಜ್ಞರ ಸಮಾಧಾನ (Feelfree) ಏನು? 

ಪ್ರಶ್ನೆ: ನಾನೊಬ್ಬ ಐಟಿ ಉದ್ಯೋಗಿ. ನನ್ನ ಪತ್ನಿ ಕಾಲೇಜ್‌ ಟೀಚರ್.‌ ನಮಗಿಬ್ಬರಿಗೂ ವಯಸ್ಸು ಮೂವತ್ತು ವರ್ಷದ ಆಸುಪಾಸು. ಇನ್ನೂ ಮಕ್ಕಳಾಗಿಲ್ಲ. ಮಗು ಮಾಡಿಕೊಳ್ಳೋ ಆಸೆಯೇನೋ ಇದೆ. ಇನ್ನೊಂದೆರಡು ವರ್ಷ ಬಿಟ್ಟು ಮಾಡಿಕೊಳ್ಳೋಣ ಅಂತಾಳೆ ಅವಳು. ಕಳೆದ ಆರು ತಿಂಗಳಿನಿಂದ ಅವಳಿಗೆ ಫಿಟ್‌ನೆಸ್‌ ಕ್ರೇಜ್‌ ಶುರುವಾಗಿದೆ. ಒಂದೂ ದಿನ ಬಿಡದೇ ಜಿಮ್‌ಗೆ ಹೋಗ್ತಾಳೆ. ವಾಕಿಂಗ್‌ ಮಾಡ್ತಾಳೆ. ಸ್ವಿಮ್ಮಿಂಗ್‌ ಕೂಡ ಮಾಡ್ತಾಳೆ. ಎಲ್ಲದಕ್ಕೂ ಸಮಯ ಹೊಂದಿಸಿಕೊಳ್ತಾಳೆ. ದಿನದಿಂದ ದಿನಕ್ಕೆ ಅವಳ ಫಿಟ್‌ನೆಸ್ಸು ತುಂಬಾ ಚೆನ್ನಾಗಾಗ್ತಾ ಇದೆ. ನನಗಿಂತ ಫಿಟ್‌ ಆಗಿದ್ದಾಳೆ. ಜಿಮ್‌ಗೆ ಬಾ ಅಂತ ಅವಳು ಬಲವಂತ ಮಾಡ್ತಾಳೆ. ನನಗೂ ಜಿಮ್‌ಗೆ ಹೋಗಬೇಕು ಎಂಬ ಆಸೆ. ಆದರೆ ಸಮಯ ಹೊಂದಿಸಿಕೊಳ್ಳಲು ಆಗ್ತಿಲ್ಲ. ಜಾಗಿಂಗ್‌ ಮಾಡುವುದರಲ್ಲಿ ಮುಗಿಸಿಕೊಳ್ತೀನಿ. ಅವಳು ಇನ್ನಷ್ಟು ಮತ್ತಷ್ಟು ಚುರುಕುಗ್ತಾ ಇದಾಳೆ. ಲವಲವಿಕೆ ಗಳಿಸಿಕೊಳ್ತಾ ಇದಾಳೆ. ನಾನು ಡ್ಯೂಟಿ ಮುಗಿಸಿ ಬರುವಷ್ಟರಲ್ಲಿ ಸುಸ್ತಾಗಿ, ಒಂದ್ಸಲ ಮಲಗಿದರೆ ಸಾಕು ಅನ್ನೋ ಥರ ಇರ್ತೀನಿ. ಇವಳಿಗೆ ಸರಿಯಾದ ಗಂಡ ನಾನು ಅಲ್ವೇನೋ ಅನ್ನೋ ಕೀಳರಿಮೆ ಕಾಡ್ತಾ ಇದೆ. ಇವಳಿಗೆ ಕಾಲೇಜಿನಲ್ಲಿ ಇನ್ಯಾರಾದರೂ ನನಗಿಂತ ಚೆನ್ನಾಗಿರೋ ಫ್ರೆಂಡ್‌ ಇರಬಹುದಾ ಅಂತ ಭಯವೂ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತೆ. ಈ ಕೀಳರಿಮೆ, ಆತಂಕದಿಂದ ನನ್ನನ್ನು ಹೇಗೆ ಕಾಪಾಡಿಕೊಳ್ಳಲಿ?

ತಜ್ಞರ ಉತ್ತರ: ನಿಮ್ಮ ಸಮಸ್ಯೆ ಅರ್ಥವಾಯಿತು. ನೂರರಲ್ಲಿ ಐವತ್ತು ದಂಪತಿಗಳಿಗೆ ಈ ಸಮಸ್ಯೆ ಇರುತ್ತದೆ. ಇಲ್ಲಾ ಗಂಡ ಹೀಗೆ ಕೊರಗುತ್ತಿರುತ್ತಾನೆ, ಅಥವಾ ಹೆಂಡತಿ ಕೊರಗುತ್ತಿರುತ್ತಾಳೆ. ನೀವೂ ಅವರ ಜೊತೆ ಫಿಟ್‌ನೆಸ್‌ ಪ್ರೋಗ್ರಾಂನಲ್ಲಿ ಸೇರಬಹುದಲ್ಲ ಎಂದರೆ, ಸೇರದಿರಲು ಎಲ್ಲರಿಗೂ ಅವರವರದೇ ಕಾರಣಗಳಿರುತ್ತವೆ. ಇತರ ಸಂಶಯಗಳನ್ನು ಬಿಟ್ಹಾಕಿ. ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆಗಳಿರಬಹುದು. ಆದರೆ ನಿಮ್ಮದೇ ಆದ ಫಿಟ್‌ನೆಸ್‌ ರೊಟೀನ್‌ ಒಂದನ್ನು ರೂಪಿಸಿಕೊಂಡು ನಿಮ್ಮ ದೇಹವನ್ನು ಶ್ರದ್ಧೆ, ಅಚ್ಚುಕಟ್ಟು, ಲವಲವಿಕೆಯಿಂದ ಕಾಪಾಡಿಕೊಳ್ಳಲು ಇದು ಸಕಾಲ.

ಆ ದಿನಗಳನ್ನು ನೆನಪಿಸಿಕೊಳ್ಳಿ!

ನೀವು ನಿಮ್ಮ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದ, ಸಂಗಾತಿಯಿಂದ ಪ್ರೀತಿಸಲ್ಪಟ್ಟ ಮತ್ತು ನೀವೂ ಪ್ರೀತಿಸಿದ ಕಾಲವನ್ನು ನೆನಪಿಸಿಕೊಳ್ಳಿ. ಪ್ರತಿ ಬಾರಿ ನಿಮಗೆ ಈ ಅಭದ್ರತೆಯ ಭಾವನೆ ಮನಸ್ಸಿಗೆ ಬಂದಾಗ, ನಿಮ್ಮನ್ನು ಮಾನಸಿಕವಾಗಿ ಆ ಸುರಕ್ಷಿತ ನೆನಪಿಗೆ ಕರೆದೊಯ್ಯಿರಿ. ನಿಮ್ಮ ದೇಹದಲ್ಲಿ ಅದನ್ನು ಅನುಭವಿಸಿ. ನಿಮಗೆ ನೀವೇ ಧೈರ್ಯ ತುಂಬಿ. ಈ ಅಭ್ಯಾಸ ಬಹಳಷ್ಟು ಆತ್ಮವಿಶ್ವಾಸ ನೀಡುತ್ತದೆ. ಈಗ ನೀವು ನಿಮ್ಮ ಸಂಗಾತಿಯ ಹೊಸ ಫಿಟ್‌ನೆಸ್ ಅನ್ನು ಬೇರೆ ಥರ ನೋಡಲು, ನಿಮ್ಮ ಸ್ವಂತ ಆರೋಗ್ಯ, ಶಕ್ತಿ ಮತ್ತು ದೈಹಿಕ ಫಿಟ್‌ನೆಸ್‌ನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪಂಥಾಹ್ವಾನವಾಗಿ ನೀವು ನೋಡಲು ಸಾಧ್ಯವಾಗಬಹುದು. ನಿಮಗೆ ಸರಿಹೊಂದುವ ಕ್ರೀಡೆಯನ್ನು ನೀವು ಹುಡುಕಬಹುದು. ಅವಳು ಫಿಟ್‌ನೆಸ್‌ನತ್ತ ಯಾಕೆ ಹೆಚ್ಚು ಗಮನ ಕೊಟ್ಟಿದ್ದಾಳೆ ಎಂದು ಕುಳಿತು ಮುಕ್ತವಾಗಿ ಮಾತನಾಡಿ. ನೀವೂ ಹಾಗೆ ಮಾಡಬೇಕೆ ಎಂಬುದು ಆಕೆಯ ಬಯಕೆಯೇ ಎಂದು ಅರ್ಥ ಮಾಡಿಕೊಳ್ಳಿ. ಇಬ್ಬರ ದೇಹಗಳೂ ಫಿಟ್‌ ಆಗಿದ್ದಾಗ ನೀವು ಹೆಚ್ಚು ಆನಂದ ಹೊಂದುತ್ತಿದ್ದಿರಿ ಅಲ್ಲವೇ? ಅದು ನಿಮ್ಮ ಗಮನದಲ್ಲಿ ಇರಲಿ. ಆ ಆನಂದದ ದಿನಗಳು ಮರಳಿ ಬಂದರೆ ಯಾಕೆ ಬೇಡ?

ಜೊತೆಗೆ, ಆಕೆ ಗರ್ಭಧಾರಣೆ ಹೊಂದಲು ಬಯಸುತ್ತಿದ್ದರೆ ಕೂಡ ಈ ಫಿಟ್‌ನೆಸ್‌ ಆಕೆಗೆ ಒಳ್ಳೆಯದು. ಫಿಟ್‌ ಆಗಿರುವ ಹೆಣ್ಣು ಒಳ್ಳೆಯ ತಾಯಿ ಆಗುತ್ತಾಳೆ. ಅದು ನಿಮಗೂ ಒಳ್ಳೆಯದು. ಹಾಗೇ ನಿಮ್ಮ ಅಭದ್ರತಾ ಭಾವನೆಯನ್ನು ಆಕೆಯೊಂದಿಗೆ ಹಂಚಿಕೊಳ್ಳಲು ಅಂಜಬೇಡಿ. ಅವಳ ಉದ್ದೇಶ ಏನಿದೆ ಎಂದು ತಿಳಿಯಿರಿ. ಆಗ ಮುಕ್ತದಾ ಒಂದು ಮಾತುಕತೆ ನಿಮ್ಮಿಬ್ಬರ ಮಧ್ಯೆ ನಡೆದರೆ ನಿಮ್ಮ ಸಾಕಷ್ಟು ಕಸಿವಿಸಿಗಳು ಮಾಯವಾಗಬಹುದು.