ಬಾಲಿವುಡ್ ನಟಿ ಹಾಗೂ 'ಹುಡುಗರು' ಚಿತ್ರದ ಖ್ಯಾತ 'ಪಂಕಜ' ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದ ಈ ನಟಿ, ಪುನೀತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು.
ಬೆಂಗಳೂರು (ಜೂ.28): ಇಡೀ ಬಾಲಿವುಡ್ ಹಾಗೂ ಚಿತ್ರರಂಗಕ್ಕೆ ಮಾಡೆಲ್ ಹಾಗೂ ನಟಿ ಶೆಫಾಲಿ ಜರಿವಾಲಾ, 'ಕಾಂಟಾ ಲಗಾ' ಹಾಡಿನಿಂದ ಪ್ರಖ್ಯಾತರಾಗಿದ್ದರೂ, ಕರ್ನಾಟಕ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಆಕೆ 'ಪಂಕಜ' ಎಂದೇ ಚಿರಪರಿಚಿತ. ಅದಕ್ಕೆ ಕಾರಣ ಹುಡುಗರು ಸಿನಿಮಾದಲ್ಲಿ ಇವರು ನಟಿಸಿದ್ದ ಐಟಂ ಸಾಂಗ್.
ಇಂದಿಗೂ ಕೂಡ 'ನಾ ಬೋರ್ಡು ಇರದ ಬಸ್ಸನು..' ಹಾಡನ್ನು ಕೇಳಿದಾಗ ಅಥವಾ ನೋಡುವಾಗ ಪುನೀತ್ ರಾಜ್‌ಕುಮಾರ್, ಲೂಸ್ ಮಾದಾ ಯೋಗಿ ಹಾಗೂ ಶ್ರೀನಗರ ಕಿಟ್ಟಿ ಜೊತೆ ಅಷ್ಟೇ ಬಿಂದಾಸ್ ಆಗಿ ಡಾನ್ಸ್ ಮಾಡಿದ ಪಂಕಜ ನೆನಪಾಗುತ್ತಾಳೆ. ಈ ಪಂಕಜಳ ನಿಜವಾದ ಹೆಸರು ಶೆಫಾಲಿ ಜರಿವಾಲಾ. ಮುದ್ದುಮುಖದ ಬಾಲಿವುಡ್ ನಟಿ ಸಾಕಷ್ಟು ಜಾಹೀರಾತು ಹಾಗೂ ವಿಡಿಯೋ ಆಲ್ಬಂಗಳಲ್ಲೂ ನಟಿಸಿದ್ದರು. ಅದರೊಂದಿಗೆ ಹಿಂದಿ ಬಿಗ್ ಬಾಸ್‌ನ 13ನೇ ಆವೃತ್ತಿಯಲ್ಲೂ ಈಕೆ ಭಾಗವಹಿಸಿದ್ದರು. ಈ ರಿಯಾಲಿಟಿ ಶೋನಲ್ಲಿ ಆಕೆಗೆ ಆತ್ಮೀಯರಾಗಿದ್ದ ಹಾಗೂ ಬಿಗ್ ಬಾಸ್ ವಿಜೇತರೂ ಆಗಿದ್ದ ಸಿದ್ಧಾರ್ಥ್ ಶುಕ್ಲಾ ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದರು.

ಹುಡುಗರು ಸಿನಿಮಾದ ಐಟಂ ಸಾಂಗ್ ಹೊರತಾಗಿ ಆಕೆ ಮತ್ತೆಂದೂ ಕನ್ನಡ ಸಿನಿಮಾದಲ್ಲಾಗಲಿ, ಐಟಂ ಸಾಂಗ್‌ಗಳಲ್ಲಾಗಲಿ ಕಾಣಿಸಿಕೊಂಡಿರಲಿಲ್ಲ. ಹಾಗಿದ್ದರೂ, 2021ರಲ್ಲಿ ಪುನೀತ್ ರಾಜ್‌ಕುಮಾರ್ ನಿಧನರಾದಾಗ ಅವರೊಂದಿಗೆ ಹಾಡಿನಲ್ಲಿ ಡಾನ್ಸ್ ಮಾಡಿದ್ದನ್ನು ನೆನಪಿಸಿಕೊಂಡು ಅವರು ಟ್ವೀಟ್ ಮಾಡಿದ್ದರು. ಅದರೊಂದಿಗೆ ಸಿನಿಮಾದ ಹಾಡಿನ ಎರಡು ಚಿತ್ರಗಳನ್ನೂ ಕೂಡ ಹಂಚಿಕೊಂಡಿದ್ದರು.
'ನನಗೆ ನಂಬಲು ಸಾಧ್ಯವೇ ಆಗದಿರುವಷ್ಟು ಶಾಕ್ ಆಯಿತು. ಕನ್ನಡ ಫಿಲ್ಮ್ ಇಂಡಸ್ಟ್ರಿಯನ್ನು ನಾನು ಕಂಡ ಅತ್ಯುತ್ತಮ ವ್ಯಕ್ತಿ ಪುನೀತ್ ರಾಜ್‌ಕುಮಾರ್. ಎಂತಹ ವಿನಮ್ರ ಮತ್ತು ಪ್ರೀತಿಯ ವ್ಯಕ್ತಿ. #hudugaru ಒಂದು ಸ್ಮರಣೀಯ ಅನುಭವವಾಗಿತ್ತು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.💔' ಎಂದು ಶೆಫಾಲಿ ಜರಿವಾಲಾ ಬರೆದುಕೊಂಡಿದ್ದರು.
ಆದರೆ, ಶೆಫಾಲಿ ಜರಿವಾಲಾ ಹೇಳಿದ್ದ ಸಂತಾಪದ ಮಾತುಗಳು ಎಂದಿಗೂ ವೈರಲ್ ಆಗಿರಲಿಲ್ಲ. ಆದರೆ, ಪುನೀತ್ ರಾಜ್‌ಕುಮಾರ್ ಸಿನಿಮಾದಲ್ಲಿ ನಟಿಸಿದ್ದ ನಟಿಯೂ ಕೂಡ, ಹೆಚ್ಚೂ ಕಡಿಮೆ ಪುನೀತ್ ರಾಜ್‌ಕುಮಾರ್‌ಗೆ ಆಗಿದ್ದ ವಯಸ್ಸಿನಷ್ಟೇ ಸಮಯದಲ್ಲಿ ಕಾರ್ಡಿಯಾಕ್ ಅರೆಸ್ಟ್‌ನಿಂದ ಸಾವು ಕಂಡಿರುವುದು ವಿಧಿಯಾಟ ಎಂದ ಹೇಳಬೇಕು.
2011 ರಲ್ಲಿ, ಶೆಫಾಲಿ ಕೆ. ಮಾದೇಶ್ ನಿರ್ದೇಶನದ 'ಹುಡುಗರು' ಸಿನಿಮಾದಲ್ಲಿ ನಟಿಸಿದ್ದರು. ಈ ಐಟಂ ಸಾಂಗ್ ಎಷ್ಟು ಸೂಪರ್‌ಹಿಟ್ ಆಯಿತೆಂದರೆ, ಭಾವುಕ ಸಿನಿಮಾಕ್ಕೆ ಅತಿದೊಡ್ಡ ಗ್ಲಾಮರ್ ಟಚ ನೀಡಿತ್ತು. ಯೋಗರಾಜ್ ಭಟ್ ಅವರ ಸಾಹಿತ್ಯದೊಂದಿಗೆ ಮಮತಾ ಶರ್ಮಾ, ವಿ. ಹರಿಕೃಷ್ಣ ಮತ್ತು ನವೀನ್ ಮಾಧವ್ ಹಾಡಿರುವ ಈ ಹಾಡು ಶೆಫಾಲಿಯ ಡಾನ್ಸ್‌ನೊಂದಿಗೆ ಅದ್ಭುತವಾಗಿ ಗಮನಸೆಳೆದಿತ್ತು.
2011 ರಲ್ಲಿ ಬಿಡುಗಡೆಯಾದ 'ಹುಡುಗರು' ಚಿತ್ರ ಪ್ರಭು (ಪುನೀತ್ ರಾಜ್‌ಕುಮಾರ್), ಸಿದ್ದೇಶ್ (ಯೋಗೇಶ್) ಮತ್ತು ಚಂದ್ರು (ಶ್ರೀನಗರ ಕಿಟ್ಟಿ) ಎಂಬ ಮೂವರು ಆಪ್ತ ಸ್ನೇಹಿತರ ಕಥೆಯನ್ನು ಒಳಗೊಂಡಿತ್ತು. ಅವರ ಸ್ನೇಹಿತ ಸುಧೀರ್ ತನ್ನ ಗೆಳತಿ ಸುಷ್ಮಾಳೊಂದಿಗೆ ಓಡಿಹೋಗಲು ಸಹಾಯ ಕೇಳಿದಾಗ ಅವರ ಜೀವನವು ಅನಿರೀಕ್ಷಿತ ತಿರುವು ಪಡೆಯುತ್ತದೆ, ಇದು ಭಾವನಾತ್ಮಕ ಮತ್ತು ವೈಯಕ್ತಿಕ ಜೀವನದ ಕಷ್ಟಗಳಿಗೆ ಕಾರಣವಾಗುತ್ತದೆ.
