ಕ್ರಿಕೆಟರ್ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಾಲ್ ಅವರ ವಿವಾಹವು ಸ್ಮೃತಿ ತಂದೆಯ ಅನಾರೋಗ್ಯದಿಂದಾಗಿ ಅನಿರೀಕ್ಷಿತವಾಗಿ ಮುಂದೂಡಲ್ಪಟ್ಟಿದೆ. ಈ ಕುರಿತು ಹಬ್ಬಿದ ವದಂತಿಗಳಿಗೆ ಪಲಾಶ್ ಅವರ ತಾಯಿ ಸ್ಪಷ್ಟನೆ ನೀಡಿದ್ದು, ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ದೃಢಪಡಿಸಿದ್ದಾರೆ.
ಮುಂಬೈ (ನ.28): ನವೆಂಬರ್ 23 ರಂದು ನಿಗದಿಯಾಗಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಾಲ್ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಮದುವೆಯ ದಿನದಂದು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಈ ನಿರ್ಧಾರ ಮಾಡಲಾಗಿತ್ತು.
ಈ ನಡುವೆ, ಸೋಶಿಯಲ್ ಮೀಡಿಯಾಗಳಲ್ಲಿ ವಿವಿಧ ವದಂತಿಗಳು ಹರಡಿದವು. ಪಲಾಶ್ ಮುಚ್ಚಾಲ್ ಸ್ಮೃತಿ ಮಂಧಾನಾಗೆ ಮೋಸ ಮಾಡಿದ್ದಾರೆ ಎಂದು ಹೇಳಿಕೊಂಡು ಕೆಲವು ದೃಢೀಕರಿಸದ ಚಾಟ್‌ಗಳು ವೈರಲ್ ಆದವು. ಆದರೆ, ಈ ಹೇಳಿಕೆಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಈ ನಡುವೆ, ಸ್ಮೃತಿಯ ತಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಸಮಾಧಾನಕರ ವಿಷಯವಾಗಿದೆ.
ವದಂತಿಗಳ ನಡುವೆ, ಪಲಾಶ್ ಮುಚ್ಚಾಲ್ ಅವರ ತಾಯಿ ಅಮಿತಾ ಮುಚ್ಚಾಲ್ ಅವರ ಹೇಳಿಕೆ ಈಗ ಹೊರಬಿದ್ದಿದೆ. ಎಲ್ಲವೂ ಯೋಜಿಸಿದಂತೆ ನಡೆಯಲಿದೆ ಎಂದು ಅಮಿತಾ ಹೇಳಿದ್ದಾರೆ. ಸ್ಮೃತಿ ಅವರ ತಂದೆಯ ಜೊತೆ ಪಲಾಶ್ ಮುಚ್ಚಾಲ್ ನಿಕಟ ಸಂಬಂಧ ಹೊಂದಿದ್ದಾರೆ. ಮದುವೆಯ ಹಿಂದಿನ ದಿನ ಅವರ ಸ್ಥಿತಿ ಕಂಡು ಸ್ವತಃ ಪಲಾಶ್ ಅವರೇ ಮದುವೆಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದ ಎಂದು ವಿವರಿಸಿದ್ದಾರೆ.
ಮದುವೆಯ ಸಿದ್ದತೆಗಳು ಸಂಪೂರ್ಣವಾಗಲಿದೆ
"ಹಳದಿ ಸಮಾರಂಭದ ನಂತರ ನಾವು ಪಲಾಶ್ ಅವರನ್ನು ಹೊರಗೆ ಹೋಗಲು ಬಿಟ್ಟಿಲ್ಲ. ಆತ ತುಂಬಾ ಒತ್ತಡದಲ್ಲಿದ್ದ. ಇಡೀ ದಿನ ಅಳುತ್ತಿದ್ದ. ಆತನ ಆರೋಗ್ಯವೂ ಹದಗೆಟ್ಟಿತ್ತು. ಆದ್ದರಿಂದ ಅವನನ್ನು ನಾಲ್ಕು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಿಸಬೇಕಾಯಿತು. ಅವನಿಗೆ IV ಡ್ರಿಪ್ ಹಾಕಲಾಯಿತು ಮತ್ತು ಇಸಿಜಿ ಮಾಡಲಾಯಿತು. ಎಲ್ಲವೂ ಸಾಮಾನ್ಯವಾಗಿತ್ತು, ಆದರೆ ಅವರು ತುಂಬಾ ಒತ್ತಡದಲ್ಲಿದ್ದಾರೆ" ಎಂದು ಅಮಿತಾ ಮುಚ್ಚಾಲ್ ತಿಳಿಸಿದ್ದಾರೆ.
ಸ್ಮೃತಿ ಮತ್ತು ಪಲಾಶ್ ಇಬ್ಬರೂ ಪರಿಸ್ಥಿತಿಯಿಂದ ಅಸಮಾಧಾನಗೊಂಡಿದ್ದಾರೆ ಮತ್ತು ಕುಟುಂಬವು ಮದುವೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅಮಿತಾ ಮುಚ್ಚಾಲ್ ಹೇಳಿದರು. ತನ್ನ ಮಗ ಶೀಘ್ರದಲ್ಲೇ ವಧುವನ್ನು ಮನೆಗೆ ಕರೆತರುತ್ತಾನೆ ಎಂದು ಅಮಿತಾ ಹೇಳಿದ್ದಾರೆ.
"ಎಲ್ಲವೂ ಯೋಜಿಸಿದಂತೆ ನಡೆಯುತ್ತದೆ ಮತ್ತು ಮದುವೆ ಶೀಘ್ರದಲ್ಲೇ ನಡೆಯಲಿದೆ. ಪಲಾಶ್ ಸ್ಮೃತಿಯ ತಂದೆಯೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಅವರು ಸ್ಮೃತಿಗಿಂತ ಅವಳ ತಂದೆಗೆ ಹತ್ತಿರವಾಗಿದ್ದಾರೆ. ಆದ್ದರಿಂದ, ಅವರ ಆರೋಗ್ಯ ಹದಗೆಟ್ಟಾಗ, ಪಲಾಶ್ ಮದುವೆಯನ್ನು ಮುಂದೂಡಲು ನಿರ್ಧರಿಸಿದರು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಆದ್ದರಿಂದ ಎಲ್ಲವೂ ಸರಿಯಾಗುತ್ತದೆ" ಎಂದು ಅಮಿತಾ ಮುಚ್ಚಾಲ್ ತಿಳಿಸಿದ್ದಾರೆ.
ನವೆಂಬರ್ 2 ರಂದು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಮೊದಲ ಬಾರಿಗೆ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿ ಸ್ಮೃತಿ ಮಂಧನಾ ಇದ್ದರು. ಟೂರ್ನಿಯಲ್ಲಿ ಸ್ಮೃತಿ ಅವರ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಫೈನಲ್‌ನಲ್ಲಿ ಅವರು ಶಫಾಲಿ ವರ್ಮಾ ಅವರೊಂದಿಗೆ ಶತಕದ ಪಾಲುದಾರಿಕೆಯನ್ನು ಆಡುವ ಮೂಲಕ ಬಲವಾದ ಆರಂಭವನ್ನು ನೀಡಿದರು. ಪ್ರಶಸ್ತಿ ಗೆಲುವಿನ ನಂತರ ಮೈದಾನದಲ್ಲಿ ಸ್ಮೃತಿ ಅವರೊಂದಿಗೆ ಪಲಾಶ್ ಮುಚ್ಚಾಲ್ ಕೂಡ ಸಂಭ್ರಮಿಸುತ್ತಿರುವುದು ಕಂಡುಬಂದಿತ್ತು.


