ಬೆಂಗಳೂರು (ಆ. 16):  ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಈವರೆಗೂ ‘ಉದ್ಯೋಗದಲ್ಲಿ ಸ್ಥಳೀಯ ಮೀಸಲಾತಿ ಕಾನೂನು’ ಜಾರಿಗೆ ಇಚ್ಛಾಶಕ್ತಿ ತೋರದ ಪರಿಣಾಮ ಇಂದು ಕನ್ನಡಿಗರಿಗೆ ಸಿಗಬೇಕಿದ್ದ ಲಕ್ಷಾಂತರ ಉದ್ಯೋಗಗಳು ಹೊರರಾಜ್ಯದವರ ಪಾಲಾಗಿವೆ. ಇದರಿಂದ ರಾಜ್ಯದ ಲಕ್ಷಾಂತರ ವಿದ್ಯಾವಂತ ಯುವ ಸಮೂಹ ತಮ್ಮ ಪಾಲಿನ ಉದ್ಯೋಗದಿಂದ ವಂಚಿತವಾಗಿ ಕೆಲಸಕ್ಕಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಿಗರಿಗೆ ಕೆಲಸ ಕೊಡದಿರಲು ಕಂಪನಿಗಳ ತಂತ್ರ!

2001ರ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ 4.49 ಕೋಟಿ. ಆ ವೇಳೆಗೆ ರಾಜ್ಯದಲ್ಲಿದ್ದ ಹೊರ ರಾಜ್ಯದವರ ಸಂಖ್ಯೆ 8.79 ಲಕ್ಷ. ನಂತರದ ಹತ್ತು ವರ್ಷಗಳಲ್ಲಿ ಸಾಕಷ್ಟುಬದಲಾವಣೆಯಾಗಿದೆ. 2011ರ ಜನಗಣತಿಯ ಅಂಕಿ- ಅಂಶಗಳನ್ನು ಗಮನಿಸಿದರೆ ಹೊರ ರಾಜ್ಯದವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ.

ಕರ್ನಾಟಕದ ಜನಸಂಖ್ಯೆ 6.11 ಕೋಟಿಯಷ್ಟಾದರೆ, ಹೊರ ರಾಜ್ಯದವರ ಸಂಖ್ಯೆ ಬರೋಬ್ಬರಿ 32 ಲಕ್ಷ ಮೀರಿದೆ. ಈ ಪೈಕಿ ಉದ್ಯೋಗ ಹಾಗೂ ವ್ಯವಹಾರಕ್ಕಾಗಿ 9 ಲಕ್ಷಕ್ಕೂ ಹೆಚ್ಚು ಜನ, ಕುಟುಂಬಸಮೇತ 6.5 ಲಕ್ಷ ಜನ, ಮದುವೆ ಕಾರಣದಿಂದ 8.71 ಲಕ್ಷ ಜನ, ಶಿಕ್ಷಣಕ್ಕಾಗಿ 1 ಲಕ್ಷ ಜನ, ಇತರೆ ಕಾರಣಗಳಿಂದ 5.4 ಲಕ್ಷ ಜನ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. 2011ರ ನಂತರ 2019ರವರೆಗಿನ ಈ ಎಂಟು ವರ್ಷಗಳಲ್ಲಿ ವಲಸಿಗರ ಸಂಖ್ಯೆ ಇನ್ನೂ ನಾಲ್ಕಾರು ಪಟ್ಟು ಹೆಚ್ಚಾಗಿದ್ದರೂ ಆಶ್ಚರ್ಯವೇನಿಲ್ಲ.

2011ರ ಜನಗಣತಿ ವರದಿ ಪ್ರಕಾರ, ಬೆಂಗಳೂರು ನಗರದಲ್ಲೇ ಸುಮಾರು 25 ಲಕ್ಷ ಜನ ಹೊರ ರಾಜ್ಯದವರಿದ್ದಾರೆ. ಆ ಮೂಲಕ 2001ರಲ್ಲಿ 20 ಲಕ್ಷ (ಶೇ.31)ರಷ್ಟಿದ್ದ ವಲಸಿಗರ ಸಂಖ್ಯೆ 2011ರಲ್ಲಿ ಶೇ.50.16ರಷ್ಟಕ್ಕೆ ಏರಿಕೆಯಾಗಿದೆ.

ಕನ್ನಡಿಗರಿಗೆ ಕೆಲಸ ಕೊಡದಿರಲು ಕಂಪನಿಗಳ ತಂತ್ರ!

ಇನ್ನು ಪ್ರಸ್ತುತ 2019ರ ವೇಳೆಗೆ ಬೆಂಗಳೂರು ನಗರದ ಜನಸಂಖ್ಯೆ 1.3 ಕೋಟಿಗೂ ಹೆಚ್ಚಾಗಿರುವ ಅಂದಾಜಿದ್ದು, ವಲಸಿಗರ ಸಂಖ್ಯೆ ಇನ್ನಷ್ಟುಏರಿಕೆ ಆಗಿರುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ, ರಾಜ್ಯವಾಳಿದ ಯಾವುದೇ ಸರ್ಕಾರಗಳೂ ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ಮೀಸಲಾತಿ ಕಾನೂನು ಜಾರಿಗೆ ತರದೇ ಇರುವುದರಿಂದ ಇಂದು ಲಕ್ಷಾಂತರ ಜನ ಕನ್ನಡಿಗರ ಉದ್ಯೋಗದ ಹಕ್ಕನ್ನು ಹೊರಗಿನವರು ಕಸಿದುಕೊಂಡಂತಾಗಿದೆ.

ಕೇಂದ್ರೀಯ ಉದ್ಯೋಗದಲ್ಲಿ ತದ್ವಿರುದ್ಧ ಸ್ಥಿತಿ:

ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಹಿಂದೆ ಶೇ.80ರಷ್ಟುಕನ್ನಡಿಗರೇ ಇರುತ್ತಿದ್ದರು. ಆದರೆ, ಈಗ ಅದು ತದ್ವಿರುದ್ಧವಾಗಿದೆ. ಶೇ.80ರಷ್ಟುಹೊರಗಿನವರು, ಉಳಿದ ಶೇ.20ರಷ್ಟುಕನ್ನಡಿಗರು ಇದ್ದಾರೆ.

ಇನ್ನು ಇತರೆ ಎಲ್ಲ ಖಾಸಗಿ ಔದ್ಯೋಗಿಕ ಕ್ಷೇತ್ರಗಳಲ್ಲಿ ಪ್ರಮುಖವಾಗಿ ಸಿ ಮತ್ತು ಡಿ ದರ್ಜೆ ಕೆಲಸಗಳಿಗೆ ಹೊರ ಗುತ್ತಿಗೆ ಪದ್ಧತಿ ಆವರಿಸಿದ್ದರಿಂದ ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಕೋಟ್ಯಂತರ ಜನ ಹೊರ ರಾಜ್ಯದವರು ತುಂಬಿಕೊಂಡಿದ್ದು, ಇದರಿಂದ ಕನ್ನಡಿಗರಿಗೆ ಸಿಗಬೇಕಿದ್ದ ಕೋಟ್ಯಂತರ ಉದ್ಯೋಗಗಳು ಹೊರಗಿನವರ ಪಾಲಾಗಿರುವುದರಲ್ಲಿ ಸಂಶಯವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಹೇಳುತ್ತಾರೆ.

ಇನ್ನು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಐಟಿ- ಬಿಟಿ ಕಂಪನಿಗಳಲ್ಲಿ ಶೇ.30ರಷ್ಟುಉದ್ಯೋಗಗಳು ಕೂಡ ಕನ್ನಡಿಗರಿಗೆ ಸಿಗುತ್ತಿಲ್ಲ. ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಸರ್ಕಾರದ ಸೂಚನೆಗಳಿಗೆ ಕಂಪನಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಕನ್ನಡಿಗರಿಗೆ ಗುಡ್ ನ್ಯೂಸ್ : ಉದ್ಯೋಗ ಮೀಸಲಿಗೆ ಸಿಎಂ ಸ್ಪಂದನೆ

2013ರ ಬಳಿಕ ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ 10ನೇ ತರಗತಿವರೆಗೂ ಕನ್ನಡ ಕಡ್ಡಾಯವಾಗಿ ಒಂದು ಭಾಷೆಯಾಗಿ ಓದಿರಬೇಕೆಂಬ ನಿಯಮ ಸಡಿಲಗೊಳಿಸಿದ್ದರಿಂದ ಹೊರ ರಾಜ್ಯದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಿಯಮ ರದ್ದು ಮಾಡಿ ಹಿಂದಿದ್ದ ಕನ್ನಡ ಕಡ್ಡಾಯ ನಿಯಮ ಜಾರಿಗೆ ಆಗ್ರಹಿಸಿದರೂ ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ. ಇದರ ವಿರುದ್ಧ ಹೋರಾಟ ತೀವ್ರಗೊಳ್ಳಬೇಕಿದೆ ಎನ್ನುತ್ತಾರೆ ಬನವಾಸಿ ಬಳಗದ ಸಂಚಾಲಕ ಅರುಣ್‌ ಜಾವಗಲ್‌.

ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿದರೆ ಕನಿಷ್ಠ ವೇತನ ಸೇರಿದಂತೆ ಕಾರ್ಮಿಕ ಕಾನೂನಿನ ಅನುಸಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ನೀಡದಿದ್ದರೆ ಕನ್ನಡಿಗರ ಸಂಘಟನಾತ್ಮಕ ಹೋರಾಟಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಉದ್ಯಮಗಳು ಬಹುತೇಕ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುತ್ತಿವೆ.

ಈ ಉದ್ಯಮಿಗಳಿಗೆ ಹೊರಗುತ್ತಿಗೆಯಲ್ಲಿ ಕಾರ್ಮಿಕರನ್ನು ತಂದು ಕೊಡುತ್ತಿರುವ ಸಂಸ್ಥೆಗಳು ಕೂಡ ಬಹುತೇಕ ಹೊರ ರಾಜ್ಯಗಳವೇ ಆಗಿವೆ. ಕಾರ್ಮಿಕರನ್ನು ಶೋಷಿಸಿ ಉದ್ಯಮಗಳು ಮತ್ತು ಹೊರಗುತ್ತಿಗೆ ಸಂಸ್ಥೆಗಳು ಲಾಭ ಮಾಡಿಕೊಳ್ಳುತ್ತಿವೆ.

ಹೀಗೆ ರಾಜ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಈವರೆಗೆ ರಾಜ್ಯವನ್ನು ಆಳಿದ ಯಾವುದೇ ಸರ್ಕಾರಗಳು, ರಾಜಕಾರಣಿಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ತರುವ ಬದ್ಧತೆ ತೋರದ ಕಾರಣ ಲಕ್ಷಾಂತರ ಕನ್ನಡಿಗರು ಶಿಕ್ಷಣ ಇದ್ದರೂ ಉದ್ಯೋಗಕ್ಕಾಗಿ ಪರಿತಪಿಸುವಂತಾಗಿದೆ.

ಉದ್ಯೋಗ-ಕೌಶಲ್ಯ ತರಬೇತಿಗೆ 14 ಲಕ್ಷ ಜನ ನೋಂದಣಿ!

ರಾಜ್ಯದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 2019ರ ಜನವರಿ ಅಂತ್ಯಕ್ಕೆ ಒಟ್ಟು 3.44 ಲಕ್ಷ ನಿರುದ್ಯೋಗಿಗಳು ನೋಂದಾಯಿಸಿಕೊಂಡಿದ್ದಾರೆ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೊರತುಪಡಿಸಿ).

ಇನ್ನು ಕೌಶಲ್ಯಾಭಿವೃದ್ಧಿ ನಿಗಮದಿಂದ 2019ರ ಜುಲೈ ಅಂತ್ಯಕ್ಕೆ 9.42 ಲಕ್ಷ ಮಂದಿ ಕೌಶಲ್ಯ ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ. ಉದ್ಯೋಗಕ್ಕಾಗಿ ತರಬೇತಿಗೆ ನೋಂದಾಯಿಸಿಕೊಂಡಿರುವವರ ಪೈಕಿ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 75 ಸಾವಿರ ಜನ, ರಾಯಚೂರಲ್ಲಿ 71,665 ಜನ, ಗಣಿ ಜಿಲ್ಲೆ ಬಳ್ಳಾರಿಯಲ್ಲಿ 54 ಸಾವಿರ ಜನ ನೋಂದಾಯಿಸಿಕೊಂಡಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಉದ್ಯೋಗ ನಿವಾರಣೆಗಾಗಿ ಕೌಶಲ್ಯ ಮಿಷನ್‌ ಆರಂಭಿಸಿರುವ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆಗೆ 2017-18 ಮತ್ತು 2018-19ರಲ್ಲಿ 275 ಕೋಟಿ ರು. ಬಿಡುಗಡೆ ಮಾಡಿದೆ. ಇದರಲ್ಲಿ 115.67 ಕೋಟಿ ರು. ಖರ್ಚು ಮಾಡಲಾಗಿದೆ.

ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿಗಮಕ್ಕೆ 41.60 ಕೋಟಿ ರು. ಅನುದಾನ ಒದಗಿಸಿದೆ. ಈ ಪೈಕಿ 33.28 ಕೋಟಿ ರು.ಅನುದಾನ ಬಿಡುಗಡೆಯೂ ಆಗಿದೆ. ಜತೆಗೆ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳೆ ನಡೆದಿದೆ. 2018-19ನೇ ಸಾಲಿನಲ್ಲಿ 180 ಉದ್ಯೋಗ ಮೇಳದಲ್ಲಿ 1,00,997 ಮಂದಿ ಅಭ್ಯರ್ಥಿಗಳು ಪಾಲ್ಗೊಂಡಿದ್ದರು ಎನ್ನುತ್ತಾರೆ ಕಾರ್ಮಿಕ ಇಲಾಖೆ ಅಧಿಕಾರಿಗಳು.

ಖಾಸಗಿ ಉದ್ಯೋಗಗಳ ಲೆಕ್ಕವೇ ಇಲ್ಲ

ಕರ್ನಾಟಕ 2017-18ನೇ ಸಾಲಿನಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸಿದ ರಾಜ್ಯಗಳಲ್ಲಿ ಒಂದೆಂದು ಹೇಳಲಾಗಿದೆಯಾದರೂ ರಾಜ್ಯದಲ್ಲಿನ ನಿರುದ್ಯೋಗ ದರ ಮತ್ತು ಉದ್ಯೋಗ ಸೃಷ್ಟಿಪ್ರಮಾಣದ ಬಗ್ಗೆ ಸರ್ಕಾರದಿಂದ ಈ ವರೆಗೆ ಒಂದೇ ಒಂದು ಸಮೀಕ್ಷೆಯೂ ನಡೆಯದಿರುವುದು ವಿಪರ್ಯಾಸವೇ ಸರಿ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಧಿಕಾರಿಗಳ ಬಳಿ ಈ ಬಗ್ಗೆ ನಿಖರವಾದ ಮಾಹಿತಿಯೇ ಇಲ್ಲ. ಉದ್ಯೋಗ ಸೃಷ್ಟಿಯ ಅಧಿಕೃತ ಮಾಹಿತಿ ವ್ಯವಸ್ಥೆ ಇಲ್ಲದಿರುವುದು ಗೊತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.

ಸರ್ಕಾರವೇ ಪ್ರಕಟಿಸಿರುವಂತೆ 2018ರ ಡಿಸೆಂಬರ್‌ ಅಂತ್ಯಕ್ಕೆ ಸರ್ಕಾರದ 32 ಇಲಾಖೆಗಳಲ್ಲಿ 2.51 ಲಕ್ಷ ಉದ್ಯೋಗಗಳು ಖಾಲಿ ಇವೆ. ಆದರೆ, ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿದರೆ ಖಾಸಗಿ ಉದ್ಯಮಗಳ ವಲಯದಲ್ಲಿ ವಿಭಾಗವಾರು ಎಷ್ಟುಹುದ್ದೆಗಳಿವೆ, ಅದರಲ್ಲಿ ಎಷ್ಟುಖಾಲಿ ಇವೆ? ಭತಿಯಾಗಿರುವ ಹುದ್ದೆಗಳಲ್ಲಿ ಕನ್ನಡಿಗರಿಗೆ ಎಷ್ಟುಆದ್ಯತೆ ದೊರೆತಿದೆ ಎಂಬ ಯಾವ ಅಂಶಗಳನ್ನೂ ಕಾರ್ಮಿಕ ಇಲಾಖೆ ಈವರೆಗೆ ಕಲೆ ಹಾಕಿಲ್ಲ ಎನ್ನುತ್ತವೆ ಇಲಾಖೆ ಮೂಲಗಳು.

ಖಾಲಿ ಇರುವ ಉದ್ಯೋಗಗಳ ವಿವರಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ಖಾಸಗಿ ಉದ್ಯಮಗಳು ನಿರಾಕರಿಸುತ್ತಿವೆಯಂತೆ. ಕೌಶಲ್ಯಾಭಿವೃದ್ಧಿ ನಿಗಮವು ಬರೆದಿರುವ ಹಲವು ನೆನಪೋಲೆಗಳನ್ನೂ ಖಾಸಗಿ ಉದ್ಯಮಗಳು ಗಂಭೀರವಾಗಿ ಪರಿಗಣಿಸಿಲ್ಲ. ಈ ಎಲ್ಲಾ ಕಾರಣಗಳಿಂದ ಖಾಸಗಿ ಉದ್ಯಮಗಳ ಯಾವ ವಿಭಾಗದಲ್ಲಿ ಎಷ್ಟುಉದ್ಯೋಗಗಳು ಖಾಲಿ ಇವೆ, ಅದರಲ್ಲಿ ಎಷ್ಟುಕನ್ನಡಿಗರಿದ್ದಾರೆ, ಎಷ್ಟುಜನ ಹೊರಗಿನವರಿದ್ದಾರೆ ಎಂಬ ಮಾಹಿತಿಯೇ ಇಲ್ಲ.

- ಲಿಂಗರಾಜು ಕೋರಾ