ಚಾಲೆಂಜಿಂಗ್ ಸ್ಟಾರ್ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಬೆನ್ನುನೋವಿನ ನೆಪ ಹೇಳಿ ವಿನಾಯಿತಿ ಕೋರಿದ್ದಾರೆ. ಆದರೆ, ಸ್ನೇಹಿತನ ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿರುವುದು ವಿವಾದಕ್ಕೆ ಕಾರಣವಾಗಿದೆ. ವಿಚಾರಣೆಗೆ ಗೈರು ಹಾಜರಾಗಿ ಸಿನಿಮಾ ನೋಡಿದ್ದು ನ್ಯಾಯಾಂಗ ನಿಂದನೆ ಎಂದು ಟೀಕೆಗಳು ಕೇಳಿಬಂದಿವೆ. ಸಾಕ್ಷಿ ಚಿಕ್ಕಣ್ಣನನ್ನೂ ಕರೆದುಕೊಂಡು ಹೋಗಿದ್ದು ಅನುಮಾನಕ್ಕೆ ಎಡೆಮಾಡಿದೆ.

ಬೆಂಗಳೂರು (ಏ.10): ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದು ಬಿರುದು ಪಡೆದ ನಟ ದರ್ಶನ್ ತೂಗುದೀಪ ಇಡೀ ದೇಶವೇ ಗೌರವ ಕೋರ್ಟ್‌ಗೆ ಚಾಲೆಂಜ್ ಮಾಡುತ್ತಿದ್ದಾರಾ? ಎಂಬ ಅನುಮಾನ ಎದುರಾಗಿದೆ. ಕೇಸ್ ಇದೆ ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದರೆ, ಬೆನ್ನು ನೋವಿದೆ ಎಂದು ಸಬೂಬು ಹೇಳಿಕೊಂಡು ಕೋರ್ಟ್‌ಗೆ ಹಾಜರಾಗುವುದಕ್ಕೆ ಚಕ್ಕರ್ ಹಾಕಿ, ಸ್ನೇಹಿತನ ಸಿನಿಮಾವನ್ನು ನೋಡಲು ಥಿಯೇಟರ್‌ಗೆ ಹಾಜರಾಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗಿಬಂದಿರುವ ನಟ ದರ್ಶನ್ ನ್ಯಾಯಾಲಯದಿಂದ ಕೊಡಲಾದ ಜಾಮೀನಿನ ಮೇಲೆ ಹೊರಗೆ ಬಂದು ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ, ಕೋರ್ಟ್‌ ಜಾಮೀನು ನೀಡುವ ವೇಳೆ ಆಗಿಂದಾಗ್ಗೆ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು, ಎಂದು ಷರತ್ತು ಹಾಕಲಾಗಿತ್ತು. ಜೈಲಿನಿಂದ ಬಿಡುಗಡೆ ಆಗುವಾಗ ಎಲ್ಲ ಷರತ್ತುಗಳಿಗೂ ಒಪ್ಪಿಕೊಂಡು ಸಹಿ ಹಾಕಿ ಜೈಲಿನಿಂದ ಹೊರಗೆ ಬಂದಿದ್ದಾರೆ. ಇದಾದ ನಂತರ ಕೋರ್ಟ್ ವಿಚಾರಣೆಗೆ ಕರೆದರೆ, ತಾನೊಬ್ಬ ಸೆಲೆಬ್ರಿಟಿ ಎಂಬ ಅಹಂ ಬಿಡದೇ, ತನಗೆ ಬೆನ್ನು ನೋವಿದೆ ಎಂದು ಸಬೂಬು ಹೇಳಿಕೊಂಡು ಕೋರ್ಟ್ ವಿಚಾರಣೆಯಿಂದ ವಿನಾಯಿತಿ ಕೋರಿದ್ದಾನೆ. ಆದರೆ, ಕೇಸಿನ ವಿಚಾರಣೆ ವೇಳೆ ಆರೋಪಿ ಆದಮೇಲೆ ಎಲ್ಲರೂ ಕೋರ್ಟಿನ ಮುಂದೆ ಹಾಜರಿರಲೇಬೇಕು. ಯಾರಿಗೂ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ವಿಚಾರಣೆ ಮುಂದೂಡಿ, ಮುಂದಿನ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆಯನ್ನು ನೀಡಿದೆ.

ನಿನ್ನೆ ರಾತ್ರಿ ಮೂರು ಗಂಟೆಗಳ ಕಾಲ ವಿಶೇಷ ಸಿನಿಮಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ಇದೀಗ ಸಂಚಲನ ಮೂಡಿಸಿದೆ. ಕೋರ್ಟ್ ವಿಚಾರಣೆಗೆ ದರ್ಶನ್ ಹಾಜರಾಗದೆ ಇದೇ ಸಮಯದಲ್ಲಿ ಧನವೀರ್ ನಟನೆಯ ವಾಮನ ಸಿನಿಮಾಗೆ ಆಯೋಜಿಸಲಾಗಿದ್ದ ವಿಶೇಷ ಶೋನಲ್ಲಿ ಅವರು ಭಾಗವಹಿಸಿದ್ದು ಹೊಸದೊಂದು ವಿವಾದಕ್ಕೆ ಕಾರಣವಾಗಿದೆ. ದರ್ಶನ್‌ಗೆ ಮಾತ್ರವಾಗಿ ಆಯೋಜಿಸಲಾದ ಈ ಪ್ರದರ್ಶನದಲ್ಲಿ ಅವರು ತಮ್ಮ ಬೆನ್ನು ನೋವಿನ ನಿರ್ಣಯವನ್ನೂ ಬದಿಗೆ ತಳ್ಳಿದ್ದು, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವವಿಲ್ಲದಂತೆ ನಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ವಾಮನ ಸಿನಿಮಾ ಕುರಿತು ದರ್ಶನ್ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ: ಧನ್ವೀರ್‌

ಕೇವಲ ಎರಡು ದಿನಗಳ ಹಿಂದೆ ಕೋರ್ಟ್ ವಿಚಾರಣೆಗೆ ಹಾಜರಾಗದೆ ವಿನಾಯಿತಿ ಕೋರಿದ್ದ ಆರೋಪಿ ದರ್ಶನ್, ಕೇವಲ ಒಂದು ದಿನದ ಅಂತರದಲ್ಲಿ ಗತ್ತಿನಿಂದಲೇ ಬಂದು ತನ್ನ ಆಪ್ತ ಧನ್ವೀರ್ ನಟನೆಯ ವಾಮನ ಸಿನಿಮಾದ ವಿಶೇಷ ಶೋವನ್ನು 3 ಗಂಟೆಗಳ ಕಾಲ ಕುಳಿತು ವೀಕ್ಷಣೆ ಮಾಡಿದ್ದಾರೆ. ಅಂದರೆ, ಕೋರ್ಟ್‌ಗೆ ಗೌರವ ಕೊಡದೇ ಸ್ನೇಹಿತನಿಗೆ ಗೌರವ ಕೊಟ್ಟು ಸಿನಿಮಾ ನೋಡಲು ಹೋಗಿರುವುದಕ್ಕೆ ಭಾರೀ ಆರೋಪಗಳು ಕೇಳಿಬಂದಿದೆ. ಕೋರ್ಟ್‌ ಮೇಲಿನ ಗೌರವಕ್ಕಿಂತ ಸಿನಿಮಾ ಪ್ರಮೋಷನ್‌ನಲ್ಲಿ ಪಾಲ್ಗೊಳ್ಳುವುದೇ ಹೆಚ್ಚಾಯ್ತಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇನ್ನು ಧನವೀರ್ ನಟನೆಯ ವಾಮನ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್‌ಗಾಗಿ ಕಳೆದ ರಾತ್ರಿ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು.

ಇನ್ನು ರೇಣುಕಾಸ್ವಾಮಿ ಕೊಲೆ ನಡೆದ ದಿನ ನಟ ದರ್ಶನ್ ಜೊತೆಗೆ ಹಾಸ್ಯನಟ ಚಿಕ್ಕಣ್ಣ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆದರೆ, ಚಿಕ್ಕಣ್ಣ ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದ್ದರೂ, ಈ ಪ್ರಕರಣಕ್ಕೆ ಒಬ್ಬ ಸಾಕ್ಷಿದಾರ ಆಗಿದ್ದಾರೆ. ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವೇಳೆಯೂ ಚಿಕ್ಕಣ್ಣ ಅಲ್ಲಿಗೆ ಹೋಗಿ ಆರೋಪಿಯನ್ನು ಭೇಟಿ ಮಾಡಿ ಬಂದಿದ್ದರು. ನಂತರ, ಬಸವೇಶ್ವರ ನಗರ ಠಾಣೆ ಪೊಲೀಸರು ಸಾಕ್ಷಿದಾರನ ಮೇಲೆ ದರ್ಶನ್ ಪ್ರಭಾವ ಬೀರುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಚಿಕ್ಕಣ್ಣನನ್ನು ವಿಚಾರಣೆಗೆ ಕರೆದಿದ್ದರು. ಇದಾದ ಬಳಿಕ ನಟ ದರ್ಶನ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದೀಗ ದರ್ಶನ್ ಕೇಸಿನ ಸಾಕ್ಷಿದಾರ ಆಗಿರುವ ಚಿಕ್ಕಣ್ಣನನ್ನು ಜೊತೆಗೆ ಕರೆದುಕೊಂಡು ಸಿನಿಮಾ ವೀಕ್ಷಣೆಗೆ ಹೋಗಿದ್ದು, ಪುನಃ ಸಾಕ್ಷಿದಾರನ ಮೇಲೆ ಪ್ರಭಾವ ಬೀರುತ್ತಿದ್ದಾರಾ? ಎಂಬ ಗುಮಾನಿಯೂ ಪೊಲೀಸರಿಗೆ ಮೂಡಿದೆ.

ಇದನ್ನೂ ಓದಿ: ಎಲ್ಲರ ಮುಂದೆ ಆ ಮಾತು ಆಡಿದ ನಟ ದರ್ಶನ್;‌ ನಾಚಿ ನೀರಾಗಿ ತಲೆ ಬಗ್ಗಿಸಿದ ʼವಾಮನʼ ಹೀರೋ!