ಕಾಲ್ತುಳಿತ ಪ್ರಕರಣದಲ್ಲಿ ಕ್ಲೀನ್‌ಚಿಟ್ ನೀಡಿರುವುದನ್ನು ಪ್ರಶ್ನಿಸಿರುವ ಸಾರಾ ಮಹೇಶ್, ಈ ದುರಂತಕ್ಕೆ ಯಾರು ಹೊಣೆ ಎಂದು ಸರ್ಕಾರಕ್ಕೆ ತರಾಟೆ.. ಅಲ್ಲದೆ, ಚಾಮುಂಡಿ ಬೆಟ್ಟದಲ್ಲಿ ವಿಐಪಿ ದರ್ಶನದ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಮನವಿ

ಮೈಸೂರು (ಜು.29): ನಾನು ಅವತ್ತೇ ಹೇಳಿದ್ದೆ ದಯಾನಂದ್ ದಕ್ಷ ಅಧಿಕಾರಿ, ಅವರನ್ನು ಅಮಾನತು ಮಾಡಿದ್ದು ತಪ್ಪು ಎಂದು. ಐಪಿಎಲ್ ಕಾಲ್ತುಳಿತ ಪ್ರಕರಣದಲ್ಲಿ ಕ್ಲಿನ್‌ಚಿಟ್ ಕೊಟ್ಟುಕೊಂಡಿರಿ ಹಾಗಾದರೆ ತಪ್ಪು ಮಾಡಿದವರು ಯಾರು? ಈ ದುರಂತಕ್ಕೆ ಕಾರಣ ಯಾರು? ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದು.

ಪ್ರಕರಣ ಕ್ಲೋಸ್ ಮಾಡಲು ಕಮಿಟಿ ಎಂಬ ಕಣ್ಣೊರೆಸುವ ತಂತ್ರ

ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ದುರಂತದ ಹೊಣೆ ಆ ಹಿರಿಯ ಅಧಿಕಾರಿ ಮೇಲೆ ಹೊರಿಸಿ ಅಮಾನತು ಮಾಡಿದ್ರಿ, ತನ್ನದಲ್ಲದ ತಪ್ಪಿಗೆ ಆ ಅಧಿಕಾರಿಗೆ ಆದ ನೋವನ್ನು ಯಾರು ಭರಿಸುತ್ತೀರಿ? ಪ್ರಕರಣದಲ್ಲಿ ಕ್ಲೀಚ್ ಚೀಟ್ ಕೊಟ್ಟುಕೊಂಡರೆ ಹನ್ನೊಂದು ಅಮಾಯಕ ಜನರ ಸಾವಿಗೆ ಕಾರಣ ಯಾರು? ಸರ್ಕಾರ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿದ್ದು ತಪ್ಪಲ್ಲವೇ? ಕ್ಲೀನ್‌ಚಿಟ್ ಕೊಟ್ಟರೆ ಸತ್ತ ಹನ್ನೊಂದು ಜನರ ಕುಟುಂಬಕ್ಕೆ ಆಧಾರ ಯಾರು? ಎಂದು ಪ್ರಶ್ನಿಸಿದರು.

ಕಾಲ್ತುಳಿತ ಪ್ರಕರಣ ಒಂದು ಅಲ್ಲ, ರಾಜ್ಯದಲ್ಲಿ ಇಂಥ ದುರಂತಗಳು ನಡೆದಾಗ, ರಾಜಕಾರಣಿಗಳಾಗಿರಲಿ, ಅಧಿಕಾರಿಯಾಗಿರಲಿ ತಪ್ಪು ಮಾಡಿದಾಗ ಸರ್ಕಾರ ತಕ್ಷಣ ಒಂದು ಕಮಿಟಿ ಮಾಡುತ್ತದೆ. ಜನರು ಆ ಘಟನೆ ಮರೆತ ಮೇಲೆ ಇಡೀ ಪ್ರಕರಣ ಕ್ಲೋಸ್ ಮಾಡೋದು ಈ ಸರ್ಕಾರದ ಚಾಳಿ ಆಗಿದೆ. ಈ ಹಿಂದೆ ಮುಡಾ ಹಗರಣ ಆಯ್ತು, ಮುಖ್ಯಮಂತ್ರಿಗಳೇ ಸೈಟ್ ವಾಪಸ್ ಕೊಟ್ಟ ಮೇಲೆ ಅವರಿಗಿಂತ ಮೇಲೆ ಯಾರಿದ್ದಾರೆ. ಅದಕ್ಕೊಂದು ಕಮಿಟಿ ಮಾಡಿದ್ರು. ತಪ್ಪು ಮಾಡಿದ್ದಕ್ಕೆ ತಾನೆ ಸೈಟ್ ವಾಪಸ್ ಕೊಟ್ಟಿದ್ದು? ಆ ಪ್ರಕರಣ ಈಗ ಏನಾಗಿದೆ ಅಂತಾ ಎಲ್ಲರಿಗೆ ಗೊತ್ತಿರೋ ವಿಚಾರ. ಅದೇ ರೀತಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣವೂ ತಪ್ಪಿಸ್ಥರನ್ನು ಬಚಾವ್ ಮಾಡಲೆಂದೇ ಕಮಿಟಿ ಮಾಡಿ ಈಗ ಕ್ಲೀನ್ ಚಿಟ್ ಕೊಡಲಾಗಿದೆ.

ಚಾಮುಂಡಿ ತಾಯಿ ವಿಐಪಿಗಳಿಗೆ ಒಳ್ಳೇದು ಮಾಡಿದ್ದು ಸಾಕು:

ಇನ್ನು ಚಾಮುಂಡಿ ಆಷಾಡ ಶುಕ್ರವಾರ ವಿಐಪಿ ಹೆಚ್ಚಾದ ವಿಚಾರವಾಗಿ ಮಾತನಾಡಿದ ಸಾರಾ ಮಹೇಶ್, ನಾನು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ. ಆ ಚಾಮುಂಡಿ ತಾಯಿ ನಮಗೆ ಎಲ್ಲನೂ ಕೊಟ್ಟಿದ್ದಾಳೆ. ಜನರ ಮತ್ತು ತಾಯಿ ಆಶೀರ್ವಾದದಿಂದ ನಾವು ಎಂಎಲ್‌ಎ ಆಗಿದ್ದೆವು. ಇನ್ನು ಚಾಮುಂಡಿ ತಾಯಿ ವಿಐಪಿಗಳಿಗೆ ಒಳ್ಳೆಯದು ಮಾಡಿದ್ದು ಸಾಕು, ಜನಸಾಮಾನ್ಯರಿಗೆ ದೇವರು ಒಳ್ಳೆಯದು ಮಾಡಲಿ. ಸ್ವಲ್ಪ ಜನ ಸಾಮಾನ್ಯರು ದೇವರ ದರ್ಶನ ಮಾಡಲು ಅವಕಾಶ ಮಾಡಿಕೊಡಲಿ ಎಂದು ಮನವಿ ಮಾಡಿದರು.

ಹಾಸನಾಂಬೆ ಘಟನೆ ನೆನೆದ ಸಾರಾ ಮಹೇಶ:

ಕಳೆದ ಏಳೆಂಟು ವರ್ಷಗಳಿಂದ ಆಷಾಡ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಹೋಗುವುದೇ ಬಿಟ್ಟಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಹಾಸನಾಂಬೆೆ ಹೋಗಿದ್ದೆ. ಆಗ ಅಲ್ಲಿ ಯುವತಿಯೊಬ್ಬಳು ನನ್ನನ್ನು ಪ್ರಶ್ನಿಸಿದಳು, ವಿಐಪಿಗಳಿಂದ ಜನಸಾಮಾನ್ಯರ ದರ್ಶನಕ್ಕೆ ಎಷ್ಟು ತೊಂದರೆಯಾಗುತ್ತದೆ ಎಂದು ಅರಿತುಕೊಂಡೆ ಅಂದಿನಿಂದ ನಾನು ಹಾಸನಾಂಬೆಗೆ ಹೋಗಲೇ ಇಲ್ಲ. ಇಲ್ಲಿಂದಲೇ ಕೈಮುಗಿಯುತ್ತೇನೆ. ವಿಐಪಿ ಜೊತೆ ನೂರಾರು ಜನರು ಬರ್ತಾರೆ. ಇದರಿಂದ ಜನಸಾಮಾನ್ಯರು ದರ್ಶನ ಮಾಡಲು ಆಗುವುದಿಲ್ಲ ಎಂದರು.

ಮೈಸೂರಿನವರೇ ಮಂತ್ರಿ, ಮುಖ್ಯಮಂತ್ರಿ, ಉಸ್ತುವಾರಿ ಮಂತ್ರಿಯೂ ಮೈಸೂರಿನವರೇ. ಚಾಮುಂಡಿ ಬೆಟ್ಟದಲ್ಲಿಯೂ ಅಕ್ರಮ. ಚಾಮುಂಡೇಶ್ವರಿ ಬಟ್ಟೆ, ಬ್ಯಾಗ್‌ನಲ್ಲಿಯೂ ಅಕ್ರಮ, ಮುಡಾದಲ್ಲೂ ಅಕ್ರಮ. ಮೈಸೂರಲ್ಲೇ ಈ ರೀತಿ ಆದ್ರೆ ಇನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಏನೆಲ್ಲ ಅಕ್ರಮ ನಡೆಯುತ್ತಿರಬಹುದು ಟೀಕಿಸಿದರು.