ಹುಚ್ಚ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಆ ಒಬ್ಬ ಹೀರೋ ಜೊತೆ 3 ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಳೆದುಕೊಂಡಿದ್ದರ ಬಗ್ಗೆ ಮಾತನಾಡಿದ್ದಾರೆ. ಅವರ ಸಿನಿಮಾ ಪಯಣದ ಕುತೂಹಲಕಾರಿ ಸಂಗತಿಗಳನ್ನು ತಿಳಿಯಿರಿ.

ತೆಲುಗು ಚಿತ್ರರಂಗದಲ್ಲಿ ಕೆಲವೇ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಳ್ಳುವ ನಟಿಯರು ಕೆಲವರಿರುತ್ತಾರೆ. ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಪ್ರೇಕ್ಷಕರನ್ನು ಸೆಳೆದು, ಕಡಿಮೆ ಅವಧಿಯಲ್ಲೇ ಉತ್ತಮ ಗುರುತನ್ನು ಗಳಿಸಿದ ಅಂತಹ ನಟಿಯರಲ್ಲಿ ರೇಖಾ ವೇದವ್ಯಾಸ್ ಕೂಡ ಒಬ್ಬರು. ಸಿನಿಮಾ ಕೆರಿಯರ್ ಆರಂಭದಲ್ಲೇ ಸಾಲು ಸಾಲು ಅವಕಾಶಗಳನ್ನು ಪಡೆದು ಗಮನ ಸೆಳೆದಿದ್ದ ಈ ನಟಿ, ಬಳಿಕ ಅನಿರೀಕ್ಷಿತವಾಗಿ ಚಿತ್ರರಂಗದಿಂದ ದೂರವಾದರು.

ಒಂದು ಕಾಲದಲ್ಲಿ ಕೈತುಂಬಾ ಸಿನಿಮಾಗಳಿದ್ದ ‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ, ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳಿಂದಲೂ ದೂರ ಉಳಿದಿದ್ದು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ತಮ್ಮ ಸಿನಿ ಪಯಣ ಹಾಗೂ ವೃತ್ತಿಜೀವನದಲ್ಲಿ ಎದುರಿಸಿದ ಅನುಭವಗಳ ಕುರಿತು ರೇಖಾ ವೇದವ್ಯಾಸ್ ಮಾಡಿರುವ ಕೆಲವು ಮಾತುಗಳು ಮತ್ತೆ ಚರ್ಚೆಗೆ ಗ್ರಾಸವಾಗಿವೆ.

ಉದಯ್ ಕಿರಣ್ ಜೊತೆ ನಟಿಸುವ ಮೂರು ಅವಕಾಶಗಳನ್ನು ಕಳೆದುಕೊಂಡಿದ್ದ ರೇಖಾ!

ರೇಖಾ ವೇದವ್ಯಾಸ್ ಅವರಿಗೆ ತೆಲುಗು ಪ್ರೇಕ್ಷಕರಲ್ಲಿ ಉತ್ತಮ ಗುರುತು ತಂದುಕೊಟ್ಟ ಸಿನಿಮಾಗಳಲ್ಲಿ ‘ಆನಂದಂ’ ಪ್ರಮುಖವಾದುದು. ಈ ಚಿತ್ರದ ಯಶಸ್ಸಿನ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ನಂತರ ಸಾಲು ಸಾಲಾಗಿ ಸಿನಿಮಾ ಅವಕಾಶಗಳು ಅರಸಿ ಬಂದವು. ‘ಒಕಟೋ ನಂಬರ್ ಕುರ್ರಾಡು’, ‘ದೊಂಗೋಡು’, ‘ಜಾನಕಿ ವೆಡ್ಸ್ ಶ್ರೀರಾಮ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ತಮ್ಮ ಸೌಂದರ್ಯ ಮತ್ತು ಅಭಿನಯದ ಮೂಲಕ ಯುವಜನರಲ್ಲಿಯೂ ಉತ್ತಮ ಕ್ರೇಜ್ ಸಂಪಾದಿಸಿಕೊಂಡಿದ್ದರು.

ಆ ಸಮಯದಲ್ಲಿ ರೇಖಾ ವೇದವ್ಯಾಸ್ ಮುಂದೊಂದು ದಿನ ಸ್ಟಾರ್ ಹೀರೋಯಿನ್ ಆಗಿ ಮಿಂಚಲಿದ್ದಾರೆ ಎಂದೇ ಅನೇಕರು ಭಾವಿಸಿದ್ದರು. ನಾಯಕಿಯಾಗಿ ಬೆಳೆಯಲು ಬೇಕಾದ ಜನಪ್ರಿಯತೆ ಮತ್ತು ಅವಕಾಶಗಳೂ ಅವರಿಗೆ ದೊರಕಿದ್ದವು. ಆದರೆ, ವೃತ್ತಿಜೀವನ ಉತ್ತಮ ಹಂತದಲ್ಲಿದ್ದಾಗಲೇ ಅವರು ಸಿನಿಮಾಗಳಿಂದ ದೂರವಾಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ ರೇಖಾ, ಕೆರಿಯರ್‌ನಲ್ಲಿ ಕೈತಪ್ಪಿದ ಅವಕಾಶಗಳ ಕುರಿತು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದಿವಂಗತ ನಟ ಉದಯ್ ಕಿರಣ್ ಅವರ ಜೊತೆ ನಟಿಸುವ ಅವಕಾಶಗಳು ಬಂದಿದ್ದರೂ, ಕೆಲವು ಕಾರಣಗಳಿಂದ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ವಿಶೇಷವಾಗಿ, ಉದಯ್ ಕಿರಣ್ ನಟನೆಯ ಸಿನಿಮಾಗೆ ಆರಂಭದಲ್ಲಿ ತಮ್ಮನ್ನು ಆಯ್ಕೆ ಮಾಡಲಾಗಿತ್ತು.

ಆದರೆ ಅನಿವಾರ್ಯ ಕಾರಣಗಳಿಂದ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂದು ರೇಖಾ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಉದಯ್ ಕಿರಣ್ ಜೊತೆ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನೂ ಕಳೆದುಕೊಂಡಿದ್ದಾಗಿ ಬಹಿರಂಗಪಡಿಸಿದ್ದಾರೆ. ಹೀಗೆ ಒಂದೇ ನಟನ ಜೊತೆ ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೈತಪ್ಪಿದ್ದು, ತಮ್ಮ ಕೆರಿಯರ್‌ನ ಮರೆಯಲಾಗದ ಸಂಗತಿಗಳಲ್ಲಿ ಒಂದಾಗಿದೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಇದೀಗ ರೇಖಾ ಅವರ ಈ ಹೇಳಿಕೆಗಳು ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆಯುತ್ತಿವೆ.

‘ನಾನೇ ಬೇಕೆಂದು ಸಿನಿಮಾಗಳನ್ನು ಬಿಡಲಿಲ್ಲ’ ಎಂದ ನಟಿ

ಸಿನಿಮಾಗಳಿಂದ ದೂರ ಉಳಿಯಲು ಕಾರಣವೇನು ಎಂಬ ಬಗ್ಗೆಯೂ ರೇಖಾ ವೇದವ್ಯಾಸ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಾವು ಬೇಕೆಂದೇ ಸಿನಿಮಾಗಳನ್ನು ತೊರೆದಿಲ್ಲ. ಜೀವನದಲ್ಲಿ ನಾವು ಅಂದುಕೊಂಡಿದ್ದೆಲ್ಲವೂ ಅಂದುಕೊಂಡಂತೆಯೇ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ನಾವು ಒಂದು ರೀತಿ ಯೋಜನೆ ಹಾಕಿಕೊಂಡರೆ, ವಿಧಿ ಮತ್ತೊಂದು ರೀತಿಯಲ್ಲಿ ನಿರ್ಧರಿಸುತ್ತದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಕೆರಿಯರ್‌ನ ಒಂದು ಹಂತದಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸುವ ಅವಕಾಶಗಳು ಬರುತ್ತಿದ್ದ ಸಮಯದಲ್ಲೇ ಪರಿಸ್ಥಿತಿಗಳು ಏಕಾಏಕಿ ಬದಲಾದವು ಎಂದು ತಿಳಿಸಿದ್ದಾರೆ. ಕ್ರಮೇಣ ಸಿನಿಮಾ ಅವಕಾಶಗಳು ಕಡಿಮೆಯಾಗತೊಡಗಿದಾಗ ಮಾನಸಿಕವಾಗಿ ತುಂಬಾ ನೋವು ಅನುಭವಿಸಿದ್ದಾಗಿ ರೇಖಾ ಹೇಳಿದ್ದಾರೆ. ಜೀವನದಲ್ಲಿ ಹಲವು ಕಠಿಣ ಸನ್ನಿವೇಶಗಳನ್ನು ಎದುರಿಸಬೇಕಾಯಿತು ಎಂದೂ ತಿಳಿಸಿದ್ದಾರೆ. ಒಂದು ಕಾಲದಲ್ಲಿ ಬಿಡುವಿಲ್ಲದೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ತಮ್ಮ ಸಿನಿ ಪಯಣ ಹೀಗೆ ಬದಲಾಗಿದ್ದು ಬೇಸರ ಮೂಡಿಸಿತ್ತು ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಅಲ್ಪಾವಧಿಯಲ್ಲೇ ತೆಲುಗು ಪ್ರೇಕ್ಷಕರ ಮನಗೆದ್ದಿದ್ದ ರೇಖಾ ವೇದವ್ಯಾಸ್ ಅವರ ಸಿನಿಮಾ ಪಯಣ, ಕೈತಪ್ಪಿದ ಅವಕಾಶಗಳು ಹಾಗೂ ಚಿತ್ರರಂಗದಿಂದ ದೂರವಾದ ಹಿಂದಿನ ಅನುಭವಗಳ ಕುರಿತ ಮಾತುಗಳು ಇದೀಗ ಮತ್ತೆ ಸುದ್ದಿಯಾಗಿವೆ. ಮುಖ್ಯವಾಗಿ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್, ದರ್ಶನ್, ಗಣೇಶ್‌ ರೀತಿಯ ನಟರ ಜೊತೆ ತೆರೆ ಹಂಚಿಕೊಂಡಿದ್ದರು. 'ರಾಜ್‌ ದಿ ಶೋಮ್ಯಾನ್' ಚಿತ್ರದ ಹಾಡೊಂದರಲ್ಲಿ ಅಪ್ಪು ಜೊತೆ ಮಿಂಚಿದ್ದರು. 'ಹುಚ್ಚ' ಚಿತ್ರದಲ್ಲಿ ಸುದೀಪ್‌ಗೆ ಜೋಡಿಯಾಗಿ ನಟಿಸಿದ್ದರು.