Health Tips: ಸಂಗಾತಿಯೊಂದಿಗೆ ವ್ಯಾಯಾಮ ಮಾಡಿ ಪ್ರೀತಿ ಹೆಚ್ಚಿಸಿಕೊಳ್ಳಿ!
ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಸಂಗಾತಿಯೊಂದಿಗೆ ಎಂದಾದರೂ ವ್ಯಾಯಾಮ ಮಾಡಿ ನೋಡಿದ್ದೀರಾ? ಇತ್ತೀಚೆಗೆ ಇದೊಂದು ಟ್ರೆಂಡ್ ಕೂಡ ಹೌದು. ಸಂಗಾತಿಯೊಂದಿಗೆ ಜಿಮ್ ಗೆ ಹೋಗುವುದು, ಜತೆಯಾಗಿ ಕಸರತ್ತು ಮಾಡುವುದು ಯುವಜೋಡಿಯ ಅಭ್ಯಾಸ. ಬರೀ ಯುವಜೋಡಿಯೊಂದೇ ಅಲ್ಲ, ಯಾವುದೇ ವಯಸ್ಸಿನಲ್ಲಾದರೂ ಸಂಗಾತಿಯೊಂದಿಗೆ ವ್ಯಾಯಾಮ ಮಾಡಿದರೆ ಸಂಬಂಧದಲ್ಲಿ ಸುಧಾರಣೆಯಾಗುತ್ತದೆ.
ದೈಹಿಕ (body) ಹಾಗೂ ಮಾನಸಿಕ (mind) ಸದೃಢತೆಗೆ ವ್ಯಾಯಾಮ (exercise) ಅತಿ ಮುಖ್ಯ. ಮನೆಯಲ್ಲೇ ಆದರೂ, ಜಿಮ್ (gym) ನಲ್ಲೇ ಆದರೂ ವ್ಯಾಯಾಮ ಅಥವಾ ಕಸರತ್ತು ಮಾಡುವುದು ಇಂದಿನ ದಿನಗಳಲ್ಲಂತೂ ಅತ್ಯಂತ ಅಗತ್ಯ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ರೋಗನಿರೋಧಕ ಶಕ್ತಿ (immunity power) ಬಲವಾಗುತ್ತದೆ. ಆದರೆ, ದಿನವೂ ಒಬ್ಬರೇ ವ್ಯಾಯಾಮ ಮಾಡುವುದು ನಿಧಾನವಾಗಿ ಬೋರೆನಿಸಬಹುದು. ಕ್ರಮೇಣ ವ್ಯಾಯಾಮ ಮಾಡುವುದೇ ನಿಂತು ಹೋಗಲೂಬಹುದು. ಅದರ ಬದಲಾಗಿ, ನಿಮ್ಮ ಸಂಗಾತಿ (life partner) ಯನ್ನೂ ಸೇರಿಸಿಕೊಂಡು ವ್ಯಾಯಾಮ ಮಾಡಿ. ಸ್ವಲ್ಪ ಸಮಯದಲ್ಲೇ ನಿಮ್ಮ ಸಂಬಂಧ (relationship) ಮತ್ತೆ ನಳನಳಿಸುತ್ತದೆ! ಬತ್ತಿಹೋಗಿರುವ ಆಕರ್ಷಣೆ (attraction) ಪುನಃ ಚಿಗುರುತ್ತದೆ, ಸಂಬಂಧ ಪುಳಕ (thrill) ತರುತ್ತದೆ.
ಹೌದು, ಪತಿ-ಪತ್ನಿ ಅಥವಾ ಯಾವುದೇ ಪ್ರೀತಿಪಾತ್ರರು ಜತೆಯಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಇದರಿಂದ ಆರೋಗ್ಯ (health) ಮಾತ್ರವಲ್ಲ, ಸಂಬಂಧವೂ ಸುಧಾರಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಅಷ್ಟೇ ಅಲ್ಲ, ಜತೆಯಾಗಿ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಜೋಡಿ (couple) ವಿಚ್ಛೇದನ ಮಾಡಿಕೊಳ್ಳುವುದು ಕಡಿಮೆ ಎಂದೂ ಹೇಳಲಾಗಿದೆ.
ಎಲ್ಲ ಹುಬ್ಬೇರಿಸುವಂತೆ ತೂಕ ಇಳಿಸಿದ ಬಿ ಟೌನ್ ಬೆಡಗಿಯರು, ಗುಟ್ಟೇನು ಗೊತ್ತಾ?
ಪತ್ನಿಯ ಬಳಿ ಈ ಮಾತನ್ನು ಹೇಳಿನೋಡಿ. “ಅಯ್ಯೊ, ಬೆಳಗ್ಗಿನ ಕೆಲಸ ಯಾರು ಮಾಡುತ್ತಾರೆ? ನೀವು ಮಾಡುತ್ತೀರಾ? ಮಕ್ಕಳನ್ನು ಶಾಲೆಗೆ ಸಿದ್ಧಪಡಿಸುವುದು ಹೇಗೆ?’ ಇತ್ಯಾದಿ ಕೊರತೆಗಳ ಮಾಲೆಯನ್ನೇ ಮುಂದಿಡುತ್ತಾರೆ. ಆದರೆ, ಹೇಗಾದರೂ ಮಾಡಿ “ಆಮೇಲೆ ನಾನೂ ಸಹಾಯ ಮಾಡುತ್ತೇನೆ’ ಎಂದು ಹೇಳಿ ಸಂಗಾತಿಯ ಮನವೊಲಿಸಿ. ಜತೆಜತೆಗೇ ಕನಿಷ್ಠ 20 ನಿಮಿಷ ವ್ಯಾಯಾಮ ಮಾಡುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಮುಂದಿನ ಪರಿಣಾಮಗಳಿಗೆ ನೀವೇ ಅಚ್ಚರಿಪಡುತ್ತೀರಿ!
ವ್ಯಾಯಾಮ ಮಾಡಿದಾಗ ದೇಹದಲ್ಲಿ ಎಂಡೋಕ್ಯಾನಬಿನೊಯ್ಡ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳು ಉತ್ತಮ ಪ್ರಮಾಣದಲ್ಲಿ ಸ್ರವಿಕೆಯಾಗುತ್ತವೆ. ಎಂಡೋಕ್ಯಾನಬಿನೊಯ್ಡ್ ಹಾರ್ಮೋನು ನಮ್ಮ ಮೂಡ್ ಮೇಲೆ ಪರಿಣಾಮ ಬೀರುತ್ತದೆ. ಇದು ಸುಖದ ಮನಸ್ಥಿತಿಯನ್ನು ಮಿದುಳಿನಲ್ಲಿ ಸೃಷ್ಟಿಸುತ್ತದೆ ಎನ್ನಲಾಗಿದೆ. ಇದರಿಂದ ಬಹಳ ಖುಷಿಯಾಗುವುದು ಗ್ಯಾರಂಟಿ. ಇನ್ನು, ಎಂಡಾರ್ಫಿನ್ ನೈಸರ್ಗಿಕ ನೋವು ನಿವಾರಕ ಎನ್ನುವುದು ಎಲ್ಲರಿಗೂ ಗೊತ್ತು. ಈ ಹಾರ್ಮೋನಿನಿಂದ ದೇಹಕ್ಕೆ ನೋವಿನ ಅನುಭವ ಆಗುವುದಿಲ್ಲ. ವ್ಯಾಯಾಮದ ಬಳಿಕ ಒಂದು ರೀತಿಯಲ್ಲಿ ಸಂತಸವೆನಿಸುವುದು, ಮೈಕೈ ನೋವು ಕಡಿಮೆಯಾದಂತೆ ಆಗುವುದು, ದೇಹ ಹಗುರಾಗುವಂತೆ ಭಾಸವಾಗುವುದು ಈ ಹಾರ್ಮೋನಿನಿಂದಲೇ ಆಗಿದೆ.
ಸಂಬಂಧ ಸುಧಾರಣೆ (good relationship)
ಮನಸ್ಸಿನಲ್ಲಿ ಸುಖವೆನಿಸಿದಾಗ ಸಹಜವಾಗಿಯೇ ವೈಯಕ್ತಿಕ ಬದುಕು ಸುಧಾರಿಸುತ್ತದೆ. ಪರಸ್ಪರ ಸಂಬಂಧ ಹಿತವೆನಿಸುತ್ತದೆ. ವ್ಯಾಯಾಮದ ನೆಪದಲ್ಲಿ ಜತೆಯಾಗಿ ಹೆಚ್ಚು ಸಮಯ ಕಳೆಯುವುದರಿಂದ ಪರಸ್ಪರ ಅರಿತುಕೊಳ್ಳಲು ಸುಲಭವಾಗುತ್ತದೆ. ಅಷ್ಟೇ ಅಲ್ಲ, ವಿವಾಹವಾಗಿ ಎಷ್ಟೋ ವರ್ಷಗಳ ಬಳಿಕ ಮರೆತೇ ಹೋಗುವಂತಾಗಿದ್ದ ಆಕರ್ಷಣೆ ಚಿಗುರುತ್ತದೆ. ಇದರೊಂದಿಗೆ ಸಾಮಾಜಿಕ ಬದುಕೂ ಸುಧಾರಿಸುತ್ತದೆ. ಪತಿ-ಪತ್ನಿಯರ ಸಂಬಂಧದಲ್ಲಿ ಸುಧಾರಣೆಯಾದರೆ ಮನೆಯಲ್ಲೂ ಉತ್ತಮ ವಾತಾವರಣ ನಿರ್ಮಾಣವಾಗುವುದು ಸಹಜ. ಬೆಳೆಯುತ್ತಿರುವ ಮಕ್ಕಳ ಮೇಲೂ ಸಕಾರಾತ್ಮಕ ಪರಿಣಾಮವುಂಟಾಗುತ್ತದೆ.
ಪರಸ್ಪರ ಲೈಂಗಿಕ ಆಸಕ್ತಿ (sexual relationship) ಹೆಚ್ಚಳ
ದೈಹಿಕ ಚಟುವಟಿಕೆ ನಡೆಸಿದಾಗ ಅಡ್ರಿನಲಿನ್ ಬಿಡುಗಡೆಯಾಗುತ್ತದೆ. ಇದು ಹೃದಯ ಹಾಗೂ ಶ್ವಾಸಕೋಶಗಳಿಗೆ ದೃಢತೆ ನೀಡುತ್ತದೆ. ಲೈಂಗಿಕ ಕಾಮನೆಗಳು ಜಾಗೃತಗೊಳ್ಳುತ್ತವೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಆಗ ನೋಡಲೂ ಸಹ ಸುಂದರವಾಗಿ ಕಾಣುತ್ತಾರೆ. ಒಂದು ಅಧ್ಯಯನದ ಪ್ರಕಾರ, ದಿನವೂ 15 ನಿಮಿಷ ವ್ಯಾಯಾಮ ಮಾಡುವವರಲ್ಲಿ ಲೈಂಗಿಕ ಆಸಕ್ತಿ ಉಳಿದವರಿಗಿಂತ ಹೆಚ್ಚಿರುತ್ತದೆ. ಜೀವನ ಸುಂದರವೆನಿಸಲು ಈ ಎಲ್ಲ ಅಂಶಗಳು ಸಾಕಲ್ಲವೇ?
ಪ್ರೊಟೀನ್ ಪೌಡರ್, ಸಪ್ಲಿಮೆಂಟ್ ಇಲ್ಲದೇನೂ ಪಡೆಯಬಹುದು Strong muscles
ಇಲ್ಲೊಂದು ವಿಚಾರವಿದೆ! ಸಂಗಾತಿ ಮಾತ್ರವಲ್ಲ, ಯಾವುದೇ ವಿರುದ್ಧ ಲಿಂಗಿಗಳೊಂದಿಗೆ ಜತೆಯಾಗಿ ವ್ಯಾಯಾಮ ಮಾಡಿದರೆ ಅವರೆಡೆಗೆ ಆಕರ್ಷಣೆ ಉಂಟಾಗುತ್ತದೆ ಎಂದೂ ಹೇಳಲಾಗಿದೆ. ಆದರೆ, ಅದನ್ನು ಪರೀಕ್ಷಿಸಲು ಹೋಗಬೇಡಿ! ಆಗ ಮನೆಯಲ್ಲಿ ಸಂಬಂಧ ಸುಧಾರಣೆಯಾಗುವ ಬದಲು ಇನ್ನಷ್ಟು ಕಲಹವಾದೀತು!