ವಾಮನ ಸಿನಿಮಾ ಕುರಿತು ದರ್ಶನ್ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ: ಧನ್ವೀರ್
ವಾಮನ ಅಂದ್ರೆ ವಿಷ್ಣುವಿನ ಐದನೇ ಅವತಾರ. ಈ ಸಿನಿಮಾದಲ್ಲಿ ಆ ಅವತಾರವನ್ನು ಪ್ರತಿಬಿಂಬಿಸುವ ಪಾತ್ರ ನನ್ನದು. ಗುಣ ಅನ್ನುವುದು ನನ್ನ ಪಾತ್ರದ ಹೆಸರು. ಅವನನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.

‘ನನ್ನ ಮೊದಲ ಸಿನಿಮಾದಿಂದಲೂ ದರ್ಶನ್ ನನ್ನ ಜೊತೆ ನಿಂತಿದ್ದಾರೆ. ಪ್ರತೀ ಚಿತ್ರಕ್ಕೂ ನಾನು ಅವರ ಸಲಹೆ ಪಡೆದುಕೊಂಡೇ ಮುಂದುವರಿದಿದ್ದೇನೆ. ವಾಮನ ಸಿನಿಮಾ ಕುರಿತು ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದಾರೆ. ನಾನು ಅವರು ಸಿನಿಮಾ ನೋಡಿದ ಮೇಲೆ ಏನು ಹೇಳುತ್ತಾರೆ ಎಂಬುದನ್ನು ತಿಳಿಯಲು ಕಾತರನಾಗಿದ್ದೇನೆ’.
- ಹೀಗೆ ಹೇಳಿದ್ದು ಧನ್ವೀರ್. ಅವರು ನಟಿಸಿರುವ ‘ವಾಮನ’ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಶಂಕರ್ ರಾಮನ್ ನಿರ್ದೇಶನದ, ಚೇತನ್ ಗೌಡ ನಿರ್ಮಾಣದ ಈ ಸಿನಿಮಾ ಕುರಿತು ಅವರು, ವಾಮನ ಅಂದ್ರೆ ವಿಷ್ಣುವಿನ ಐದನೇ ಅವತಾರ. ಈ ಸಿನಿಮಾದಲ್ಲಿ ಆ ಅವತಾರವನ್ನು ಪ್ರತಿಬಿಂಬಿಸುವ ಪಾತ್ರ ನನ್ನದು.
ಗುಣ ಅನ್ನುವುದು ನನ್ನ ಪಾತ್ರದ ಹೆಸರು. ಅವನನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವನು ನಿರೀಕ್ಷೆಯನ್ನೂ ಮೀರಿ ಸಮಾಜದಲ್ಲಿ ಪ್ರಕಟಗೊಳ್ಳುತ್ತಾನೆ. ಕೆಟ್ಟ ಜಗತ್ತಿನಲ್ಲಿ ಅವನೂ ಕೆಟ್ಟವನಾಗುತ್ತಾನೆಯೇ ಅಥವಾ ತಿರುಗಿ ಬೀಳುತ್ತಾನೆಯೇ ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು ಎನ್ನುತ್ತಾರೆ.
ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿರುವ ಅವರು, ಈ ಚಿತ್ರದ ಫೈಟಿಂಗ್ ದೃಶ್ಯಗಳಿಗೆ ನಾನು ತುಂಬಾ ಶ್ರಮ ಪಟ್ಟಿದ್ದೇನೆ. ಪ್ರತೀ ಫೈಟ್ ಕೂಡ ಕತೆ ಹೇಳಬೇಕು ಎಂಬ ಆಶಯದಿಂದ ನಟಿಸಿದ್ದೇನೆ. ರೋಪ್ ಇಲ್ಲದೆ, ರಿಸ್ಕ್ ತೆಗೆದುಕೊಂಡು ಫೈಟಿಂಗ್ ಮಾಡಿದ್ದೇನೆ.
ಆ ತೀವ್ರತೆ ಪ್ರೇಕ್ಷಕರಿಗೂ ದಾಟುತ್ತದೆ ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ಒಂದು ದೊಡ್ಡ ತಿರುವುದು ತಂದುಕೊಡುತ್ತದೆ ಎಂಬ ಭರವಸೆ ಹೊಂದಿದ್ದೇನೆ ಎಂದರು. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ತಾರಾ ಅನುರಾಧ, ಸಂಪತ್ ರಾಜ್, ಚಿತ್ಕಲಾ ಬಿರಾದಾರ್, ಕಾಕ್ರೋಚ್ ಸುಧಿ ತಾರಾಬಳಗದಲ್ಲಿದ್ದಾರೆ.