ಕನ್ನಡದ ಆ ಒಂದು ಸಿನಿಮಾಗೆ ಸೆನ್ಸಾರ್ ಇಲ್ಲ ಅಂದಿತ್ತು, ಕೊನೆಗೆ ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಬೇಕಾಯ್ತು. ನಿಮಗೆ ಗೊತ್ತಾ? ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಆ ಸಿನಿಮಾ ಯಾವುದು ಎಂದು?
ಬೆಂಗಳೂರು: ನಿಮಗೆ ಗೊತ್ತಾ, ಕನ್ನಡ ಸಿನಿಮಾ ಇತಿಹಾಸದಲ್ಲಿ ಮೊದಲು ಬ್ಯಾನ್ ಆಗಿದ್ದ ಚಿತ್ರ ಯಾವುದು ಎಂದು. 1969ರ ಕೊನೆಯಲ್ಲಿ ಮದ್ರಾಸ್ ಸೆನ್ಸಾರ್ ಮಂಡಳಿಯು ಕನ್ನಡದ ಸಿನಿಮಾ ಒಂದಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿ ನಿಷೇಧ ಹೇರಿತ್ತು. ನಂತರ ಬೆನ್ನಲ್ಲೇ ಚಿತ್ರತಂಡವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಚಿತ್ರದ ಬಗ್ಗೆ ಪರಿಶೀಲನೆ ನಡೆಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚಿತ್ರಕ್ಕೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿತ್ತು. ಬಳಿಕ 1970ರಲ್ಲಿ ಬಿಡುಗಡೆಯಾದ ಈ ಚಿತ್ರವು ಕನ್ನಡಕ್ಕೆ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸ್ವರ್ಣ ಕಮಲ) ತಂದುಕೊಟ್ಟಿತು.
ಯಾವುದು ಆ ಸಿನಿಮಾ?
ಅದು ಬೇರೆ ಯಾವುದೂ ಅಲ್ಲ. ದಿವಗಂತ ಯು. ಆರ್. ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿ ಆಧರಿಸಿದ ಚಿತ್ರವಾಗಿದೆ. ಪಟ್ಟಾಭಿರಾಮ ರೆಡ್ಡಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಿಷೇಧ ತೆರವು ಬಳಿಕ ಈ ಚಿತ್ರವು ಕಾದಂಬರಿಯಂತೆ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ.. 18ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರತಿಷ್ಠಿತ ರಾಷ್ಟ್ರಪತಿಗಳ ಸ್ವರ್ಣ ಪದಕ (ಸ್ವರ್ಣ ಕಮಲ) ಪ್ರಶಸ್ತಿ ಗೆದ್ದುಕೊಂಡಿತು. ಈ ಪ್ರಶಸ್ತಿ ಪಡೆದ ಮೊದಲ ಕನ್ನಡ ಚಲನಚಿತ್ರ ಮತ್ತು ದಕ್ಷಿಣ ಭಾರತದ ಮೊದಲ ಚಲನಚಿತ್ರ ಎಂಬ ಐತಿಹಾಸಿಕ ದಾಖಲೆ ಮಾಡಿತು. ರಾಷ್ಟ್ರಪ್ರಶಸ್ತಿಯ ಜೊತೆಗೆ ರಾಜ್ಯ ಮಟ್ಟದಲ್ಲಿಯೂ ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಇನ್ನು, ಸ್ವಿಟ್ಜರ್ಲೆಂಡ್ನಲ್ಲಿ ನಡೆದ Locarno Film Festival ನಲ್ಲಿ ವಿಶೇಷ ಮನ್ನಣೆ (Bronze Leopard / Special Mention) ಪಡೆಯಿತು.
ನಿಷೇಧಕ್ಕೆ ಕಾರಣ ಏನು?
ಅಗ್ರಹಾರದ ಜಾತಿ ವ್ಯವಸ್ಥೆ ಮತ್ತು ಸಂಪ್ರದಾಯಗಳ ಕುರಿತಾದ ಇದರ ಕಥಾವಸ್ತುವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕಾಗಿ 1969ರ ಕೊನೆಯಲ್ಲಿ ಮದ್ರಾಸ್ ಸೆನ್ಸಾರ್ ಮಂಡಳಿಯು ಈ ಚಿತ್ರವನ್ನು ಆರಂಭದಲ್ಲಿ ನಿಷೇಧಿಸಿತ್ತು. ನಿಷೇಧ ಬೆನ್ನಲ್ಲೇ ಇದು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ತಾರಗಣ ನೋಡೋದಾರೆ.. ಚಿತ್ರದಲ್ಲಿ ಗಿರೀಶ್ ಕಾರ್ನಾಡ್ (ಪ್ರಾಣೇಶಾಚಾರ್ಯ ಪಾತ್ರದಲ್ಲಿ), ಪಿ. ಲಂಕೇಶ್ ಮತ್ತು ಸ್ನೇಹಲತಾ ರೆಡ್ಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ಕಥೆ ಏನು?
ಸಂಸ್ಕಾರ ಚಿತ್ರವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ದುರ್ವಾಸಪುರ ಎಂಬ ಸಾಂಪ್ರದಾಯಿಕ ಬ್ರಾಹ್ಮಣ ಅಗ್ರಹಾರದಲ್ಲಿ ನಡೆಯುವ ಕಥೆ ಹೊಂದಿದೆ. ಸಂಪ್ರದಾಯ, ಜಾತಿ ವ್ಯವಸ್ಥೆ ಮತ್ತು ಮಾನವೀಯ ಮೌಲ್ಯಗಳ ನಡುವಿನ ಸಂಘರ್ಷವೇ ಈ ಚಿತ್ರದ ಜೀವಾಳ. ಅಗ್ರಹಾರದ ನಾರಾಣಪ್ಪ ಎಂಬ ಬ್ರಾಹ್ಮಣನು ಎಲ್ಲಾ ಸಂಪ್ರದಾಯಗಳನ್ನು ಧಿಕ್ಕರಿಸಿ, ಮದ್ಯಪಾನ, ಮಾಂಸಾಹಾರ ಸೇವಿಸುತ್ತಾ ಚಂದ್ರಿ ಎಂಬ ಕೆಳಜಾತಿಯ ಮಹಿಳೆಯೊಂದಿಗೆ ವಾಸಿಸುತ್ತಿರುತ್ತಾನೆ. ಆತ ಪ್ಲೇಗ್ ರೋಗದಿಂದ ಮೃತಪಟ್ಟಾಗ ಆತನ ಅಂತ್ಯಸಂಸ್ಕಾರ ಯಾರು ಮಾಡಬೇಕು ಎಂಬ ದೊಡ್ಡ ಪ್ರಶ್ನೆ ಊರಿನ ಬ್ರಾಹ್ಮಣರಿಗೆ ಎದುರಾಗುತ್ತದೆ.

ಅಗ್ರಹಾರದ ಪಂಡಿತ ಮತ್ತು ನಿಷ್ಠಾವಂತ ಬ್ರಾಹ್ಮಣ ಪ್ರಾಣೇಶಾಚಾರ್ಯರು (ಗಿರೀಶ್ ಕಾರ್ನಾಡ್) ಸಮಸ್ಯೆಗೆ ಶಾಸ್ತ್ರಗಳಲ್ಲಿ ಪರಿಹಾರ ಹುಡುಕಲು ಮುಂದಾಗುತ್ತಾರೆ. ನಾರಾಣಪ್ಪ ಬ್ರಾಹ್ಮಣ್ಯವನ್ನು ತ್ಯಜಿಸಿದ್ದರಿಂದ ಆತನ ಶವಸಂಸ್ಕಾರ ಮಾಡುವುದು ಪಾಪವೆಂದು ಊರಿನವರು ಭಾವಿಸುತ್ತಾರೆ. ಆದರೆ ಶವವನ್ನು ಹಾಗೆಯೇ ಬಿಟ್ಟರೆ ಊರಿನವರು ಊಟ ಮಾಡುವಂತಿಲ್ಲ ಎಂಬ ನಿಯಮವಿರುತ್ತದೆ. ಶಾಸ್ತ್ರಗಳಲ್ಲಿ ಸ್ಪಷ್ಟ ಉತ್ತರ ಸಿಗದಿದ್ದಾಗ ಪ್ರಾಣೇಶಾಚಾರ್ಯರು ಊರಿನ ಮಾರುತಿ ದೇವಸ್ಥಾನಕ್ಕೆ ಹೋಗಿ ದೇವರ ಅಪ್ಪಣೆಗಾಗಿ ಕಾಯುತ್ತಾರೆ. ಕತ್ತಲೆಯಲ್ಲಿ ಮನೆಗೆ ಹಿಂದಿರುಗುವಾಗ ಆಕಸ್ಮಿಕವಾಗಿ ಚಂದ್ರಿಯನ್ನು ಭೇಟಿಯಾಗುತ್ತಾರೆ. ಆ ಕ್ಷಣದ ಭಾವನಾತ್ಮಕ ಸನ್ನಿವೇಶದಲ್ಲಿ ಆಚಾರ್ಯರು ತಮ್ಮ ಕಟ್ಟುನಿಟ್ಟಿನ ಬ್ರಹ್ಮಚರ್ಯ ಮತ್ತು ನಿಯಮಗಳನ್ನು ಮೀರಿ ಚಂದ್ರಿಯೊಂದಿಗೆ ಸೇರುತ್ತಾರೆ.
ಈ ಘಟನೆಯ ನಂತರ ಪ್ರಾಣೇಶಾಚಾರ್ಯರೊಳಗೆ ತೀವ್ರವಾದ ಆತ್ಮಸಾಕ್ಷಿಯ ಸಂಘರ್ಷ ಶುರುವಾಗುತ್ತದೆ. ತಾವು ಇಷ್ಟು ದಿನ ಪಾಲಿಸಿಕೊಂಡು ಬಂದಿದ್ದ ಪಾಂಡಿತ್ಯ ಮತ್ತು ಸಂಪ್ರದಾಯಗಳಿಗಿಂತ ಮಾನವೀಯತೆ ಮತ್ತು ಜೀವನದ ಸತ್ಯ ದೊಡ್ಡದು ಎಂಬ ಅರಿವು ಅವರಿಗೆ ಮೂಡುತ್ತದೆ. ಮತ್ತೊಂದೆಡೆ, ಚಂದ್ರಿ ಮುಸ್ಲಿಂ ವ್ಯಾಪಾರಿಯೊಬ್ಬನ ಸಹಾಯದಿಂದ ಗುಟ್ಟಾಗಿ ನಾರಾಣಪ್ಪನ ಶವಸಂಸ್ಕಾರ ಮಾಡಿ ಊರು ಬಿಡುತ್ತಾಳೆ. ಪಶ್ಚಾತ್ತಾಪ ಮತ್ತು ಹೊಸ ಅರಿವಿನೊಂದಿಗೆ ಪ್ರಾಣೇಶಾಚಾರ್ಯರು ತಮ್ಮ ಹಳೆಯ ಜೀವನವನ್ನು ತೊರೆದು ಸತ್ಯವನ್ನು ಒಪ್ಪಿಕೊಳ್ಳುವ ನಿರ್ಧಾರದೊಂದಿಗೆ ಊರಿಗೆ ಮರಳುವ ಹಾದಿಯಲ್ಲಿ ಚಿತ್ರ ಮುಕ್ತಾಯ ಆಗುತ್ತದೆ.












