ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರ 4 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಣ್ಮರೆಯಾಗಿತ್ತು. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಯಾವುದೇ ಮನುಷ್ಯ ಕಳ್ಳರು ಕಾಣಿಸದೇ ಇದ್ದು, ಬ್ಯಾಗ್ ಕದ್ದಿದ್ದು ಯಾರೆಂಬ ರೋಚಕ ಸತ್ಯ ಬಯಲಾಗಿದೆ.

ಮಧ್ಯಪ್ರದೇಶದ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಾರ್ಡ್‌ನಲ್ಲಿ ರೋಗಿಯೊಬ್ಬರನ್ನು ನೋಡಲು ಬಂದಿದ್ದ ಮಹಿಳೆಯೊಬ್ಬರು ತಂದಿದ್ದ ಸುಮಾರು ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣಗಳು ಇದ್ದ ಬ್ಯಾಗ್​ ರಾತ್ರೋರಾತ್ರಿ ಕಾಣೆಯಾಗಿದ್ದು, ಇದರ ಸಿಸಿಟಿವಿ ನೋಡಿ ಪೊಲೀಸರೇ ಬೆಚ್ಚಿಬಿದ್ದಿರೋ ಘಟನೆ ನಡೆದಿದೆ. ಚೀಲದಲ್ಲಿ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಸುಮಾರು 2,000 ರೂ. ನಗದು ಮತ್ತು ಕೆಲವು ಆಹಾರ ಪದಾರ್ಥಗಳು ಇದ್ದವು. ಬೆಲೆಬಾಳುವ ವಸ್ತುಗಳೆಂದರೆ ಚಿನ್ನದ ಮಂಗಳಸೂತ್ರ, ಕಿವಿಯೋಲೆಗಳು, ಚಿನ್ನದ ಮಣಿಗಳು, ಬೆಳ್ಳಿಯ ಕಾಲುಂಗುರಗಳು ಮತ್ತು ಇತರ ಆಭರಣಗಳು. ಅದನ್ನು ಆಸ್ಪತ್ರೆಗೆ ತಂದಿದ್ದರು ಮಹಿಳೆ. ಅಲ್ಲಿಯೇ ನಿದ್ದೆಗೆ ಜಾರಿದ್ದರು. ಆದರೆ ಬೆಳಗಾಗುವುದರೊಳಗೆ ಬ್ಯಾಗ್​ ನಾಪತ್ತೆಯಾಗಿತ್ತು! ಮುಂದಾದದ್ದೇ ರೋಚಕ

ಕಾಯಂಪುರ್ ನಿವಾಸಿ ಲತಾ ಬಾಯಿ ಎಂದು ಗುರುತಿಸಲಾದ ಮಹಿಳೆ ತಮ್ಮ ಬ್ಯಾಗ್ ಕಣ್ಮರೆಯಾಗಿರುವುದನ್ನು ಅರಿತು ಕೊತ್ವಾಲಿ ಪೊಲೀಸರನ್ನು ಸಂಪರ್ಕಿಸಿದರು. ಈ ಬೆಲೆಬಾಳುವ ವಸ್ತುಗಳನ್ನು ಅವರು ಮೊದಲು ಮನೆಯಲ್ಲಿ ಇಟ್ಟುಕೊಂಡಿದ್ದರು. ಆದರೆ ಮನೆಯಲ್ಲಿ ಚಿಕ್ಕ ಮಗ ಮಾತ್ರ ಇರುವ ಕಾರಣ, ಏನಾದರೂ ಆಗಬಹುದು ಎನ್ನುವ ಭಯದಿಂದ, ಸಂಬಂಧಿಕರನ್ನು ನೋಡಲು ಬಂದಾಗ, ಆ ಆಭರಣಗಳನ್ನು ಬ್ಯಾಗ್​ನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದರು. ಆದರೆ, ಬೆಳಗಾಗುವುದರೊಳಗೆ ಬ್ಯಾಗ್​ ನಾಪತ್ತೆಯಾಗಿತ್ತು.

ಸಿಸಿಟಿವಿಯಲ್ಲಿ ಮನುಷ್ಯರ ಸುಳಿವಿಲ್ಲ!

ಇದರ ದೂರನ್ನು ಸ್ವೀಕರಿಸುತ್ತಲೇ ಪೊಲೀಸರು ಕಾರ್ಯಪ್ರವೃತ್ತರಾದರು. ಆಸ್ಪತ್ರೆಯ ಸುತ್ತಲೂ ಅಳವಡಿಸಿರುವ ಸಿಸಿಟಿವಿಗಳನ್ನು ಪರಿಶೀಲಿಸಿದರು. ಆದರೆ ಯಾವ ಮನುಷ್ಯರೂ ಅಲ್ಲಿ ಅನುಮಾನಾಸ್ಪದವಾಗಿ ಓಡಾಡುವುದು ಕಾಣಿಸಲಿಲ್ಲ. ಬ್ಯಾಗ್​ ಇದ್ದ ಜಾಗದಲ್ಲಿಯೂ ಯಾವ ಕಳ್ಳಕಾರರೂ ಬಂದಿರಲಿಲ್ಲ. ಇದರಿಂದ ಪೊಲೀಸರಿಗೆ ಆರಂಭದಲ್ಲಿ ತಲೆಬಿಸಿಯಾಯಿತು. ಕೊನೆಗೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಶಾಕ್​ ಆಗಿ ಹೋದರು. ಈ ಸಿಸಿಟಿವಿ ನೋಡಿ ಎಲ್ಲರೂ ಶಾಕ್​ಗೆ ಒಳಗಾದರು.

ಅಲ್ಲಿ ಬಂದದ್ದು ಮನುಷ್ಯರೇ ಅಲ್ಲ!

ಅಷ್ಟಕ್ಕೂ ಆಗಿದ್ದು ಏನೆಂದರೆ, ಅಲ್ಲಿ ಬಂದದ್ದು ಮನುಷ್ಯ ಕಳ್ಳರು ಅಲ್ಲ, ಬದಲಿಗೆ ಬ್ಯಾಗ್​ ಕಳ್ಳತನ ಮಾಡಿದ್ದು ಒಂದು ನಾಯಿ! ನಾಯಿಯೊಂದು ಬ್ಯಾಗ್​ ಬಳಿ ಬಂದು ಅದನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಸಿಸಿಟಿವಿಯಲ್ಲಿಯೇ ನಾಯಿಯ ಜಾಡನ್ನು ಹಿಡಿದು ಹೋದ ಪೊಲೀಸರಿಗೆ ಅಲ್ಲಿ ಬ್ಯಾಗ್​ ಸಿಕ್ಕಿದ್ದು, ಅಲ್ಲಿ ಎಲ್ಲಾ ಆಭರಣ, ನಗದು ಎಲ್ಲವೂ ಸೇಫ್​ ಆಗಿರುವುದು ತಿಳಿದಿದೆ. ಅಷ್ಟಕ್ಕೂ ಆ ನಾಯಿ ಹಾಗೆ ಮಾಡಲು ಕಾರಣ, ಆ ಮಹಿಳೆ ಬ್ಯಾಗ್​ನಲ್ಲಿ ಬಿಸ್ಕೆಟ್​, ಬ್ರೆಡ್​ ಎಲ್ಲಾ ಇಟ್ಟಿದ್ದರು. ಹಸಿದ ನಾಯಿ ಒಳಗೆ ಬಂದಿದೆ. ವಾಸನೆ ಬಡಿದು ಬ್ಯಾಗ್​ ತೆಗೆಯಲು ನೋಡಿದೆ. ಆಗದ ಕಾರಣ, ಬ್ಯಾಗ್​ ಹೊತ್ತುಕೊಂಡು ಹೋಗಿದೆ! ಮಹಿಳೆಗೆ ಎಲ್ಲವೂ ವಾಪಸ್​ ಸಿಕ್ಕಿತು. ಆದರೆ ಇಷ್ಟು ಬೆಲೆ ಬಾಳುವ ವಸ್ತುಗಳನ್ನು ಆಸ್ಪತ್ರೆಗೆ ತಂದಿರುವ ಮಹಿಳೆಗೆ ಪೊಲೀಸರು ಕ್ಲಾಸ್​ ತೆಗೆದುಕೊಂಡಿದ್ದಾರೆ.