ಮುಂಬೈ(ಮೇ.07): ಸಾಮಾಜಿಕ ಕಾರ್ಯಗಳಲ್ಲಿ ಇತರ ಬಾಲಿವುಡ್ ನಾಯಕರಿಗಿಂತ ಅಕ್ಷಯ್ ಕುಮಾರ್ ಅವರದ್ದು ಎತ್ತಿದ ಕೈ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಅಕ್ಷಯ್ ಕುಮಾರ್, ಫನಿ ಚಂಡಮಾರುತದ ಸಂತ್ರಸ್ತರಿಗಾಗಿ 1 ಕೋಟಿ ರೂ. ಸಹಾಯಧನ ನೀಡಿದ್ದಾರೆ.

ಒಡಿಶಾದಲ್ಲಿ ಇತ್ತೀಚಿಗೆ ಭಾರೀ ಅನಾಹುತ ಸೃಷ್ಟಿಸಿರುವ ಫನಿ ಚಂಡಮಾರುತದ ಸಂತ್ರಸ್ತರ ನೆರವಿಗೆ ಅಕ್ಷಯ್ ಕುಮಾರ್ ಧಾವಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಕ್ಷಯ್ ಕುಮಾರ್ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಈ ಹಿಂದೆ ಸೈನಿಕರ ಕಲ್ಯಾಣ ನಿಧಿಗಾಗಿ ‘ಭಾರತ್ ಕೆ ವೀರ್’ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅಕ್ಷಯ್, ಕೇರಳ ಪ್ರವಾಹದ ವೇಳೆಯೂ ಧನಸಹಾಯ ಮಾಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ಅಕ್ಷಯ್ ಮತ ಚಲಾಯಿಸದ ಕಾರಣ, ಅವರ ಪೌರತ್ವದ ಕುರಿತು ವಿವಾದ ಭುಗಿಲೆದ್ದಿತ್ತು. ಆದರೆ ಸಂಕಷ್ಟದಲ್ಲಿರುವ ಭಾರತೀಯರ ನೆರವಿಗೆ ಸದಾ ಧಾವಿಸುವ ಮೂಲಕ ಅಕ್ಷಯ್ ತಾವೊಬ್ಬ ನಿಜವಾದ ಭಾರತೀಯ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. 

ಫನಿ ಚಂಡಮಾರುತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಡಿಶಾಗೆ 381 ಕೋಟಿ ರೂ. ಬಿಡುಗಡೆ ಮಾಡಿದ್ದು, ಒಟ್ಟು 1,000 ಕೋಟಿ ರೂ. ಪರಿಹಾರ ನಿಧಿ ಘೋಷಿಸಿದೆ.