ಕನ್ನಡದ ನಟಿ ರುಕ್ಮಿಣಿ ವಸಂತ್ಗೆ ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಎಂದರೆ ತುಂಬಾ ಇಷ್ಟವಂತೆ. ಅವರ ಜೊತೆ ಒಂದೇ ಒಂದು ಸಿನಿಮಾದಲ್ಲಾದರೂ ನಟಿಸಬೇಕು ಎಂಬ ಆಸೆಯನ್ನು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಒಂದೇ ಒಂದು ಸಿನಿಮಾದ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿ, ಕಡಿಮೆ ಸಮಯದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಟಿಯರಲ್ಲಿ ರುಕ್ಮಿಣಿ ವಸಂತ್ ಕೂಡ ಒಬ್ಬರು. ತಮ್ಮ ಸೌಂದರ್ಯ ಮತ್ತು ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಈ ಕನ್ನಡದ ಬೆಡಗಿ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗು ಚಿತ್ರರಂಗದ ತಮ್ಮ ನೆಚ್ಚಿನ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿದ್ದು, ಅವರ ಜೊತೆ ನಟಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಆ ಹೀರೋ ಅಂದ್ರೆ ರುಕ್ಮಿಣಿಗೆ ತುಂಬಾ ಇಷ್ಟ!
ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬೆಂಗಳೂರಿನ ಬೆಡಗಿ ರುಕ್ಮಿಣಿ ವಸಂತ್, ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಪ್ರಿಯಾ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ಅವರಿಗೆ ದಕ್ಷಿಣ ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಯಿತು. ತಮ್ಮ ಸಹಜ ಅಭಿನಯದ ಮೂಲಕವೇ ಅಪಾರ ಜನಪ್ರಿಯತೆ ಗಳಿಸಿದ ರುಕ್ಮಿಣಿ, ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಸಿನಿಮಾದಲ್ಲೂ ನಟಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿನ ಅವರ ಅಭಿನಯಕ್ಕೂ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಜೂ. ಎನ್ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'ಡ್ರ್ಯಾಗನ್' ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ.
ನ್ಯಾಚುರಲ್ ಸ್ಟಾರ್ ಜೊತೆ ನಟಿಸಬೇಕು ಎಂಬ ಆಸೆ!
ಇತ್ತೀಚಿನ ಸಂದರ್ಶನವೊಂದರಲ್ಲಿ ರುಕ್ಮಿಣಿ ವಸಂತ್ ಅವರಿಗೆ, "ತೆಲುಗು ಚಿತ್ರರಂಗದಲ್ಲಿ ನಿಮಗೆ ಇಷ್ಟವಾದ ನಟ ಯಾರು? ಯಾರ ಜೊತೆ ತೆರೆ ಹಂಚಿಕೊಳ್ಳಲು ಬಯಸುತ್ತೀರಿ?" ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಯಾವುದೇ ಮುಚ್ಚುಮರೆಯಿಲ್ಲದೆ ಉತ್ತರಿಸಿದ ರುಕ್ಮಿಣಿ, ತೆಲುಗಿನಲ್ಲಿ ತಮಗೆ ನ್ಯಾಚುರಲ್ ಸ್ಟಾರ್ ನಾನಿ ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.
ನಾನಿ ಅವರ ಸಹಜ ಅಭಿನಯ, ವಿಭಿನ್ನ ಪಾತ್ರಗಳ ಆಯ್ಕೆ ಹಾಗೂ ಭಾವನೆಗಳನ್ನು ತೆರೆಮೇಲೆ ಕಟ್ಟಿಕೊಡುವ ರೀತಿ ತಮ್ಮನ್ನು ಬಹಳವಾಗಿ ಆಕರ್ಷಿಸುತ್ತದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಅವರ ಜೊತೆ ಒಂದೇ ಒಂದು ಸಿನಿಮಾದಲ್ಲಾದರೂ ನಟಿಸಿ ತೆರೆ ಹಂಚಿಕೊಳ್ಳಬೇಕು ಎಂಬುದು ತಮ್ಮ ಆಸೆ ಎಂದು ಮನದ ಮಾತು ಬಿಚ್ಚಿಟ್ಟಿದ್ದಾರೆ.
ರುಕ್ಮಿಣಿ-ನಾನಿ ಜೋಡಿಗೆ ಫ್ಯಾನ್ಸ್ ಫಿದಾ!
ರುಕ್ಮಿಣಿ ವಸಂತ್ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾನಿ ಅಭಿಮಾನಿಗಳು ನಟಿಯ ಮಾತಿಗೆ ಸಂತಸ ವ್ಯಕ್ತಪಡಿಸುತ್ತಿದ್ದು, ಈ ಇಬ್ಬರು ಪ್ರತಿಭಾವಂತ ಕಲಾವಿದರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಅದ್ಭುತವಾಗಿರುತ್ತದೆ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಒಂದೆಡೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ರುಕ್ಮಿಣಿ ವಸಂತ್ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ನ್ಯಾಚುರಲ್ ಸ್ಟಾರ್ ನಾನಿ ಜೊತೆ ನಟಿಸುವ ಅವರ ಆಸೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಕನ್ನಡದ ಬೆಡಗಿಗೆ ತಮ್ಮ ಡ್ರೀಮ್ ಹೀರೋ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಯಾವಾಗ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ!














