ಬೆಂಗಳೂರು (ಆ. 14): ಕನ್ನಡಿಗರಿಗೆ ಉದ್ಯೋಗ ಕೊಟ್ಟರೆ ಕನಿಷ್ಠ ವೇತನ, ಸೌಲಭ್ಯಗಳನ್ನು ನೀಡಿ ಕಾರ್ಮಿಕ ಕಾನೂನಿನ ನೀತಿ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕಾಗುತ್ತದೆ. ತಪ್ಪಿದರೆ ಉದ್ಯೋಗ ನಿರತ ಕನ್ನಡಿಗರಿಂದಲೇ ಬೇಡಿಕೆ, ಹೋರಾಟ ಎದುರಿಸಬೇಕಾಗುತ್ತದೆ... ಹೊರರಾಜ್ಯದ ಕಾರ್ಮಿಕರನ್ನು ಕರೆತಂದು ಉದ್ಯೋಗ ನೀಡಿದರೆ ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ. ಅವರು ಸಂಘಟನೆ, ಹೋರಾಟದ ಗೊಡವೆಗೇ ಹೋಗುವುದಿಲ್ಲ....

ಇವು, ರಾಜ್ಯದಲ್ಲಿ ಬಂಡವಾಳ ಹೂಡುವ ಮುನ್ನ ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದಾಗಿ ಸರ್ಕಾರದ ಷರತ್ತಿಗೆ ಒಪ್ಪಿ ಸಹಿ ಹಾಕಿದ ನಂತರ ಖಾಸಗಿ ಉದ್ಯಮದರಾರರು, ಕೈಗಾರಿಕೋದ್ಯಮಿಗಳು ಕನ್ನಡಿಗರಿಗೆ ಕೌಶಲ್ಯದ ನೆಪವೊಡ್ಡಿ ಉದ್ಯೋಗ ನೀಡಲು ಹಿಂಜರಿಯುತ್ತಿರುವುದಕ್ಕೆ ಪ್ರಮುಖ ಕಾರಣಗಳು.

ಕನ್ನಡಿಗರಿಗೆ ಗುಡ್ ನ್ಯೂಸ್ : ಉದ್ಯೋಗ ಮೀಸಲಿಗೆ ಸಿಎಂ ಸ್ಪಂದನೆ

ಎಲ್ಲಕ್ಕಿಂತ ಮಿಗಿಲಾಗಿ, ಖಾಸಗಿ ಉದ್ಯಮ, ಕೈಗಾರಿಕೆಗಳು ಷರತ್ತು ಬದ್ಧವಾಗಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂಬ ಬಗ್ಗೆ ಇದುವರೆಗೂ ಯಾವುದೇ ಸರ್ಕಾರಗಳು ಸಂವಿಧಾನಿಕವಾದ ಯಾವುದೇ ಕಾನೂನು ರೂಪಿಸಿ ಜಾರಿಗೆ ತರುವ ಧೈರ್ಯವನ್ನೇ ಮಾಡಿಲ್ಲ. ಕೊನೆಯ ಪಕ್ಷ ಖಾಸಗಿ ಉದ್ಯಮಗಳೊಂದಿಗಿನ ಒಪ್ಪಂದದಂತೆ ಉದ್ಯೋಗದಲ್ಲಿ ಕನಿಷ್ಠ ‘ಆದ್ಯತೆ’ಯ ಅಂಶವನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವಲ್ಲಿಯೂ ದಿವ್ಯ ನಿರ್ಲಕ್ಷ್ಯ ತೋರಿವೆ.

ಈ ಕೆಲಸದ ಜವಾಬ್ದಾರಿ ಹೊತ್ತಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು ಉದ್ಯಮದಾರರೊಂದಿಗೆ ಕೈಜೋಡಿಸಿ ಪರೋಕ್ಷವಾಗಿ ಕನ್ನಡಿಗರ ಉದ್ಯೋಗಾವಕಾಶಗಳು ಹೊರ ರಾಜ್ಯದ ವಲಸಿಗರ ಪಾಲಾಗಲು ಸಹಕರಿಸುತ್ತಿದ್ದಾರೆ ಎಂಬುದು ಕನ್ನಡಪರ ಸಂಘಟನೆಗಳ ಗಂಭೀರ ಆರೋಪವಾಗಿದೆ.

ಹಲವು ರಾಜ್ಯಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕೂಗು

ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿದರೆ ಕಾರ್ಮಿಕ ಕಾನೂನು ಪ್ರಕಾರ ಕನಿಷ್ಠ ವೇತನ, ಸೇವಾ ಅವಧಿಗೆ ಅನುಗುಣವಾಗಿ ವೇತನ ಹೆಚ್ಚಳ, ಇಎಸ್‌ಐ, ಪಿಎಫ್‌, ರಜೆ, ಕೆಲಸದ ಅವಧಿ, ಬೋನಸ್‌ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಕೊಡದಿದ್ದರೆ ಕನ್ನಡಿಗರು ಸಂಖ್ಯಾಬಲದ ಜತೆಗೆ ನೆಲದ ಬಲದಿಂದ ಸಂಘಟಿತರಾಗಿ ಬೇಡಿಕೆ, ಒತ್ತಾಯ ಮಾಡುತ್ತಾರೆ.

ಕಾನೂನಿಂದ ನುಣುಚಿಕೊಳ್ಳಲು ಆಗಾಗ ಕಾರ್ಮಿಕರನ್ನು ಬದಲಿಸುವುದಿಕ್ಕೆ ಕೆಲಸದಿಂದ ತೆಗೆಯುವಂತಹ ಕೆಲಸ ಮಾಡಿದರೆ ಹೋರಾಟವನ್ನೇ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ನೀಡಲು ಹಿಂಜರಿಯುತ್ತಿವೆ.

ಹಾಗಂತ ಸಂಪೂರ್ಣ ಕನ್ನಡಿಗರನ್ನು ನಿರ್ಲಕ್ಷಿಸಲೂ ಸಾಧ್ಯವಾಗದ ಕಾರಣ, ಹೆಚ್ಚಿನ ಸಂಖ್ಯೆಯಲ್ಲಿ ಆದ್ಯತೆ ನೀಡದೆ ಸಂಘಟನೆ-ಹೋರಾಟಕ್ಕೆ ಅವಕಾಶವಾಗದಂತೆ ನೋಡಿಕೊಂಡು ಬುದ್ಧಿವಂತಿಕೆ ಪ್ರದರ್ಶಿಸುತ್ತಿವೆ.

ಕನ್ನಡಿಗರಿಗೆ ಆದ್ಯತೆ ನೀಡದ ಬಗ್ಗೆ ಕೌಶಲ್ಯ ಕೊರತೆಯ ಜಾಣ ನೆಪ ಹೇಳುವ ಕೈಗಾರಿಕೆಗಳು, ಬೇರೆ ಬೇರೆ ರಾಜ್ಯದವರನ್ನು ಕೆಲಸಕ್ಕೆ ಕರೆತರುತ್ತವೆ. ಅವರಾರ‍ಯರೂ ಒಂದೇ ನೆಲದವರಾಗಿರುವುದಿಲ್ಲ. ಜತೆಗೆ ಬೇಡಿಕೆ, ಹೋರಾಟಕ್ಕಿಳಿದರೆ ಕೆಲಸ ಕಳೆದುಕೊಳ್ಳುವ ಭಯದಿಂದ ಇರುತ್ತಾರೆ ಎಂದು ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದಾರೆ.

ವರದಿಯಲ್ಲೇ ಕಳೆದುಹೋದ ಕನ್ನಡಿಗರ ಉದ್ಯೋಗ!, 33 ವರ್ಷವಾದ್ರೂ ಶಿಫಾರಸು ಅನುಷ್ಠಾನವಿಲ್ಲ!

ಬೆಂಗಳೂರಲ್ಲಿ 25 ಲಕ್ಷ ಜನ ಹೊರರಾಜ್ಯದವರು:

ಇತ್ತೀಚೆಗೆ ಬಿಡುಗಡೆಯಾಗಿರುವ 2011ರ ಜನಗಣತಿ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಶೇ.50ರಷ್ಟುಮಂದಿ ವಲಸಿಗರೇ ತುಂಬಿಕೊಂಡಿದ್ದಾರೆ. ಈ ವಲಸಿಗರ ಪೈಕಿ ಶೇ.50ಕ್ಕೂ ಹೆಚ್ಚು ಜನರು ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ. ವರದಿ ಪ್ರಕಾರ, ಬೆಂಗಳೂರಿನ 96.2 ಲಕ್ಷ ಜನಸಂಖ್ಯೆಯಲ್ಲಿ 44.3ರಷ್ಟುಜನ ವಲಸಿಗರು. ಇದರಲ್ಲಿ 25 ಲಕ್ಷ ಜನ ಹೊರ ರಾಜ್ಯದವರಾಗಿದ್ದಾರೆ.

2001 ರ ಜನಗಣತಿ ವರದಿಯ ಅಂಕಿ ಅಂಶಗಳಿಗೆ ಹೋಲಿಸಿದರೆ ನಗರದ ಒಟ್ಟು 65.37 ಲಕ್ಷದಷ್ಟಿದ್ದ ಆಗಿನ ಜನಸಂಖ್ಯೆಯಲ್ಲಿ 20 ಲಕ್ಷ (ಶೇ.31)ರಷ್ಟಿದ್ದ ವಲಸಿಗರ ಸಂಖ್ಯೆ 2011ರಲ್ಲಿ ಶೇ.50.16ರಷ್ಟಕ್ಕೆ ಏರಿಕೆಯಾಗಿದೆ. ಇನ್ನು ಪ್ರಸ್ತುತ 2019ರ ವೇಳೆಗೆ ವಲಸಿಗರ ಸಂಖ್ಯೆ ಇನ್ನಷ್ಟುಹೆಚ್ಚಾಗಿರುವುದರಲ್ಲಿ ಅನುಮಾನವೇ ಇಲ್ಲ.

ಕನ್ನಡಿಗರಿಗೆ ಡಿ ಗ್ರೂಪ್‌ ಕೆಲಸವೂ ಗ್ಯಾರಂಟಿ ಇಲ್ಲ!

‘ಒಂದು ಅಂದಾಜಿನ ಪ್ರಕಾರ, 1.5 ಕೋಟಿಗೂ ಮೀರುತ್ತಿದೆ. ಈ ಸಮಯದಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಶೇ.80ರಿಂದ 90ರಷ್ಟುಕನ್ನಡಿಗರಿದ್ದರು, ಉಳಿದ ಶೇಕಡಾ ಹತ್ತಿಪ್ಪತ್ತರಷ್ಟುಜನ ಹೊರಗಿನವರಿದ್ದರು. ಆದರೆ, ಈಗ ಅದು ತಿರುಗುಮುರುಗಾಗಿ ನಗರದಲ್ಲಿ ವಲಸಿಗರೇ ಪಾರುಪತ್ಯೆ ಮೆರೆಯುತ್ತಿದ್ದು, ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಆತಂಕದ ಸ್ಥಿತಿ ಎದುರಾಗುತ್ತಿದೆ’ ಎನ್ನುತ್ತಾರೆ ಕನ್ನಡಪರ ಹೋರಾಟಗಾರರು.

ಇನ್ನು, 2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.11 ಕೋಟಿ ಇದ್ದು, ಇದರಲ್ಲಿ ರಾಜ್ಯದ ಅಂತರ್‌ ಜಿಲ್ಲೆಗಳಿಗೆ ವಲಸೆ ಹೋದವರನ್ನೂ ಒಳಗೊಂಡಂತೆ 2.50 ಕೋಟಿಯಷ್ಟುವಲಸಿಗರಿದ್ದಾರೆ. ಈ ಪೈಕಿ ಸುಮಾರು ಶೇ.40ರಷ್ಟುಜನ ಹೊರ ರಾಜ್ಯಗಳಿಂದ ಬಂದವರಾಗಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು.

ಇಟ್ಟಿನಲ್ಲಿ ಹೊರರಾಜ್ಯದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಉದ್ಯೋಗ ಹಾಗೂ ಬೇರೆ ಬೇರೆ ಕಾರಣಗಳಿಂದ ರಾಜ್ಯಕ್ಕೆ ವಲಸೆ ಬಂದಿರುವುದ್ದಾರೆ. ಇದರಿಂದ ಕನ್ನಡಿಗರಿಗೆ ಸಿಗಬೇಕಾದ ನೆಲದ ಲಕ್ಷಾಂತರ ಸಂಖ್ಯೆಯ ಉದ್ಯೋಗಗಳು ಹೊರಗಿನವರ ಪಾಲಾಗಿರುವುದಂತೂ ಕಟುಸತ್ಯ.

ಸರ್ಕಾರ ಮಾಡಬೇಕಾದ್ದು ಏನು?

ರಾಜ್ಯದ ನೆಲ, ಜಲ, ಸರ್ಕಾರದ ತೆರಿಗೆ ವಿನಾಯಿತಿಯಂತಹ ಅನೇಕ ಸೌಲಭ್ಯಗಳನ್ನು ಪಡೆಯುತ್ತಿರುವ ಖಾಸಗಿ ಹೂಡಿಕೆದಾರರು, ಬಂಡವಾಳಗಾರರು ತಮ್ಮ ಉದ್ಯಮ, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ನಿರ್ದಿಷ್ಟಪ್ರಮಾಣದ ಉದ್ಯೋಗ ಮೀಸಲಾತಿ, ಆದ್ಯತೆ ನೀಡಬೇಕೆಂಬ ಬಗ್ಗೆ ರಾಜ್ಯದಲ್ಲಿ ಈ ವರೆಗೂ ಯಾವುದೇ ಸರ್ಕಾರ ಸಂವಿಧಾನಾತ್ಮಕವಾದ ಕಾನೂನು ತರುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಇದನ್ನೂ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಉದ್ಯಮದಾರರು ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಗಳಿಗೆ ಬೇರೆ ರಾಜ್ಯದವರನ್ನು ಕರೆತರುತ್ತಿದ್ದಾರೆ.

ಇದನ್ನು ತಡೆಯಲು ರಾಜ್ಯ ಸರ್ಕಾರ ಆಂಧ್ರಪ್ರದೇಶ ಮಾಡರಿಯಲ್ಲಿ ಸಾಂವಿಧಾನಿಕವಾಗಿ ಕರ್ನಾಟಕದಲ್ಲೂ ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ನಿರ್ದಿಷ್ಟಮೀಸಲಾತಿಗೆ ಸ್ಪಷ್ಟಕಾನೂನಾತ್ಮಕ ಮಸೂದೆ ಸಿದ್ಧಪಡಿಸಿ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಕಾಯ್ದೆ ರೂಪಿಸಬೇಕಾಗಿದೆ.

ರಾಜ್ಯದ ಸೌಲಭ್ಯಗಳನ್ನು ಪಡೆಯುತ್ತಿರುವ ಉದ್ಯಮಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಅವಕಾಶವಿದೆ. ಇದನ್ನು ಅತ್ಯಂತ ಎಚ್ಚರಿಕೆಯಿಂದ ಸರ್ಕಾರ ಬಳಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಕಾನೂನು ತಜ್ಞರು.

ಇದಲ್ಲದೆ, ಸ್ಥಳೀಯರಿಗೆ ಉದ್ಯೋಗ ಕೌಶಲ್ಯ ತರಬೇತಿಯನ್ನು ನೀಡುವ ಕಾರ್ಯಕ್ಕೆ ಇನ್ನು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಈ ಬಗ್ಗೆ ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಸಮಗ್ರ ನೀತಿಯನ್ನೇ ರೂಪಿಸಬೇಕು.

ನಮ್ಮಲ್ಲಿ ಯಾವುದೇ ಸರ್ಕಾರಗಳೂ ಇದುವರೆಗೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಸಾಂವಿಧಾನಿಕವಾಗಿ ಕಾನೂನು ರೂಪಿಸಿ ವಿಧಾನಮಂಡದಲ್ಲಿ ಅನುಮೋದಿಸಿ ಜಾರಿಗೆ ತರುವ ಬದ್ಧತೆಯನ್ನೇ ತೋರಲಿಲ್ಲ. ಖಾಸಗಿ ಉದ್ಯಮ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ಕೈತಪ್ಪದಂತೆ ನೋಡಿಕೊಳ್ಳುವ ನಿರ್ವಹಣಾ ವ್ಯವಸ್ಥೆಯೂ ಇಲ್ಲ. ಕಾರ್ಮಿಕ ಇಲಾಖೆ ಹಾಗೂ ಅಲ್ಲಿನ ಅಧಿಕಾರಿಗಳು ಕೇವಲ ಉದ್ಯಮಗಳ ಪರವಾನಗಿ ನೀಡುವುದಕ್ಕೆ ಸೀಮಿತವಾಗಿಬಿಟ್ಟಿದ್ದಾರೆ. ಇದು ಕನ್ನಡಿಗರ ದೌರ್ಭಾಗ್ಯ.

- ಎಸ್‌.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ