ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಸರ್ಕಾರದ ಅನುದಾನ ಪಡೆಯಲು 13% ಲಂಚ ನೀಡಬೇಕೆಂದು ಗಂಭೀರ ಆರೋಪ ಮಾಡಿದ್ದಾರೆ. ತಾಲೂಕಿನ ಕಾಮಗಾರಿಗಳ ವಿಳಂಬ ಮತ್ತು ಇತರ ಸಮಸ್ಯೆಗಳಿಗೆ ತಮಗೂ ಸಂಬಂಧವಿಲ್ಲ ಎಂದಿರುವ ಅವರು, ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಸವಾಲು.
ತುರುವೇಕೆರೆ (ಸೆ.10): ಈ ಸರ್ಕಾರದಲ್ಲಿ ಅನುದಾನ ತರಬೇಕೆಂದರೆ ಮುಲಾಜಿಲ್ಲದೇ 13 ಪರ್ಸೆಂಟ್ ಲಂಚ ಕೊಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಗುತ್ತಿಗೆದಾರರು ಮುಖ್ಯಮಂತ್ರಗೆ ಎಷ್ಟು ಪಾಲು ಕೊಡಬೇಕು?
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಲ್ಲಿಯ ಕಾಂಗ್ರೆಸ್ಸಿಗರು ಕಾಂಗ್ರೆಸ್ ಸರ್ಕಾರದ ವಿರುದ್ಧವೇ ದನಿ ಎತ್ತಿರುವುದು ಸ್ವಾಗತಾರ್ಹ. ಕೆಆರ್‌ಐಡಿಎಲ್ ಕಾಮಗಾರಿಯನ್ನು ತಾಲೂಕಿನಲ್ಲಿ ಮಾಡಲು ಗುತ್ತಿಗೆದಾರರು ಮುಖ್ಯಮಂತ್ರಿಗೆ ಎಷ್ಟು ಪಾಲು ಕೊಡಬೇಕು ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಿದೆಯಾ?. ಅಷ್ಟೊಂದು ಲಂಚ ಕೊಟ್ಟು ಗುತ್ತಿಗೆದಾರ ಕೆಲಸ ಮಾಡು ಎಂದರೆ ಹೇಗೆ ಸಾಧ್ಯ?. ಕೆಆರ್‌ಐಡಿಎಲ್‌ನ ಕೆಲಸಗಳನ್ನು ಭೂ ಸೇನಾ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ವಹಿಸಿದೆ. ಅದಕ್ಕೂ ನನಗೂ ಸಂಬಂಧವಿಲ್ಲ. ತಾಕತ್ತಿದ್ದರೆ ಆ ಎಲ್ಲಾ ಕಾಮಗಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿ. ಮುಖ್ಯಮಂತ್ರಿಗಳಿಗೇ ದೂರು ಸಲ್ಲಿಸಲಿ. ಅದು ಬಿಟ್ಟು ನನ್ನನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತ ಕುಮಾರ್ ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಅವರು ಆನೇಕೆರೆಯಲ್ಲಿ ಗೋಮಾಳವನ್ನು ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆಂಬ ಮಾಹಿತಿ ಇದೆ. ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ.
ಈ ಗೊಡ್ಡು ಸರ್ಕಾರದಲ್ಲಿ ಹಣ ಎಲ್ಲಿದೆ?
ಜಿಪಂ ಮತ್ತು ತಾಪಂನಲ್ಲಿ ಯಾವ ಅನುದಾನ ಬಿಡುಗಡೆ ಆಗಿದೆ ಎಂಬುದನ್ನು ವಸಂತಕುಮಾರ್ ಬಹಿರಂಗಪಡಿಸಬೇಕು. ಈ ಗೊಡ್ಡು ಸರ್ಕಾರದಲ್ಲಿ ಹಣ ಎಲ್ಲಿದೆ? ಎಂದರು. ಪಟ್ಟಣದಲ್ಲಿರುವ ವಾಣಿಜ್ಯ ಸಂಕೀರ್ಣ ಪ್ರಾರಂಭವಾಗದೇ ಇರುವುದಕ್ಕೆ ನಾನು ಕಾರಣವಲ್ಲ. ಪಂಚಾಯಿತಿ ಆಡಳಿತಾಧಿಕಾರಿಗಳಾಗಿರುವ ತಹಸೀಲ್ದಾರ್ ಮತ್ತು ಸಿಇಒ ಅವರೇ ಹೊಣೆ. ಈಗಾಗಲೇ ಬಾಡಿಗೆ ಕರಾರು ಪಡೆದಿರುವವರು ತಮ್ಮ ಅಂಗಡಿ ಓಪನ್ ಮಾಡಲಿ. ತಾನೇ ತಾನಾಗಿ ಬೀದಿಬದಿ ವ್ಯಾಪಾರಿಗಳು ಅಲ್ಲಿಂದ ತಮ್ಮ ಅಂಗಡಿ ತೆರವು ಮಾಡುತ್ತಾರೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸಮಜಾಯಿಶಿ ನೀಡಿದರು.
ರಾಜಕೀಯ ದ್ವೇಷಕ್ಕೆ ನನ್ನನ್ನು ದೂರುವುದು ಸರಿಯಲ್ಲ
ಒಳಚರಂಡಿ ವ್ಯವಸ್ಥೆ ಜಾರಿ ಮಾಡಿರುವುದು ಸರ್ಕಾರ. ಟೆಂಡರ್‌ನಲ್ಲಿ ಕೂಗಿಕೊಂಡಿರುವವರ ಜವಾಬ್ದಾರಿ ಅದು. ಹೊಟ್ಟೆಕಿಚ್ಚಿಗೆ, ರಾಜಕೀಯ ದ್ವೇಷಕ್ಕೆ ನನ್ನನ್ನು ದೂರುವುದು ಸರಿಯಲ್ಲ. ಗ್ರಾಮ ದೇವತೆ ಉಡುಸಲಮ್ಮ ದೇವಾಲಯದ ಹಿಂಭಾಗ ಕೆರೆ ಒತ್ತುವರಿ ಆಗಿದ್ದರೆ ಕಾಂಗ್ರೆಸ್ಸಿಗರು ಭೂಮಾಪನ ಇಲಾಖೆಗೆ ದೂರು ಸಲ್ಲಿಸಿ ಅಳತೆ ಮಾಡಿಸಲಿ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಸುಖಾಸುಮ್ಮನೆ ನಮ್ಮನ್ನು ಗುರಿ ಮಾಡಿ ಮಾತನಾಡುವುದು ಸರಿಯಲ್ಲ. ವಿನಾ ಕಾರಣ ತಮ್ಮ ವಿರುದ್ಧ ದೂರಿದರೆ ನಾನು ಸುಮ್ಮನೆ ಕೂರುವುದಿಲ್ಲ. ನಾನೂ ಸಹ ಮುಂದೆ ಏನು ಮಾಡುತ್ತೇನೆ ಎಂಬುದನ್ನು ಕಾದು ನೋಡಲಿ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಕಾಂಗ್ರೆಸ್ ಸರ್ಕಾರ ಹಾಕಿರುವ ಅಧಿಕಾರಿಗಳಿರುವುದು. ನಾನ್ಯಾರನ್ನೂ ಲೆಟರ್ ಕೊಟ್ಟು ಹಾಕಿಸಿಕೊಂಡಿಲ್ಲ. ಅವರು ಲಂಚ ಪಡೆಯುತ್ತಿದ್ದರೆ, ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಹಿಡಿಸಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಾಂಗ್ರೆಸ್ ನಾಯಕರಿಗೆ ಸವಾಲೆಸೆದರು. ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ರಂಜಿತ್, ಮುಖಂಡರಾದ ವಿಜಯೇಂದ್ರ, ಪರಮೇಶ್ ಉಪಸ್ಥಿತರಿದ್ದರು.


