Asianet Suvarna News Asianet Suvarna News

Sapta Sagaradaache Ello Review: ಪ್ರತಿಯೊಬ್ಬ ಪ್ರೇಮಿಯೂ ವಿಚಾರಣಾಧೀನ ಕೈದಿ!

 ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ರಮೇಶ್ ಇಂದಿರಾ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ನಟಿಸಿರುವ ಸಿನಿಮಾ ರಿಲೀಸ್ ಆಗಿದೆ.... 
 

Rakshit Shetty Rukmini Vasanth Sapta Sagaradaache ello Kannada review vcs
Author
First Published Sep 2, 2023, 9:18 AM IST

ಜೋಗಿ

ಎರಡು ಹೇಳಿಕೆಗಳನ್ನು ಮತ್ತೊಂದು ಕವಿತೆಯ ಸಾಲನ್ನು ಮುಂದಿಟ್ಟುಕೊಂಡು ನಿರ್ದೇಶಕ ಹೇಮಂತ್ ಎಂ. ರಾವ್, ‘ಸಪ್ತಸಾಗರದಾಚೆ ಎಲ್ಲೋ’ ಎಂಬ ಇನ್ನೂ ಪ್ರೇಮಕತೆ ಹೌದೋ ಅಲ್ಲವೋ ಎಂದು ಇತ್ಯರ್ಥವಾಗದ ನಮ್ಮ ಕಾಲದ ಕತೆಯೊಂದನ್ನು ನಮಗೆ ತೀರಾ ಅಪರಿಚಿತ ಆಗುತ್ತಿರುವ ಶೈಲಿ ಮತ್ತು ಸಾವಧಾನದಲ್ಲಿ ಹೇಳಿದ್ದಾರೆ. ಮೊದಲ ಹೇಳಿಕೆ ಕುವೆಂಪು ಅವರದ್ದು; ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ’. ಎರಡನೆಯದು ಯಶವಂತ ಚಿತ್ತಾಲರದು; ‘ನಾವು ಮನುಷ್ಯರಾಗಲು ಹುಟ್ಟಿದ್ದೇವೆ’. ಮೂರನೆಯ ಕವಿತೆಯ ಸಾಲು; ‘ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?’ ಈ ಸಾಲು ಗೋಪಾಲಕೃಷ್ಣ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು’ ಹಾಡಿನಲ್ಲಿ ಬರುವ ‘ಸಪ್ತಸಾಗರದಾಚೆ ಎಲ್ಲೋ ಸುಪ್ತಸಾಗರ ಕಾದಿದೆ’ ಎಂಬ ಸಾಲಿನ ನಂತರ ಬರುತ್ತದೆ.

ನಿರ್ದೇಶನ: ಹೇಮಂತ್ ಎಂ.ರಾವ್

ತಾರಾಗಣ: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ರಮೇಶ್ ಇಂದಿರಾ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್

ರೇಟಿಂಗ್‌ : 4

ಇಲ್ಲಿ ಯಾರೂ ಮುಖ್ಯರಲ್ಲ ಎಂಬ ಮಾತನ್ನು ಚಿತ್ರದಲ್ಲಿ ಆಡುವುದು ಶಿಕ್ಷೆ ಅನುಭವಿಸುತ್ತಿರುವ ಕೈದಿ. ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ ಎಂಬ ಮಾತನ್ನೂ ಅದೇ ಕೈದಿ ಆಡುತ್ತಾನೆ. ನಾಯಕಿಯ ತಾಯಿ ಮತ್ತೊಂದು ಬಹುಕಾಲ ನೆನಪಲ್ಲಿ ಉಳಿಯುವ ಮಾತಾಡುತ್ತಾಳೆ; ನೀನು ಜೈಲಿನ ಒಳಗಿದ್ದಿ, ಅವಳು ಹೊರಗಿದ್ದಾಳೆ. ಆದರೆ ಅವಳ ಪರಿಸ್ಥಿತಿ ನಿನಗಿಂತ ಚೆನ್ನಾಗಿಯೇನೂ ಇಲ್ಲ. ಅಂದರೆ ಬಂಧನದಲ್ಲಿ ಇರುವವರೂ, ಬಯಲಿನಲ್ಲಿ ಇರುವವರೂ ಇಬ್ಬರೂ ಕೈದಿಗಳೇ. ನಾವಿರುವುದು ಸೆರೆಮನೆ ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಅಷ್ಟೇ ವ್ಯತ್ಯಾಸ. ಪ್ರೇಮಿಸುವುದು ಅಂದರೆ ಪರಸ್ಪರರು ಹೊಂದಾಣಿಕೆ ಮಾಡಿಕೊಂಡು ಒಂದಾಗಿ ಬಾಳುವುದು ಅಂದುಕೊಂಡಿದ್ದೇವೆ. ಪ್ರೇಮವೆಂದರೆ ಅದಲ್ಲವೇ ಅಲ್ಲ. ನಮ್ಮ ನಮ್ಮ ಬದುಕನ್ನು ಮತ್ತಷ್ಟು ಪ್ರೀತಿಯಿಂದ, ಭರವಸೆಯಿಂದ, ದಿಟ್ಟತನದಿಂದ, ಉಲ್ಲಾಸದಿಂದ ಜೀವಿಸಲಿಕ್ಕೆ ಸಿಗುವ ಸ್ಫೂರ್ತಿಯೇ ಪ್ರೇಮ ಎನ್ನುವುದನ್ನು ‘ಎಲ್ಲಾ ಸರಿಹೋಗುತ್ತೆ, ನಂಬಿಕೆ ಕಳ್ಕೋಬೇಡ’ ಎಂದು ಪದೇ ಪದೇ ಹೇಳುವ ನಾಯಕಿ ಉಸುರುತ್ತಿದ್ದಾಳೆ ಅನ್ನಿಸುತ್ತದೆ.

ಪ್ರೇಮಿಗಳ ಮನಸ್ಸು ಗೆದ್ದ 'ಸಪ್ತ ಸಾಗರದಾಚೆ ಎಲ್ಲೋ': ರಕ್ಷಿತ್-ರುಕ್ಮಿಣಿ ಲವ್ ಸ್ಟೋರಿ ಬೆಸ್ಟ್ ಎಂದ ಪ್ರೇಕ್ಷಕ..!

ಪ್ರೇಮ ಸ್ವಚ್ಛಂದವಾಗಿದ್ದಾಗಲೇ ಸುಖವಾಗಿರುತ್ತದೆ. ಆದರೆ ಬದುಕು ಪ್ರೇಮವನ್ನು ಅದರ ಪಾಡಿಗಿರಲು ಬಿಡದೇ, ದುರಾಸೆಗಳನ್ನು ಹುಟ್ಟಿಸುತ್ತದೆ. ಅಂಥ ದುರಾಸೆಗೆ ಪ್ರೇಮ ಬಲಿಯಾಗುತ್ತಾ ಹೋಗುತ್ತದೆ. ಹಾಗಾದಾಗ ಅದು ತ್ಯಾಗದಲ್ಲಿಯೋ ವಿರಹದಲ್ಲಿಯೋ ಸಾವಿನಲ್ಲಿಯೋ ಕೊನೆಯಾಗುತ್ತದೆ. ಅಂಥ ಕತೆಯೊಂದನ್ನು ಈ ಕಾಲದ ಹೊಸ್ತಿಲಿನ ಮೇಲಿನ ಮಂದಾರ ಹೂವಿನಂತೆ ಹೇಳುವುದು ಕಷ್ಟ. ಯಾಕೆಂದರೆ ನೋಡುವ ಮನಸ್ಸು ಕ್ರೌರ್ಯಕ್ಕೆ ಒಗ್ಗಿಕೊಂಡಿದೆ. ಹೊಡೆದಾಡಿ ಗೆಲ್ಲಬಹುದು ಎಂಬ ನಂಬಿಕೆ ಬಲವಾಗುತ್ತಿರುವ ಕಾಲದಲ್ಲಿ, ಕಾಯುವ ಸಂಕಟವನ್ನು ಕಟ್ಟಿಕೊಡುವುದು ಕಷ್ಟದ ಕೆಲಸ.

ಆದರೆ, ಹೇಮಂತರಾವ್ ಸುಲಭವಾದ ಹಾದಿಯನ್ನು ಪಕ್ಕಕ್ಕಿಟ್ಟಿದ್ದಾರೆ. ತನ್ನ ಮನಸ್ಸು ಹೇಳಿದ ಹಾದಿಯಲ್ಲಿ ಸಾಗಿದ್ದಾರೆ. ತನ್ನ ಹುಡುಗಿಯನ್ನು ಪುಟ್ಟಿ ಎಂದು ಕರೆಯುವ ಮನು, ತನ್ನ ಹುಡುಗನನ್ನು ಕತ್ತೆ ಎಂದು ಕರೆಯುವ ಪ್ರಿಯಾ ಹೇಗಿರಬೇಕೆಂದು ಮನಸ್ಸು ಆಸೆಪಡುತ್ತದೋ ಹಾಗಿರುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದೇ ಚಿತ್ರದ ಕತೆ. ಮೊಳೆಯದ ಅಲೆಗಳ ಮೂಕ ಮರ್ಮರ ಎಂಥಾ ನವಿರಾದ ಪ್ರೇಮಕ್ಕೂ ತಟ್ಟಬಹುದು.

10 ವರ್ಷ ಆದ್ಮೇಲೆ ಈಕೆ ಸಿಕ್ಕಿರುವುದು ನನ್ನ ಅದೃಷ್ಟ: ಲವ್‌ ಬಗ್ಗೆ ಹಿಂಟ್ ಕೊಟ್ಟ ರಕ್ಷಿತ್ ಶೆಟ್ಟಿ?

ನಾವೆಲ್ಲರೂ ವಿಚಾರಣಾಧೀನ ಕೈದಿಗಳೇ ಅನ್ನಿಸುವಂತೆ ರಕ್ಷಿತ್ ತನ್ನ ಪಾತ್ರವನ್ನು ಜೀವಿಸಿದ್ದಾರೆ. ಮೆಲುದನಿಯ, ಪಿಸುಮಾತಿನ ಪ್ರೇಮಿಯಾಗಿ ಹಿತವಾದ ಅಚ್ಚರಿ ನೀಡುತ್ತಾರೆ. ಪ್ರಿಯಾಳಾಗಿ ನಟಿಸಿರುವ ರುಕ್ಮಿಣಿ ವಸಂತ್ ಕಣ್ಣೋಟ, ಮೌನ, ಮುಗುಳ್ನಗೆ ಮತ್ತು ಕೊರಳ ಕೊಂಕಿನಲ್ಲೇ ತನ್ನ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ಜೈಲಿನಲ್ಲಿ ರಕ್ಷಿತ್ ಶೆಟ್ಟಿ ಬೋರ್ಗರೆದು ಅಳುವ ದೃಶ್ಯ ಮತ್ತು ಅಮ್ಮನಿಗೆ ಬೆನ್ನುಹಾಕಿ ಮಲಗಿಕೊಂಡು ರುಕ್ಮಿಣಿ ವಸಂತ್ ಗದ್ಗದಿತಳಾಗುವ ಸನ್ನಿವೇಶ- ಹೇಮಂತ್ ಇಡೀ ಚಿತ್ರವನ್ನು ಉತ್ಕಟವಾಗಿಸಿರುವ ರೀತಿಗೆ ಸಾಕ್ಷಿ. ಮನುಷ್ಯರಾಗಲು ಹೊರಟ ಎರಡು ಜೀವಗಳ ಪಯಣವನ್ನೂ ಅವರಿಬ್ಬರೂ ಕಟ್ಟಿಕೊಟ್ಟಿದ್ದಾರೆ. ಬದುಕು, ಭಗ್ನಪ್ರೇಮವೂ ಇಲ್ಲದಷ್ಟು ನೀರಸವಾಗಬಾರದು ಅಂತನ್ನಿಸುವಷ್ಟು ಈ ಪ್ರೇಮಕತೆ ಗಾಢವಾಗಿದೆ.

ಛಾಯಾಗ್ರಾಹಕ ಅದ್ವೈತ್ ಗುರುಮೂರ್ತಿ, ಸಂಗೀತ ನಿರ್ದೇಶಕ ಚರಣ್ ರಾಜ್, ಕಲಾನಿರ್ದೇಶಕ ಉಲ್ಲಾಸ್ ಹೈದೂರ್- ಈ ಕತೆಯನ್ನು ನಮಗೆ ಸಮರ್ಥವಾಗಿ ತಲುಪಿಸಿದ್ದಾರೆ.

ಇದು ಸೈಡ್ ಎ. ಇದರ ಮುಂದಿನ ಭಾಗವನ್ನು ನೋಡಲೇಬೇಕಾದ ಅನಿವಾರ್ಯತೆಯನ್ನು ಹುಟ್ಟುಹಾಕಿ, ಚಿತ್ರ ಕೊನೆಗೊಳ್ಳುತ್ತದೆ. ಮುಂದೇನಾಗಬಹುದು ಎಂಬ ಅಸ್ಪಷ್ಟ ಚಿತ್ರವೂ ಮನದಲ್ಲಿ ಮೂಡುತ್ತದೆ. ಚಿತ್ರವನ್ನು ಚುರುಕಾಗಿ ಎಡಿಟ್ ಮಾಡಿ, ಎರಡೂ ಭಾಗವನ್ನೂ ಒಂದೇ ಆಗಿ ತೋರಿಸಬಹುದಾಗಿತ್ತು. ಆದರೆ, ಎರಡು ಭಾಗಗಳಾಗಿ ಮಾಡಿ ಚಿತ್ರತಂಡ ಒಳ್ಳೆಯ ಕೆಲಸ ಮಾಡಿದೆ. ಪ್ರೇಮಕತೆಯ ಮುಂದಿನ ಭಾಗಕ್ಕೆ ಕಾಯುವುದು ಕೂಡ ಮನುಷ್ಯನಾಗುವ ಕ್ರಿಯೆಯೇ ಅಲ್ಲವೇ?

Follow Us:
Download App:
  • android
  • ios