ದಕ್ಷಿಣ ಭಾರತದ ಹೆಮ್ಮೆಯ ನಟಿ ಸೌಂದರ್ಯ ಅವರು ಮಾಡಿದ್ದ ಒಂದೇ ಒಂದು ತಪ್ಪಿಗಾಗಿ ಸಿನಿಮಾ ನಿರ್ದೇಶಕರಿಗೆ ತಾವೇ ಸ್ವತಃ ಕರೆ ಮಾಡಿ ಕ್ಷಮೆ ಕೇಳಿದ್ದಾರೆ. ಅದರೆ, ಈ ಕ್ಷಮೆ ಕೇಳಿದ್ದರ ಹಿಂದಿನ ಅಸಲಿ ಸತ್ಯವನ್ನು ಸ್ವತಃ ನಿರ್ದೇಶಕರೇ 22 ವರ್ಷಗಳ ಬಳಿಕ ರಿವೀಲ್ ಮಾಡಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆ, ನೈಸರ್ಗಿಕ ಸೌಂದರ್ಯ ಹಾಗೂ ಉನ್ನತ ಮಾನವೀಯ ಮೌಲ್ಯಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದ ಸೌಂದರ್ಯ (Soundarya) ಅವರ ನೆನಪುಗಳು ಇಂದಿಗೂ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ನಲ್ಲಿ ಅಜರಾಮರ. ಕನ್ನಡದ ಹೆಮ್ಮೆಯ ನಟಿಯಾಗಿದ್ದ ಸೌಂದರ್ಯ ತೆಲುಗು ಚಿತ್ರರಂಗದಲ್ಲೂ 'ಮಹಾನಟಿ'ಯಾಗಿ ಸೌಂಡ್ ಮಾಡಿದ್ದರು.
ಆದರೆ, ತಮ್ಮ ವೃತ್ತಿಜೀವನದ ಉನ್ನತ ಹಂತದಲ್ಲಿದ್ದಾಗ ಕನ್ನಡತಿ ಸೌಂದರ್ಯ ಅವರು ಖ್ಯಾತ ತೆಲುಗು ನಿರ್ದೇಶಕ ಎಸ್.ವಿ. ಕೃಷ್ಣಾ ರೆಡ್ಡಿ (S.V. Krishna Reddy) ಅವರಿಗೆ ಕರೆ ಮಾಡಿ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಿದ್ದ ಘಟನೆಯೊಂದನ್ನು ಸ್ವತಃ ನಿರ್ದೇಶಕರೇ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.
'ಯಮಲೀಲ' ಸಿನಿಮಾ ಟೈಮ್ನಲ್ಲಿ ಏನಾಯ್ತು?
ಟಾಲಿವುಡ್ನಲ್ಲಿ 'ಯಮಲೀಲ' (Yamaleela) ಸಿನಿಮಾ ನಿರ್ದೇಶನ ಮಾಡುವ ಸಂದರ್ಭದಲ್ಲಿ, ನಾಯಕನಾಗಿ ಹಾಸ್ಯ ನಟ ಅಲಿ (Ali) ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಚಿತ್ರದ ನಾಯಕಿ ಪಾತ್ರಕ್ಕಾಗಿ ನಿರ್ದೇಶಕ ಎಸ್.ವಿ. ಕೃಷ್ಣಾ ರೆಡ್ಡಿ ಮೊದಲು ಕನ್ನಡತಿ ಸೌಂದರ್ಯ ಅವರನ್ನು ಸಂಪರ್ಕಿಸಿದ್ದರು. ಆದರೆ ಆ ಸಮಯದಲ್ಲಿ ನಾಯಕಿಯಾಗಿ ಬೆಳೆಯುತ್ತಿದ್ದ ಸೌಂದರ್ಯ, ಕಾಮಿಡಿಯನ್ ಪಕ್ಕ ನಟಿಸಲು ಸ್ವಲ್ಪ ಹಿಂಜರಿದು ಆ ಅವಕಾಶವನ್ನು ನಯವಾಗಿ ನಿರಾಕರಿಸಿದ್ದರು. ನಂತರ ಆ ಪಾತ್ರದಲ್ಲಿ ಇಂದ್ರಜಾ ನಟಿಸಿ, ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯಿತು.
ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದ್ದ ಕನ್ನಡಿಗರ ನೆಚ್ಚಿನ ನಟಿ!
ಸಿನಿಮಾ ಬಿಡುಗಡೆಯಾಗಿ ಭಾರಿ ಯಶಸ್ಸು ಕಾಣುತ್ತಿದ್ದಂತೆ, ಕನ್ನಡತಿ ಸೌಂದರ್ಯ ತಾನು ತಪ್ಪು ನಿರ್ಧಾರ ತೆಗೆದುಕೊಂಡೆ ಎಂದು ಹೇಳಿಕೊಂಡರು. ತಕ್ಷಣವೇ ಯಾವುದೇ ಅಹಂಕಾರವಿಲ್ಲದೆ ನಿರ್ದೇಶಕ ಎಸ್.ವಿ. ಕೃಷ್ಣಾ ರೆಡ್ಡಿ ಅವರಿಗೆ ಸ್ವತಃ ಕರೆ ಮಾಡಿ, "ಸರ್, ನಾನು ತುಂಬಾ ದೊಡ್ಡ ತಪ್ಪು ಮಾಡಿದೆ. ನಿಮ್ಮ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ, ನನ್ನನ್ನು ಕ್ಷಮಿಸಿ" ಎಂದು ನಿಷ್ಕಪಟವಾಗಿ ಒಪ್ಪಿಕೊಂಡರು. ಸ್ಟಾರ್ ನಾಯಕಿಯಾಗಿ ಮೆರೆಯುತ್ತಿದ್ದ ಸಂದರ್ಭದಲ್ಲಿಯೂ ಸ್ವತಃ ಕರೆ ಮಾಡಿ ಕ್ಷಮೆ ಕೇಳಿದ ಆಕೆಯ ವಿನಯ ಹಾಗೂ ದೊಡ್ಡ ಗುಣವನ್ನು ನಿರ್ದೇಶಕರು ಇಂದಿಗೂ ಕೊಂಡಾಡುತ್ತಾರೆ.
ಮಾನವೀಯ ಮೌಲ್ಯಗಳ ಮೂರ್ತಿ 'ಸೌಂದರ್ಯ'
ಅಷ್ಟಕ್ಕೇ ನಿಲ್ಲದ ಸೌಂದರ್ಯ, 'ನಿಮ್ಮ ಸಿನಿಮಾದಲ್ಲಿ ಸಣ್ಣ ಪಾತ್ರ ಸಿಕ್ಕರೂ ನಟಿಸುತ್ತೇನೆ' ಎಂದು ಕೋರಿದ್ದರು. ನಂತರ ಎಸ್.ವಿ. ಕೃಷ್ಣಾ ರೆಡ್ಡಿ ಅವರ 'ಮಾಯಾಲೋಡು' ಸಿನಿಮಾದಲ್ಲಿ ಹಾಸ್ಯನಟ ಬಾಬು ಮೋಹನ್ ಅವರ ಜೊತೆಗಿನ ವಿಶೇಷ ಹಾಡಿನಲ್ಲಿ ಅಭಿನಯಿಸಿ ತಮ್ಮ ಮಾತನ್ನು ಉಳಿಸಿಕೊಂಡರು. 2004 ರಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕನ್ನಡತಿ ಸೌಂದರ್ಯ ಅಕಾಲಿಕ ಮರಣ ಹೊಂದಿದ್ದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಕನ್ನಡದ ಈ ಶ್ರೇಷ್ಠ ನಟಿಯ ನಟನೆ ಮತ್ತು ಸಂಸ್ಕಾರ ಸದಾ ಸಾಗರದಾಚೆಯೂ ಪ್ರೇಕ್ಷಕರ ಮನಸ್ಸಿನಲ್ಲಿ ಗೌರವವನ್ನು ಕಾಯ್ದುಕೊಂಡಿದೆ.














