2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ 4 ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಿಸುವ ಗುರಿ ಹೊಂದಿದ್ದು, ಶೀಘ್ರದಲ್ಲೇ ರೈತರ ಸಮಸ್ಯೆಗಳ ಆಲಿಸಲು ರಾಜ್ಯ ಪ್ರವಾಸ..

ರಾಮನಗರ (ಸೆ.18): ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ರಾಮನಗರದಿಂದಲೇ ನಿಖಿಲ್ ಸ್ಪರ್ಧೆ

ರಾಮನಗರದ ನೂತನ ಜೆಡಿಎಸ್ ಕಚೇರಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದ ಜನರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಳೆದ ಚುನಾವಣೆಯ ಕಹಿ ನೆನಪು ಕಾರ್ಯಕರ್ತರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅದನ್ನು ಉತ್ತಮ ಫಲಿತಾಂಶದ ಮೂಲಕ ಹೋಗಲಾಡಿಸಿ ಕಾರ್ಯಕರ್ತರಲ್ಲಿ ನೂತನ ಉತ್ಸಾಹ ತುಂಬಬೇಕಿದೆ. ಜಿಲ್ಲೆಯ 4 ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರನ್ನು ನೋಡುವ ಗುರಿ ನಮ್ಮದಾಗಿದೆ ಎಂದರು. ರಾಜಕೀಯದಲ್ಲಿ ಹಿನ್ನಡೆ-ಮುನ್ನಡೆ ಶಾಶ್ವತವಲ್ಲ, ಬದಲಾವಣೆಯೊಂದಿಗೆ ನಾವು ಮತ್ತೆ ಸಂಘಟಿತ ಪ್ರಯತ್ನ ಮಾಡುತ್ತೇವೆ ಎಂದರು.

ಸದ್ಯ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮುಖ್ಯ, ಆಗ ಅವರು ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟರು.

ಶೀಘ್ರದಲ್ಲೇ ರಾಜ್ಯ ಪ್ರವಾಸ:

ಶೀಘ್ರದಲ್ಲೇ ರಾಜ್ಯ ಪ್ರವಾಸದ ಬಗ್ಗೆ ತೀರ್ಮಾನ ಮಾಡುತ್ತೇನೆ. ಸರ್ಕಾರ ಬಂದು ಮೂರು ವರ್ಷವಾದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರ ಕೇವಲ 102 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಉಳಿದ ತಾಲೂಕುಗಳಲ್ಲಿ ಬರ ಇಲ್ಲವೇ? ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುತ್ತೇನೆ ಎಂದು ಹೇಳಿದರು.