ಬೆಂಗಳೂರು (ಆ. 22): ರಾಜ್ಯದಲ್ಲಿ ಉದ್ಯೋಗ ಮಾತ್ರವಲ್ಲ ವ್ಯಾಪಾರ ಹಾಗೂ ಉದ್ಯಮ ರಂಗದ ಅವಕಾಶಗಳಿಂದಲೂ ಕನ್ನಡಿಗರು ವಂಚಿತರಾಗತೊಡಗಿದ್ದಾರೆ. ಬಹುತೇಕ ಎಲ್ಲಾ ವ್ಯಾಪಾರಗಳಲ್ಲೂ ಉತ್ತರ ಭಾರತೀಯರ ಪಾರಮ್ಯ ಶುರುವಾಗಿದೆ.

ಅಷ್ಟೇ ಅಲ್ಲ, ಉತ್ತರ ಭಾರತೀಯರು ಕೆಲ ಉದ್ಯಮಗಳಲ್ಲಿ ಏಕಸ್ವಾಮ್ಯಸಾಧಿಸಿದ್ದು, ಸ್ಥಳೀಯರು ಈ ಉದ್ಯಮದಲ್ಲಿ ತೊಡಗಿಕೊಳ್ಳದಂತೆ ಅಕ್ರಮ ಮಾರ್ಗಗಳ ಮೂಲಕ ತಡೆಯುವ ಧಾರ್ಷ್ಟ್ಯವನ್ನು ತೋರತೊಡಗಿದ್ದಾರೆ.

ಬೆಂಗಳೂರು ಸೇರಿದಂತೆ ಕರ್ನಾಟಕದೆಲ್ಲೆಡೆ ಉದ್ಯಮ-ವ್ಯವಹಾರ ರಂಗದಲ್ಲಿ ಪರಭಾಷಿಕರು ಅದರಲ್ಲೂ ವಿಶೇಷವಾಗಿ ಉತ್ತರ ಭಾರತೀಯರು ಆಕ್ಟೋಪಸ್‌ ಮಾದರಿಯಲ್ಲಿ ವಿಸ್ತರಿಸತೊಡಗಿದ್ದಾರೆ. ಕನ್ನಡ ಭಾಷೆಯ ರಕ್ಷಣೆ ಹಾಗೂ ಅಭಿವೃದ್ಧಿಗೆ ಕನ್ನಡಿಗರು ಹಾಗೂ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಆಲಸ್ಯ ಹಾಗೂ ನಿರ್ಲಕ್ಷ್ಯಭಾವನೆ ಮುಂದುವರೆಸಿದರೆ ಕನ್ನಡಿಗರು ಕರ್ನಾಟಕದಲ್ಲೇ ಬದುಕಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.

ಸ್ಥಳೀಯರಿಗಿಲ್ಲ ನೌಕರಿ; ಕ್ರಮ ಕೈಗೊಳ್ಳುವ ಅಧಿಕಾರ ಕನ್ನಡ ಪ್ರಾಧಿಕಾರಕ್ಕಿಲ್ಲ!

ರಾಜ್ಯದಲ್ಲಿರುವ ಬಹುತೇಕ ಉದ್ಯೋಗಾವಕಾಶಗಳು ಈಗಾಗಲೇ ಅನ್ಯಭಾಷಿಕರ ಪಾಲಾಗಿವೆ. ಬೆಂಗಳೂರಿನಂತಹ ನಗರದಲ್ಲಿ ಕನ್ನಡಿಗ ಉದ್ಯೋಗಿಗಳೇ ಬಹುತೇಕ ಕಂಪನಿಗಳಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಐಟಿ-ಬಿಟಿ, ಬಿಪಿಒ-ಕೆಪಿಒ ಕಂಪನಿಗಳಲ್ಲಂತೂ ಪರ ಭಾಷಿಕರದ್ದೇ ಮೇಲುಗೈ ಆಗಿದೆ. ಕೇವಲ ಉದ್ಯೋಗಗಳು ಮಾತ್ರವಲ್ಲ ಉದ್ಯಮಗಳೂ ಸಹ ಅನ್ಯ ಭಾಷಿಕರ ಪಾಲಾಗಿವೆ.

ಕನ್ನಡಿಗರು ಉದ್ಯಮಿಗಳಾಗದೆ ಕನ್ನಡ ಉಳಿಯಲು ಸಾಧ್ಯವಿಲ್ಲ ಎಂದು ಎಸ್‌.ಎಲ್‌. ಭೈರಪ್ಪ ನಿರಂತರವಾಗಿ ಹೇಳುತ್ತಲೇ ಇರುತ್ತಾರೆ. ಕನ್ನಡ ದುಡ್ಡಿನ ಭಾಷೆಯಾಗಬೇಕು. ಕನ್ನಡಿಗರು ಬಂಡವಾಳಶಾಹಿಗಳು ಹಾಗೂ ಉದ್ಯಮಿಗಳಾದರೆ ಮಾತ್ರ ಕನ್ನಡವನ್ನು ಉಳಿಸಬಹುದು. ಆದರೆ, ರಾಜ್ಯದಲ್ಲಿ ಕನ್ನಡ ಉದ್ಯಮಿಗಳಿಗಂತಲೂ ಉತ್ತರ ಭಾರತೀಯರಾದ ರಾಜಸ್ಥಾನ, ಗುಜರಾತಿಗಳೇ ಪ್ರಬಲ ಉದ್ಯಮಿಗಳಾಗಿ ಬೆಳೆಯುತ್ತಿದ್ದಾರೆ.

ಈ ಉತ್ತರ ಭಾರತೀಯ ಉದ್ಯಮಿಗಳ ನಡುವೆ ಎಂತಹ ಒಗ್ಗಟ್ಟು ಇದೆ ಎಂದರೆ ಸ್ಥಳೀಯರೇನಾದರೂ ಸದರಿ ಉದ್ಯಮ ರಂಗಕ್ಕೆ ಕಾಲಿಟ್ಟರೆ ಎಲ್ಲಾ ಉತ್ತರ ಭಾರತೀಯರು ಒಗ್ಗೂಡಿ ದರ ಪೈಪೋಟಿ ಹುಟ್ಟುಹಾಕುವ ಮೂಲಕ ಸ್ಥಳೀಯರು ಒಕ್ಕಲೇಳುವಂತೆ ಮಾಡುತ್ತಾರೆ.

ಕನ್ನಡಿಗ ವ್ಯಾಪಾರಿಗಳು ಕಣ್ಮರೆ

ಬೆಂಗಳೂರು ನಗರವನ್ನೇ ಉದಾಹರಣೆಯಾಗಿ ಪರಿಗಣಿಸಿದರೆ ವ್ಯಾಪಾರಿ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಚಿಕ್ಕಪೇಟೆ, ಬಳೆಪೇಟೆ, ಅವೆನ್ಯೂ ರಸ್ತೆ, ಎಸ್‌.ಪಿ. ರಸ್ತೆ ಸೇರಿ ಕೇಂದ್ರ ವ್ಯಾಪಾರಿ ಪ್ರದೇಶದಲ್ಲಿ ಕನ್ನಡಿಗ ವ್ಯಾಪಾರಿಗಳೇ ಕಣ್ಮರೆಯಾಗುತ್ತಿದ್ದಾರೆ. ಜವಳಿ ಅಂಗಡಿ, ಪುಸ್ತಕದ ಅಂಗಡಿ, ಉಡುಗೊರೆ ಹಾಗೂ ಫ್ಯಾನ್ಸಿ ಅಂಗಡಿ, ಲಗ್ನಪತ್ರಿಕೆ ಅಂಗಡಿ, ಎಲೆಕ್ಟ್ರಿಕಲ್‌, ಲೈಟಿಂಗ್ಸ್‌, ಮೊಬೈಲ್ಸ್‌, ಎಲೆಕ್ಟ್ರಾನಿಕ್ಸ್‌ , ಕಂಪ್ಯೂಟರ್‌ ಮಾರಾಟ ಹಾಗೂ ಸರ್ವಿಸ್‌ ಸೇರಿದಂತೆ ಪ್ರತಿ ಅಂಗಡಿಗಳನ್ನೂ ಉತ್ತರ ಭಾರತೀಯರೇ ಆಕ್ರಮಿಸಿಕೊಂಡಿದ್ದಾರೆ.

ಪರಿಣಾಮ, ಕನ್ನಡಿಗರೇ ಸಿಬಿಡಿ (ಸೆಂಟ್ರಲ್‌ ಬ್ಯುಸಿನೆಸ್‌ ಡಿಸ್ಟಿಕ್ಟ್) ಬಿಟ್ಟು ನಗರ ಹೊರವಲಯಗಳಿಗೆ ವಲಸೆ ಹೋಗಿದ್ದಾರೆ. ಇನ್ನು ನಗರ ಹೊರ ವಲಯದಲ್ಲೂ ವ್ಯಾಪಾರಿ ಕ್ಷೇತ್ರದಲ್ಲಿ ಉತ್ತರ ಭಾರತೀಯರದ್ದೇ ಮೇಲುಗೈ ಇದೆ.

ಉತ್ತರ ಭಾರತೀಯ ಹಾಗೂ ಚೀನಾ ಕಂಪನಿಗಳೊಂದಿಗಿನ ಸಂಪರ್ಕದಿಂದಾಗಿ, ಸ್ಥಳೀಯ ವ್ಯಾಪಾರಿಗಳಿಗಿಂತ ಕಡಿಮೆ ಬೆಲೆಗೆ ವಸ್ತುಗಳ ಮಾರಾಟ ಮಾಡುತ್ತಾರೆ. ಹೀಗಾಗಿ ಸ್ಥಳೀಯ ವ್ಯಾಪಾರಿಗಳ ಬೆನ್ನುಮೂಳೆ ಮುರಿಯುತ್ತಿದ್ದಾರೆ ಎಂದು ವ್ಯಾಪಾರಿ ತಜ್ಞರು ಹೇಳುತ್ತಾರೆ.

ಕೇವಲ ವ್ಯಾಪಾರ ಮಾತ್ರವಲ್ಲ ಹೋಟೆಲ್‌ ವ್ಯವಹಾರದಲ್ಲೂ ಪರರಾಜ್ಯಗಳ ಪ್ರವೇಶ ಆಗಿದೆ. ಪರಿಣಾಮವಾಗಿ ನಾಯ್ಡು ಹೋಟೆಲ್‌, ಆಂಧ್ರ ಶೈಲಿ, ಪಂಜಾಬಿ ಶೈಲಿ, ಉತ್ತರ ಭಾರತ ಶೈಲಿಯ ಹೋಟೆಲ್‌ಗಳು ಹಾದಿ ಬೀದಿಯಲ್ಲೂ ತಲೆ ಎತ್ತಿವೆ.

ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ನಿತ್ಯ ಜೀವನದಲ್ಲಿ ನಿರಂತರವಾಗಿ ಹಿಂದಿ ಹೇರಿಕೆ ನಡೆಯುತ್ತಿದೆ. ಎಷ್ಟೋ ಮಂದಿ ಕನ್ನಡಿಗರಿಗೆ ಹಿಂದಿ ರಾಷ್ಟ್ರಭಾಷೆ ಅಲ್ಲ ಎಂಬ ಮಾಹಿತಿ ಇಲ್ಲದಷ್ಟರ ಮಟ್ಟಿಗೆ ವ್ಯವಸ್ಥಿತವಾಗಿ ಹಿಂದಿಯನ್ನು ನಂಬಿಸಲಾಗಿದೆ. ಪರಿಣಾಮ, ಬೆಂಗಳೂರಿನಲ್ಲಿ ಹಿಂದಿ ಬಲ್ಲ ಪರಭಾಷಿಕರು ಬದುಕುತ್ತಿರುವಷ್ಟುಸ್ವೇಚ್ಛೆಯಾಗಿ ಕನ್ನಡ ಮಾತ್ರ ಕಲಿತಿರುವವರು ಬದುಕಲು ಆಗುತ್ತಿಲ್ಲ.

ಹಳ್ಳಿ ಪರಿಸರದಲ್ಲಿ ಶಿಕ್ಷಣ ಪಡೆದ ಎಷ್ಟೋ ಮಂದಿ ಬೆಂಗಳೂರಿಗೆ ಬಂದರೆ ಹಿಂದಿ, ಇಂಗ್ಲಿಷ್‌ ಇಲ್ಲದೆ ಬದುಕಲಾಗದು ಎಂಬ ಆತಂಕದಿಂದಲೇ ಹಳ್ಳಿಗಳಲ್ಲಿ ನಿರುದ್ಯೋಗಿಗಳಾಗಿಯೇ ಉಳಿದುಬಿಟ್ಟಿದ್ದಾರೆ. ಕರುನಾಡಿನಲ್ಲೇ ಕನ್ನಡಿಗರಿಗೆ ಅಭದ್ರತೆ ಕಾಡಲಾರಂಭಿಸಿದೆ.

ಕನ್ನಡಿಗರಿಗೆ ಸಿಗಬೇಕಿದ್ದ ಲಕ್ಷಾಂತರ ಉದ್ಯೋಗ ಹೊರಗಿನವರ ಪಾಲು

ಶಾಲೆಗಳಲ್ಲಿ ಕನ್ನಡದ ಮೇಲೆ ಪ್ರಹಾರ

ಬಳಕೆಯಲ್ಲಿದ್ದರೆ ಮಾತ್ರ ಭಾಷೆ ಬದುಕಿರುತ್ತದೆ. ಆದರೆ, ಭಾಷೆ ಬಳಕೆಗೆ ಅವಕಾಶ ನೀಡದೆ ಸಾಯಿಸಲು ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿವೆ. ಬೆಂಗಳೂರಿನ ಬಹುತೇಕ ಆಂಗ್ಲ ಶಾಲೆಗಳಲ್ಲಿ ಕನ್ನಡ ಮಾತನಾಡುವುದು ಅಪರಾಧ. ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ 500 ರು.ಗಳಿಂದ 1 ಸಾವಿರ ರು.ಗಳವರೆಗೆ ದಂಡ ವಿಧಿಸಿದ ಉದಾಹರಣೆಗಳೂ ಇವೆ. ಹೀಗಿದ್ದರೂ ಕರುನಾಡಿನಲ್ಲಿ ಕನ್ನಡ ಭಾಷೆ ಬಳಕೆ ಮಾಡುವುದು ದಂಡನಾರ್ಹ ಅಥವಾ ಶಿಕ್ಷಾರ್ಹ ಅಪರಾಧವೇ ಎಂಬ ಪ್ರಶ್ನೆಯನ್ನು ಬಹುತೇಕರು ಎತ್ತುತ್ತಿಲ್ಲ.

ಇನ್ನು ರಾಜ್ಯದಲ್ಲಿರುವ ಎಲ್ಲಾ ಕನ್ನಡ, ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಸುವುದು ಕಡ್ಡಾಯಗೊಳಿಸಿ ಕನ್ನಡ ಭಾಷೆ ಕಡ್ಡಾಯ ಕಲಿಕಾ ಕಾಯ್ದೆ - 2015 ಜಾರಿ ಮಾಡಿದೆ. ಹೀಗಿದ್ದರೂ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರವೇ 50ಕ್ಕೂ ಹೆಚ್ಚು ಸಿಬಿಎಸ್‌ಸಿ ಹಾಗೂ ಐಸಿಎಸ್‌ಸಿ ಶಾಲೆಗಳು ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೂ ವಿರೋಧ ವ್ಯಕ್ತಪಡಿಸಿವೆ. ಇವುಗಳಿಗೆ ಸರ್ಕಾರ ವಿಧಿಸಲು ಅವಕಾಶವಿರುವ ದಂಡ 500 ರು. ಮಾತ್ರ. ಸರ್ಕಾರದ ಇಂತಹ ಬಲವಿಲ್ಲದ ನಿಯಮಗಳಿಂದಲೇ ಕನ್ನಡ ಅನಾಥವಾಗುತ್ತಿದೆ.

ಕೇವಲ ಶಾಲೆಗಳಲ್ಲಿ ಮಾತ್ರವಲ್ಲ ಸರ್ಕಾರಿ ಸಂಸ್ಥೆಗಳು ಹಾಗೂ ಕೆಲವು ಪ್ರತಿಷ್ಠಿತ ಕಂಪನಿಗಳನ್ನೂ ಕನ್ನಡ ಬಳಕೆ ಮಾಡುವಂತಿಲ್ಲ. ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳೂ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದ್ದರೂ, ಮೈಸೂರಿನ ಸಿಎಫ್‌ಟಿಆರ್‌ಐ (ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ) ಸಂಸ್ಥೆಯಲ್ಲಿ ಕನ್ನಡ ಬಳಕೆ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಮುಂದಾಗಿದ್ದಕ್ಕೆ ಕನ್ನಡ ವಿರೋಧಿ ನಿರ್ದೇಶಕರಾಗಿದ್ದ ರಾಮ್‌ಶೇಖರನ್‌ ಎಂಬುವವರು 2014ರಲ್ಲಿ ಇಬ್ಬರು ಉದ್ಯೋಗಿಗಳನ್ನು ಅಮಾನತುಗೊಳಿಸಿದ್ದರು.

ಕನ್ನಡಿಗರಿಗೆ ಕೆಲಸ ಕೊಡದಿರಲು ಕಂಪನಿಗಳ ತಂತ್ರ!

ಅಲ್ಲದೆ, ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದರು. ಕರುನಾಡಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಭಯೋತ್ಪಾದಕ ಚಟುವಟಿಕೆ ಎಂಬಂತೆ ಬಿಂಬಿಸಿದ್ದ ಆ ವ್ಯಕ್ತಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೈಸೂರು ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮಸಿ ಬಳಿದು ಪ್ರತಿಭಟಿಸಿದ್ದರು.

ಈ ಪ್ರಕರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಧ್ಯಪ್ರವೇಶಿಸಿ ಬಗೆಹರಿಸಬೇಕಾಯಿತು ಎನ್ನುತ್ತಾರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ. ಕರ್ನಾಟಕದಲ್ಲಿ ಕನ್ನಡ ಬಳಕೆ ಮಾಡಿದರೆ ಉದ್ಯೋಗ ಕಳೆದುಕೊಳ್ಳುವಂತಹ ಹಾಗೂ ದಂಡ ಕಟ್ಟಬೇಕಾದಂತಹ ದಂಡನಾರ್ಹ ಅಪರಾಧ ಎಂಬಂತಾದರೆ ಮುಂದಿನ ದಿನಗಳನ್ನು ಊಹಿಸಲೂ ಸಾಧ್ಯವಿಲ್ಲ.

ಕನ್ನಡ ಹೋರಾಟ ಹತ್ತಿಕ್ಕಲು ವ್ಯವಸ್ಥಿತ ಷಡ್ಯಂತ್ರ

ಪ್ರತಿ ಬಾರಿ ರಾಜ್ಯದಲ್ಲಿ ಕನ್ನಡ ಪರ ಧ್ವನಿ ಎತ್ತಿದಾಗಲೂ ಅದಕ್ಕೆ ಸ್ವಾರ್ಥ ಹಾಗೂ ರಾಜಕೀಯ ಬಣ್ಣ ಹಚ್ಚುವ ರಾಜಕೀಯ ಪಕ್ಷಗಳ ಷಡ್ಯಂತ್ರಕ್ಕೆ ಬಲಿ ಮಾಡಲಾಗುತ್ತಿದೆ. ಕಳೆದ ಭಾನುವಾರ ಹಿಂದಿಯಲ್ಲಿದ್ದ ಬ್ಯಾನರ್‌ ಹರಿದ ಕನ್ನಡ ಪರ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಬಂಧಿಸಲಾಯಿತು. ಈ ವೇಳೆ ಮಾರ್ವಾಡಿಗಳು ನೀಡಿದ ಎಚ್ಚರಿಕೆ, ಬೆಂಗಳೂರು ಬಂದ್‌ ಮಾಡುವ ಮೂಲಕ ಕನ್ನಡಿಗರ ಬಾಯಿ ಮುಚ್ಚಿಸಬೇಕು ಎಂಬುದು. ಇದಕ್ಕೆ ಪಕ್ಷಭೇದ ಮರೆತು ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸಲೇ ಇಲ್ಲ.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕನ್ನಡ ಪರ ಹೋರಾಟ ನಡೆದರೆ ಬಿಜೆಪಿಯ ಪಿತೂರಿ ಎಂದು, ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದರೆ ಕಾಂಗ್ರೆಸ್‌ ಪಿತೂರಿ ಎಂದು ಆಯಾ ಸರ್ಕಾರಗಳು ಬಿಂಬಿಸುತ್ತಲೇ ಇವೆ. ಹೀಗಾಗಿ ಕನ್ನಡ ಪರ ಹೋರಾಟಕ್ಕೆ ಎಲ್ಲಾ ಕನ್ನಡಿಗರು ಧ್ವನಿಗೂಡಿಸಿದಂತೆ ತಮ್ಮ ಸ್ವಾರ್ಥ ಹಾಗೂ ರಾಜಕೀಯ ಹಿತಾಸಕ್ತಿಗಳಿಗೆ ಕನ್ನಡಿಗರ ಧ್ವನಿ ಹತ್ತಿಕ್ಕುತ್ತಿವೆ.

ಕನ್ನಡ ಹೋರಾಟದಲ್ಲಿ ರಾಜಕೀಯ ಸುಳಿಯುವುದು ಒಂದೆಡೆಯಾದರೆ, ಕನ್ನಡ ಪರ ಹೋರಾಟಗಾರರನ್ನು ರೋಲ್‌ಕಾಲ್‌ ಹೋರಾಟಗಾರರನ್ನಾಗಿ ಬಿಂಬಿಸಿ ಅವರ ನೈಜ ಹೋರಾಟಗಳಿಗೂ ಜನ ಬೆಂಬಲ ನೀಡದಂತಹ ವ್ಯವಸ್ಥಿತ ಷಡ್ಯಂತರಗಳು ನಡೆಯುತ್ತಿವೆ ಎಂದು ಕನ್ನಡ ಪರ ಹೋರಾಟಗಾರ ಹಾಗೂ ಪ್ರಾಧ್ಯಾಪಕರಾದ ಎಸ್‌.ಕೃಷ್ಣ ಹೇಳುತ್ತಾರೆ.

ಕನ್ನಡಿಗರ ಹೋರಾಟ ಹೇಗಿರಬೇಕು?

ಯಾವುದೇ ರಾಜ್ಯಕ್ಕೆ ಹೋಗಿ ನೆಲೆಸಬೇಕೆಂದರೂ ಅಲ್ಲಿನ ಸ್ಥಳೀಯ ಭಾಷೆಯ ಜ್ಞಾನ ಅತ್ಯಗತ್ಯ. ತಮಿಳುನಾಡಿನಲ್ಲಿ ಹಿಂದಿ ಭಾಷೆ ನುಸುಳದಂತೆ ಬೃಹತ್‌ ಹೋರಾಟಗಳೇ ನಡೆದವು. ಪರಿಣಾಮ ಅಲ್ಲಿ ಶಿಕ್ಷಣದಲ್ಲೂ ಹಿಂದಿ ಕಲಿಕೆ ಇಲ್ಲ.

ಅಲ್ಲಿನವರು ಹಿಂದಿ ಗೊತ್ತಿದ್ದರೂ ತಮಿಳು ಭಾಷೆಯಲ್ಲೇ ಪ್ರತಿಕ್ರಿಯಿಸುವ ಮೂಲಕ ತಮ್ಮ ತಾಯಿ ಭಾಷೆ ಮೇಲಿನ ಪ್ರೀತಿ ಮೆರೆಯುತ್ತಾರೆ. ಆದರೆ, ನಾವು ಕನ್ನಡಿಗರು ಹೃದಯ ವೈಶಾಲ್ಯತೆ ತೋರಿಸಲು ಹೋಗಿ ಕರ್ನಾಟಕದಲ್ಲಿ ನೆಲೆಸಬೇಕಾದರೆ ಕನ್ನಡ ಗೊತ್ತಿರಬೇಕಾದ ಅನಿವಾರ್ಯತೆ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದೇವೆ.

ಹೀಗಾಗಿ, ಕನ್ನಡ ಬಳಕೆಗೆ ಆದ್ಯತೆ ನೀಡಬೇಕು ಹಾಗೂ ಕನ್ನಡ ಬಳಸುವಂತೆ ಪ್ರತಿಯೊಬ್ಬ ಅನ್ಯ ಭಾಷಿಕರನ್ನೂ ಒತ್ತಾಯಿಸಬೇಕು. ಯಾವುದೇ ಸಂಘಟನೆ ಕನ್ನಡ ಪರ ಹೋರಾಟ ಹಮ್ಮಿಕೊಂಡರೆ ಬೆಂಬಲಿಸಬೇಕು. ಕನ್ನಡಪರ ಸಂಘಟನೆಗಳ ಹೆಸರಿನಲ್ಲಿ ಸ್ವಾರ್ಥ ಸಾಧನೆ ಆಗುತ್ತಿದ್ದರೆ ಅದನ್ನೂ ಬಯಲಿಗೆಳೆಯಬೇಕು. ಸರ್ಕಾರಗಳು, ಹಾಗೂ ಕನ್ನಡಪರ ಸಂಘಟನೆಗಳು ಕನ್ನಡ ಪರವಾಗಿಯೇ ಇರುವಂತೆ ನೋಡಿಕೊಳ್ಳಬೇಕು. ಈ ದಿಸೆಯಲ್ಲಿ ಹೆಜ್ಜೆ ಹಾಕುವ ಪ್ರತಿಯೊಬ್ಬರಿಗೂ ಸ್ವಾರ್ಥ, ರಾಜಕೀಯ ಬದಿಗಿಟ್ಟು ಪ್ರತಿಯೊಬ್ಬರೂ ಬೆಂಬಲ ನೀಡಬೇಕು.

ಇಷ್ಟೇ ಅಲ್ಲ ಪ್ರತಿ ಹಂತದಲ್ಲೂ ಕನ್ನಡ ಬಳಕೆಗೆ ಒತ್ತು ನೀಡಬೇಕು. ಆನ್‌ಲೈನ್‌ ಶಾಪಿಂಗ್‌ ತಾಣಗಳು, ಕಾಲ್‌ಸೆಂಟರ್‌ ಕರೆಗಳಿಗೆ ಕನ್ನಡದಲ್ಲೇ ಪ್ರತಿಕ್ರಿಯಿಸಬೇಕು. ಬ್ಯಾಂಕ್‌ಗಳಲ್ಲೂ ಕನ್ನಡದಲ್ಲೇ ವ್ಯವಹರಿಸಲು ಆದ್ಯತೆ ನೀಡಬೇಕು. ಕನ್ನಡದಲ್ಲಿ ಸೇವೆ ನಿರಾಕರಿಸಿದವರ ಮೇಲೆ ದೂರು ನೀಡಬೇಕು. ಆಗ ಕನ್ನಡದ ಬಳಕೆ ಹೆಚ್ಚುತ್ತದೆ.

ಕನ್ನಡಿಗರಲ್ಲೇ ಒಗ್ಗಟ್ಟಿಲ್ಲ

ಕನ್ನಡಿಗರ ಹಕ್ಕುಗಳ ಪರ ಹೋರಾಟ ಯಾವ ಅವಧಿಯಲ್ಲೇ ಆದರೂ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಈ ಮೂಲಕ ವಿರೋಧಪಕ್ಷಕ್ಕೆ ಸೇರಿದವರು ಮಾತ್ರ ಹೋರಾಟಕ್ಕೆ ಬೆಂಬಲಿಸುವಂತಾಗಿದೆ. ಆಡಳಿತ ಪಕ್ಷದವರು ತಟಸ್ಥ ಭಾವನೆ ಅನುಸರಿಸುವುದು ಅಥವಾ ಕನ್ನಡ ಹೋರಾಟಗಾರರನ್ನು ರಾಜಕೀಯ ದಾಳಗಳು ಎಂಬಂತೆ ಬಿಂಬಿಸುತ್ತಾರೆ. ಹೀಗಾಗಿ ಕನ್ನಡ ಹೋರಾಟ ರಾಜಕೀಯ, ಧರ್ಮ, ಪ್ರಾಂತೀಯತೆಯ ಗಡಿ ದಾಟಿ ಒಟ್ಟು ಧ್ವನಿಯಾಗುತ್ತಿಲ್ಲ. ಹೀಗಾಗಿಯೇ ರಾಜ್ಯದಲ್ಲಿ ಕನ್ನಡಿಗರಿಗಿಂತ ಪರ ಭಾಷಿಕರ ಸಂಘಟನೆಗಳು, ಒಗ್ಗಟ್ಟು ಬಲಗೊಳ್ಳುತ್ತಿದೆ. ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆದರೆ ಬರುವ ಜನರಿಗಿಂತ ಪರ ಭಾಷಿಕರ ಕರೆಗೆ ಸೇರುವ ಜನರ ಸಂಖ್ಯೆಯೇ ಹೆಚ್ಚಾಗುತ್ತಿದೆ.

ಕನ್ನಡಿಗರೇಕೆ ಬಂಡವಾಳಶಾಹಿಗಳಾಗಿಲ್ಲ?

ದೇಶದಲ್ಲಿ 300 ವರ್ಷದ ಬಂಡವಾಳ ಇತಿಹಾಸ ಗಮನಿಸಿದರೆ ಉಳಿದ ರಾಜ್ಯಗಳಿಗಿಂತಲೂ ಕರ್ನಾಟಕವೇ ಹಿಂದಿದೆ. ಗುಜರಾತ್‌ ಹಾಗೂ ರಾಜಸ್ಥಾನ, ಮಾರ್ವಾಡ್‌ ಪ್ರದೇಶದಿಂದ ಬಂದ ಮಾರ್ವಾಡಿಗಳು ಬ್ರಿಟೀಷರ ವ್ಯವಹಾರ ನೋಡಿಕೊಳ್ಳುತ್ತಿದ್ದರಿಂದ ವ್ಯವಹಾರ ಜ್ಞಾನ, ಬಂಡವಾಳ ಕೂಡಿ ಹಾಕಿಕೊಂಡಿದ್ದರು. ಸ್ವತಂತ್ರ ಭಾರತದಲ್ಲಿ ತಕ್ಷಣ ಬಂಡವಾಳ ಹೂಡಿ ವ್ಯವಹಾರ ಶುರು ಮಾಡಿದ್ದರು. ಉಳಿದಂತೆ ಮದ್ರಾಸ್‌ ಭಾಗದಲ್ಲೂ ಬ್ರಿಟೀಷರು ಚೆಟ್ಟಿಯಾರ್‌ ಮತ್ತಿತರ ಸಮುದಾಯಗಳನ್ನು ಬೆಳೆಸಿದ್ದರು.

ಆಂಧ್ರಪ್ರದೇಶದಲ್ಲಿ ಬ್ರಿಟೀಷರು ಕೃಷ್ಣಾ, ಗೋದಾವರಿಗೆ ಕಟ್ಟಿದ ಜಲಾಶಯಗಳಿಂದಾಗಿ ಆ ಭಾಗದಲ್ಲಿ ಜಮೀನು ಹೊಂದಿದ್ದ ಕಮ್ಮ, ನಾಯ್ಡು ಸಮುದಾಯ ದೊಡ್ಡ ಮಟ್ಟದಲ್ಲಿ ಆರ್ಥಿಕ ಶಕ್ತಿಗಳಾಗಿ ಬೆಳೆಯಿತು. ಆದರೆ, ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಭಾಗ ಮರಾಠಿ ಪೇಶ್ವೆಗಳು, ಹೈ-ಕ ಭಾಗ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಮೈಸೂರು ಭಾಗದ 13 ಜಿಲ್ಲೆಗಳಲ್ಲೂ ಮೈಸೂರು ರಾಜರು ಬ್ರಿಟಿಷರಿಗೆ ಕಪ್ಪ ಪಾವತಿಸಿಯೇ ಆಡಳಿತ ನಡೆಸಬೇಕಾಗಿತ್ತು.

ಹೀಗಾಗಿ ಬಂಡವಾಳಶಾಹಿಗಳಾಗಿ ಕನ್ನಡಿಗರು ಬೆಳೆಯಲು ಸಾಧ್ಯವೇ ಆಗಲಿಲ್ಲ. ಇಸ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅಂತಹವರು ಜ್ಞಾನವನ್ನು ಹೂಡಿ ಉದ್ಯಮ ಮಾಡಿದ್ದರಿಂದ ಯಶಸ್ವಿಯಾದರು. ಹಣವನ್ನೇ ಬಂಡವಾಳವಾಗಿ ಹೂಡಬೇಕಾಗಿದ್ದರೆ ಅವರೂ ಕೂಡ ಯಶಸ್ವಿಯಾಗುತ್ತಿರಲಿಲ್ಲ ಎನ್ನುತ್ತಾರೆ ಅಂಕಣಕಾರ ಹಾಗೂ ಕನ್ನಡ ಹೋರಾಟಕ್ಕೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿ ವಸಂತ್‌ ಶೆಟ್ಟಿ.

ಮಾರ್ವಾಡಿಗಳ ಬೇರು ವ್ಯಾಪಿಸುತ್ತಿರುವುದು ಹೇಗೆ?

ದೇಶದ ಯಾವುದೇ ಮೂಲೆಗೆ ಹೋದರೂ ಮಾರ್ವಾಡಿಗಳ ವ್ಯಾಪಾರಗಳಿವೆ. ರಾಜ್ಯದಲ್ಲೂ ಪ್ರತಿ ಪಟ್ಟಣಗಳ ಹಂತದಲ್ಲೂ ಮಾರ್ವಾಡಿಗಳು ಬೇರು ಬಿಟ್ಟಿದ್ದಾರೆ. ಇದಕ್ಕೆ ಕಾರಣ ಅವರಲ್ಲಿನ ಸಾಮಾಜಿಕ ಬಂಡವಾಳ ಹಾಗೂ ಸಂಘಟನೆ. ಉತ್ತರ ಭಾರತದ ಮಾರ್ವಾಡ್‌ನಿಂದ ಬರುವ ಯಾವುದೇ ವ್ಯಕ್ತಿಗೆ ಸ್ವಂತ ವ್ಯಾಪಾರ ಮಾಡಲು ಮಾರ್ವಾಡಿ ಸಾಮಾಜಿಕ ಬಂಡವಾಳದಿಂದ ಹಣಕಾಸು ನೆರವು ನೀಡುತ್ತಾರೆ. ಜತೆಗೆ ಎಲ್ಲರೂ ಬೆಂಬಲವಾಗಿ ನಿಂತು ಬೆಳೆಸುತ್ತಾರೆ. ಆದರೆ, ಕನ್ನಡಿಗರಲ್ಲಿ ಈ ಒಗ್ಗಟ್ಟಿನ ಕೊರತೆ ಹೆಚ್ಚಿದೆ. ಜತೆಗೆ ಕನ್ನಡಿಗರ ಉದ್ಯಮಗಳಿಗೆ ಪೂರಕವಾದ ವಾತಾವರಣವನ್ನೂ ರಾಜ್ಯ ಸರ್ಕಾರ ಸೃಷ್ಟಿಸುತ್ತಿಲ್ಲ. ಹೀಗಾಗಿ ರಾಜ್ಯದ ವ್ಯಾಪಾರಗಳು ಉತ್ತರ ಭಾರತೀಯರ ಪಾಲಾಗುತ್ತಿವೆ.

ರಾಜ್ಯ ಸರ್ಕಾರ ಏನು ಮಾಡಬೇಕು?

- ರಾಜ್ಯ ಸರ್ಕಾರ ಫೆಬ್ರವರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ‘ಸಿ’ ಹಾಗೂ ‘ಡಿ’ ದರ್ಜೆಯ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.100ರಷ್ಟುಮೀಸಲಾತಿ ಕಲ್ಪಿಸಿ ಸರ್ಕಾರಿ ಆದೇಶ ಹೊರಡಿಸಬೇಕು. ಆದ್ಯತೆ ಬದಲಿಗೆ ಮೀಸಲಾತಿ ಪದ ಬಳಕೆ ಮೂಲಕ ಕಾನೂನು ಬಲ ನೀಡಬೇಕು.

- ಡಾ. ಸರೋಜಿನಿ ಮಹಿಷಿ ವರದಿ ಆಧರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಶಿಫಾರಸಿನ ಅನ್ವಯ ‘ಎ’ ಹಾಗೂ ‘ಬಿ’ ವರ್ಗದ ಹುದ್ದೆಗಳಲ್ಲೂ ಸ್ಥಳೀಯರಿಗೆ ಕ್ರಮವಾಗಿ ಶೇ.65 ಹಾಗೂ 80ರಷ್ಟುಮೀಸಲಾತಿ ಕಲ್ಪಿಸಬೇಕು.

- ಕನ್ನಡಿಗ ಉದ್ಯಮಿಗಳ ಬೆಳೆಸುವ ಕನ್ನಡ ಪರ ಉದ್ಯಮ ನೀತಿ ರೂಪಿಸಬೇಕು. ಉದ್ಯಮಗಳಲ್ಲಿ ಕಡ್ಡಾಯವಾಗಿ ಕನ್ನಡಿಗ ಉದ್ಯೋಗಿಗಳಿಗೆ ಆದ್ಯತೆ ಸಿಗಬೇಕು.

- ರಾಜ್ಯದಲ್ಲಿನ ಜಾಹಿರಾತು ಹಾಗೂ ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಲು ಪ್ರಸ್ತಾಪಿಸಿರುವ ಕಾಯಿದೆಯನ್ನು ಮಂಡಿಸಿ ಅಂಗೀಕಾರ ನೀಡಬೇಕು.

- ಜನವರಿ ತಿಂಗಳಲ್ಲಿ ನಡೆದ 84ನೇ ಸಾಹಿತ್ಯ ಸಮ್ಮೇಳನದ ನಿರ್ಣಯದಂತೆ ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಒತ್ತಡ ಹೇರಬೇಕು.

- ಐಬಿಪಿಎಸ್‌ (ಬ್ಯಾಂಕಿಂಗ್‌ ಪರೀಕ್ಷೆ) ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು. ರಾಜ್ಯದಲ್ಲಿನ ಬ್ಯಾಂಕಿಂಗ್‌ ಉದ್ಯೋಗ ಕನ್ನಡಿಗರಿಗೆ ಸೀಮಿತಗೊಳಿಸಬೇಕು.

- ಕನ್ನಡ ನಾಡು, ನುಡಿ ವಿಚಾರದಲ್ಲಿ ಕನ್ನಡಿಗರ ಹಕ್ಕಿಗೆ ಚ್ಯುತಿ ಬಂದರೆ ಸ್ವಾರ್ಥ, ರಾಜಕೀಯ ಲಾಭ-ನಷ್ಟನೋಡದೆ ಕ್ರಮ ಕೈಗೊಳ್ಳಬೇಕು.

- ಕನ್ನಡ ಮಾತನಾಡುವುದೇ ಅಪರಾಧ ಎಂಬಂತೆ ವರ್ತಿಸುತ್ತಿರುವ ಐಟಿ-ಬಿಟಿ, ಬಿಪಿಒ-ಕೆಪಿಒ, ಸ್ಟಾರ್ಟ್‌ ಅಪ್‌ ಕಂಪನಿಗಳನ್ನೂ ಕಾರ್ಮಿಕ ಇಲಾಖೆ ನೀತಿ ಅಡಿ ತರಬೇಕು.

- ಕನ್ನಡ ಬೆಳೆಯಬೇಕಾದರೆ ಗುಣಮಟ್ಟದ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ 65 ಸಾವಿರಕ್ಕೂ ಹೆಚ್ಚಿರುವ ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟಉತ್ತಮಪಡಿಸಬೇಕು.

- ಶ್ರೀಕಾಂತ್ ಎನ್ ಗೌಡಸಂದ್ರ