'ಮಧ್ಯಮ ವರ್ಗವದರು ಸ್ವಾರ್ಥಿಗಳು..' To 'ಪಿತ್ರಾರ್ಜಿತ ತೆರಿಗೆ' ಕಾಂಗ್ರೆಸ್‌ಗೆ Sam Pitroda ಸೆಲ್ಫ್ ಗೋಲ್!
ಒಂದು ಕಾಲದಲ್ಲಿ ರಾಜೀವ್ ಗಾಂಧಿ ಜೊತೆ ಪ್ರಧಾನಮಂತ್ರಿ ಕಚೇರಿಯಲ್ಲಿ ಕುಳಿತುಕೊಳ್ಳುವಷ್ಟು ಆಪ್ತರಾಗಿದ್ದ ಸ್ಯಾಮ್ ಪಿತ್ರೋಡಾ ತಮ್ಮ ಮಾತಿನಿಂದಲೇ ಸಾಕಷ್ಟು ಬಾರಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಪಿತ್ರಾರ್ಜಿತ ತೆರಿಗೆ ಮಾತು ಅವರ ಈ ಹೇಳಿಕೆಗಳ ಸಾಲುಗೆ ಹೊಸ ಸೇರ್ಪಡೆಯಷ್ಟೆ..
ನವದೆಹಲಿ (ಏ.24): ಸ್ಯಾಮ್ ಪಿತ್ರೋಡಾ ಕಾಂಗ್ರೆಸ್‌ನ ಹಿರಿಯ ನಾಯಕ. ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷ. ಅಮೆರಿಕದಲ್ಲಿರುವ ಪಿತ್ರಾರ್ಜಿತ ತೆರಿಗೆ ಕಾನೂನನ್ನು ಭಾರತಕ್ಕೂ ತರಬೇಕು ಎಂದು ಇವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲಿಯೇ ಕೇಂದ್ರ ಸರ್ಕಾರ ಈಗ ಇರುವ ಸಮಸ್ಯೆಗಳಿಂದ ವಿಚಾರವನ್ನು ಬೇರೆಡೆಗೆ ತಿರುಗಿಸಲು ತನ್ನ ಹೇಳಿಕೆಯನ್ನು ಬಳಸಿಕೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಅವರ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡರೆ, ಬಿಜಿಪಿ ನಾಯಕರು ರಾಹುಲ್ ಗಾಂಧಿಯ ಸಂಪತ್ತಿನ ಮರುಹಂಚಿಕೆ ವಿಚಾರದೊಂದಿಗೆ ಈ ಹೇಳಿಕೆಯನ್ನೂ ಸೇರಿಸಿಕೊಂಡು ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲಿಯೇ ಪಿತ್ರೋಡಾ ಸ್ಪಷ್ಟೀಕರಣ ನೀಡಿದ್ದಾರೆ. ಪಿತ್ರೋಡಾ ಅವರ ಈ ಹೇಳಿಕೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಛತ್ತೀಸ್‌ಗಢ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಿತ್ರೋಡಾ ಮಾತನ್ನು ಪುನರುಚ್ಚರಿಸಿದ್ದಾರೆ. ದೇಶದ ಗ್ರ್ಯಾಂಡ್ ಓಲ್ಡ್ ಪಾರ್ಟಿ ಆತಂಕಕಾರಿ ಉದ್ದೇಶಗಳನ್ನು ಹೊಂದಿದ್ದು, ಅವರ ಪ್ರಣಾಳಿಕೆಯಲ್ಲೂ ಇದು ಸಾಬೀತಾಗಿದೆ ಎಂದಿದ್ದಾರೆ.
ಹಾಗಂತ ಸ್ಯಾಮ್ ಪಿತ್ರೋಡಾ ತಮ್ಮ ಹೇಳಿಕೆಯ ಮೂಲಕವೇ ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕೀಡು ಮಾಡಿದ್ದು ಇದು ಮೊದಲೇನಲ್ಲ. ಹಿಂದೆಯೂ ಸಾಕಷ್ಟು ಬಾರಿ ಅವರು ಇಂಥ ಹೇಳಿಕೆಗಳನ್ನೂ ನೀಡಿದ್ದಾರೆ.
ಸಿಖ್ ವಿರೋಧಿ ದಂಗೆ 'ಆಗಿದ್ದಾಯ್ತು ಏನ್ ಮಾಡೋದು' ಎಂದಿದ್ದ ಸ್ಯಾಮ್: 2019ರಲ್ಲಿ ಸ್ಯಾಮ್ ಪಿತ್ರೋಡಾಗೆ 1984ರ ಸಿಖ್ ವಿರೋಧಿ ದಂಗೆಯ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಇದರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರ ಪಾತ್ರವಿತ್ತೇ ಎನ್ನುವ ಪ್ರಶ್ನೆಗೆ, 'ಇದ್ದರೆ ಏನು?' ಎಂದು ಸ್ವತಃ ಪತ್ರಕರ್ತರಿಗೆ ಪ್ರಶ್ನೆ ಮಾಡಿದ್ದರು. '1984ರ ಬಗ್ಗೆ ಏಕೀಗ. ಕಳೆದ ಐದು ವರ್ಷದಲ್ಲಿ ಏನ್ ಮಾಡಿದ್ರು ಅದನ್ನು ಹೇಳಿ. 1984ರಲ್ಲಿ ಆಗಿದ್ದು ಆಗೋಯ್ತು. ಅದಕ್ಕೇನಿಗ? ಉದ್ಯೋಗ ಸೃಷ್ಟಿ ಮಾಡಿ ಅನ್ನೋ ಕಾರಣಕ್ಕೆ ನಿಮಗೆ ಮತ ಹಾಕಲಾಗಿದೆ. 200 ಸ್ಮಾರ್ಟ್ ಸಿಟಿ ಮಾಡ್ತೀರಿ ಅನ್ನೋ ಕಾರಣಕ್ಕೆ ಮತ ಹಾಕಿದ್ದಾರೆ. ಇದ್ಯಾವುದನ್ನೂ ನೀವು ಮಾಡಿಲ್ಲ. ಬರೀ ಕೆಲಸವಿಲ್ಲದ ಮಾತುಗಳನ್ನು ಆಡುತ್ತಿದ್ದೀರಿ' ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದರು.
ಪುಲ್ವಾಮಾ ದಾಳಿ ಬಗ್ಗೆ ಕೇಳಿದಾಗ, 'ಎಲ್ಲಾ ಟೈಮ್‌ನಲ್ಲೂ ಆಗುತ್ತೆ' ಎಂದಿದ್ದರು: 2019ರಲ್ಲಿ ಪುಲ್ವಾಮಾ ದಾಳಿ ಬಳಿಕ ವಾಯುಪಡೆಯು ಬಾಲಾಕೋಟ್‌ನಲ್ಲಿ ದಾಳಿ ನಡೆಸಿದ್ದ ಸತ್ಯಾಸತ್ಯತೆಯನ್ನು ಪಿತ್ರೋಎಆ ಪ್ರಶ್ನೆ ಮಾಡಿದ್ದರು. ಪಾಕಿಸ್ತಾನದೊಂದಿಗೆ ಭಾರತ ಮಾತುಕತೆ ನಡೆಸಬೇಕು. ಯಾರೋ ದಾಳಿ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಆ ದೇಶದ ಎಲ್ಲಾ ನಾಗರೀಕರನ್ನು ದೂಷಣೆ ಮಾಡೋದು ತಪ್ಪು ಎಂದಿದ್ದರು. “ನನಗೆ ದಾಳಿಯ ಬಗ್ಗೆ ಹೆಚ್ಚು ತಿಳಿದಿಲ್ಲ. ಇದು ಎಲ್ಲಾ ಸಮಯದಲ್ಲೂ ನಡೆಯುತ್ತದೆ. ಮುಂಬೈನಲ್ಲೂ ದಾಳಿ ನಡೆದಿದೆ. ನಾವು ನಂತರ ಪ್ರತಿಕ್ರಿಯಿಸಿ ನಮ್ಮ ವಿಮಾನಗಳನ್ನು ಕಳುಹಿಸಬಹುದಿತ್ತು, ಆದರೆ ಅದು ಸರಿಯಾದ ವಿಧಾನವಲ್ಲ. ನನ್ನ ಪ್ರಕಾರ, ಪ್ರಪಂಚದೊಂದಿಗೆ ಇದು ವ್ಯವಹಾರ ಮಾಡುವ ಸರಿಯಾದ ಮಾರ್ಗವಲ್ಲ' ಎಂದು ಪಿತ್ರೋಡಾ ಹೇಳಿದ್ದಲ್ಲದೆ, ಐಎಎಪ್ ಕಾರ್ಯಾಚರಣೆಗೆ ಸಾಕ್ಷಿ ಕೇಳಿದ್ದರು. ಮುಂಬೈ ಮೇಲೆ ದಾಳಿ ಮಾಡಿದಾಗ 8 ಮಂದಿ ಭಯೋತ್ಪಾದಕರು ಬಂದಿದ್ದರು. ಇದಕ್ಕೆ ಇಡೀ ಪಾಕಿಸ್ತಾನವನ್ನು ದೂಷಣೆ ಮಾಡೋದು ತಪ್ಪು. ಇಡೀ ದೇಶದ ನಾಗರೀಕರನ್ನು ಇದಕ್ಕೆ ದೂಷಣೆ ಮಾಡಬಾರದು. ನಾನು ಇದನ್ನು ಒಪ್ಪೋದಿಲ್ಲ ಎಂದು ಹೇಳಿದ್ದರು.
ರಾಮಮಂದಿರ ಉದ್ಯೋಗ ಸೃಷ್ಟಿ ಮಾಡೋದಿಲ್ಲ: ರಾಮಮಂದಿರ ವಿಚಾರವಾಗಿ ಮಾತನಾಡುವಾಗ ಮಂದಿರಗಳು ಉದ್ಯೋಗವನ್ನು ಸೃಷ್ಟಿ ಮಾಡೋದಿಲ್ಲ ಎಂದು ಪಿತ್ರೋಡಾ ಹೇಳಿದ್ದರು. ಹಣದುಬ್ಬರ, ನಿರುದ್ಯೋಗ ಇದರ ಬಗ್ಗೆ ಯಾರೋ ಮಾತನಾಡೋದಿಲ್ಲ. ಎಲ್ಲರೂ ರಾಮ, ಹನುಮಾನ್ ಬಗ್ಗೆ ಮಾತನಾಡ್ತಾರೆ. ನಾನು ಮೊದಲಿನಿಂದಲೂ ಹೇಳ್ತಿದ್ದೇನೆ. ಮಂದಿರಗಳು ಉದ್ಯೋಗ ಸೃಷ್ಟಿ ಮಾಡೋದಿಲ್ಲ ಎಂದು ಹೇಳಿದ್ದರು.
'ಜಿಂದಗಿ ಕೆ ಸಾಥ್ ಬೀ, ಜಿಂದಗಿ ಕೆ ಬಾದ್ ಬೀ..' ಎಲ್‌ಐಸಿ ಸ್ಲೋಗನ್ ಹೇಳಿಕೆ ಕಾಂಗ್ರೆಸ್‌ಗೆ ತಿವಿದ ಮೋದಿ!
ಅಂಬೇಡ್ಕರ್‌ಗಿಂತ ಸಂವಿಧಾನಕ್ಕೆ ನೆಹರು ಹೆಚ್ಚಿನ ಕೊಡುಗೆ ನೀಡಿದ್ದಾರೆ: ಇದೇ ವರ್ಷದ ಜನವರಿಯಲ್ಲಿ ದೇಶದ ಸಂವಿಧಾನದ ಬಗ್ಗೆ ಮಾತನಾಡುತ್ತಾ, ಬಾಬಾ ಸಾಹೇಬ್ ಅಂಬೇಡ್ಕರ್‌ಗಿಂತ ಜವಹರಲಾಲ್ ನೆಹರು ದೇಶದ ಸಂವಿಧಾನ ರಚನೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದಿದ್ದರು. ಇದರ ಬೆನ್ನಲ್ಲಿಯೇ ಬಿಜೆಪಿ, ಕಾಂಗ್ರೆಸ್‌ಅನ್ನು ದಲಿತ ವಿರೋಧಿ ಪಕ್ಷ ಎಂದು ಹೇಳಿತ್ತು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸಂವಿಧಾನ ರಚನೆಯಲ್ಲಿ ಬಿಆರ್ ಅಂಬೇಡ್ಕರ್ ಅವರಿಗಿಂತ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಪ್ರತಿಪಾದಿಸುವ ಬಿಜೆಪಿ ಹಿರಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿಯವರ ಮಾಜಿ ಆಪ್ತ ಸುಧೀಂದ್ರ ಕುಲಕರ್ಣಿ ಅವರ ಲೇಖನವನ್ನು ಪಿತ್ರೋಡಾ ಹಂಚಿಕೊಂಡಿದ್ದರು.
ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.45 ಮಕ್ಕಳಿಗೆ, ಶೇ.55 ಸರ್ಕಾರಕ್ಕೆ, ಸ್ಯಾಮ್ ಪಿತ್ರೋಡಾ ಸಂಪತ್ತಿನ ಮರು ಹಂಚಿಕೆ ವಿವಾದ
ಮಧ್ಯಮ ವರ್ಗದವರು ಸ್ವಾರ್ಥಿಗಳು ಎಂದಿದ್ದ ಪಿತ್ರೋಡಾ: ದೇಶದ ಮಧ್ಯಮ ವರ್ಗದವರು ಸ್ವಾರ್ಥಿಗಳಾಗಿ ಇರಬಾರದು. ಕಾಂಗ್ರೆಸ್ ಪಕ್ಷದ ನ್ಯಾಯ ಯೋಜನೆಗೆ ಹೆಚ್ಚಿನ ತೆರಿಗೆಯನ್ನು ದೇಶದ ಮಧ್ಯಮ ವರ್ಗದವರಿಂದ ತೆಗೆದುಕೊಂಡರೆ ತಪ್ಪೇನಿಲ್ಲ ಎಂದು ಹೇಳಿದ್ದರು. ದೇಶದ ಮಧ್ಯಮವರ್ಗದವರು ಸ್ವಾರ್ಥಿಗಳಾಗಿರಬಾರದು. ವಿಶಾಲ ಹೃದಯದವರಾಗಿರಬೇಕು. ನೀವು ಕಟ್ಟುವ ತೆರಿಗೆಯಲ್ಲಿ ಕೊಂಚ ಪ್ರಮಾಣದ ಹಣವನ್ನು ಏರಿಸಿದರೆ ತಪ್ಪೇನಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯಿಂದಲೂ ಕಾಂಗ್ರೆಸ್ ಅಂತರ ಕಾಯ್ದುಕೊಂಡಿತ್ತು.