ವೇದಿಕೆಯಲ್ಲಿ ಅವರ ಡ್ರಮ್ ಸ್ಟಿಕ್‌ಗಳು ಚಲಿಸುತ್ತಿದ್ದಂತೆ ಸಂಗೀತದ ತಾಳಕ್ಕೆ ಪ್ರೇಕ್ಷಕರೂ ಹೆಜ್ಜೆ ಹಾಕುತ್ತಿದ್ದರು. ಹಲವು ದಶಕಗಳ ಕಾಲ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಅವರು, ತಮ್ಮ ಹಿಂದೆ ಅಪಾರ ಶಿಷ್ಯವೃಂದವನ್ನೂ ಬೆಳೆಸಿದ್ದಾರೆ. ತಮ್ಮ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಿದ ಹೆಮ್ಮೆ ಅವರದ್ದಾಗಿದೆ. ಇಂಥ ಕಲಾವಿದರ ಕೊನೆಯ ಕ್ಷಣಗಳು ಹೀಗಿದ್ದವು..
Drummer Deva Death: ಡ್ರಮ್ಮರ್ ದೇವ ನಿಧನ- 4 ದಶಕಗಳ ಸಂಗೀತಲೋಕದ ಪ್ರಯಾಣ ಅಂತ್ಯ
ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಸಂಗೀತ ಲೋಕದಲ್ಲಿ ತಮ್ಮ ಡ್ರಮ್ ವಾದ್ಯದ ಮೂಲಕವೇ ವಿಶೇಷ ಗುರುತನ್ನು ಮೂಡಿಸಿಕೊಂಡಿದ್ದ ಹಿರಿಯ ವಾದ್ಯ ಕಲಾವಿದ ಡ್ರಮ್ಮರ್ ದೇವ (63) ಇನ್ನಿಲ್ಲ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಶನಿವಾರ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ ಸಂಗೀತ ಲೋಕ ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ.

ಡ್ರಮ್ಮರ್ ದೇವ ಅವರ ದಿಢೀರ್ ನಿಧನಕ್ಕೆ ಅನಾರೋಗ್ಯವೇ ಕಾರಣ ಎನ್ನಲಾಗಿದೆ. ಕಳೆದ ಕೆಲ ವರ್ಷಗಳಿಂದ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಳೆದ ಮೂರುವರೆ ವರ್ಷಗಳಿಂದ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು ಎಂದು ಅವರ ಪುತ್ರಿ ರಿಶೋನಾ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಗ್ಯಾಂಗ್ರೀನ್ ಸಮಸ್ಯೆಯಿಂದಾಗಿ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರು. ಆದರೂ ಸಂಗೀತದ ಮೇಲಿನ ಅವರ ಪ್ರೀತಿ ಮಾತ್ರ ಕೊನೆಯವರೆಗೂ ಕಡಿಮೆಯಾಗಿರಲಿಲ್ಲ.
ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
ಕೃತಕ ಕಾಲಿನ ಸಹಾಯದಿಂದಲೂ ಡ್ರಮ್ ನುಡಿಸುವ ಮೂಲಕ ತಮ್ಮ ವೃತ್ತಿಪರ ಬದ್ಧತೆಯನ್ನು ದೇವ ಅವರು ತೋರಿಸಿದ್ದರು. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ನಂತರ ಮನೆಗೆ ಮರಳಿದ್ದರು. ಸ್ವಲ್ಪ ಚೇತರಿಸಿಕೊಂಡಿದ್ದರೂ ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ಮತ್ತಷ್ಟು ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಬಳಿಕ ಶನಿವಾರ ಅವರು ನಿಧನರಾಗಿದ್ದಾರೆ ಎಂದು ಪುತ್ರಿ ರಿಶೋನಾ ಭಾವುಕರಾಗಿ ತಿಳಿಸಿದ್ದಾರೆ.
ಡ್ರಮ್ಮರ್ ದೇವ ಅವರಿಗೆ ಡ್ರಮ್ಸ್ ಎಂದರೆ ಕೇವಲ ವಾದ್ಯವಾಗಿರಲಿಲ್ಲ. ಅದೇ ಅವರ ಉಸಿರು, ಅದೇ ಅವರ ಬದುಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೂ ಬೆಡ್ ಮೇಲೆಯೇ ಡ್ರಮ್ಸ್ ನುಡಿಸುತ್ತಿದ್ದರು ಎನ್ನುವುದು ಅವರ ಸಂಗೀತ ಪ್ರೀತಿಗೆ ಸಾಕ್ಷಿ. “ಡ್ರಮ್ಸ್ ನನ್ನ ಪ್ರಾಣ” ಎಂದು ಆಗಾಗ ಹೇಳುತ್ತಿದ್ದ ಅವರು, ಆಸ್ಪತ್ರೆಯಲ್ಲಿದ್ದಾಗಲೂ ಡ್ರಮ್ಸ್ ಸ್ಟಿಕ್ಸ್ ಕೇಳುತ್ತಿದ್ದರು ಎಂದು ಪುತ್ರಿ ನೆನಪಿಸಿಕೊಂಡಿದ್ದಾರೆ.
300ಕ್ಕೂ ಹೆಚ್ಚು ಹಾಡುಗಳಿಗೆ ಡ್ರಮ್ ನುಡಿಸಿರುವ ದೇವ
ಸುಮಾರು 300ಕ್ಕೂ ಹೆಚ್ಚು ಹಾಡುಗಳಿಗೆ ಡ್ರಮ್ ನುಡಿಸಿರುವ ದೇವ, ಕನ್ನಡದ ಹಲವು ಜನಪ್ರಿಯ ಗೀತೆಗಳಿಗೆ ತಮ್ಮದೇ ಆದ ರಿದಮ್ ನೀಡಿದ್ದಾರೆ. ವರನಟ ಡಾ. ರಾಜ್‌ಕುಮಾರ್ ಅವರ ಸಿನಿಮಾಗಳಿಂದ ಹಿಡಿದು ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಪ್ರಮುಖ ನಟರ ಚಿತ್ರಗಳ ಹಾಡುಗಳಲ್ಲಿ ಅವರ ಡ್ರಮ್ ಸದ್ದು ಕೇಳಿಬಂದಿದೆ. ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಸೇರಿದಂತೆ ಅನೇಕ ಜನಪ್ರಿಯ ಗೀತೆಗಳ ಸಂಗೀತ ಪಯಣದಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ ಎಂದು ಪುತ್ರಿ ರಿಶೋನಾ ಭಾವುಕರಾಗಿ ಹೇಳಿದ್ದಾರೆ.
ಸಂಗೀತ ನಿರ್ದೇಶಕರಾದ ಹಂಸಲೇಖ, ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್, ಸತ್ಯಂ, ಟಿ.ಜಿ. ಲಿಂಗಪ್ಪ, ವಿ. ಮನೋಹರ್, ಗುರುಕಿರಣ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಡ್ರಮ್ಮರ್ ದೇವ ಅವರದ್ದು. ಸ್ಟುಡಿಯೋ ರೆಕಾರ್ಡಿಂಗ್‌ಗಳಿಗೆ ಮಾತ್ರ ಸೀಮಿತರಾಗದೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಆರ್ಕೆಸ್ಟ್ರಾ ಮತ್ತು ಲೈವ್ ಕಾರ್ಯಕ್ರಮಗಳಲ್ಲೂ ಅವರು ತಮ್ಮ ಡ್ರಮ್ ವಾದ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು.
ವೇದಿಕೆಯಲ್ಲಿ ಅವರ ಡ್ರಮ್ ಸ್ಟಿಕ್‌ಗಳು ಚಲಿಸುತ್ತಿದ್ದಂತೆ ಸಂಗೀತದ ತಾಳಕ್ಕೆ ಪ್ರೇಕ್ಷಕರೂ ಹೆಜ್ಜೆ ಹಾಕುತ್ತಿದ್ದರು. ಹಲವು ದಶಕಗಳ ಕಾಲ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಅವರು, ತಮ್ಮ ಹಿಂದೆ ಅಪಾರ ಶಿಷ್ಯವೃಂದವನ್ನೂ ಬೆಳೆಸಿದ್ದಾರೆ. ತಮ್ಮ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಿದ ಹೆಮ್ಮೆ ಅವರದ್ದಾಗಿದೆ.


