ಭುವನೇಶ್ವರ: ಗಂಟೆಗೆ 200 ಕಿ.ಮೀ. ವೇಗದಲ್ಲಿ ಒಡಿಶಾ ಕರಾವಳಿಗೆ ಅಪ್ಪಳಿಸಿ ಮೂಲಸೌಕರ್ಯಗಳನ್ನು ಸರ್ವನಾಶ ಮಾಡಿದ, 34 ಮಂದಿಯನ್ನು ಬಲಿ ಪಡೆದ ‘ಫೋನಿ’ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದರು. 

ಒಡಿಶಾ ಸರ್ಕಾರಕ್ಕೆ ಹೆಚ್ಚುವರಿಯಾಗಿ 1000 ಕೋಟಿ ರು. ನೆರವು ನೀಡುವುದಾಗಿ ಪ್ರಕಟಿಸಿದರು. ಇದೇ ವೇಳೆ, ಚಂಡಮಾರುತವನ್ನು ಅತ್ಯಂತ ಯೋಜಿತ ರೀತಿಯಲ್ಲಿ ನಿರ್ವಹಿಸಿದ್ದಕ್ಕಾಗಿ ತಮ್ಮ ರಾಜಕೀಯ ಎದುರಾಳಿ ಎಂಬುದನ್ನೂ ಮರೆತು ಮೋದಿ ಅವರು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಗೆ ಪ್ರಶಂಸೆಯ ಮಳೆಯನ್ನೇ ಸುರಿಸಿದರು.

ಈ 5 ಉಪಗ್ರಹಗಳಿಂದಾಗಿ ‘ಫನಿ’ ಹಾನಿ ತಗ್ಗಿತು

ನವೀನ್‌ ಪಟ್ನಾಯಕ್‌ ಜತೆ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಅವರ ಪಕ್ಕ ನಿಂತು ಸುದ್ದಿಗಾರರ ಜತೆ ಮಾತನಾಡಿದ ಮೋದಿ ಅವರು, ನವೀನ್‌ ಬಾಬು ಹಾಗೂ ಅವರ ನೇತೃತ್ವದ ಸರ್ಕಾರ ಅತ್ಯಂತ ಉತ್ತಮ ಕೆಲಸ ಮಾಡಿದೆ. ಕರಾವಳಿಯ ಪ್ರದೇಶಗಳಲ್ಲಿ ಜನರನ್ನು ತೆರವುಗೊಳಿಸುವ ಮೂಲಕ ಪ್ರಾಣ ಉಳಿಸಿದೆ. ಚಂಡಮಾರುತ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಅತ್ಯಂತ ಶ್ರೇಷ್ಠ ರೀತಿಯ ಸಮನ್ವಯತೆ ಇತ್ತು. ಪಟ್ನಾಯಕ್‌ ಅವರ ಯೋಜನೆ ಸರ್ವಶ್ರೇಷ್ಠವಾಗಿತ್ತು ಎಂದು ಹೇಳಿದರು.

ಇದೇ ವೇಳೆ, ನವೀನ್‌ ಪಟ್ನಾಯಕ್‌ ಜತೆ ಚಂಡಮಾರುತ ಹಾನಿ ಕುರಿತು ಮೋದಿ ಚರ್ಚೆ ನಡೆಸಿದರು. ಬಳಿಕ ಉನ್ನತ ಅಧಿಕಾರಿಗಳ ಜತೆ ಪರಿಶೀಲನಾ ಸಭೆಯನ್ನೂ ನಡೆಸಿದರು. ಪರಿಹಾರ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಳ್ಳಲು ಒಡಿಶಾ ಸರ್ಕಾರಕ್ಕೆ ಹೆಚ್ಚುವರಿಯಾಗಿ 1000 ಕೋಟಿ ರು. ನೆರವು ನೀಡಲಾಗುವುದು. ಮೃತ ವ್ಯಕ್ತಿಗಳ ಕುಟುಂಬಗಳಿಗೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ರು. ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಹಿಂದೆ ಕೇಂದ್ರ ಸರ್ಕಾರ ಒಡಿಶಾಕ್ಕೆ ಮುಂಗಡವಾಗಿ 381 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು.

ಫೋನಿ ಅಪರೂಪದ ಚಂಡಮಾರುತ ಏಕೆ?

ಭಾರಿ ಮಳೆ, ಗಾಳಿಯೊಂದಿಗೆ ಒಡಿಶಾ ಕರಾವಳಿಗೆ ಅಪ್ಪಳಿಸಿದ ಚಂಡಮಾರುತದಿಂದಾಗಿ ಭಾರಿ ನಷ್ಟವಾಗಿದೆ. ರಾಜ್ಯ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಸಾವಿನ ಪ್ರಮಾಣ ಕೇವಲ 34ರಷ್ಟಿದೆ. ಚಂಡಮಾರುತ ಅಪ್ಪಳಿಸುವ ಸ್ಥಳಗಳಿಂದ ಬರೋಬ್ಬರಿ 12 ಲಕ್ಷ ಮಂದಿಯನ್ನು ಸರ್ಕಾರ ತೆರವುಗೊಳಿಸಿತ್ತು. ಈ ಕ್ರಮಕ್ಕೆ ಈಗಾಗಲೇ ವಿಶ್ವಸಂಸ್ಥೆ ಸೇರಿದಂತೆ ವಿವಿಧ ದೇಶಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿವೆ.

ಒಡಿಶಾದಲ್ಲಿ ಏ.11ರಿಂದ 29ರವರೆಗೆ 4 ಹಂತಗಳಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆ ನಡೆದಿತ್ತು. ಆ ವೇಳೆ ಮೋದಿ ಹಾಗೂ ನವೀನ್‌ ಪಟ್ನಾಯಕ್‌ ನಡುವೆ ವಾಕ್ಸಮರವೇ ಆಗಿತ್ತು.