Asianet Suvarna News Asianet Suvarna News

ಸ್ಥಳೀಯರಿಗಿಲ್ಲ ನೌಕರಿ; ಕ್ರಮ ಕೈಗೊಳ್ಳುವ ಅಧಿಕಾರ ಕನ್ನಡ ಪ್ರಾಧಿಕಾರಕ್ಕಿಲ್ಲ!

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂಬ ಕಾಗದದ ಹುಲಿ!  ಕಂಪನಿಗಳು ಸ್ಥಳೀಯರಿಗೆ ನೌಕರಿ ನೀಡಿದ್ದರೂ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕಿಲ್ಲ  |  ಸರ್ಕಾರವೂ ಕ್ರಮ ಕೈಗೊಳ್ಳಲು ಅವಕಾಶವಿಲ್ಲ

Kannada Development Authority has no power to take strict action against private companies
Author
Bengaluru, First Published Aug 19, 2019, 1:24 PM IST

ಬೆಂಗಳೂರು (ಆ. 19): ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿರುವ ಪರಿಣಾಮ ರಾಜ್ಯದಲ್ಲಿ ಬಹುತೇಕ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನಿರಾಕರಿಸುತ್ತಿದ್ದರೂ, ಸೂಕ್ತ ಕಾಯಿದೆ, ಕಾನೂನಿನ ಬಲವಿಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೂಕ ಪ್ರೇಕ್ಷಕನ ಪಾತ್ರ ವಹಿಸುವಂತಾಗಿದೆ.

ಅತಿ ಕಡಿಮೆ ಬೆಲೆಗೆ ರಾಜ್ಯದಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು, ರಿಯಾಯಿತಿ ದರದಲ್ಲಿ ವಿದ್ಯುತ್‌, ನೀರು ಹಾಗೂ ಮೂಲಸೌಕರ್ಯ ಪಡೆಯುತ್ತಿರುವ ಬಹುತೇಕ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಕಂಪನಿಗಳ ಸ್ಥಾಪನೆಗೆ ಭೂಮಿ ನೀಡಿರುವ ರೈತರು, ಕುಟುಂಬದ ಸದಸ್ಯರಿಗೂ ಉದ್ಯೋಗ ನೀಡುತ್ತಿಲ್ಲ. ಈ ಮೂಲಕ ಸರೋಜಿನಿ ಮಹಿಷಿ ವರದಿಯ ಮೂಲ ಆಶಯಕ್ಕೆ ವಿರುದ್ಧವಾಗಿ ಕಂಪನಿಗಳು ನಡೆದುಕೊಳ್ಳುತ್ತಿವೆ.

ಕನ್ನಡಿಗರಿಗೆ ಸಿಗಬೇಕಿದ್ದ ಲಕ್ಷಾಂತರ ಉದ್ಯೋಗ ಹೊರಗಿನವರ ಪಾಲು

ಆದರೆ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ ಯಾವುದೇ ಕಾನೂನು ಮಾಡದ ಪರಿಣಾಮ, ಸರೋಜಿನಿ ಮಹಿಷಿ ವರದಿ ಅನ್ವಯ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸಲುವಾಗಿಯೇ ಸ್ಥಾಪನೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಗದದ ಹುಲಿಯಂತಾಗಿದೆ.

ಶಾಸನಬದ್ಧ ಸಂಸ್ಥೆಯಾಗಿ ಎರಡು ಸದನಗಳ ಒಪ್ಪಿಗೆ ಪಡೆದು ಕಾಯ್ದೆಯಡಿ ರಚನೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಅಧ್ಯಕ್ಷರು ಯಾವುದೇ ಖಾಸಗಿ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿರುವ ಬಗ್ಗೆ ಪರಿಶೀಲಿಸಲೂ ನಿಯಮಗಳಲ್ಲಿ ಅವಕಾಶವಿಲ್ಲ.

ರಾಜ್ಯದಲ್ಲಿ ಖಾಸಗಿ ಕಂಪನಿಗಳು, ಕೇಂದ್ರ ಸರ್ಕಾರದ ಸಂಸ್ಥೆಗಳು, ರಾಜ್ಯ ಸರ್ಕಾರದ ಸಂಸ್ಥೆಗಳು ಹಾಗೂ ಸರ್ಕಾರದ ಆಡಳಿತದಲ್ಲಿ ಕನ್ನಡ ಬಳಕೆ ಪರಿಶೀಲನೆ ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುತ್ತಿರುವ ಬಗ್ಗೆ ಪರಿಶೀಲಿಸಿ ಉದ್ಯೋಗ ನೀಡದ ಕಂಪನಿಗಳ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ.

ಕನ್ನಡಿಗರಿಗೆ ಕೆಲಸ ಕೊಡದಿರಲು ಕಂಪನಿಗಳ ತಂತ್ರ!

ಆದರೆ, ಖಾಸಗಿ ಕಂಪನಿಗಳ ಬಳಿ ನೀವು ಕನ್ನಡಿಗರಿಗೆ ಎಷ್ಟುಉದ್ಯೋಗ ನೀಡಿದ್ದೀರಿ ಎಂಬ ಮಾಹಿತಿ ಕೇಳಿದರೂ ಉತ್ತರ ಬಾರದೇ ಇದ್ದಾಗ ಅಭಿವೃದ್ಧಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಸಂಬಂಧಪಟ್ಟಕಂಪನಿ ವಿರುದ್ಧ ಮುಖ್ಯಮಂತ್ರಿ, ವಿಧಾನಸಭೆ ಸಭಾಧ್ಯಕ್ಷರಿಗೆ ದೂರು ನೀಡಿ ಸವಲತ್ತು ಹಿಂಪಡೆಯಲು ಮನವಿ ಮಾಡಲು ಅವಕಾಶವಿದ್ದರೂ, ಸ್ಥಳೀಯರಿಗೆ ಉದ್ಯೋಗ ನಿರಾಕರಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯದಲ್ಲಿ ಯಾವುದೇ ಕಾನೂನು ಇಲ್ಲ. ಹೀಗಾಗಿ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರಗಳು ಇದ್ದೂ ಇಲ್ಲದಂತಾಗಿವೆ ಎಂದು ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಹಿತಿಯನ್ನೇ ನೀಡದ ಜಿಂದಾಲ್‌ ಕಂಪನಿ!

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವ ಖಾಸಗಿ ಕಂಪನಿಗಳೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಇತ್ತೀಚೆಗೆ ತೀವ್ರ ವಿವಾದಕ್ಕೆ ಗುರಿಯಾಗಿರುವ ಜಿಂದಾಲ್‌ ಕಂಪನಿ ತನ್ನ ಕಂಪನಿಯಲ್ಲಿ ಕನ್ನಡಿಗರಿಗೆ ಎಷ್ಟುಉದ್ಯೋಗ ನೀಡಿದ್ದೇವೆ ಎಂಬ ಮಾಹಿತಿ ನೀಡುತ್ತಿಲ್ಲ. ಜಿಂದಾಲ್‌ ಕಂಪನಿಯು ಅತಿ ಕಡಿಮೆ ದರದಲ್ಲಿ ಬರೋಬ್ಬರಿ 3,667 ಎಕರೆ ಭೂಮಿಯನ್ನು ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಪಡೆದಿದೆ.

ಪ್ರತಿ ಎಕರೆಗೆ ಕೇವಲ 1.25 ಲಕ್ಷ ರು.ನಂತೆ ಜಮೀನು ನೀಡಲು ರಾಜ್ಯ ಸರ್ಕಾರ ನೀಡಿದ ಪ್ರಮುಖ ಕಾರಣ ಉದ್ಯೋಗ ಸೃಷ್ಟಿ. ಜಿಂದಾಲ್‌ ಕಂಪನಿಯು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 30 ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಹೀಗಾಗಿ ರಿಯಾಯಿತಿ ದರದಲ್ಲಿ ಭೂಮಿ ನೀಡುತ್ತಿದ್ದೇವೆ ಎಂದು ಹೇಳಿತ್ತು.

ಆದರೆ, ಜಿಂದಾಲ್‌ ಕಂಪನಿ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಎಷ್ಟುಮಂದಿಗೆ ಉದ್ಯೋಗ ಕಲ್ಪಿಸಿದ್ದೀರಿ ಎಂಬ ಮಾಹಿತಿ ನೀಡಿ ಎಂದು ಸತತ ಮೂರು ಬಾರಿ ಪತ್ರ ಬರೆದು ಕೇಳಿದ್ದರೂ ಜಿಂದಾಲ್‌ ಕಂಪನಿ ಮಾಹಿತಿ ನೀಡಿಲ್ಲ. ಉದ್ದೇಶಪೂರ್ವಕವಾಗಿ ಮಾಹಿತಿ ಮರೆಮಾಚಲು ಕಂಪನಿ ಯತ್ನಿಸುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಆರೋಪಿಸುತ್ತಾರೆ.

ಕಂಪನಿಗಳನ್ನು ಪರಿಶೀಲಿಸುವ ಹಕ್ಕೂ ಇಲ್ಲ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಪ್ರಕಾರ, ರಾಜ್ಯದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡ ಬಳಕೆ ಹಾಗೂ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಲಾಗಿದೆ ಎಂದು ಪರಿಶೀಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮದಲ್ಲಿ ಅವಕಾಶವಿದೆ.

ಆದರೆ, ಖಾಸಗಿ ಕಂಪನಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪರಿಶೀಲನೆಗೆ ಅವಕಾಶ ನೀಡುತ್ತಿಲ್ಲ. ಏಕೆಂದರೆ, ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎಂಬ ಬಗ್ಗೆ ರಾಜ್ಯದಲ್ಲಿ ಯಾವುದೇ ಕಾಯಿದೆ, ಕಾನೂನು ಬಲವೂ ಇಲ್ಲ. ಹೀಗಾಗಿ ಖಾಸಗಿ ಕಂಪನಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುಮತಿ ನೀಡಬೇಕು ಎಂಬ ನಿಯಮವೂ ಇಲ್ಲ.

ಹಲವು ರಾಜ್ಯಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕೂಗು

ಹೆಚ್ಚೆಂದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರೋಜಿನಿ ಮಹಿಷಿ ವರದಿ ಪ್ರಕಾರ ಕಂಪನಿಯು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಹೀಗಾಗಿ ಸರ್ಕಾರದಿಂದ ನೀಡುತ್ತಿರುವ ಸೌಲಭ್ಯ ವಾಪಸು ಪಡೆಯಿರಿ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬಹುದು. ಆದರೆ ರಾಜ್ಯ ಸರ್ಕಾರವು ಈವರೆಗೆ ಅಂತಹ ಯಾವುದೇ ಕಠಿಣ ನಿರ್ಧಾರ ತೆಗೆದುಕೊಂಡಿಲ್ಲ. ಎಚ್ಚರಿಕೆ ಹಾಗೂ ಛೀಮಾರಿ ಹಾಕಿ ಕಳುಹಿಸಿದೆ ಅಷ್ಟೆ. ಹೀಗಾಗಿ ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಿ ಸೂಕ್ತ ಕಾನೂನು ರೂಪಿಸುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಚಂದ್ರು ಹೇಳುತ್ತಾರೆ.

ಕನ್ನಡ ಪ್ರಾಧಿಕಾರದ ಅಧಿಕಾರವೇನು?

ರಾಜ್ಯದಲ್ಲಿ 1963ರಲ್ಲಿ ಕರ್ನಾಟಕ ರಾಜಭಾಷಾ ಅಧಿನಿಯಮ ಎಂಬ ಕಾಯಿದೆ ಜಾರಿಗೊಳಿಸಿ ಕನ್ನಡವನ್ನು ಕರ್ನಾಟಕ ರಾಜ್ಯದ ಅಧಿಕೃತ ಆಡಳಿತ ಭಾಷೆ ಎಂದು ಘೋಷಿಸಲಾಯಿತು. 1983ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿ ರಚನೆಯಾಯಿತು. 1986ರಲ್ಲಿ ಸರೋಜಿನಿ ಮಹಿಷಿ ಅವರು ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂಬುದು ಸೇರಿದಂತೆ 58 ಶಿಫಾರಸುಗಳುಳ್ಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು.

ಇವುಗಳಲ್ಲಿ 45 ಶಿಫಾರಸುಗಳನ್ನು ಒಪ್ಪಿದ ಸರ್ಕಾರವು ಸರೋಜಿನಿ ಮಹಿಷಿ ವರದಿ ಅನ್ವಯ ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಆದ್ಯತೆ ಹಾಗೂ ಕನ್ನಡ ಅನುಷ್ಠಾನ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು 1992ರಲ್ಲಿ ಜಿ.ನಾರಾಯಣ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿತು.

ಬಳಿಕ ಡಾ.ಎಚ್‌. ನರಸಿಂಹಯ್ಯ ಅವರ ಅವಧಿಯ 1994ರಲ್ಲಿ ನವೆಂಬರ್‌ 1ರಿಂದ ಪ್ರಾಧಿಕಾರದ ಅಧಿನಿಯಮ ರೂಪಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು 1994ರಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಎರಡು ಸದನಗಳ ಒಪ್ಪಿಗೆ ಪಡೆದು ಕಾಯ್ದೆ ರೂಪಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬಹುಮುಖ್ಯವಾದ ಉದ್ದೇಶವೆಂದರೆ ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡ ಅನುಷ್ಠಾನ ಹಾಗೂ ಕನ್ನಡಿಗರಿಗೆ ಉದ್ಯೋಗ ನೀಡುವ ಹಿನ್ನೆಲೆಯಲ್ಲಿ ಸರೋಜಿನಿ ಮಹಿಷಿ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.

ಆದರೆ, ಸರೋಜಿನಿ ಮಹಿಷಿ ವರದಿಗೆ ಸೂಕ್ತ ಕಾನೂನು, ಕಾಯಿದೆ ಬಲ ಇಲ್ಲದಿರುವುದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಕೇವಲ ಶಿಫಾರಸುಗಳಿಗೆ ಸೀಮಿತವಾಗಿದೆ ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಕನ್ನಡ ಪರ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಒಪ್ಪಿದೆಯೇ ಹೊರತು ಯಾವುದೇ ಕಾನೂನು, ಕಾಯಿದೆಯ ಬಲ ನೀಡಿಲ್ಲ. ಹೀಗಾಗಿ ಯಾವುದೇ ಖಾಸಗಿ ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ನಿಯಮವಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸುತ್ತಿದ್ದರೂ ಕಂಪನಿಯ ಅನುಮತಿ ಇಲ್ಲದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರಿಶೀಲನೆ ನಡೆಸುವಂತಿಲ್ಲ. ಒಂದು ವೇಳೆ ಕಂಪನಿಯವರು ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೂ ಸೂಕ್ತ ಕಾನೂನಿನಲ್ಲದ ಕಾರಣ ಕಂಪನಿಗೆ ನೀಡಿರುವ ರಿಯಾಯಿತಿ, ಸೌಲಭ್ಯ ವಾಪಸು ಪಡೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಆದರೆ, ಕಾನೂನು ಇಲ್ಲದ ಕಾರಣ ಸರ್ಕಾರವೂ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡ ಉದಾಹರಣೆ ಇಲ್ಲ.

- ಮುಖ್ಯಮಂತ್ರಿ ಚಂದ್ರು, ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಿ ಸೂಕ್ತ ಕಾನೂನು ರೂಪಿಸಬೇಕು. ಸರೋಜಿನಿ ಮಹಿಷಿ ವರದಿಗೆ ಕಾನೂನು ಬಲ ಇಲ್ಲದಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇವಲ ಖಾಸಗಿ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡಿದೆಯೇ, ಇಲ್ಲವೇ ಎಂದು ಪರಿಶೀಲಿಸಿಕೊಂಡು ವಾಪಸು ಬರಬೇಕಾಗುತ್ತದೆ. ಸರ್ಕಾರವೂ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ.

- ಡಾ ಸಿದ್ದಲಿಂಗಯ್ಯ, ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಜಿಂದಾಲ್‌ ಕಂಪನಿಯು ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ ಎಂಬ ಆರೋಪದ ಮೇಲೆ ಅಂಕಿ-ಅಂಶ ನೀಡುವಂತೆ ಮೂರು ಬಾರಿ ಕೇಳಿದರೂ ಮಾಹಿತಿ ನೀಡಿಲ್ಲ. ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ. ಸರ್ಕಾರಕ್ಕೂ ಸೂಕ್ತ ಕಾನೂನು ಬಲವಿಲ್ಲದ ಕಾರಣ ಸುಮ್ಮನಿರಬೇಕಾಗಿದೆ. ಹೀಗಾಗಿ ಸರೋಜಿನಿ ಮಹಿಷಿ ವರದಿ ಅನುಷ್ಠಾನ ಆಗಬೇಕು.

- ಪ್ರೊ ಎಸ್‌.ಜಿ. ಸಿದ್ದರಾಮಯ್ಯ, ಮಾಜಿ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಸರೋಜಿನಿ ಮಹಿಷಿ ವರದಿ ಜಾರಿಯಾಗದ ಹೊರತು ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಸಾಧ್ಯವಿಲ್ಲ. ಏಕೆಂದರೆ, ಪ್ರಾಧಿಕಾರಕ್ಕೆ ಬದ್ಧತೆಯಿದ್ದರೂ ಕಾನೂನಿನ ಬಲ ಇರುವುದಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡದ ಕಂಪನಿ ವಿರುದ್ಧ ಯಾವ ಕ್ರಮಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ.

- ಟಿ.ಎ. ನಾರಾಯಣಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

 

- ಶ್ರೀಕಾಂತ್ ಎನ್ ಗೌಡಸಂದ್ರ  

Follow Us:
Download App:
  • android
  • ios