‘ಜೊತೆ ಜೊತೆಯಲಿʼ ಹಾಗೂ ʼಲಕ್ಷ್ಮೀ ನಿವಾಸʼ ಧಾರಾವಾಹಿ ಖ್ಯಾತಿಯ ನಟಿ ಮಾನಸಾ ಮನೋಹರ್ ಅವರು ಎರಡನೇ ಮದುವೆಯಾಗಿದ್ದಾರೆ. ಅಂದಹಾಗೆ ಇವರ ಎರಡನೇ ಪತಿಗೂ ಕೂಡ ಇದು ಎರಡನೇ ಮದುವೆಯಂತೆ.
'ಜೊತೆ ಜೊತೆಯಲಿʼ ಹಾಗೂ 'ಲಕ್ಷ್ಮೀ ನಿವಾಸ' ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಕೆಲವೇ ತಿಂಗಳುಗಳ ಹಿಂದೆ ಎರಡನೇ ಮದುವೆಯಾಗಿದ್ದರು. ಈ ಹಿಂದೆ ಅರೇಂಜ್ ಮ್ಯಾರೇಜ್ ಆಗಿದ್ದ ಅವರೀಗ, ಈ ಬಾರಿ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಅಂದಹಾಗೆ ಪ್ರೀತಂ ಅವರಿಗೂ ಇದು ಎರಡನೇ ಮ್ಯಾರೇಜ್ ಅಂತೆ.
ಮದುವೆ ವಿಚಾರವಾಗಿ ಈ ಜೋಡಿ 'ಫಸ್ಟ್ ಡೇ ಫಸ್ಟ್ ಶೋ' ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪರಿಚಯ ಆಗಿದ್ದು ಹೇಗೆ?
ಡೇಟಿಂಗ್ ಆಪ್‌ನಲ್ಲಿ ಪ್ರೀತಂ ಹಾಗೂ ಮಾನಸಾ ಮನೋಹರ್ ಅವರು ಭೇಟಿಯಾಗಿದ್ದಾರೆ. ಮಾನಸಾ ಅವರು ಡೇಟಿಂಗ್ ಆಪ್‌ನಲ್ಲಿಯೂ ಕೂಡ ಮ್ಯಾನಿಫೆಸ್ಟ್ ಅಂತ ಬರೆದುಕೊಂಡಿದ್ದರು. ಆ ನಂತರ ಪ್ರೀತಂ ಅವರೇ ಮಾನಸಾರನ್ನು ಮಾತನಾಡಿಸಿದ್ದರು. ಆ ಬಳಿಕ ಪರಿಚಯ ಆಗಿ ಸ್ನೇಹ ಶುರುವಾಗಿ ಪ್ರೀತಿಗೆ ಬಂದು ತಿರುಗಿತ್ತು. ಪರಸ್ಪರ ಸಂಗಾತಿ ಹೇಗಿರಬೇಕು ಎಂದು ಈ ಜೋಡಿ ಮಾತನಾಡಿಕೊಂಡಿದೆ. ಪರಿಚಯ ಆಗಿ ಒಂದು ವರ್ಷಕ್ಕೆ ಇವರಿಬ್ಬರು ಮದುವೆಯಾಗಿದ್ದಾರೆ.
ಇಬ್ಬರಿಗೂ ಎರಡನೇ ಮದುವೆ
ಮೊದಲ ಮದುವೆ ಯಾಕೆ ಮುರಿದುಬಿದ್ದಿದೆ ಎಂಬ ಬಗ್ಗೆಯೂ ಮಾನಸಾ ಮನೋಹರ್ ಮಾತನಾಡಿದ್ದಾರೆ. “ಮದುವೆ ಎನ್ನೋದು ಇಬ್ಬರಿಗೆ ಸಂಬಂಧಪಟ್ಟಿದ್ದು. ಅವರು ಹಾಗೆ ಮಾಡಿದರು, ಹೀಗೆ ಮಾಡಿದರು ಅಂತ ಹೇಳೋಕೆ ಇಷ್ಟ ಇಲ್ಲ. ಆದರೆ ನನಗೆ ತೊಂದರೆಯಾಗಿದ್ದಂತೂ ಸತ್ಯ. ನನಗೆ ಅವರು, ಅವರಿಗೆ ನಾನು ಆಗಿ ಬರುತ್ತಿರಲಿಲ್ಲ. ಐದು ವರ್ಷ ಬದುಕಿದ ಬಳಿಕ, ನಮ್ಮ ಜೀವನ ಚೆನ್ನಾಗಿಲ್ಲ ಅಂತ ಹೇಳಿ ನಮ್ಮ ತಂದೆ-ತಾಯಿ ಡಿವೋರ್ಸ್ ತಗೋ ಅಂತ ಹೇಳಿದ್ದರು.
ನಾನು ನಟಿಯಾಗೋದು ಪಾಲಕರಿಗೆ ಇಷ್ಟ ಇರಲಿಲ್ಲ. ಅಪ್ಪ-ಅಮ್ಮ ವೃತ್ತಿ ಜೀವನಕ್ಕೆ ಇಷ್ಟು ಬೆಂಬಲ ಕೊಟ್ಟಿದ್ದಾರೆ, ವೈಯಕ್ತಿಕ ಜೀವನದ ಆಯ್ಕೆಯನ್ನು ಅವರಿಗೆ ಬಿಡೋಣ ಅಂತ ಅಂದುಕೊಂಡೆ. ಮದುವೆ ಆಗೋವರೆಗೂ ಎಲ್ಲವೂ ಚೆನ್ನಾಗಿದೆ ಅಂತ ಅನಿಸಿರುತ್ತದೆ, ಮದುವೆ ಆದ್ಮೇಲೆ ನಿಜವಾದ ಗುಣ ಏನು ಎನ್ನೋದು ಅರ್ಥ ಆಗುತ್ತದೆ. ನನ್ನ ಮಗಳು ಖುಷಿಯಾಗಿಲ್ಲ ಎಂದು ಹೇಳಿ ತಂದೆ-ತಾಯಿಯೇ ಡಿವೋರ್ಸ್ ತಗೋ ಅಂತ ಹೇಳಿದರು” ಎಂದು ಹೇಳಿದ್ದಾರೆ.
ಮತ್ತೆ ಮದುವೆ ಆಗೋ ಯೋಚನೆ ಇರಲಿಲ್ಲ!
“ಒಂದು ಮದುವೆಯಾಯ್ತು, ಐದು ವರ್ಷ ಸಂಸಾರ ಮಾಡಿದ್ದೀನಿ, ಸಾಕು, ಮತ್ತೆ ಮದುವೆ ಬೇಡ, ಮಕ್ಕಳನ್ನು ದತ್ತು ತಗೊಳೋಣ ಅಂತ ಅಂದುಕೊಂಡೆ. ಆದರೆ ಅಪ್ಪ-ಅಮ್ಮ ಮಾತ್ರ ನಾನು ಮತ್ತೆ ಮದುವೆ ಆಗಬೇಕು ಅಂತ ಅಂದುಕೊಂಡರು. ಅದರಂತೆ ದೇವರ ಆಶೀರ್ವಾದದಿಂದ ನನಗೆ ಪ್ರೀತಂ ಸಿಕ್ಕಿದ್ದಾರೆ” ಎಂದಿದ್ದಾರೆ.
ಪ್ರೀತಂ ಯಾರು?
ವಿದ್ಯಾರ್ಹತೆಯಲ್ಲಿ ಇಂಜಿನಿಯರ್ ಆಗಿರೋ ಪ್ರೀತಂ ಅವರು ಫುಟ್‌ಬಾಲ್ ಪ್ಲೇಯರ್ ಕೂಡ ಹೌದು. ಫುಟ್‌ಬಾಲ್ ಅಕಾಡೆಮಿ ನಡೆಸುತ್ತಿದ್ದಾರೆ. ಈ ಹಿಂದೆ ಮದುವೆಯಾಗಿದ್ದ ಪ್ರೀತಂ ಅವರಿಗೆ ಹೊಂದಾಣಿಕೆಯಿಲ್ಲದೆ ಡಿವೋರ್ಸ್ ಪಡೆದಿದ್ದರು.
ಸರಳವಾಗಿ ನಡೆದ ಮದುವೆ
ಪ್ರೀತಂ ಅವರಿಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಈ ಜೋಡಿ ಮದುವೆಯಾಗಿತ್ತು. ಬಹಳ ಸರಳವಾಗಿ ಕುಟುಂಬಸ್ಥರು, ಸ್ನೇಹಿತರ ಮಧ್ಯೆ ಈ ಮದುವೆ ನಡೆದಿದೆ.

