ನಮಿತ್ ಮಲ್ಹೋತ್ರಾ ‘ರಾಮಾಯಣ’ ಸಿನಿಮಾದ ಮಹತ್ವದ ಪಾತ್ರವಾಗಿರುವ ರಾವಣನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜನಪ್ರಿಯ ಯೂಟ್ಯೂಬರ್ ಹಾಗೂ ಜಾಗತಿಕ ತಾರೆ ಮಿಸ್ಟರ್‌ಬೀಸ್ಟ್ ಅಂದರೆ ಜಿಮ್ಮಿ ಡೊನಾಲ್ಡ್‌ಸನ್ ಕೂಡ ಭಾಗಿಯಾಗಿದ್ದರು. ಇದೇ ವೇಳೆ ಯಶ್ ಕಾರ್ಯಕ್ರಮಕ್ಕೆ ಗೈರಾಗಿದ್ದರೂ ಯಶ್ ಬಗ್ಗೆ ನಮಿತ್ ಹೀಗೆ ಹೇಳಿದ್ದಾರೆ..
Namit Malhotra revealed the choice of Yash in Ramayana movie as RAVANA-ರಾಮಾಯಣದ 'ರಾವಣ' ಪಾತ್ರಕ್ಕೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಯ್ಕೆಯಾದ ಅಸಲೀ ಕಾರಣ ಬಿಚ್ಚಿಟ್ಟ ನಿರ್ಮಾಪಕ ನಮಿತ್ ಮಲ್ಹೋತ್ರಾ!
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಘೋಷಣೆಯಾದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇದೆ. ಬಾಲಿವುಡ್‌ನ ದೊಡ್ಡ ತಾರೆಯರು ಹಾಗೂ ಭಾರತೀಯ ಚಿತ್ರರಂಗದ ಪ್ರಮುಖ ಕಲಾವಿದರು ಒಂದೇ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಅದರಲ್ಲೂ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದೀಗ ‘ರಾಮಾಯಣ’ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ರಾವಣನ ಪಾತ್ರಕ್ಕೆ ಯಶ್ ಅವರನ್ನೇ ಆಯ್ಕೆ ಮಾಡಿದ್ದೇಕೆ ಎಂಬುದರ ಕುರಿತು ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಮಿತ್ ಮಲ್ಹೋತ್ರಾ ‘ರಾಮಾಯಣ’ ಸಿನಿಮಾದ ಮಹತ್ವದ ಪಾತ್ರವಾಗಿರುವ ರಾವಣನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಜನಪ್ರಿಯ ಯೂಟ್ಯೂಬರ್ ಹಾಗೂ ಜಾಗತಿಕ ತಾರೆ ಮಿಸ್ಟರ್‌ಬೀಸ್ಟ್ ಅಂದರೆ ಜಿಮ್ಮಿ ಡೊನಾಲ್ಡ್‌ಸನ್ ಕೂಡ ಭಾಗಿಯಾಗಿದ್ದರು. ಇದೇ ವೇಳೆ ಯಶ್ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೂ, ನಿರ್ಮಾಪಕರು ನಟನ ಪಾತ್ರ ಹಾಗೂ ಸಿನಿಮಾಗೆ ನೀಡುತ್ತಿರುವ ಬೆಂಬಲವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ರಾವಣನ ಪಾತ್ರ ಕೇವಲ ಪೌರಾಣಿಕ ಕಥೆಯಲ್ಲಿರುವ ಖಳನಾಯಕನ ಪಾತ್ರವಲ್ಲ ಎಂಬುದು ನಮಿತ್ ಮಲ್ಹೋತ್ರಾ ಅವರ ಮಾತಿನ ಸಾರ. ಮನುಷ್ಯನೊಳಗೆ ಅಡಗಿರುವ ದುರಾಸೆ, ಅಧಿಕಾರದ ಹಂಬಲ ಮತ್ತು ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂಬ ಮನೋಭಾವವನ್ನು ರಾವಣ ಪ್ರತಿನಿಧಿಸುತ್ತಾನೆ ಎಂದು ಅವರು ವಿವರಿಸಿದ್ದಾರೆ. ಶಕ್ತಿ ಮತ್ತು ಸಾಮರ್ಥ್ಯ ಎಷ್ಟೇ ಇದ್ದರೂ, ತನ್ನ ಮೂಲವನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂಬ ಸಂದೇಶವೂ ರಾವಣನ ಕಥೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಯಶ್ ಬಗ್ಗೆ ಮಾತನಾಡಿದ ನಮಿತ್ ಮಲ್ಹೋತ್ರಾ ಹೇಳಿದ್ದೇನು?
ಯಶ್ ಬಗ್ಗೆ ಮಾತನಾಡಿದ ನಮಿತ್ ಮಲ್ಹೋತ್ರಾ, ಅವರನ್ನು ಕೇವಲ ರಾವಣನ ಪಾತ್ರಕ್ಕೆ ಆಯ್ಕೆಯಾದ ನಟ ಎಂದು ನೋಡದೆ, ಈ ಮಹತ್ವಾಕಾಂಕ್ಷೆಯ ಸಿನಿಮಾದ ಪ್ರಮುಖ ಬೆಂಬಲದ ಕಂಬವಾಗಿ ಪರಿಗಣಿಸಿದ್ದಾರೆ. ರಾವಣನಂತಹ ಸಂಕೀರ್ಣ ಹಾಗೂ ಪೌರಾಣಿಕವಾಗಿ ಬಲವಾದ ಪಾತ್ರವನ್ನು ನಿರ್ವಹಿಸಲು ವಿಶೇಷ ಧೈರ್ಯ ಮತ್ತು ವ್ಯಕ್ತಿತ್ವದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
‘ರಾಮಾಯಣ’ವನ್ನು ಕೇವಲ ಭಾರತೀಯ ಪ್ರೇಕ್ಷಕರಿಗೆ ತಲುಪಿಸುವುದಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶ ಚಿತ್ರತಂಡಕ್ಕಿದೆ. ಈ ದೊಡ್ಡ ಕನಸಿಗೆ ಯಶ್ ಅವರಂತಹ ನಟನ ಬೆಂಬಲ ಅತ್ಯಂತ ಮುಖ್ಯವಾಗಿತ್ತು ಎಂದು ನಿರ್ಮಾಪಕರು ತಿಳಿಸಿದ್ದಾರೆ. ರಾವಣನ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ಸಿನಿಮಾದ ನಿರ್ಮಾಣದಲ್ಲಿಯೂ ಯಶ್ ಬೆಂಬಲ ನೀಡುತ್ತಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.
ಯಶ್ ಆರೋಗ್ಯವಾಗಿರಲಿ ಎಂದು ಹಾರೈಸಿದ್ದಾರೆ
“ಯಶ್ ಇಲ್ಲದೆ ಈ ಪಯಣ ಪೂರ್ಣವಾಗುತ್ತಿರಲಿಲ್ಲ” ಎಂಬ ಅರ್ಥದಲ್ಲಿ ನಾಮಿತ್ ಮಲ್ಹೋತ್ರಾ ಮಾತನಾಡಿದ್ದು, ನಟನನ್ನು ಕಾರ್ಯಕ್ರಮದಲ್ಲಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ. ಯಶ್ ಆರೋಗ್ಯವಾಗಿರಲಿ ಎಂದು ಹಾರೈಸಿದ ಅವರು, ಈ ಮಹತ್ವದ ಪ್ರಯಾಣದಲ್ಲಿ ಅವರ ಕೊಡುಗೆ ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ನಾಮಿತ್ ಮಲ್ಹೋತ್ರಾ ಮಿಸ್ಟರ್‌ಬೀಸ್ಟ್ ಜೊತೆಗಿನ ಮತ್ತೊಂದು ಕುತೂಹಲಕಾರಿ ಸಹಯೋಗದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ‘ಆಂಗ್ರಿ ಬರ್ಡ್ಸ್ 3’ ಸಿನಿಮಾವನ್ನು ನಿರ್ಮಿಸುವ ನಿಟ್ಟಿನಲ್ಲಿ ಇಬ್ಬರೂ ಸಹಭಾಗಿತ್ವ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. ತಮ್ಮಿಬ್ಬರ ಸಹಯೋಗದ ಬಗ್ಗೆ ಮಿಸ್ಟರ್‌ಬೀಸ್ಟ್ ಅವರಿಗೆ ಆ ದಿನವೇ ತಿಳಿಯಿತು ಎಂಬುದು ಕಾರ್ಯಕ್ರಮದಲ್ಲಿ ನಗುವಿನ ಕ್ಷಣಕ್ಕೂ ಕಾರಣವಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಾಮಿತ್ ಮಲ್ಹೋತ್ರಾ, “ಇದನ್ನು ವಿಧಿ ಎಂದು ಕರೆಯಬಹುದು” ಎಂಬ ರೀತಿಯಲ್ಲಿ ತಮಾಷೆಯಾಗಿ ಹೇಳಿದ್ದಾರೆ.
ಇನ್ನು ‘ರಾಮಾಯಣ ಪಾರ್ಟ್ 1’ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವು 2026ರ ನವೆಂಬರ್ 8ರಂದು ದೀಪಾವಳಿ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ವಿಶ್ವದಾದ್ಯಂತ ನವೆಂಬರ್ 6ರಂದು ಬಿಡುಗಡೆಯಾಗಲಿದೆ ಎಂದು ವರದಿ ತಿಳಿಸಿದೆ.
ಹೀಗಾಗಿ ರಾವಣನ ಪಾತ್ರದಲ್ಲಿ ಯಶ್ ಅವರ ಲುಕ್ ಹಾಗೂ ಅಭಿನಯವನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತೀಯ ಪೌರಾಣಿಕ ಕಥೆಯನ್ನು ಜಾಗತಿಕ ಮಟ್ಟದಲ್ಲಿ ಕಟ್ಟಿಕೊಡುವ ಪ್ರಯತ್ನವಾಗಿರುವ ‘ರಾಮಾಯಣ’ದಲ್ಲಿ ಯಶ್ ಅವರ ರಾವಣನ ಪಾತ್ರ ಎಂತಹ ಪ್ರಭಾವ ಮೂಡಿಸಲಿದೆ ಎಂಬ ಕುತೂಹಲ ಇದೀಗ ಮತ್ತಷ್ಟು ಹೆಚ್ಚಾಗಿದೆ.


