ಸೋಷಿಯಲ್ ಮೀಡಿಯಾ ನೆಗಟಿವ್ ಕಾಮೆಂಟ್‌ಗಳ ಬಗ್ಗೆ ನಟ ಸೂರ್ಯ ಓಪನ್ ಟಾಕ್ ಮಾಡಿದ್ದಾರೆ. 'ಪ್ರೀತಿಯನ್ನು ಮಾತ್ರ ಬಿತ್ತೋಣ, ನಿಮ್ಮ ಎನರ್ಜಿ ವೇಸ್ಟ್ ಮಾಡಿಕೊಳ್ಳಬೇಡಿ' ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಸೂರ್ಯ ಕೂಡ ಒಬ್ಬರು. ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ ಸೇರಿದಂತೆ ಬೇರೆ ಭಾಷೆಗಳ ನಿರ್ದೇಶಕರ ಸಿನಿಮಾಗಳಲ್ಲೂ ಸೂರ್ಯ ಸಕ್ರಿಯರಾಗಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಹರಿದಾಡುವ ನೆಗಟಿವ್ ಕಾಮೆಂಟ್‌ಗಳು ಹಾಗೂ ವಿಮರ್ಶೆಗಳ ಕುರಿತು ಸೂರ್ಯ ಮನಬಿಚ್ಚಿ ಮಾತನಾಡಿದ್ದಾರೆ.
ಸೋಷಿಯಲ್ ಮೀಡಿಯಾ ವಿಮರ್ಶೆಗಳ ಬಗ್ಗೆ ಸೂರ್ಯ ಮಾತು
ಸೆಪ್ಟೆಂಬರ್ 26ರಂದು ನಡೆದ ಅಖಿಲ ಭಾರತ ಸೂರ್ಯ ಅಭಿಮಾನಿಗಳ ಸಂಘದ ಕಾರ್ಯಕ್ರಮದಲ್ಲಿ ಸೂರ್ಯ ಭಾಗವಹಿಸಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಬರುವ ನೆಗೆಟಿವ್ ಪೋಸ್ಟ್‌ಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರೀತಿಯನ್ನು ಮಾತ್ರ ಬಿತ್ತೋಣ. ಸೋಷಿಯಲ್ ಮೀಡಿಯಾದಲ್ಲಿ ಯಾರೋ ಒಬ್ಬರು ಏನೋ ಒಂದು ಪೋಸ್ಟ್ ಹಾಕಿದ್ದಾರೆ ಅಂತ ನಾವು ಕೂಡ ಮಾತನಾಡಲು ಶುರು ಮಾಡಿದಾಗ, ನಮ್ಮ ಮನಸ್ಸಿಗೆ ನಾವೇ ನೋವು ಮಾಡಿಕೊಂಡಂತಾಗುತ್ತದೆ. ನಾವು ನಾವಾಗಿಯೇ ಇರೋಣ. ಅವರು ಅವರಾಗಿಯೇ ಇರಲಿ. ನಾವು ಯಾವುದಕ್ಕೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಸೂರ್ಯ ಹೇಳಿದ್ದಾರೆ.
ನಿಮ್ಮ ಎನರ್ಜಿ ವೇಸ್ಟ್ ಮಾಡಿಕೊಳ್ಳಬೇಡಿ!
ಮುಂದುವರಿದು ಮಾತನಾಡಿದ ಸೂರ್ಯ, ಅವರಿಗೆ ಅರ್ಥ ಮಾಡಿಸಬೇಕು, ಅವರನ್ನು ಬದಲಾಯಿಸಬೇಕು ಎಂದು ಪ್ರಯತ್ನಿಸುವುದು ಸ್ವಲ್ಪ ಕಷ್ಟ. ಕೆಲವರಿಗೆ ಅರ್ಥವಾಗಬಹುದು, ಆದರೆ ಹೆಚ್ಚಿನವರಿಗೆ ಅದು ಅರ್ಥವಾಗುವುದಿಲ್ಲ. ಹಾಗಾಗಿ ನಿಮ್ಮ ಎನರ್ಜಿಯನ್ನು ವೇಸ್ಟ್ ಮಾಡಿಕೊಳ್ಳಬೇಡಿ. ನಿಮಗೆ ಇಷ್ಟವಾದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ಸೂರ್ಯ ಮುಂದಿನ ಸಿನಿಮಾ ಯಾವುದು?
ಸೂರ್ಯ ಅಭಿನಯದ ಈ ವರ್ಷದ ಮೂರನೇ ಸಿನಿಮಾವಾಗಿ ‘ಸೀನ್’ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಮಲಯಾಳಂ ನಿರ್ದೇಶಕ ಜಿತು ಮಾಧವನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸೂರ್ಯ ಅವರ ಹೊಸ ನಿರ್ಮಾಣ ಸಂಸ್ಥೆ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದೆ. ಪ್ಯಾನ್ ಇಂಡಿಯಾ ಆಕ್ಷನ್ ಹಾಗೂ ಕಾಮಿಡಿ ಕಥಾಹಂದರದಲ್ಲಿ ಸಿನಿಮಾ ಮೂಡಿಬರುತ್ತಿದ್ದು, 2026ರ ನವೆಂಬರ್ 6ರಂದು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಇನ್ನು ಸೋಷಿಯಲ್ ಮೀಡಿಯಾದ ನೆಗೆಟಿವ್ ವಿಮರ್ಶೆಗಳಿಗೆ ಪ್ರತಿಕ್ರಿಯಿಸುವ ಬದಲು ತಮ್ಮ ಕೆಲಸದ ಮೇಲೆ ಗಮನಹರಿಸುವಂತೆ ಸೂರ್ಯ ಅಭಿಮಾನಿಗಳಿಗೆ ನೀಡಿರುವ ಈ ಸಂದೇಶ ಇದೀಗ ಗಮನ ಸೆಳೆಯುತ್ತಿದೆ.


