ಬಿಗ್ ಬಾಸ್ ಖ್ಯಾತಿಯ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಇಂದು ಸಂಜೆ 6 ಗಂಟೆಗೆ ಅಚ್ಚರಿಯ ಘೋಷಣೆ ಮಾಡಲಿದ್ದಾರೆ. ಇತ್ತೀಚೆಗೆ ಮೈಕ್ರೋ ಸೀರೀಸ್‌ನಲ್ಲಿ ಲಿಪ್ ಲಾಕ್ ಮಾಡಿ ವೈರಲ್ ಆಗಿದ್ದ ಈ ಜೋಡಿ, ಮದುವೆ ಅಥವಾ ಉದ್ಯಮದ ಬಗ್ಗೆ ಹೇಳಲಿದ್ದಾರಾ ಎಂಬ ಕುತೂಹಲ ಮೂಡಿದೆ.

ಬಿಗ್ ಬಾಸ್ ಮನೆಯ ಮತ್ತೊಂದು ಜೋಡಿಯ ಸ್ನೇಹ, ಪ್ರೀತಿ-ಪ್ರೇಮ-ಪ್ರಣಯ, ಮದುವೆ ಅಥವಾ ಉದ್ಯಮದ ಕುರಿತಾದ ಬಿಗ್ ಅನೌನ್ಸ್‌ಮೆಂಟ್ ಇಂದು ಸಂಜೆ ಹೊರಬೀಳಲಿದೆ. ಧಾರಾವಾಹಿ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯ ಸಿಂಧೋಗಿ ಅವರು ಇಂದು ಸಂಜೆ ಬಿಗ್ ಅನೌನ್ಸ್‌ಮೆಂಟ್ ಇರಲಿದೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದ ಜೋಡಿ ಕಿರುತೆರೆ ಕಲಾವಿದರಾದ ಶಿಶಿರ್ ಶಾಸ್ತ್ರಿ ಮತ್ತು ಐಶ್ವರ್ಯ ಸಿಂಧೋಗಿ ಕಳೆದ ಎರಡು ವರ್ಷಗಳಿಂದ ಎಲ್ಲೆಡೆ ಸುತ್ತಾಡುತ್ತಿದ್ದಾರೆ. ಇವರು ಪ್ರಣಯದ ಹಕ್ಕಿಗಳಂತೆ ಸುತ್ತಾಡುತ್ತಿದ್ದು, ಇವರಿಬ್ಬರು ಮದುವೆ ಆಗುತ್ತಾರಾ? ಎಂದು ಪ್ರಶ್ನೆ ಕೇಳದವರೇ ಇಲ್ಲ. ಆದರೂ ಜನರ ಪ್ರಶ್ನೆಗೆ ನಾವು ಉತ್ತಮ ಸ್ನೇಹಿತರು ಎಂದಷ್ಟೇ ಹೇಳುವ ಮೂಲಕ ಎಲ್ಲರ ಬಾಯಿಗೂ ಬೀಗ ಹಾಕುತ್ತಿದ್ದರು. ಆದರೆ, ನಿನ್ನೆ ಇಬ್ಬರೂ ಒಟ್ಟಿಗೆ ಕುಳಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ನಾಳೆ ಸಂಜೆ (ಅಂದರೆ ಇಂದು ಸಂಜೆ) 6 ಗಂಟೆಗೆ ಬಿಗ್ ಅನೌನ್ಸ್‌ಮೆಂಟ್ ಮಾಡುತ್ತೇವೆ. ಎಲ್ಲರೂ ನಮಗಾಗಿ ಕಾಯ್ತೀರಲ್ವಾ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.

ಅನಾಥಳೆಂಬ ಭಾವನೆ ದೂರ ಮಾಡಿದ್ದ ಬಿಗ್ ಬಾಸ್

ಇನ್ನು ಬಿಗ್ ಬಾಸ್ ಮನೆಯಲ್ಲಿ ತನಗೆ ಅಪ್ಪ-ಅಮ್ಮ ಇಬ್ಬರೂ ಇಲ್ಲ ನಾನು ಅನಾಥೆ ಎಂದು ಹೇಳಿಕೊಂಡಿದ್ದ ನಟಿ ಐಶ್ವರ್ಯಾ ಸಿಂಧೋಗಿಗೆ ಬಿಗ್ ಬಾಸ್ ಸ್ವತಃ ಇದೇ ನಿನ್ನ ತವರುಮನೆ ಎನ್ನುವ ಹೇಳುವ ಮೂಲಕ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಧೈರ್ಯವನ್ನು ತುಂಬಿದ್ದರು. ಇದಾದ ಬಳಿಕ ಬಿಗ್ ಬಾಸ್ ಮನೆಯಲ್ಲಿ ನಿಜಕ್ಕೂ ಐಶ್ವರ್ಯಾ ಪರಿಸ್ಥಿತಿ ನೋಡಿ ಮರಗದವರೇ ಇಲ್ಲ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ನಟ ಶಿಶಿರ್ ಶಾಸ್ತ್ರಿ ಜೊತೆಗೆ ತುಂಬಾ ಆತ್ಮೀಯವಾಗಿದ್ದರು. ದೇಶ, ವಿದೇಶಗಳಲ್ಲಿ ಇವರಿಬ್ಬರೂ ಜೋಡಿಯಾಗಿ ಸುತ್ತಾಡಿದ್ದರು. ಆಗ ಇಬ್ಬರ ನಡುವೆ ಸ್ನೇಹದ ಹೊರತಾಗಿ ಬೇರೆ ಏನೋ ಇದೆ ಎಂದು ಹೇಳಿದ್ದರು.

ಲಿಪ್ ಲಾಕ್ ಮಾಡಿದ್ದ ಜೋಡಿ

ಶಿಶಿರ್ ಶಾಸ್ತ್ರಿ ಸದ್ಯಕ್ಕೆ ಶ್ರೀ ಗಂಧದ ಗುಡಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಐಶ್ವರ್ಯ ಸಿಂಧೋಗಿ ಅವರು ಅಪ್ಪನ ಉದ್ಯಮ ಸೇರಿದಂತೆ ತಮ್ಮದೇ ಉದ್ಯಮಗಳನ್ನು ನೋಡಿಕೊಳ್ಳುವ ಮೂಲಕ ಬ್ಯೂಸಿ ಆಗಿದ್ದಾರೆ. ಆದರೆ, ಶಿಶಿರ್ ಜೊತೆಗೆ ಸಮಯ ಕಳೆಯುವುದನ್ನು ಮಾತ್ರ ಮಿಸ್ ಮಾಡುತ್ತಿಲ್ಲ. ಇದರ ನಡುವೆ ಶಿಶಿರ್ ಮತ್ತು ಐಶ್ವರ್ಯ ಲಿಪ್ ಲಾಕ್ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ವೀಕ್ಷಕರು ನಿಮ್ಮ ನಡುವೆ ಏನೂ ಸಂಬಂಧವಿಲ್ಲದಿದ್ದರೂ ಅದ್ಹೇಗೆ ಲಿಪ್ ಲಾಕ್ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಸ್ವತಃ ಶಿಶಿರ್ ಮತ್ತು ಐಶ್ವರ್ಯಾ ಜೋಡಿ ಸ್ಪಷ್ಟೀಕರಣವನ್ನು ನೀಡಿತ್ತು. 'ರಾಗ್ಸ್ ಟು ರಾಜಕುಮಾರಿ' ಎನ್ನುವ ಮೈಕ್ರೋ ಸೀರೀಸ್ ನಲ್ಲಿ ನಾವಿಬ್ಬರೂ ಜೊತೆಯಾಗಿ ನಟಿಸುತ್ತಿದ್ದೇವೆ. ಇದಕ್ಕೆ ಬೇಕಾದ ದೃಶ್ಯವೊಂದರಲ್ಲಿ ತುಟಿಗೆ ತುಟಿ ಒತ್ತಿ (ಲಿಪ್ ಲಾಕ್) ಮುತ್ತಿನ ದೃಶ್ಯವನ್ನು ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ನಾವಿಬ್ಬರೂ ಸ್ನೇಹಿತರು, ಐಶ್ವರ್ಯ ನನ್ನ ತಂಗಿ ಎಂದು ಹೇಳುತ್ತಿದ್ದವರು ಈಗ ತೆರೆ ಮೇಲೆ ಲಿಪ್ ಲಾಕ್ ಮಾಡೋದು ನಿಮಗೆ ಸರಿಯಾಗಿ ಕಾಣಿಸುತ್ತದೆಯೇ ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಕಿಡಿಕಾರಿದ್ದರು.

ಇಂದು ಸಂಜೆ ಘೋಷಣೆ ಏನಾಗಿರಬಹುದು?

ಈ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಪಡೆದಿದ್ದು, 12 ಸಾವಿರಕ್ಕೂ ಅಧಿಕ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ, ನೂರಾರು ಜನರು ಕಾಮೆಂಟ್ ಮೂಲಕ ಈ ಜೋಡಿಯ ಬಿಗ್ ಅನೌನ್ಸ್‌ಮೆಂಟ್ ಏನು ಎಂದು ತಮ್ಮದೇ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ನಮಗೆ ಗೊತ್ತಾಯ್ತು ಬಿಡಿ, ನೀವು ಮದುವೆ ಬಗ್ಗೆ ಹೇಳುತ್ತಿದ್ದೀರಿ ಅಲ್ವಾ ಎಂದು ಹೇಳಿದ್ದಾರೆ. ಇನ್ನು ಕೆಲವರು ಆಲ್‌ ದಿ ಬೆಸ್ಟ್ ಹೇಳಿದ್ದಾರೆ. ಆದರೆ, ಇಬ್ಬರ ನಡುವೆ ಸ್ನೇಹ, ಪ್ರೀತಿ, ಪ್ರೇಮ, ಸುತ್ತಾಟ ಏನೇ ಇದ್ದರೂ ಇಂದಿನ ಅನೌನ್ಸ್‌ಮೆಂಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ.

View post on Instagram