ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗಾಗಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ ಈ ಚಿತ್ರದ ಪ್ರಚಾರದ ವೇಳೆ, ಯಶ್ ಹಂಚಿಕೊಂಡಿರುವ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಕುರಿತಾದ ಆಸಕ್ತಿದಾಯಕ ಸಂಗತಿಗಳು ಗಮನ ಸೆಳೆಯುತ್ತಿವೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗಾಗಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಇದೀಗ ಈ ಚಿತ್ರದ ಕಾರ್ಯಕ್ರಮವೊಂದರಲ್ಲಿ ಯಶ್ ಹಂಚಿಕೊಂಡಿರುವ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಕುರಿತಾದ ಆಸಕ್ತಿದಾಯಕ ಸಂಗತಿಗಳು ಗಮನ ಸೆಳೆಯುತ್ತಿವೆ. ಕನ್ನಡ ಚಿತ್ರರಂಗದೊಂದಿಗೆ ರೆಹಮಾನ್ ಹೊಂದಿರುವ ಹಳೆಯ ನಂಟು ಮತ್ತು ಅವರ ಸಂಗೀತ ಪಯಣದ ಹಿಂದಿನ ಕೆಲವು ವಿಚಾರಗಳನ್ನು ಯಶ್ ಬಹಿರಂಗಪಡಿಸಿದ್ದಾರೆ.

80ರ ದಶಕದಲ್ಲಿ ಜನಪ್ರಿಯತೆ ಗಳಿಸಿದ್ದ ‘ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್’ ಚಿತ್ರದ ಸಂಗೀತದ ಹಿಂದಿನ ಕಥೆಯನ್ನು ಯಶ್ ಇಲ್ಲಿ ಪ್ರಸ್ತಾಪಿಸಿದ್ದಾರೆ. ದ್ವಾರಕೀಶ್ ನಿರ್ದೇಶನದ ಈ ಚಿತ್ರದ ಹಾಡಿನ ಕುರಿತು ಮಾತನಾಡಿದ ಅವರು, ‘ರಾಮಾಯಣ’ ಚಿತ್ರದ ಕೆಲಸದ ವೇಳೆ ಎ.ಆರ್. ರೆಹಮಾನ್ ಅವರಿಂದ ಈ ಕುತೂಹಲಕಾರಿ ವಿಚಾರ ತಿಳಿದುಕೊಂಡಿದ್ದಾಗಿ ಹೇಳಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳುವಾಗ ರೆಹಮಾನ್ ಕೂಡ ಅಲ್ಲಿಯೇ ಉಪಸ್ಥಿತರಿದ್ದು, ಸಂತೋಷದಿಂದ ಮಾತುಗಳನ್ನು ಆಲಿಸುತ್ತಿದ್ದರು.

ಇದರ ಜೊತೆಗೆ ಕನ್ನಡ ಚಿತ್ರರಂಗದ ಕೊಡುಗೆಯನ್ನೂ ರೆಹಮಾನ್ ಸ್ಮರಿಸಿಕೊಂಡಿದ್ದಾರೆ. ತಮ್ಮ ಆರಂಭಿಕ ದಿನಗಳಲ್ಲಿ ಕರ್ನಾಟಕಕ್ಕೆ ಬಂದು ಕನ್ನಡ ಸಿನಿಮಾಗಳಿಗಾಗಿ ಕೆಲಸ ಮಾಡುತ್ತಿದ್ದೆ. ಆ ಕೆಲಸಗಳಿಂದ ಬಂದ ಹಣವನ್ನು ತಮ್ಮ ಸ್ಟುಡಿಯೋ ನಿರ್ಮಾಣಕ್ಕೆ ಬಳಸಿಕೊಂಡಿದ್ದಾಗಿ ಅವರು ಯಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಸಂಗೀತ ಲೋಕದಲ್ಲಿ ದೊಡ್ಡ ಹೆಸರು ಗಳಿಸಿರುವ ರೆಹಮಾನ್ ಅವರ ಯಶಸ್ಸಿನ ಪಯಣದಲ್ಲಿ ಕನ್ನಡ ಚಿತ್ರರಂಗದ ಪಾತ್ರವೂ ಇತ್ತು ಎಂಬ ವಿಚಾರ ಅಭಿಮಾನಿಗಳಿಗೆ ವಿಶೇಷ ಆಸಕ್ತಿ ಮೂಡಿಸಿದೆ.

ಇನ್ನು ‘ರಾಮಾಯಣ’ ಸಿನಿಮಾದ ಮತ್ತೊಂದು ವಿಶೇಷವೆಂದರೆ, ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಜೊತೆಗೆ ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಕೂಡ ಸಂಗೀತ ಸಂಯೋಜಿಸುತ್ತಿದ್ದಾರೆ. ಇಬ್ಬರು ಅಂತರರಾಷ್ಟ್ರೀಯ ಮಟ್ಟದ ಸಂಗೀತ ದಿಗ್ಗಜರು ಒಂದೇ ಚಿತ್ರಕ್ಕಾಗಿ ಕೈಜೋಡಿಸಿರುವುದು ಸಿನಿಪ್ರೇಮಿಗಳ ಕುತೂಹಲವನ್ನು ಹೆಚ್ಚಿಸಿದೆ.

ಈ ವಿಭಿನ್ನ ಪ್ರಯೋಗದ ಕುರಿತು ಮಾತನಾಡಿದ ಯಶ್, ಭಾರತೀಯ ಸಂಗೀತದ ವೈಶಿಷ್ಟ್ಯವನ್ನು ಜಾಗತಿಕ ಸಂಗೀತದ ಅನುಭವದೊಂದಿಗೆ ಬೆಸೆಯುವ ಪ್ರಯತ್ನ ಇದಾಗಿದೆ ಎಂದು ವಿವರಿಸಿದ್ದಾರೆ. ಪರಸ್ಪರರ ಸಂಗೀತ ಶೈಲಿಯಿಂದ ಹೊಸದನ್ನು ಕಲಿಯುವ ಉದ್ದೇಶದಿಂದ ಇಬ್ಬರು ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂಬುದು ಅವರ ಮಾತಿನ ಸಾರ.

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಬಹುಭಾಷೆಗಳಲ್ಲಿ ತೆರೆಕಾಣಲಿರುವ ಈ ಮಹತ್ವಾಕಾಂಕ್ಷೆಯ ಚಿತ್ರವು ಭಾರತೀಯ ಸಿನಿಮಾ ಜಗತ್ತಿನಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ.