ಬ್ಯಾಂಕ್ ಸೇರಿದಂತೆ ಕೆಲವು ಕಡೆಗಳಲ್ಲಿ ಕನ್ನಡ ಮಾತನಾಡದೇ ಉಲ್ಟಾ ಮಾತನಾಡುವ ಸಿಬ್ಬಂದಿಯ ಬಗೆಗಿನ ವಿಷಯ ಹೈಲೈಟ್ ಆಗುತ್ತಿದ್ದಂತೆಯೇ, ಲಕ್ಷ್ಮೀ ನಿವಾಸ ಸೀರಿಯಲ್ ಭಾವನಾ ಉರ್ಫ್ ದಿಶಾ ಮದನ್ ಹೇಳಿದ್ದೇನು ನೋಡಿ!
ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಭಾಷೆ ಕಲಿಯುವುದಾಗಿ ಹೇಳುವುದನ್ನು ಬಿಟ್ಟು ಬಹುತೇಕ ಬ್ಯಾಂಕ್ಗಳಲ್ಲಿ ದರ್ಪ ತೋರುವವರ ಸಂಖ್ಯೆ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಸಂಖ್ಯೆ ಹೆಚ್ಚಿಗೇನೇ ಇದೆ. ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಅಥವಾ ಸರ್ಕಾರದ ಕೆಲವು ಕಚೇರಿಗಳಿಗೆ ಹೋದಾಗ, ಅಲ್ಲಿಯ ಸಿಬ್ಬಂದಿ ನಡೆದುಕೊಳ್ಳುವ ರೀತಿಯ ಬಗ್ಗೆ ಇದಾಗಲೇ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡುತ್ತಲೇ ಇರುತ್ತಾರೆ. ತಮ್ಮ ಕೆಲಸವೇ ಗ್ರಾಹಕರಿಗೆ ಸೇವೆ ಒದಗಿಸುವುದು, ತಮಗೆ ಸಂಬಳ ಕೊಡುತ್ತಿರುವುದೇ ಅದಕ್ಕೆ ಎನ್ನುವುದನ್ನೇ ಮರೆತು ಅತಿರೇಕದಿಂದ ವರ್ತಿಸುವುದು ಸಾಮಾನ್ಯವಾಗಿ ಬಿಟ್ಟಿದೆ ಎನ್ನುವುದು ಜಾಲತಾಣಗಳಲ್ಲಿ ಹಲವರು ಬರೆದುಕೊಳ್ಳುವ ತಮ್ಮ ಅನುಭವಗಳಿಂದಲೇ ತಿಳಿದು ಬರುತ್ತದೆ. ಇನ್ನು ಬ್ಯಾಂಕ್ಗಳಿಗೆ ವರ್ಗಾವಣೆ ಮಾಡುವ ಸಮಯದಲ್ಲಿ ಅವರು ಪ್ರಾದೇಶಿಕ ಭಾಷೆಯನ್ನು ಕಲಿತಿರಬೇಕು ಎನ್ನುವ ಕಾನೂನೇ ಇದೆ.
ಹಾಗೆಂದು ಏಕಾಏಕಿಯಾಗಿ ಬೇರೆ ಪ್ರದೇಶಗಳ ಭಾಷೆ ಕಲಿಯುವುದು ಕೂಡ ಅಷ್ಟು ಸುಲಭವಲ್ಲ. ಆದರೆ ಹಲವು ವರ್ಷ ಇದ್ದರೂ, ದರ್ಪ ತೋರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಚಲ್ತಾ ಹೈ ಎನ್ನುವ ಸ್ಥಿತಿ. ಇದನ್ನೇ ತಮಿಳುನಾಡಿನಲ್ಲಿ ಮಾಡಿದರೆ ಅಲ್ಲಿಯ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಊಹಿಸಿಕೊಳ್ಳಲು ಆಗದ್ದರಿಂದ ಅಲ್ಲಿಗೆ ಹೋಗುವವರು ಉಸಾಬರಿಯೇ ಬೇಡ ಎಂದು ತಮಿಳು ಭಾಷೆಯನ್ನು ಕಲಿಯುತ್ತಾರೆ. ಆದರೆ ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದವರಿಗೆ 'ಕನ್ನಡ ಗೊತ್ತಿಲ್ಲ' ಎನ್ನುವುದೇ ಪ್ರತಿಷ್ಠೆಯ ವಿಷಯವಾಗಿರುವಾಗ, ಇನ್ನು ಬೇರೆ ರಾಜ್ಯಗಳಿಂದ ಬಂದವರು ಕಲಿಯುವುದಾದರೂ ಹೇಗೆ? ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಕನ್ನಡದ ಬಗ್ಗೆ ಗಲಾಟೆ ಸ್ವಲ್ಪ ಹೆಚ್ಚಾಗಿಯೇ ನಡೆಯುತ್ತಿದೆ.
ಆದರೆ ಇದನ್ನು ಲಕ್ಷ್ಮೀ ನಿವಾಸ ಭಾವನಾ ಉರ್ಫ್ ದಿಶಾ ಮದನ್ ಖಂಡಿಸಿದ್ದಾರೆ. ಇವರ ಶಾಲಿನಿ ಷೋನಲ್ಲಿ ಅವರು ನೀಡಿರುವ ಸಂದರ್ಶನದಲ್ಲಿ ಅವರು ಕನ್ನಡದ ಮೇಲಿನ ಅಭಿಮಾನ ಇರಬೇಕು. ಬೇರೆಯವರಿಗೆ ಕನ್ನಡ ಮಾತನಾಡಿಸಬೇಕು, ಕಲಿಸಬೇಕು. ಬೇರೆ ಕಡೆಯಿಂದ ಬಂದವರೂ ಇಲ್ಲಿಯ ಭಾಷೆಯನ್ನು ಕಲಿಯಬೇಕು. ಅದನ್ನು ನಾನೂ ಒಪ್ಪುತ್ತೇನೆ. ನಾವು ನಮ್ಮ ಭಾಷೆಯನ್ನು ಬೇರೆಯದ್ದೇ ರೇಂಜ್ಗೆ ತೆಗೆದುಕೊಂಡು ಹೋದಬೇಕು ಎನ್ನುವವಳು ನಾನು ಎನ್ನುತ್ತಲೇ ಈ ರೀತಿ ಗಲಾಟೆಯ ವಿಷಯವೇ ಹೈಲೈಟ್ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ನಲ್ಲಿ ಕನ್ನಡ ಮಾತನಾಡಲಿಲ್ಲ, ಆಟೋದವರು ಕನ್ನಡ ಮಾತನಾಡಲಿಲ್ಲ ಎನ್ನೋದೇ ಹೈಲೈಟ್ ಆಗ್ತಿದೆ. ಅದೇ ಸುದ್ದಿಯಾಗ್ತಿದೆ. ಆದರೆ ಅದೇ ನಮ್ಮ ಕನ್ನಡದಲ್ಲಿ ಎಷ್ಟೊಂದು ಒಳ್ಳೆಯ ಚಿತ್ರ ಮಾಡ್ತೀವಿ, ಒಳ್ಳೊಳ್ಳೆ ಸೀರಿಯಲ್ ಕೊಡ್ತೀವಿ ಅದನ್ನು ಹೈಲೈಟ್ ಮಾಡೋದೇ ಇಲ್ಲ ಎಂದು ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಆ್ಯಕ್ಟ್ ಮಾಡ್ತಿರೋ ಸೀರಿಯಲ್ ಟಿಆರ್ಪಿಯಲ್ಲಿ ನಂಬರ್ 1 ಇದೆ. ಇಡೀ ಕರ್ನಾಟಕಕ್ಕೇ ನಂಬರ್ ಒನ್ ಆಗಿದೆ. ಒಂದು ಗಂಟೆಯ ಷೋ ನಡೆಯುತ್ತಾ ಇದೆ. ಇದೆಲ್ಲಾ ಯಾಕೆ ಫೇಮಸ್ ಆಗ್ತಿಲ್ಲ ಎಂದು ನಟಿ ಪ್ರಶ್ನಿಸಿದ್ದಾರೆ.
ಅದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೆಲವರು ಕನ್ನಡದ ಹೆಸರಿನಲ್ಲಿ ಗಲಾಟೆ ಹೆಚ್ಚಾಯ್ತು ಎಂದರೆ, ಹಲವರು ಟಿಆರ್ಪಿ ಹೆಚ್ಚಿಗೆ ಬಂದಿದೆ ಎಂದರೆ ಅದನ್ನು ಜನರೇ ನೋಡಿರುವುದು ತಾನೆ ಎಂದು ಪ್ರಶ್ನಿಸಿದ್ದಾರೆ. ಕನ್ನಡದ ಕೆಲವು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗಿರುವ ಹಿಂದೆ ಇರುವುದು ಕೂಡ ಜನರೇ. ಒಳ್ಳೆಯ ಸಿನಿಮಾ ಮಾಡಿದರೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತದೆ. ಸೀರಿಯಲ್ ಒಳ್ಳೆಯ ಸಂದೇಶ ಕೊಡುವ ಹಾಗಿದ್ದರೆ, ಕಥೆ ಚೆನ್ನಾಗಿ ಇದ್ದರೆ ತಂತಾನೇ ಟಿಆರ್ಪಿನೂ ಬರುತ್ತೆ. ಆದ್ದರಿಂದ ನಟಿ ಅದಕ್ಕೂ ಇದಕ್ಕೂ ಹೋಲಿಕೆ ಮಾಡುವುದು ಸರಿಯೇ ಇಲ್ಲ ಎನ್ನುತ್ತಿದ್ದಾರೆ.
