'ರಾಮಾಯಣ: ಭಾಗ 1' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದು, ಶನಿವಾರದ ಕಲೆಕ್ಷನ್ ಎಲ್ಲರ ಹುಬ್ಬೇರಿಸಿದೆ. ವಿಶೇಷವೆಂದರೆ, 3ನೇ ದಿನದ ಗಳಿಕೆ ಮೊದಲ ದಿನವನ್ನೂ ಮೀರಿಸಿದೆ. ಈ ಮೂಲಕ ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಏರಿಕೆ ಆಗುತ್ತಿದೆ. ಇದಕ್ಕೆ ಕಾರಣವೇನು? ನೋಡಿ..

ಬಾಕ್ಸ್ ಆಫೀಸ್‌ನಲ್ಲಿ ವೇಗ ಹೆಚ್ಚಿಸಿಕೊಂಡ 'ರಾಮಾಯಣ'; ಮೂರೇ ದಿನಕ್ಕೆ ವಿಶ್ವಾದ್ಯಂತ 376 ಕೋಟಿ ರೂ. ಗಳಿಕೆ!

ಭಾರಿ ನಿರೀಕ್ಷೆ ಮತ್ತು ಅದ್ಧೂರಿ ಪ್ರಚಾರದೊಂದಿಗೆ ಚಿತ್ರಮಂದಿರಗಳಿಗೆ ಎಂಟ್ರಿ ಕೊಟ್ಟಿರುವ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ: ಭಾಗ 1' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿಧಾನವಾಗಿ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಆರಂಭದ ದಿನ ನಿರೀಕ್ಷಿತ ಮಟ್ಟದ ಗಳಿಕೆ ಮಾಡದಿದ್ದರೂ, ನಂತರದ ದಿನಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿದ್ದು, ಶನಿವಾರದ ಕಲೆಕ್ಷನ್ ಎಲ್ಲರ ಹುಬ್ಬೇರಿಸಿದೆ. ವಿಶೇಷವೆಂದರೆ, ಮೂರನೇ ದಿನದ ಗಳಿಕೆ ಮೊದಲ ದಿನವನ್ನೂ ಮೀರಿಸಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಬಹುನಿರೀಕ್ಷಿತ ಸಿನಿಮಾ ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಮೊದಲ ದಿನ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 129 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಎರಡನೇ ದಿನ ಕಲೆಕ್ಷನ್ ಸ್ವಲ್ಪ ಕುಸಿತ ಕಂಡಿತ್ತು. ಇದೀಗ ಮೂರನೇ ದಿನ ಅಂದರೆ ಶನಿವಾರ ಬರೋಬ್ಬರಿ ಶೇ.45ರಷ್ಟು ಏರಿಕೆ ಕಂಡು ಸಿನಿಮಾ ಬಲವಾದ ಕಮ್‌ಬ್ಯಾಕ್ ಮಾಡಿದೆ.

ಸ್ಯಾಕ್ನಿಲ್ಕ್ ಅಂದಾಜಿನ ಪ್ರಕಾರ, ಭಾರತದಲ್ಲಿ ಮೊದಲ ದಿನ 64.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದ ಸಿನಿಮಾ, ಎರಡನೇ ದಿನ 48.05 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಶನಿವಾರ ಒಂದೇ ದಿನ 69.80 ಕೋಟಿ ರೂಪಾಯಿ ಗಳಿಸುವ ಮೂಲಕ ಮೊದಲ ದಿನದ ದಾಖಲೆಯನ್ನೂ ಹಿಂದಿಕ್ಕಿದೆ. ಈ ಮೂಲಕ ಮೂರು ದಿನಗಳ ಒಟ್ಟು ದೇಶೀಯ ನೆಟ್ ಗಳಿಕೆ 182.70 ಕೋಟಿ ರೂಪಾಯಿಗೆ ತಲುಪಿದೆ.

ವಿಶ್ವದಾದ್ಯಂತದ ಗಳಿಕೆಯ ಲೆಕ್ಕಾಚಾರವೂ ಗಮನ ಸೆಳೆಯುತ್ತಿದೆ

ಇನ್ನು ವಿಶ್ವದಾದ್ಯಂತದ ಗಳಿಕೆಯ ಲೆಕ್ಕಾಚಾರವೂ ಗಮನ ಸೆಳೆಯುತ್ತಿದೆ. ಮೂರು ದಿನಗಳಲ್ಲಿ ಸುಮಾರು 375.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ 'ರಾಮಾಯಣ', ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರಭಾವ ತೋರಿಸುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕೇವಲ ಎರಡು ದಿನಗಳಲ್ಲಿ 10 ಮಿಲಿಯನ್ ಡಾಲರ್ ಗಳಿಕೆ ದಾಟಿದೆ. ಉತ್ತರ ಅಮೆರಿಕದಲ್ಲಿ ಚಿತ್ರದ ಪ್ರದರ್ಶನ ಗಮನಾರ್ಹವಾಗಿದೆ.

ಕನ್ನಡ ಆವೃತ್ತಿಗೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ

ಕನ್ನಡ ಆವೃತ್ತಿಗೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮೂರನೇ ದಿನ 6.30 ಕೋಟಿ ರೂಪಾಯಿ ಗಳಿಸಿದ್ದು, ತೆಲುಗು ಆವೃತ್ತಿ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾನುವಾರದ ರಜೆ ಹಾಗೂ ದೀಪಾವಳಿ ಸಂಭ್ರಮದಿಂದಾಗಿ ಚಿತ್ರಕ್ಕೆ ಮತ್ತಷ್ಟು ಪ್ರೇಕ್ಷಕರು ಹರಿದುಬರುವ ನಿರೀಕ್ಷೆಯಿದೆ. ಹೀಗಾಗಿ ಮೊದಲ ವಾರಾಂತ್ಯದ ಅಂತ್ಯಕ್ಕೆ 'ರಾಮಾಯಣ' ಗಳಿಕೆ ಹೊಸ ದಾಖಲೆ ಬರೆಯುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.