ಏನಿದು ಪಿತ್ರಾರ್ಜಿತ ತೆರಿಗೆ? ಭಾರತದಲ್ಲೂ ಚಾಲ್ತಿಯಲ್ಲಿತ್ತು ಈ ನೀತಿ, ಈಗ ಯಾವ್ಯಾವ ದೇಶದಲ್ಲಿದೆ ನೋಡಿ
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಭಾರತದಲ್ಲಿ ಆಸ್ತಿಮರುಹಂಚಿಕೆಯ ಬಗ್ಗೆ ಮಾತನಾಡುತ್ತಾ ವಿದೇಶದಲ್ಲಿರುವ ಉತ್ತರಾಧಿಕಾರ ತೆರಿಗೆ ಮತ್ತು ಆಸ್ತಿ ಹಂಚಿಕೆ ಬಗ್ಗೆ ಮಾತನಾಡಿದ್ದು, ಈಗ ತೀವ್ರ ವಿವಾದ ಮತ್ತು ಚರ್ಚೆ ಹುಟ್ಟು ಹಾಕಿದೆ. ಭಾರತದಲ್ಲಿ 80ರ ದಶಕದಲ್ಲಿ ಈ ನಿಯಮ ಜಾರಿಯಲ್ಲಿತ್ತು. ಆದ್ರೆ ಈಗ ಈ ನಿಯಮವಿಲ್ಲ ಈ ಬಗ್ಗೆ ವಿವರಣೆ ಇಲ್ಲಿದೆ.
ಮೃತ ವ್ಯಕ್ತಿಯಿಂದ ಪಿತ್ರಾರ್ಜಿತವಾಗಿ ಪಡೆದ ಆಸ್ತಿಗಳ ಮೇಲೆ ಪಿತ್ರಾರ್ಜಿತ ತೆರಿಗೆಯನ್ನು ವಿಧಿಸಲಾಗುತ್ತದೆ ಇದನ್ನು ಫಲಾನುಭವಿಗಳು ಪಾವತಿಸಲಾಗುತ್ತದೆ. ಪಿತ್ರಾರ್ಜಿತ ತೆರಿಗೆಯು ವಿಭಿನ್ನ ಸ್ವತ್ತುಗಳಿಗೆ ತಕ್ಕಂತೆ ಬದಲಾಗುತ್ತದೆ ಮತ್ತು ಉತ್ತರಾಧಿಕಾರದ ಪ್ರಮಾಣದಿಂದ ನಿರ್ಧರಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಮರಣಹೊಂದಿದರೆ ಅವರ ಚರ/ಸ್ಥಿರ ಆಸ್ತಿಗಳು (ಆಸ್ತಿ, ಹೂಡಿಕೆಗಳು, ಆಭರಣಗಳು, ಇತ್ಯಾದಿ) ಅವರ ಮಕ್ಕಳು, ಮೊಮ್ಮಕ್ಕಳು ಅಥವಾ ಯಾವುದೇ ಇತರ ಫಲಾನುಭವಿಯಿಂದ ಆನುವಂಶಿಕವಾಗಿ ಪಡೆದಿದ್ದಾರೆ. ಅದನ್ನು ಘೋಷಿಸಿ ಉತ್ತರಾಧಿಕಾರವನ್ನು ಪಡೆಯುವವರು ಸರ್ಕಾರಕ್ಕೆ ಪಿತ್ರಾರ್ಜಿತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಭಾರತದಲ್ಲಿ 1953ರಿಂದ 1985ರವರೆಗೂ ಪಿತ್ರಾರ್ಜಿತ ತೆರಿಗೆ ನಿಯಮ ಜಾರಿಯಲ್ಲಿತ್ತು. ಆದರೆ ವಿಪಿ ಸಿಂಗ್ ಹಣಕಾಸು ಸಚಿವರಾಗಿದ್ದ ಸಮಯದಲ್ಲಿ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಪಿತ್ರಾರ್ಜಿತ ಆಸ್ತಿ ತೆರಿಗೆ ಪದ್ಧತಿಯನ್ನು ರದ್ದು ಮಾಡಿದ್ದರು. ಈ ವ್ಯವಸ್ಥೆಯು ಶ್ರೀಮಂತರು ಮತ್ತು ಬಡವರ ನಡುವೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ತರುವುದಿಲ್ಲ ಎಂದು ವಿಪಿ ಸಿಂಗ್ ಬಲವಾಗಿ ನಂಬಿದ್ದರು.
ಜಪಾನ್ 55%, ದಕ್ಷಿಣ ಕೊರಿಯಾ 50%, ಫ್ರಾನ್ಸ್ 45%, ಯುನೈಟೆಡ್ ಕಿಂಗ್‌ಡಮ್ 40%, ಯುನೈಟೆಡ್ ಸ್ಟೇಟ್ಸ್ 40%, ಸ್ಪೇನ್ 34%, ಐರ್ಲೆಂಡ್ 33%, ಬೆಲ್ಜಿಯಂ 30%, ಜರ್ಮನಿ 30%, ಚಿಲಿ 25%, ಗ್ರೀಸ್ 20%, ನೆದರ್ಲ್ಯಾಂಡ್ಸ್ 20%, ಫಿನ್ಲ್ಯಾಂಡ್ 19%, ಡೆನ್ಮಾರ್ಕ್ 15%, ಐಸ್ಲ್ಯಾಂಡ್ 10%, ಟರ್ಕಿ 10%, ಪೋಲೆಂಡ್ 7%, ಸ್ವಿಟ್ಜರ್ಲೆಂಡ್ 7%, ಇಟಲಿ 4% ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಮೆರಿಕದ ಕೇವಲ 6 ರಾಜ್ಯಗಳಲ್ಲಿ ಮಾತ್ರ ಈ ಪದ್ದತಿ ಜಾರಿಯಲ್ಲಿದೆ.
ಉತ್ತರಾಧಿಕಾರಿ ಆಸ್ತಿ ತೆರಿಗೆ ರೂಮನ್ ಸಾಮ್ರಾಜ್ಯಕ್ಕಿಂತಲೂ ಹಿಂದೆ ಜಾರಿಯಲ್ಲಿತ್ತು. ಹಿರಿಯ ಸೈನಿಕರಿಗೆ ಪಿಂಚಣಿಯನ್ನು ನೀಡುವ ಸಲುವಾಗಿ ಪಿತ್ರಾರ್ಜಿತ ಆಸ್ತಿ ತೆರಿಗೆ (ಉತ್ತರಾಧಿಕಾರ ತೆರಿಗೆ) ಆರಂಭ ಮಾಡಲಾಯಿತು ಎನ್ನಲಾಗುತ್ತದೆ. 21ನೇ ಶತಮಾನದ ಆರಂಭದಲ್ಲಿ ಗ್ರೇಟ್ ಬ್ರಿಟನ್ , ನೆದರ್‌ಲ್ಯಾಂಡ್, ಸ್ಪೇನ್, ಪೋರ್ಚುಗಲ್ ಸೇರಿದಂತೆ ಯೂರೋಪ್ ದೇಶಗಳಲ್ಲಿ ಈ ಕಾಯ್ದೆ ಬಗ್ಗೆ ಸುಧಾರಣೆ ತರಲು ಒತ್ತಾಯ ಕೇಳಿಬಂತು. 2001ರಲ್ಲಿ ಇಟಲಿ ಕೂಡ ಈ ಪದ್ಧತಿಯನ್ನು ರದ್ಧು ಮಾಡಿತು
ಭಾರತ ಸಹಿತ ಚೀನಾ, ರಷ್ಯಾ, ಆಸ್ಟ್ರೇಲಿಯಾ, ಇಸ್ರೇಲ್ ಮತ್ತು ನ್ಯೂಜಿಲೆಂಡ್, ಹಾಗೂ ಇತರ ಕೆಲವು ದೇಶಗಳಲ್ಲಿ ತಮ್ಮ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಪಿತ್ರಾರ್ಜಿತ ತೆರಿಗೆಗಳನ್ನು ತೆಗೆದು ಹಾಕಿದ ದೇಶಗಳಾಗಿವೆ. ಭಾರತದಲ್ಲಿ, 1985 ರ ನಂತರ ಪಿತ್ರಾರ್ಜಿತ ತೆರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲಾಯಿತು. ಆದರೆ ಅಂತಹ ಆಸ್ತಿಗಳನ್ನು ಆನುವಂಶಿಕವಾಗಿ ಪಡೆಯುವ ಯಾವುದೇ ಆದಾಯದ ಮೂಲಕ್ಕೆ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ತೆರಿಗೆ ಕಟ್ಟಬೇಕು ಎಂಬುದು ಗಮನಾರ್ಹ ವಿಚಾರ.
ಉದಾಹರಣೆಗೆ, ನಿಮ್ಮ ಪೋಷಕರ ಮ್ಯೂಚುವಲ್ ಫಂಡ್ ಹೂಡಿಕೆಗಳು ಅವರ ನಿಧನದ ನಂತರ ಆನುವಂಶಿಕವಾಗಿ ಪಡೆಯುತ್ತೀರಿ. ಹೂಡಿಕೆಯ ಮೇಲೆ ನೀವು ಪಿತ್ರಾರ್ಜಿತ ತೆರಿಗೆಯನ್ನು ಪಾವತಿಸಬೇಕಾಗಿಲ್ಲವಾದರೂ, ಆದಾಯ ತೆರಿಗೆ ನಿಯಮಗಳ ಪ್ರಕಾರ ಆ ಮ್ಯೂಚುಯಲ್ ಫಂಡ್‌ಗಳಿಂದ ಉತ್ಪತ್ತಿಯಾಗುವ ಆದಾಯ/ಲಾಭದ ಮೇಲೆ ನೀವು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಪಿತ್ರಾರ್ಜಿತ ಆಸ್ತಿಯು ಫಲಾನುಭವಿಗೆ ಆದಾಯದ ಮೂಲವಾಗಬಹುದು. ಪಿತ್ರಾರ್ಜಿತ ಆಸ್ತಿಯಿಂದ ಬರುವ ಯಾವುದೇ ಆದಾಯವನ್ನು ಫಲಾನುಭವಿಯ ವಾರ್ಷಿಕ ಆದಾಯಕ್ಕೆ ಸೇರಿಸಿ ಅವರಿಗೆ ಬರುವ ಒಟ್ಟು ಆದಾಯ ತೆರಿಗೆ ಸ್ಲ್ಯಾಬ್‌ನ ಪ್ರಕಾರ ತೆರಿಗೆ ಕಟ್ಟಬೇಕಾಗುತ್ತದೆ.
ಪಿತ್ರಾರ್ಜಿತ ತೆರಿಗೆಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದರೆ ಜೀವಿತಾವಧಿಯಲ್ಲಿ ಇತರರಿಗೆ ಉಡುಗೊರೆಗಳನ್ನು ನೀಡುವುದು. ಎಸ್ಟೇಟ್ ಮತ್ತು ಪಿತ್ರಾರ್ಜಿತ ತೆರಿಗೆಗಳನ್ನು ಕಡಿಮೆ ಮಾಡಲು ಒಂದು ತಂತ್ರವಾಗಿದೆ. ನೀವು ಜೀವಂತವಾಗಿರುವಾಗ ನಿಮ್ಮ ಆಸ್ತಿ ಮತ್ತು ಆಸ್ತಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಉಡುಗೊರೆಯಾಗಿ ನೀಡಿದರೆ ಒಟ್ಟು ಆಸ್ತಿಗಳ ಪ್ರಮಾಣವು ಕಡಿಮೆಯಾಗುತ್ತದೆ, ಪಿತ್ರಾರ್ಜಿತ ತೆರಿಗೆಯನ್ನು ಕಡಿಮೆ ಮಾಡುತ್ತದೆ.