ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ನಟಿ ತಾರಾ ನಡುವಿನ 40 ವರ್ಷಗಳ ಆತ್ಮೀಯ ಸ್ನೇಹದ ಬಗ್ಗೆ ತಾರಾ ಮಾತನಾಡಿದ್ದಾರೆ. 'ಗಂಧದ ಗುಡಿ-2' ಚಿತ್ರದ ಶೂಟಿಂಗ್ ವೇಳೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಶಿವಣ್ಣ ತಮ್ಮ ಪ್ರಾಣ ಉಳಿಸಿದ ಘಟನೆಯನ್ನು ಅವರು ಸ್ಮರಿಸಿಕೊಂಡಿದ್ದಾರೆ.

'ನನ್ನ ಮತ್ತು ಶಿವರಾಜ್‌ಕುಮಾರ್ ನಡುವೆ ಅದೆಷ್ಟೋ ವರ್ಷಗಳ ಅಪಾರವಾದ ಸ್ನೇಹವಿದೆ. ನಾವಿಬ್ಬರೂ ಪರಸ್ಪರ ‘ಹೋಗೋ.. ಬಾರೇ..’ ಎಂದೇ ಏಕವಚನದಲ್ಲೇ ಮಾತನಾಡಿಕೊಳ್ಳುವುದು. ಒಮ್ಮೆ ನಾವು ಹೀಗೆ ಮಾತಾಡೋದನ್ನು ನೋಡಿ ಪಾರ್ವತಮ್ಮ ರಾಜ್‌ಕುಮಾರ್ ಅವರು, 'ಏನ್ರೀ ಇದು.. ಇಬ್ಬರೂ ಹೀಗೆ ಮಾತಾಡ್ತಿದ್ದೀರಾ?' ಎಂದು ನಟಿ ತಾರಾ ಅವರು ಹಳೆಯ ನೆನಪುಗಳನ್ನು ಬಿಚ್ಚಟ್ಟಿದ್ದಾರೆ.

ಕನ್ನಡ ಚಿತ್ರರಂಗದ 'ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್' ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿ 40 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂಭ್ರಮದ ಪ್ರಯುಕ್ತ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಿರಿಯ ನಟಿ ತಾರಾ, ಶಿವಣ್ಣನೊಂದಿಗಿನ ತಮ್ಮ ನಾಲ್ಕು ದಶಕಗಳ ಅವಿನಾಭಾವ ಸ್ನೇಹ ಮತ್ತು ಶೂಟಿಂಗ್ ಸೆಟ್‌ನ ರೋಚಕ ಘಟನೆಗಳನ್ನು ಮೆಲಕು ಹಾಕಿದ್ದಾರೆ. ಶಿವಣ್ಣ ಅವರ ಚೊಚ್ಚಲ ಚಿತ್ರ ‘ಆನಂದ್‌’ನಿಂದ ಹಿಡಿದು, ಮುಂಬರುವ ‘ಎ ಫಾರ್ ಆನಂದ್‌’ವರೆಗೂ ಹತ್ತಾರು ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿರುವ ತಾರಾ, ತಮ್ಮಿಬ್ಬರ ನಡುವಿನ ಆತ್ಮೀಯತೆ ಹಾಗೂ ಅಂದು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದಾಗ ಶಿವಣ್ಣ ತಮ್ಮ ಪ್ರಾಣ ಉಳಿಸಿದ ಆ ಭಯಾನಕ ಕ್ಷಣವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

'ನಾನು-ಶಿವಣ್ಣ ಹೋಗೋ.. ಬಾರೇ ಅನ್ತೀವಿ, ಪಾರ್ವತಮ್ಮ ಬೈಯೋರು!

ಶಿವಣ್ಣನ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ ತಾರಾ, "ನನ್ನ ಮತ್ತು ಶಿವರಾಜ್‌ಕುಮಾರ್ ನಡುವೆ ಅದೆಷ್ಟೋ ವರ್ಷಗಳ ಅಪಾರವಾದ ಸ್ನೇಹವಿದೆ. ನಾವಿಬ್ಬರೂ ಪರಸ್ಪರ ‘ಹೋಗೋ.. ಬಾರೇ..’ ಎಂದೇ ಏಕವಚನದಲ್ಲೇ ಮಾತನಾಡಿಕೊಳ್ಳುವುದು. ಒಮ್ಮೆ ನಾವು ಹೀಗೆ ಮಾತಾಡೋದನ್ನು ನೋಡಿ ಪಾರ್ವತಮ್ಮ ರಾಜ್‌ಕುಮಾರ್ ಅವರು, 'ಏನ್ರೀ ಇದು.. ಇಬ್ಬರೂ ಹೀಗೆ ಮಾತಾಡ್ತಿದ್ದೀರಾ?' ಎಂದು ಗದರಿ ನಮಗೆ ಬೈದಿದ್ದರು" ಎಂದು ತಾರಾ ಮುಗುಳುನಗೆಯೊಂದಿಗೆ ಹಳೆಯ ದಿನಗಳನ್ನು ಹಂಚಿಕೊಂಡಿದ್ದಾರೆ.

‘ಗಂಧದ ಗುಡಿ-2’ ಸೆಟ್‌ನಲ್ಲಿ ನದಿಗೆ ಕೊಚ್ಚಿ ಹೋಗುತ್ತಿದ್ದೆ: ಶಿವಣ್ಣ ಕಾಪಾಡಿದರು!

ಇದೇ ವೇಳೆ ಶೂಟಿಂಗ್ ವೇಳೆ ನಡೆದ ಜೀವನ್ಮರಣದ ಘಟನೆಯೊಂದನ್ನು ಬಿಚ್ಚಿಟ್ಟ ತಾರಾ, 'ಅದು ‘ಗಂಧದ ಗುಡಿ - 2’ ಚಿತ್ರದ ಶೂಟಿಂಗ್ ಸಮಯ. ನದಿಯಲ್ಲಿ ತೆಪ್ಪದ ಮೇಲೆ ದೃಶ್ಯವೊಂದನ್ನು ಚಿತ್ರೀಕರಿಸಲಾಗುತ್ತಿತ್ತು. ಆ ವೇಳೆ ನೀರಿನ ರಭಸಕ್ಕೆ ತೆಪ್ಪದ ನಿಯಂತ್ರಣ ತಪ್ಪಿ ನಾನು ನದಿಯಲ್ಲಿ ನಿಜವಾಗಿಯೂ ಕೊಚ್ಚಿ ಹೋಗುತ್ತಿದ್ದೆ! ಎಲ್ಲರೂ ಗಾಬರಿಯಾಗಿದ್ದರು. ಆ ಕ್ಷಣದಲ್ಲಿ ಶಿವಣ್ಣ ತಕ್ಷಣವೇ ಧೈರ್ಯದಿಂದ ಮುನ್ನುಗ್ಗಿ ರಿಯಲ್ ಆಗಿಯೇ ನನ್ನನ್ನು ನೀರಿನಿಂದ ರಕ್ಷಿಸಿ, ನನ್ನ ಪ್ರಾಣ ಉಳಿಸಿದರು' ಎಂದು ಕೃತಜ್ಞತೆಯಿಂದ ಆ ಕ್ಷಣವನ್ನು ನೆನೆದಿದ್ದಾರೆ.

ಡಾ. ರಾಜ್ ಕುಟುಂಬದ ಮೇಲಿನ ಅಪಾರ ಭಕ್ತಿ:

'ನಾನು ಕೇವಲ ಶಿವಣ್ಣನ ಜೊತೆ ಮಾತ್ರವಲ್ಲ, ಅಣ್ಣಾವ್ರ ಕುಟುಂಬದ ಎಲ್ಲರೊಂದಿಗೂ ನಟಿಸಿದ ಅದೃಷ್ಟವಂತೆ. ನನಗೆ ಡಾ. ರಾಜ್‌ಕುಮಾರ್ ಅವರ ಮೇಲೆ ಎಷ್ಟು ಗೌರವ ಮತ್ತು ಭಕ್ತಿಯಿತ್ತೆಂದರೆ, ನಾನು ಎಂಎಲ್‌ಸಿ (ವಿಧಾನ ಪರಿಷತ್ ಸದಸ್ಯೆ) ಆಗಿ ಪ್ರಮಾಣವಚನ ಸ್ವೀಕರಿಸಿದ್ದೇ ಪೂಜ್ಯ ಡಾ. ರಾಜ್‌ಕುಮಾರ್ ಅವರ ಹೆಸರಿನಲ್ಲಿ' ಎಂದು ತಾರಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ಅವರ 40 ವರ್ಷಗಳ ಸಿನಿಪಯಣದ ಈ ಸಂಭ್ರಮದಲ್ಲಿ ತಾರಾ ಹಂಚಿಕೊಂಡಿರುವ ಈ ರೋಚಕ ಮತ್ತು ಭಾವುಕ ನೆನಪುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.