ದೇಶದಲ್ಲಿ ಸಮಾನತೆ ಬಂದಾಗ ಮೀಸಲಾತಿಯನ್ನು ರದ್ದು ಮಾಡಬಹುದು. ಆದರೆ ಅಂತಹ ಸ್ಥಿತಿ ಸದ್ಯ ಇಲ್ಲ ಎಂದು ರಾಹುಲ್‌ ಅಮೆರಿಕದಲ್ಲಿ ಹೇಳಿದ್ದರು. ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ತಿರುಗೇಟು ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ  

ಬೆಂಗಳೂರು(ಸೆ.13): ‘ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಾನ ಪಾಲನ್ನು ನೀಡುವುದೇ ಮೀಸಲಾತಿಯ ಮೂಲ ಉದ್ದೇಶ. ಆ ಉದ್ದೇಶ ಸಾಧನೆಯಾದ ನಂತರ ಮೀಸಲಾತಿ ಯಾಕೆ ಬೇಕು? ಇದನ್ನು ರಾಹುಲ್ ಗಾಂಧಿಯವರು ಮಾತ್ರ ಅಲ್ಲ, ನಾನೂ ಹೇಳುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿಯನ್ನು ಸಮರ್ಥಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಲ್ಲದೆ, ಇದು ಹೇಗೆ ಮೀಸಲಾತಿ ವಿರೋಧಿ ಹೇಳಿಕೆ ಆಗುತ್ತದೆ? ರಾಹುಲ್‌ ಗಾಂಧಿ ಅವರ ಈ ಹೇಳಿಕೆ ವಿರುದ್ಧದ ಬಿಜೆಪಿಯವರ ಪ್ರತಿಭಟನೆ ‘ಪ್ರಾಣಿ ಹಿಂಸೆ ವಿರುದ್ಧ ಕಟುಕರು ಪ್ರತಿಭಟನೆ ಮಾಡಿದಂತೆ’ ಎಂದು ಕಿಡಿಕಾರಿದ್ದಾರೆ. ದೇಶದಲ್ಲಿ ಸಮಾನತೆ ಬಂದಾಗ ಮೀಸಲಾತಿಯನ್ನು ರದ್ದು ಮಾಡಬಹುದು. ಆದರೆ ಅಂತಹ ಸ್ಥಿತಿ ಸದ್ಯ ಇಲ್ಲ ಎಂದು ರಾಹುಲ್‌ ಅಮೆರಿಕದಲ್ಲಿ ಹೇಳಿದ್ದರು. ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಅಮೆರಿಕಾ ವೇದಿಕೆ ಮೇಲೆ ಚೀನಾ ಹೊಗಳಿದ ರಾಗಾ... ರಾಹುಲ್ ಮಾತಿಗೆ ಖಲಿಸ್ತಾನಿ ಪನ್ನು.. ಫುಲ್ ಖುಷ್! ಯಾಕೆ?!

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರಿಗೆ, ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಇಂತಹ ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ? ಮೀಸಲಾತಿ ವಿರೋಧವನ್ನು ರಕ್ತಗತವಾಗಿಸಿಕೊಂಡಿರುವ ಬಿಜೆಪಿ ನಾಯಕರಿಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವ ಜ್ಞಾನವಾಗಲಿ, ವ್ಯವಧಾನವಾಗಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ. ರಾಹುಲ್‌ ಗಾಂಧಿ ಹೇಳಿಕೆ ಹೇಗೆ ಮೀಸಲಾತಿ ವಿರೋಧಿ ಹೇಳಿಕೆ ಆಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಮೀಸಲಾತಿ ಹೆಚ್ಚಿಸಿ, ಜಾತಿಗಣತಿ ಮಾಡಲಿ:

ಮೀಸಲಾತಿ ಪ್ರಮಾಣವನ್ನು ಈಗಿನ ಶೇ.50ರಿಂದ ಶೇ.75ಕ್ಕೆ ಹೆಚ್ಚಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಬಹಿರಂಗ ಸಭೆಗಳಲ್ಲಿ ಮಾತ್ರವಲ್ಲ ಲೋಕಸಭೆಯಲ್ಲಿಯೂ ಹೇಳಿದ್ದಾರೆ. ಬಿಜೆಪಿ ನಾಯಕರಿಗೆ ಮೀಸಲಾತಿ ಬಗ್ಗೆ ಅಷ್ಟೊಂದು ಕಾಳಜಿ-ಬದ್ಧತೆ ಇದ್ದರೆ ಮೀಸಲಾತಿಯ ಪ್ರಮಾಣವನ್ನು ಈಗಿನ ಶೇ.50ರಿಂದ ಶೇ.75ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ. ಕೇಂದ್ರ ಮಟ್ಟದಲ್ಲೂ ಜಾತಿವಾರು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

ಅಸಮಾನತೆಗೆ ಮೀಸಲಾತಿ ವಿರೋಧಿ ಬಿಜೆಪಿ ಕಾರಣ:

ಸರ್ವರಿಗೂ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸಮಾನ ಪಾಲು ಸಿಗಬೇಕೆಂಬ ಉದ್ದೇಶದಿಂದಲೇ ಅಂಬೇಡ್ಕರ್ ಅವರು ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಆದರೆ ಮೀಸಲಾತಿಯ ಹೊರತಾಗಿಯೂ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಇನ್ನೂ ಸಿಕ್ಕಿಲ್ಲ, ಸಾಮಾಜಿಕ ಅಸಮಾನತೆ ಕಡಿಮೆಯಾಗಿಲ್ಲ. ಇದಕ್ಕೆ ಬಿಜೆಪಿ ನಾಯಕರಂತಹ ಜಾತಿ ಪಟ್ಟಭದ್ರರು ಕಾರಣ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಸಾಮಾಜಿಕ ನ್ಯಾಯದಾನದ ಅವಕಾಶಗಳು ತೆರೆದುಕೊಂಡಾಗೆಲ್ಲ ಅದರ ವಿರುದ್ಧ ಹೋರಾಟ ನಡೆಸಿರುವುದು ಬಿಜೆಪಿ. ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ವಿರೋಧಿಸಿ ದಿವಂಗತ ನ್ಯಾ.ರಾಮ ಜೋಯಿಸ್‌ರಿಂದ ಸುಪ್ರೀಂ ಕೋರ್ಟ್‌ಗೆ ಖಟ್ಲೆ ಹಾಕಿಸಿದ್ದ ಬಿಜೆಪಿ ದೇಶದ ಪ್ರತಿಯೊಂದು ರಾಜ್ಯದಲ್ಲಿಯೂ ಮೀಸಲಾತಿಯನ್ನು ವಿರೋಧಿಸಿ ಚಳುವಳಿ ನಡೆಸಿದೆ.

ಮಂಡಲ್ ವರದಿ ಜಾರಿಗೊಳಿಸಿದ್ದಾಗ ಅಮಾಯಕ ವಿದ್ಯಾರ್ಥಿಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರಕ್ಕೆ ಪ್ರಚೋದಿಸಿದ್ದ ಬಿಜೆಪಿ, ಮಂಡಲ್ ವರದಿಗೆ ವಿರುದ್ಧವಾಗಿ ಕಮಂಡಲ ಚಳವಳಿಗೆ ಚಾಲನೆ ನೀಡಿ ಜನರ ತಲೆಯಲ್ಲಿ ಧರ್ಮದ ಅಫೀಮು ತುಂಬುವ ಪ್ರಯತ್ನ ಮಾಡಿತ್ತು ಎಂದು ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ ಮೀಸಲಾತಿ ವಿರೋಧಿ: ರಾಹುಲ್‌ ಗಾಂಧಿಗೆ ಅಮಿತ್‌ ಶಾ ತರಾಟೆ

ಮೀಸಲಾತಿ ಫಲಾನುಭವಿಗಳಲ್ಲಿ ಇರುವ ಜಾಗೃತಿಯಿಂದಾಗಿ ಮೀಸಲಾತಿಯನ್ನು ನೇರವಾಗಿ ವಿರೋಧಿಸುವ ದಮ್ಮ-ತಾಕತ್ತು ಇಂದಿನ ಬಿಜೆಪಿ ನಾಯಕರಿಗೆ ಇಲ್ಲ. ಇದಕ್ಕಾಗಿ ಒಂದೆಡೆ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿರುವ ಸಂವಿಧಾನವನ್ನೇ ಬದಲಾಯಿಸುವ ಪ್ರಯತ್ನ ಮಾಡಿದರೆ ಇನ್ನೊಂದೆಡೆ ಮೀಸಲಾತಿ ಫಲಾನುಭವಿಗಳ ನಡುವೆಯೆ ಅಂತಃ ಕಲಹ ಏರ್ಪಡಿಸಿ ಸಾಮಾಜಿಕ ನ್ಯಾಯದ ಅಸ್ತ್ರವನ್ನು ಮೊಂಡಾಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.

ಮೀಸಲು ಹೆಚ್ಚಳಕ್ಕೆ ಬಿಜೆಪಿ ಒತ್ತಡ ತರಲಿ

ಮೀಸಲಾತಿ ಪ್ರಮಾಣವನ್ನು ಈಗಿನ ಶೇ.50ರಿಂದ ಶೇ.75ಕ್ಕೆ ಹೆಚ್ಚಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಬಿಜೆಪಿ ನಾಯಕರಿಗೆ ಮೀಸಲಾತಿ ಬಗ್ಗೆ ಅಷ್ಟೊಂದು ಕಾಳಜಿ-ಬದ್ಧತೆ ಇದ್ದರೆ ಮೀಸಲಾತಿಯ ಪ್ರಮಾಣವನ್ನು ಈಗಿನ ಶೇ.50ರಿಂದ ಶೇ.75ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.