ಭುವನೇಶ್ವರ್(ಮೇ.04): ಪ್ರಕೃತಿ ಮತ್ತು ಮಾನವನ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಈ ಸಂಘರ್ಷದಲ್ಲಿ ಕೆಲವೊಮ್ಮೆ ಮಾನವ ಕೈ ಮೇಲಾದರೆ, ಬಹುತೇಕ ಬಾರಿ ಪ್ರಕೃತಿಯ ಕೈ ಮೇಲಾಗುತ್ತದೆ.

ಆದರೆ ಪ್ರಕೃತಿ ತಂದೊಡ್ಡುವ ಪ್ರತಿ ಸವಾಲನ್ನು ಎದುರಿಸುವುದು ಮಾನವನ ಹುಟ್ಟು ಗುಣ. ಭೂಕಂಪ, ಜ್ವಾಲಾಮುಖಿ, ಚಂಡಮಾರುತ, ಪ್ರವಾಹ ಹೀಗೆ ಪ್ರಕೃತಿಯ ಎಲ್ಲಾ ಸವಾಲುಗಳನ್ನು ಮಾನವ ಅತ್ಯಂತ ದಿಟ್ಟತನದಿಂದ ಎದುರಿಸುತ್ತಾ ಬಂದಿದ್ದಾನೆ.

ಅದರಂತೆ ಒಡಿಶಾದ ಆತ್ಮಸ್ಥೈರ್ಯ ಕಸಿಯಲೆಂದೇ ಬಂದಿದ್ದ ಫನಿ ಚಂಡಮಾರುತ ದಾರಿ ಕಾಣದೇ ತನ್ನ ಪಥ ಬದಲಿಸಿದೆ. 1999ರ ಬಳಿಕ ದೇಶ ಕಂಡ ಅತ್ಯಂತ ಭೀಕರ ಚಂಡಮಾರುತ ಫನಿಯನ್ನು ಒಡಿಶಾ ಅತ್ಯಂತ ದಿಟ್ಟತನದಿಂದ ಎದುರಿಸಿದೆ.

ಫನಿ ಚಂಡಮಾರುತಕ್ಕೆ ಸಿಕ್ಕು ನಲುಗಿದ್ದ ಸುಮಾರು 12 ಲಕ್ಷ ಜನರನ್ನು ಕೇವಲ ಒಂದೇ ದಿನದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದು ಮಾನವನ ಇತಿಹಾಸದಲ್ಲೇ ನಡೆದ ಅತ್ಯಂತ ಯಶಸ್ವಿ ಸ್ಥಳಾಂತರಿಸುವಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್, ಫನಿ ಚಂಡಮಾರುತದ ಪರಿಣಾಮವಾಗಿ ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 1.2 ಮಿಲಿಯನ್ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಭದ್ರತಾಪಡೆಗಳ ನಿರಂತರ ಕರ್ತವ್ಯ ನಿರ್ವಹಣೆಯ ಪರಿಣಾಮ ಹೆಚ್ಚಿನ ಪ್ರಾಣಹಾನಿಯಾಗುವುದನ್ನು ತಡೆಯಲಾಗಿದೆ.

ಫನಿ ಇದೀಗ ಒಡಿಶಾ ಕರಾವಳಿಯನ್ನು ದಾಟಿ ಪ.ಬಂಗಾಳಕ್ಕೆ ಕಾಲಿಟ್ಟಿದ್ದು, ಫನಿ ಚಂಡಮಾರುತವನ್ನು ಎದುರಿಸಲು ಇದೀಗ ಪ.ಬಂಗಾಳ ಸಜ್ಜಾಗಿದೆ.