ಮೈಸೂರು[ಮೇ.06]: ಪೂರ್ವ ಕರಾವಳಿ ರಾಜ್ಯ ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತದ ಸಂತ್ರಸ್ತರಿಗೆ ಮೈಸೂರಿನ ಸಿಎಫ್‌ಟಿಆರ್‌ಐ ಅಗತ್ಯ ಆಹಾರ ಪೂರೈಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಸುಮಾರು 15 ಸಾವಿರ ಪ್ಯಾಕೆಟ್‌ಗಳಲ್ಲಿ 5 ಟನ್‌ ಆಹಾರವನ್ನು ಏರ್‌ ಇಂಡಿಯಾ ವಿಮಾನದ ಮೂಲಕ ಒಡಿಶಾದ ಭುವನೇಶ್ವರ್‌ಗೆ ತಲುಪಿಸಲಾಗುತ್ತಿದೆ. ಇದಕ್ಕಾಗಿ ವಿಜ್ಞಾನಿಗಳು, ವಿದ್ಯಾರ್ಥಿನಿಯರು, ಸಂಶೋಧಕರು, ರೈಲ್ವೆ ಪೊಲೀಸ್‌ ಸಿಬ್ಬಂದಿ ಸೇರಿದಂತೆ 800 ಮಂದಿ ಆಹಾರ ತಯಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ.

ಸಂತ್ರಸ್ತರಿಗೆ ತಕ್ಷಣ ಆಹಾರ ಸಿಗುವಂತಾಗಲು ಎರಡು ರೀತಿಯ ಉಪ್ಪಿಟ್ಟು ಸಿದ್ಧಪಡಿಸಲಾಗಿದೆ. ಸಿದ್ಧ ಉಪ್ಪಿಟ್ಟು ಅಂದರೆ ತಿನ್ನಲು ಸಿದ್ಧವಾಗಿರುವಂತದ್ದು. 10 ದಿನಗಳವರೆಗೆ ಇಡಬಹುದು. ಬೇಯಿಸಿ ಪ್ಯಾಕ್‌ ಮಾಡಲಾಗಿದೆ. ಮತ್ತೊಂದು ನೀರು ಹಾಕಿ ಬೆರೆಸಿ, ಕುದಿಸಿದರೆ ಸಿದ್ಧವಾಗುವಂತಹ ಉಪ್ಪಿಟ್ಟು. ಇದರ ಜತೆಗೆ ಪ್ರೋಟಿನ್‌ ಬಿಸ್ಕೆಟ್ಸ್‌, ಪ್ರೋಟಿನ್‌ ರಸ್ಕ್‌, 10 ದಿನಗಳವರೆಗೆ ಇಡಬಹುದಾದ ಟೋಮೆಟೋ ಚಟ್ನಿ, ಚಪಾತಿ, ನೀರಿನಲ್ಲಿ ಮೂರು ನಿಮಿಷ ನೆನೆಸಿದರೆ ಒಗ್ಗರಣೆಗೆ ಸಿದ್ಧವಾಗುವ ಅವಲಕ್ಕಿ ಪ್ಯಾಕೆಟುಗಳನ್ನು ಸಿದ್ಧಗೊಳಿಸಲಾಗಿದೆ.

ಒಡಿಶಾದ ಭುವನೇಶ್ವರ್‌ನಲ್ಲಿರುವ ಸಿಎಫ್‌ಟಿಆರ್‌ಐನ ಅಂಗಸಂಸ್ಥೆ ಐಎಂಎಂಟಿ(ಇನ್‌ಸ್ಟಿಟ್ಯೂಟ್‌ ಆಫ್‌ ಮೆಟಿರಿಯಲ್‌ ಮ್ಯಾನೇಜ್‌ಮೆಂಟ್‌ ಟೆಕ್ನಾಲಜಿ)ಯ ಸಿಬ್ಬಂದಿ ಮೈಸೂರಿನಿಂದ ರವಾನೆಯಾಗುವ ಆಹಾರದ ಪ್ಯಾಕೇಟ್‌ಗಳನ್ನು ಸ್ವೀಕರಿಸಿ ಅಲ್ಲಿನ ಸಂತ್ರಸ್ತರಿಗೆ ಹಂಚುವ ಹೊಣೆ ಹೊತ್ತಿದ್ದಾರೆ ಎಂದು ಸಿಎಫ್‌ಟಿಆರ್‌ಐನ ಮಾಹಿತಿ ಮತ್ತು ಪ್ರಚಾರ ಸಮನ್ವಯಕ ಎ.ಎಸ್‌.ಕೆ.ವಿ.ಎಸ್‌. ಶರ್ಮ(ಕೊಳ್ಳೇಗಾಲ ಶರ್ಮ) ತಿಳಿಸಿದ್ದಾರೆ.