ರಾವಣನ ಪತನಕ್ಕೆ ಆತನ ಜ್ಞಾನ ಅಥವಾ ಶಕ್ತಿಯ ಕೊರತೆ ಕಾರಣವಾಗಿರಲಿಲ್ಲ. ಬದಲಾಗಿ ಜೀವನದಲ್ಲಿ ಸಮತೋಲನ ಇಲ್ಲದಿರುವುದೇ ವಿನಾಶಕ್ಕೆ ಕಾರಣವಾಯಿತು. ರಾಮನಲ್ಲಿರುವ ತಾಳ್ಮೆ, ಶಾಂತತೆ ಹಾಗೂ ಧರ್ಮನಿಷ್ಠೆ ಗೆಲುವಿಗೆ ಕಾರಣವಾಯಿತು. ರಾವಣ ಅಪಹರಿಸಿದ್ದು ಸೀತೆಯ ಬದಲಯ ಕಪ್ಪೆ..?!
ಯಶ್ ಅಭಿನಯದ ರಾಮಾಯಣದ ರಾವಣನ ಪಾತ್ರ ಹಿಂದಿನ ರಹಸ್ಯ ಬಯಲು!
ಬಾಲಿವುಡ್ನಿಂದ ಸ್ಯಾಂಡಲ್ವುಡ್ವರೆಗೆ ಸದ್ಯ 'ರಾಮಾಯಣ' ಸಿನಿಮಾದ್ದೇ ದೊಡ್ಡ ಸದ್ದು. ವಿಶೇಷವಾಗಿ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ನಡುವೆ ರಾವಣನ ಪಾತ್ರಕ್ಕೆ ಯಶ್ ಅವರನ್ನೇ ಆಯ್ಕೆ ಮಾಡಿದ್ದೇಕೆ? ರಾವಣನ ವ್ಯಕ್ತಿತ್ವ ಎಂತಹದ್ದು? ಎಂಬ ಹಲವು ಪ್ರಶ್ನೆಗಳಿಗೆ ಆಸಕ್ತಿದಾಯಕ ರಹಸ್ಯ ಸಂಗತಿಗಳು ಬಯಲಾಗಿವೆ. ಅದೇನು ಅಂತ ಮುಂದೆ ನೋಡಿ..
ಶಿವನ ಪರಮಭಕ್ತ ಹಾಗೂ ಲಂಕೆಯಂತಹ ಸಮೃದ್ಧ ರಾಜ್ಯವನ್ನು ನಿರ್ಮಿಸಿದ ಸಮರ್ಥ ಆಡಳಿತಗಾರ
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಖಳನಾಯಕ ಎಂದರೆ ಭಯಾನಕ ಮುಖಭಾವ, ಒರಟು ಧ್ವನಿ ಮತ್ತು ಕ್ರೂರ ನೋಟವನ್ನು ತೋರಿಸಲಾಗುತ್ತದೆ. ಆದರೆ ರಾವಣನ ವ್ಯಕ್ತಿತ್ವ ಇದಕ್ಕಿಂತ ಸಂಪೂರ್ಣ ಭಿನ್ನ. ಸದ್ಗುರು ಪ್ರಕಾರ, ರಾವಣ ಕೇವಲ ರಾಕ್ಷಸನಾಗಿರಲಿಲ್ಲ. ಆತ ಮಹಾನ್ ವಿದ್ವಾಂಸ, ಶಿವನ ಪರಮಭಕ್ತ ಹಾಗೂ ಲಂಕೆಯಂತಹ ಸಮೃದ್ಧ ರಾಜ್ಯವನ್ನು ನಿರ್ಮಿಸಿದ ಸಮರ್ಥ ಆಡಳಿತಗಾರನಾಗಿದ್ದ. ಆತನಲ್ಲಿ ಅಪಾರ ಜ್ಞಾನ, ಶಕ್ತಿ, ಸೌಂದರ್ಯ ಮತ್ತು ಪ್ರತಿಭೆ ಇತ್ತು. ಹೀಗಾಗಿ ಇಂತಹ ಸಂಕೀರ್ಣ ವ್ಯಕ್ತಿತ್ವದ ಪಾತ್ರಕ್ಕೆ ಪ್ರಭಾವಶಾಲಿ ವ್ಯಕ್ತಿತ್ವದ ಯಶ್ ಸೂಕ್ತ ಆಯ್ಕೆ ಎಂಬುದು ಅವರ ಅಭಿಪ್ರಾಯ.
ಇದೇ ವೇಳೆ ರಾವಣನ ಜೀವನದ ಕುತೂಹಲಕಾರಿ ಘಟನೆಯೊಂದನ್ನೂ ಸದ್ಗುರು ವಿವರಿಸಿದ್ದಾರೆ. ಒಮ್ಮೆ ಶಿವನನ್ನು ಮೆಚ್ಚಿಸಲು ಕೈಲಾಸಕ್ಕೆ ತೆರಳಿದ್ದ ರಾವಣ, ವರ ಕೇಳುವಾಗ ಪಾರ್ವತಿ ದೇವಿಯನ್ನೇ ತನಗೆ ನೀಡುವಂತೆ ಕೇಳಿದ್ದನಂತೆ. ಶಿವ ಒಪ್ಪಿಗೆ ಸೂಚಿಸಿದ ಬಳಿಕ ಪಾರ್ವತಿ ದೇವಿ ತನ್ನ ಮಾಯೆಯಿಂದ ಕಪ್ಪೆಯೊಂದನ್ನು ಸುಂದರ ಯುವತಿಯಾಗಿ ಪರಿವರ್ತಿಸಿದಳು. ಮಂಡೂಕದಿಂದ ರೂಪುಗೊಂಡ ಆಕೆಯೇ ಮಂಡೋದರಿ. ಪಾರ್ವತಿಯೆಂದು ಭಾವಿಸಿದ ರಾವಣ ಆಕೆಯನ್ನು ಲಂಕೆಗೆ ಕರೆದುಕೊಂಡು ಹೋಗಿ ವಿವಾಹವಾದನೆಂಬ ಕಥೆಯನ್ನು ಸದ್ಗುರು ಪ್ರಸ್ತಾಪಿಸಿದ್ದಾರೆ.
ನಂತರ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆತಂದಾಗ ಮಂಡೋದರಿ ರಾವಣನಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದಳು. ಸೀತೆಯನ್ನು ಗೌರವದಿಂದ ಶ್ರೀರಾಮನಿಗೆ ಹಿಂದಿರುಗಿಸುವಂತೆ ಎಚ್ಚರಿಸಿದ್ದಳು. ಆದರೆ ಅಹಂಕಾರದಿಂದ ಕುರುಡಾಗಿದ್ದ ರಾವಣ ಪತ್ನಿಯ ಮಾತಿಗೆ ಬೆಲೆ ನೀಡಲಿಲ್ಲ.
ಜೀವನದಲ್ಲಿ ಸಮತೋಲನ ಇಲ್ಲದಿರುವುದೇ ವಿನಾಶಕ್ಕೆ ಕಾರಣವಾಯಿತು
ರಾವಣನ ಪತನಕ್ಕೆ ಆತನ ಜ್ಞಾನ ಅಥವಾ ಶಕ್ತಿಯ ಕೊರತೆ ಕಾರಣವಾಗಿರಲಿಲ್ಲ. ಬದಲಾಗಿ ಜೀವನದಲ್ಲಿ ಸಮತೋಲನ ಇಲ್ಲದಿರುವುದೇ ವಿನಾಶಕ್ಕೆ ಕಾರಣವಾಯಿತು ಎಂದು ಸದ್ಗುರು ಹೇಳಿದ್ದಾರೆ. ಮತ್ತೊಂದೆಡೆ ರಾಮನ ಬಳಿ ರಾವಣನಷ್ಟು ದೈಹಿಕ ಬಲ ಮತ್ತು ಮಾಯಾವಿ ವಿದ್ಯೆಗಳಿರದಿದ್ದರೂ ತಾಳ್ಮೆ, ಶಾಂತತೆ ಹಾಗೂ ಧರ್ಮದ ಮೇಲಿನ ನಿಷ್ಠೆ ಇತ್ತು. ಇದೇ ರಾಮನ ಗೆಲುವಿಗೆ ಕಾರಣವಾಯಿತು.
ಒಟ್ಟಿನಲ್ಲಿ, ರಾವಣನ ಪಾತ್ರದ ಮೂಲಕ ಯಶ್ ಯಾವ ರೀತಿಯ ಅಭಿನಯದ ಮಿಂಚು ಹರಿಸಲಿದ್ದಾರೆ ಎಂಬ ಕುತೂಹಲದ ನಡುವೆ ಸದ್ಗುರುಗಳ ಈ ವಿಶ್ಲೇಷಣೆ 'ರಾಮಾಯಣ' ಚಿತ್ರದ ಮೇಲಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.














