ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್, ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರು. ಆದರೆ, ನಟ ಧನ್ವೀರ್ ಅವರ "ವಾಮನ" ಸಿನಿಮಾ ಪ್ರೀಮಿಯರ್ ಶೋನಲ್ಲಿ ಭಾಗವಹಿಸಿದ್ದರು. ನ್ಯಾಯಾಧೀಶರು ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಲು ಎಚ್ಚರಿಕೆ ನೀಡಿದ್ದಾರೆ. ದರ್ಶನ್ ಬೆನ್ನುನೋವಿನ ನೆಪ ಹೇಳಿ ಗೈರಾಗಿದ್ದು, ಈ ಹಿಂದೆ "ದಿ ಡೆವಿಲ್" ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಆರೋಪಿ ಆಗಿರುವ ನಟ ದರ್ಶನ್ ಅವರು ಇತ್ತೀಚೆಗೆ ವಿಚಾರಣೆಗೆಂದು ನ್ಯಾಯಾಲಯಕ್ಕೆ ಆಗಮಿಸಿರಲಿಲ್ಲ. ಈಗ ನಟ ಧನ್ವೀರ್ ಅವರ ʼವಾಮನʼ ಸಿನಿಮಾದ ಪ್ರೀಮಿಯರ್ ಶೋಗೆ ಬಂದಿದ್ದಾರೆ.
ಧನ್ವೀರ್ ಜೊತೆ ಮಾತ್ರ ಸ್ನೇಹ!
ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ, ಚಿಕ್ಕಣ್ಣ ನಟನೆಯ ʼವಾಮನʼ ಸಿನಿಮಾ ಏಪ್ರಿಲ್ 10ರಂದು ರಿಲೀಸ್ ಆಗಲಿದೆ. ಹೀಗಾಗಿ ಸಿನಿಮಾ ತಂಡ ಪ್ರೀಮಿಯರ್ ಶೋ ಇಟ್ಟಿತ್ತು. ಆ ವೇಳೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು, ಅಲ್ಲಿ ನಟ ದರ್ಶನ್ ತೂಗುದೀಪ ಭಾಗವಹಿಸಿದ್ದು ಮಾತ್ರ ವಿಶೇಷ. ಜೈಲಿನಿಂದ ಬಂದ ಬಳಿಕ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಅವರು ನಟ ಧನ್ವೀರ್ ಜೊತೆಗೆ ಉತ್ತಮ ಸಂಪರ್ಕ ಹೊಂದಿದ್ದಾರೆ.
ಕಾಲೆಳೆದ ನಟ ದರ್ಶನ್!
ಪ್ರೀಮಿಯರ್ ಶೋ ವೇಳೆ ಅವರು, ಧನ್ವೀರ್ ಕಾಲೆಳೆದಿದ್ದಾರೆ. “ನಟ ಧನ್ವೀರ್ ಮದುವೆಗೆ ಪಂಚೆ, ಶರ್ಟ್ ಕೊಡಬೇಕು, ಆರತಕ್ಷತೆಗೆ ಸೂಟ್ ಕೊಡಬೇಕು, ಇವರ ಮದುವೆಯಲ್ಲಿ ನಮಗೆ ಫ್ರೀ ಬಟ್ಟೆ ಸಿಗತ್ತೆ. ಆದಷ್ಟು ಬೇಗ ಮದುವೆ ಮಾಡಬೇಕು” ಎಂದು ಹೇಳಿ ಕಾಲೆಳೆದಿದ್ದಾರೆ. ನಟ ದರ್ಶನ್ ಮಾತು ಕೇಳಿ ಧನ್ವೀರ್ ನಾಚಿ ನೀರಾಗಿದ್ದಾರೆ.
ನಟ ದರ್ಶನ್ ಅವರು ಜೈಲಿನಿಂದ ಹೊರಗಡೆ ಬರುತ್ತಿದ್ದಂತೆ ವಿಡಿಯೋವೊಂದನ್ನು ಶೇರ್ ಮಾಡಿದ್ದು, “ನನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದ ಧನ್ವೀರ್‌ಗೆ ಧನ್ಯವಾದಗಳು” ಎಂದು ಹೇಳಿದ್ದರು. “ವಾಮನ ಸಿನಿಮಾದ ಮುದ್ದುರಾಕ್ಷಸಿ ಹಾಡು ತುಂಬ ಚೆನ್ನಾಗಿದೆ. ಈ ಪದ ಎಲ್ಲಿ ಸಿಗ್ತು? ಹೇಗೆ ಹುಡುಕಿದ್ರಿ ಅಂತ ಕೇಳುತ್ತಿದ್ದೆ, ನನ್ನ ಹೆಂಡ್ತಿ ಕಿರಿಕ್ ಮಾಡಿದಾಗೆಲ್ಲ ನಾನು ಮುದ್ದುರಾಕ್ಷಸಿ ಥರ ಇದ್ಯಾ ಕಣೇ ಅಂತ ಹೇಳ್ತೀನಿ” ಎಂದು ಹೇಳಿದ್ದರು.
ಕೋರ್ಟ್‌ಗೆ ಚಕ್ಕರ್!
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ CCH 57ನೇ ನ್ಯಾಯಾಲಯದಲ್ಲಿ ವಿಚಾರಣೆ ದಿನಾಂಕ ನಿಗದಿಯಾಗಿದ್ದರೂ ಕೂಡ, ನಟ ದರ್ಶನ್ ಮಾತ್ರ ಹಾಜರಿ ಹಾಕಿರಲಿಲ್ಲ. ಎ1 ಆರೋಪಿ ದರ್ಶನ್ ಗೆಳತಿ ಪವಿತ್ರಾ ಗೌಡ, ಉಳಿದ ಆರೋಪಿಗಳು ಹಾಜರಿ ಹಾಕಿದ್ದರು. ನಟ ದರ್ಶನ್ ಅವರು ಬೆನ್ನುನೋವಿನ ನೆಪ ಹೇಳಿ ಕೋರ್ಟ್‌ಗೆ ಬಂದಿರಲಿಲ್ಲ. ಆಗ ನ್ಯಾಯಾಧೀಶರು ದರ್ಶನ್ ಪರ ವಕೀಲರಿಗೆ ಕೋರ್ಟ್ ಆವರಣದಲ್ಲಿಯೇ “ವಿಚಾರಣೆ ದಿನ ಆರೋಪಿ ಕಡ್ಡಾಯವಾಗಿ ಕೋರ್ಟ್‌ಗೆ ಬರಬೇಕು” ಎಂದು ಎಚ್ಚರಿಕೆ ನೀಡಿದೆ.
ಬೆನ್ನು ನೋವಿನ ಕಾರಣ ಹೇಳಿ ದರ್ಶನ್ ಅವರು, ಅಭಿಮಾನಿಗಳ ಜೊತೆ ಜನ್ಮದಿನ ಕೂಡ ಆಚರಿಸಿಕೊಂಡಿರಲಿಲ್ಲ. ಆ ನಂತರ ಮೈಸೂರು, ರಾಜಸ್ಥಾನದಲ್ಲಿ 'ದಿ ಡೆವಿಲ್' ಸಿನಿಮಾದ ಶೂಟಿಂಗ್ ನಡೆದಿದ್ದು, ಅಲ್ಲಿ ಭಾಗಿಯಾಗಿದ್ದರು. ಆ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಇದ್ದರು. 28 ಗಂಟೆಗಳ ಕಾಲ ಸತತವಾಗಿ 'ದಿ ಡೆವಿಲ್' ಸಿನಿಮಾ ಶೂಟಿಂಗ್ ನಡೆದಿತ್ತು. ಇದರಿಂದಾಗಿ ಬೆನ್ನುನೋವು ಹೆಚ್ಚಾಗಿದೆ ಎಂದು ಹೇಳಿ ಕೋರ್ಟ್‌ಗೆ ಗೈರು ಹಾಕಿದ್ದರು ಎನ್ನಲಾಗಿದೆ.
ನ್ಯಾಯಾಧೀಶರಿಂದ ಎಚ್ಚರಿಕೆ
ನ್ಯಾಯಾಧೀಶರು ಮಾತನಾಡಿ, “ವಿಚಾರಣೆ ನಡೆಯುವಾಗ ಆರೋಪಿಗಳು ಕಡ್ಡಾಯವಾಗಿ ಕೋರ್ಟ್‌ನಲ್ಲಿ ಇರಬೇಕು” ಎಂದು ಹೇಳಿದ್ದಲ್ಲದೆ, ಹೈಕೊರ್ಟ್ ಜಾಮೀನು ಷರತ್ತಿನಲ್ಲಿ ಬೆಂಗಳೂರು ನಗರ ವ್ಯಾಪ್ತಿ ಬಿಟ್ಟು ಬೇರೆ ಕಡೆ ತೆರಳಲು ಅನುಮತಿ ನೀಡಿತ್ತು ಎಂದು ತಿಳಿಸಿದ್ದಲ್ಲದೆ, ಆದೇಶ ಪ್ರತಿಯನ್ನು ನ್ಯಾಯಾಧೀಶರಿಗೆ ವಕೀಲರು ನೀಡಿದ್ದರು. ಈ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಲಾಗಿದೆ.
ಏನಾಗಿತ್ತು?
ಚಿತ್ರದುರ್ಗ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ್ದರು. ಹೀಗಾಗಿ ಪವಿತ್ರಾ ಸ್ನೇಹಿತ ದರ್ಶನ್ ಅವರು ತಮ್ಮ ಗ್ಯಾಂಗ್‌ಗೆ ಹೇಳಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ, ಹೊಡೆದಿದ್ದಾರೆ. ಈ ಹೊಡೆತ ತಾಳದೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಳೆದ 2024 ಜೂನ್ 8ರಂದು ಕೊಲೆ ನಡೆದಿದ್ದು, ಅಲ್ಲಿಂದ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆ ಬಳಿಕ ತಿಂಗಳಾನುಗಟ್ಟಲೇ ದರ್ಶನ್ ಜೈಲಿನಲ್ಲಿದ್ದರು. ಷರತ್ತುಬದ್ಧ ಜಾಮೀನು ಮೂಲಕ ಹೊರಗಡೆ ಬಂದಿದ್ದರು. ದರ್ಶನ್, ಪವಿತ್ರಾಗೌಡರ ಜಾಮೀನು ರದ್ದು ಮಾಡಿ ಎಂದು ಪೊಲೀಸರು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ವಿಚಾರಣೆಗೂ ಒಪ್ಪಿಗೆ ನೀಡಿದೆ.
